2023 ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಎರಡು ವರ್ಷಗಳು ಮಾತ್ರ ಬಾಕಿಯಿವೆ. ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಿಂದ ಬೇಸತ್ತ ಮತದಾರರು ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ಮುಂದಿನ ಚುನಾವಣೆ ಗೆಲ್ಲಲು ಕಾಂಗ್ರೆಸ್ ಭಾರೀ ಸರ್ಕಸ್ ನಡೆಸುತ್ತಿದೆ. ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಸ್ತ್ರೀ ಶಕ್ತಿ ಸಂಘಟನಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.

ಇಡೀ ದಿನ ಸ್ತ್ರೀ ಶಕ್ತಿ ಸಂಘಟನಾ ಸಮಿತಿಯೊಂದಿಗೆ ಡಿ.ಕೆ ಶಿವಕುಮಾರ್ ನಡೆಸಿದ ಮ್ಯಾರಥಾನ್ ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ ಮಹಿಳಾ ನಾಯಕರನ್ನು ಉದ್ದೇಶಿಸಿ ಮಾತಾಡಿದ ಡಿ.ಕೆ ಶಿವಕುಮಾರ್, ನಿಮ್ಮ ಕೆಲಸಕ್ಕೆ ಆಲ್ ಇಂಡಿಯಾ ಕಾಂಗ್ರೆಸ್ ಸಮಿಯಿಂದಲೇ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ಅಲ್ಲದೆ ಮಹಿಳಾ ಕಾಂಗ್ರೆಸ್ ನಿಂದ ಸೈಕಲ್ ರ್ಯಾಲಿ, 100 ನಾಟ್ ಔಟ್ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಇದುವರೆಗೂ 4,700 ಕಡೆ ಪ್ರತಿಭಟನೆಗಳು ಮಾಡಿದೆವು. ಈ ಕಾರ್ಯಕ್ಕೆ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರಿಂದ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ. ನಿಮಗೆ ಅವಕಾಶ ಬೇಕು, ಕಾಂಗ್ರೆಸ್ ಅವಕಾಶ ನೀಡಿದೆ ಎಂಬುದಾಗಿ ಡಿಕೆಶಿ ಹೇಳಿದರು.

ಹೀಗೆ ಮುಂದುವರಿದ ಡಿ.ಕೆ ಶಿವಕುಮಾರ್, ವ್ಯಾಕ್ಸಿನ್ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರ ಇಡೀ ದೇಶದಲ್ಲಿ ಜಾರಿಯಾಗಿದೆ. ಕರೋನಾ ಸಂದರ್ಭದಲ್ಲಿ ಖರೀದಿ ಮಾಡಿದ ತರಕಾರಿಯಿಂದ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಕರೋನಾದಿಂದ ಜೀವನ ನಡೆಸಲು ಸಾಧ್ಯವಾಗದ ಎಷ್ಟೋ ಕುಟುಂಬಗಳಿಗೆ ಕಾಂಗ್ರೆಸ್ ನೆರವಾಗಿದೆ. ಮೊದಲು ಫುಡ್ ಪ್ಯಾಕೇಟ್ಸ್ ನೀಡಿದೆವು. ನಂತರ ಫುಡ್ ಕಿಟ್ಸ್ ಜೊತೆಗೆ ರೇಷನ್ ಕೊಟ್ಟೆವು. ಇದು ಕಾಂಗ್ರೆಸ್ ನ ಮಾದರಿ ಕಾರ್ಯ ಎಂದು ಶ್ಲಾಘಿಸಿದರು.

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಗೆ ಬರಬೇಕು ಎನ್ನುವುದು ಕಾಂಗ್ರೆಸ್ ಆಶಯ. ಮಹಿಳೆಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು ಮಹಿಳೆಯರೇ ಮುಂದೆ ಬರಬೇಕು. ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಟಿಕೆಟ್ ನೀಡುವ ಸಂಬಂಧದ ವಿಧೇಯಕ ಅಂಗೀಕಾರಕ್ಕೆ ಕಾಂಗ್ರೆಸ್ ಹೋರಾಟ ನಡೆಸಿದೆ. ಇದು ಮಹಿಳೆಯರ ಮೇಲೆ ಕಾಂಗ್ರೆಸ್ಸಿಗಿರುವ ಕಾಳಜಿ ಎಂದು ಡಿಕೆಶಿ ಹೇಳಿದರು.






