• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, October 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೈವ ಶ್ರದ್ಧೆ ಧರ್ಮ ಮತ್ತು ಸಾಂಸ್ಥಿಕ ಮಾರುಕಟ್ಟೆ

ದೇವರು ಮತ್ತು ಧರ್ಮ ಭಾರತದ ಶ್ರದ್ಧಾ ಸಮಾಜವನ್ನು ನಿಯಂತ್ರಿಸುವ ಬಿಗಿ ಸೂತ್ರಗಳು

ನಾ ದಿವಾಕರ by ನಾ ದಿವಾಕರ
October 11, 2026
in Top Story, ಕರ್ನಾಟಕ, ವಿಶೇಷ
0
God Faith in the Divine, Dharma, and the Institutional Market
Share on WhatsAppShare on FacebookShare on Telegram

ನಾ ದಿವಾಕರ
(ಕೃಪೆ ಸಮಾಜಮುಖಿ ಪತ್ರಿಕೆ ಅಕ್ಟೋಬರ್ 2026 ಸಂಚಿಕೆ)

ADVERTISEMENT

ಡಿಜಿಟಲ್ (Digital) ಯುಗದಲ್ಲೂ ಭಾರತದ (India) ಸಾಂಪ್ರದಾಯಿಕ ಸಮಾಜ ಶ್ರದ್ಧಾ ನಂಬಿಕೆಗಳ ಸಂಕೋಲೆಗಳಿಂದ ಮುಕ್ತವಾಗಿಲ್ಲ. ಈ ಬಿಗಿ ಸರಳುಗಳನ್ನೇ ಮತ್ತಷ್ಟು ಬಿಗಿಗೊಳಿಸಲು ಆಧುನಿಕ ತಂತ್ರಜ್ಞಾನವನ್ನೇ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ರಾಮೇಶ್ವರದಿಂದ ಕೇದಾರನಾಥವರೆಗೂ ಕಣ್ಣು ಹಾಯಿಸಿದರೆ ಕಾಣುವ ಸಮಾನ ಎಳೆ ಎಂದರೆ , ನವ ಭಾರತದ ಅತ್ಯಾಧುನಿಕ-ಸುಶಿಕ್ಷಿತ ಸಮಾಜಗಳೂ ಸಹ ಯಾವುದೋ ಒಂದು ದೈವ (God) ನಂಬಿಕೆ ಮತ್ತು ಸಾಂಪ್ರದಾಯಿಕ ಶ್ರದ್ಧೆಗೆ ಜೋತುಬಿದ್ದಿವೆ. ಈ ಸಮಾಜಗಳ ಒಳಹೊಕ್ಕು ನೋಡಿದಾಗ, ತಳಮಟ್ಟದಿಂದ ಮೇಲ್ಪದರದವರೆಗೂ ಕಾಣುವುದು, ಜನಸಾಮಾನ್ಯರ ನಿತ್ಯ ಬದುಕಿನ ಚಟುವಟಿಕೆಗಳನ್ನು ನಿರ್ದೇಶಿಸಿ, ನಿರ್ಬಂಧಿಸುವುದು ಸಾಮುದಾಯಿಕ ಪ್ರಜ್ಞೆಯೇ ಹೊರತು ಸಾಮಾಜಿಕ ಅಲ್ಲ. ಹಾಗಾಗಿ ಸಮುದಾಯಗಳ ಒಳಗೆ ರೂಢಿಗತವಾಗಿ ಬಂದಿರುವ ದೈವ, ಶ್ರದ್ಧೆ, ನಂಬಿಕೆ, ಆಚರಣೆ, ಆರಾಧನೆ ಎಲ್ಲವೂ ಸಹ ಜನಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ.

ಸಾಂಸ್ಕೃತಿಕವಾಗಿ ಬಹುತ್ವದ ಲಕ್ಷಣಗಳು ಢಾಳಾಗಿ ಕಂಡರೂ, ಧಾರ್ಮಿಕ ವಾತಾವರಣದಲ್ಲಿ ಕಾಣುವುದು ಮೇಲ್ಜಾತಿಯ ಅಥವಾ ಬ್ರಾಹ್ಮಣಶಾಹಿ/ವೈದಿಕಶಾಹಿಯ ಪಾರುಪತ್ಯ ಮಾತ್ರ. ಈ ಮೇಲರಿಮೆ ಮತ್ತು ಹಿಡಿತವನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ದೇಶದ ಪ್ರಸಿದ್ಧ ಯಾತ್ರಾಸ್ಥಗಳನ್ನು ಸಾಂಸ್ಥೀಕರಣಗೊಳಿಸಲಾಗುತ್ತಿದೆ. ಕೆಲವು ಖಾಸಗಿ, ಕೆಲವು ಮುಜರಾಯಿ, ಕೆಲವು ಸಾರ್ವಜನಿಕರ ಟ್ರಸ್ಟ್ ಹೀಗೆ ಆಡಳಿತ ನಿರ್ವಹಣೆಯ ವರ್ಗೀಕರಣದ ಮುಖಾಂತರ ಜನಸಾಮಾನ್ಯರ ದೈವಶ್ರದ್ಧೆ ಮತ್ತು ಆಚರಣಾತ್ಮಕ ನಂಬಿಕೆಗಳನ್ನು ನಿರ್ದಿಷ್ಟ ನಿಬಂಧನೆಗೊಳಪಡಿಸಿ, ನಿರ್ದೇಶಿಸುವ ಮಾದರಿಯನ್ನು ರೂಪಿಸಲಾಗುತ್ತಿದೆ. ದೈವ ನಂಬಿಕೆ ಜಂಗಮ, ದೈವಾರಾಧನೆ ಸ್ಥಾವರ. ಈ ವ್ಯತ್ಯಾಸವೇ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಬಂಡವಾಳ ಕ್ರೋಢೀಕರಣದ ಕೇಂದ್ರಗಳನ್ನಾಗಿಸಿದೆ.

ಬಂಡವಾಳ-ಮಾರುಕಟ್ಟೆಯ ಅಂಗಳದಲ್ಲಿ

ಆರ್ಥಿಕವಾಗಿ ಬಂಡವಾಳಶಾಹಿ-ಮಾರುಕಟ್ಟೆ ವ್ಯವಸ್ಥೆ, ಸಾಮಾಜಿಕವಾಗಿ ಪ್ರಬಲ ಜಾತಿಗಳ ಆಧಿಪತ್ಯ ಮತ್ತು ರಾಜಕೀಯವಾಗಿ ಬಲಪಂಥೀಯ ಆಳ್ವಿಕೆ, ಈ ತ್ರಿಕೋಣಾವಸ್ಥೆಯಲ್ಲಿ ದೈವ ಮತ್ತು ದೈವಾರಾಧನೆ ಎರಡೂ ಸಹ ಲಾಭ ನಷ್ಟಗಳ ಚೌಕಟ್ಟಿನೊಳಗೆ ನಿಷ್ಕರ್ಷೆಗೊಳಗಾಗುತ್ತವೆ. ಅಯೋಧ್ಯೆಯ ರಾಮಮಂದಿರ ಇದಕ್ಕೊಂದು ನಿದರ್ಶನ. ಅಲ್ಲಿ ಆಗಮ ಶಾಸ್ತ್ರದ ಯಾವುದೇ ಪೂಜಾ ವಿಧಾನಗಳನ್ನು ಅನುಸರಿಸುವುದಿಲ್ಲ. ತೀರ್ಥ ಮಂಗಳಾರತಿ ಇತ್ಯಾದಿ ಆಚರಣೆಗಳಿರುವುದಿಲ್ಲ. ನಿರ್ಗಮನ ದ್ವಾರದಲ್ಲಿ Packed ಪ್ರಸಾದವನ್ನು ನೀಡಲಾಗುತ್ತದೆ. ದೇಶವ್ಯಾಪಿಯಾಗಿ ಭಕ್ತಾದಿಗಳ/ರಾಜಕೀಯ ಹಿಂಬಾಲಕರ ದೈಹಿಕ/ಹಣಕಾಸಿನ ಕಾಣಿಕೆಯಿಂದಲೇ ನಿರ್ಮಿಸಿದ್ದರೂ ಖಾಸಗಿ ಟ್ರಸ್ಟ್ ಒಂದರ ನಿಯಂತ್ರಣದಲ್ಲಿರುವ ಈ ಸ್ಮಾರಕದಲ್ಲಿ ನಡೆದಿರುವ ಭ್ರಷ್ಟಾಚಾರ/ಲೂಟಿ ರಾಮಭಕ್ತರ ವಿರೋಧವನ್ನೂ ಎದುರಿಸದಿರುವುದು ಸಾಂಸ್ಥಿಕ ನಿಯಂತ್ರಣದ ಸಂಕೇತವಾಗಿ ಕಾಣುತ್ತದೆ.

ಸಾರ್ವಜನಿಕರ ಹಣ ಎಂದರೆ ಅದು ಜನಸಾಮಾನ್ಯರ ದುಡಿಮೆಯ ಹಣ. ಅತ್ಯುನ್ನತ ಅಧಿಕಾರಿಯಿಂದ ದಿನಗೂಲಿ ನೌಕರರವರೆಗೂ ವಿಸ್ತರಿಸುವ ʼ ಸಾರ್ವಜನಿಕ ʼ ಎಂಬ ಪದ, ಈ ಹಣದಿಂದ ನಿರ್ಮಾಣವಾದ ಯಾವುದೇ ಸ್ಥಾವರದ ಮೇಲೆ ಸ್ವಾಭಾವಿಕ ಹಕ್ಕು ಕಲ್ಪಿಸುತ್ತದೆ. ಹಾಗೆಯೇ ಈ ಪೂಜಾಸ್ಥಳಗಳನ್ನು ನಿರ್ವಹಿಸುವ ಟ್ರಸ್ಟ್, ಆಡಳಿತ ಮಂಡಲಿ ಅಥವಾ ಸರ್ಕಾರಿ ಇಲಾಖೆಯ ಉತ್ತರದಾಯಿತ್ವವನ್ನೂ ಸಹ ಅಪೇಕ್ಷಿಸುತ್ತದೆ. ಆಚರಣಾತ್ಮಕವಾಗಿ ಮುಜರಾಯಿ ದೇವಾಲಯಗಳಲ್ಲಿ ಪಂಕ್ತಿಭೇದ ಮತ್ತು ಅಸ್ಪೃಶ್ಯತೆಯನ್ನು ಆಚರಿಸುವುದು ನಿಷಿದ್ಧವಾದರೂ, “ ತಾನು ಬ್ರಾಹ್ಮಣರ/ಮೇಲ್ಜಾತಿಯ ಪಂಕ್ತಿಯಲ್ಲಿ ಊಟ ಮಾಡಬೇಕು ” ಎಂದು ಹರಕೆ ಹೊತ್ತ ಅಸ್ಪೃಶ್ಯ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಹರಕೆ ಈಡೇರುವುದಿಲ್ಲ. ಅಂದರೆ ಜನರ ಹರಕೆಯನ್ನು ಈಡೇರಿಸುವ ನಿರ್ಣಾಯಕ ಸ್ಥಾನದಲ್ಲಿ ʼ ಜಾತಿ ʼ ಇರುತ್ತದೆಯೇ ಹೊರತು, ದೈವವೂ ಅಲ್ಲ ಮಧ್ಯವರ್ತಿಗಳೂ ಅಲ್ಲ.

ನಿಯಂತ್ರಣ ಮತ್ತು ನಿರ್ವಹಣೆಯ ಅಂತರ

ಈ ದೃಷ್ಟಿಯಿಂದ ನೋಡಿದಾಗ ಸರ್ಕಾರದ ಭೂಮಿ, ಸಾರ್ವಜನಿಕರ ಹಣದಿಂದ ನಿರ್ಮಿಸಲಾಗುವ ದೇವಾಲಯಗಳು ಸರ್ಕಾರಿ ಒಡೆತನಕ್ಕೇ ಸೇರಬೇಕಲ್ಲವೇ ? ʼ ಪೂಜಾಸ್ಥಳಗಳ-ಶ್ರದ್ಧಾ-ಆರಾಧನಾ ಕೇಂದ್ರಗಳ ರಾಷ್ಟ್ರೀಕರಣ ʼ ಎಂಬ ಕಲ್ಪನೆಯೇ ಭಾರತದ ಸಾಂಪ್ರದಾಯಿಕ ಸಮಾಜಗಳಲ್ಲಿ , ಧರ್ಮಾತೀತವಾಗಿ ಕಂಪನ ಮೂಡಿಸುತ್ತದೆ. ಸರ್ಕಾರಿ ಒಡೆತನದಲ್ಲೇ ಇದ್ದರೂ ನಿರ್ದಿಷ್ಟ ಸ್ಥಾವರದ ಮೇಲ್ವಿಚಾರಣೆ ನಡೆಸುವ ʼ ಆಡಳಿತ ಮಂಡಲಿಗಳು ʼ ಅಧಿಕಾರ ರಾಜಕಾರಣಕ್ಕೆ ನಿಕಟವಾಗಿಯೇ ಇರುತ್ತವೆ. ಸರ್ಕಾರ-ಆಡಳಿತ ಮಂಡಲಿ ಪರಸ್ಪರ ಪ್ರಭಾವ, ನಿಯಂತ್ರಣಕ್ಕೊಳಗಾಗಿರುತ್ತವೆ. ಇನ್ನು ಖಾಸಗಿ ಒಡೆತನ ಎಂದರೆ ಅದು ಸಾಂಸ್ಥಿಕವಾಗಿ ಆಂತರಿಕ ವಿಚಾರವಾಗಿಬಿಡುತ್ತದೆ. ನೈಜ ಭಕ್ತಾದಿಗಳ ಹಾಗೂ ಪ್ರಾಮಾಣಿಕ ಧರ್ಮನಿಷ್ಠರ ದೃಷ್ಟಿಯಿಂದ ದೇಗುಲಗಳು ಖಾಸಗಿ ಒಡೆತನದಲ್ಲಿರುವುದು ಅಪೇಕ್ಷಣೀಯವಲ್ಲ.

ಸಾಂಸ್ಥೀಕರಣಕ್ಕೊಳಗಾದ ಯಾವುದೇ ಶ್ರದ್ಧಾಕೇಂದ್ರಗಳು ಮತ್ತು ಸಾಂಸ್ಕೃತಿಕ ವೇದಿಕೆಗಳು, ಪಾರದರ್ಶಕತೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಾದರೆ ಅದನ್ನು ನಿರ್ವಹಿಸುವ ವ್ಯಕ್ತಿಗಳಲ್ಲಿ ನಿಷ್ಠೆ ಇರಬೇಕು. ಸಾರ್ವಜನಿಕ ನಿಷ್ಠೆ ಮತ್ತು ಕರ್ತವ್ಯ ನಿಷ್ಠೆ ಎರಡೂ ಇದ್ದಾಗ ಮಾತ್ರ ವೈಯುಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸಂಸ್ಥೆಯನ್ನು ನಿರ್ವಹಿಸುತ್ತಾರೆ. ಅಂಥವರೂ ಒಂದು ಕಾಲದಲ್ಲಿ ಇದ್ದರು, ಇಂದು ಅಪರೂಪವಾಗಿ ಕಾಣುತ್ತಾರೆ. ರಾಜಕೀಯ ಹಿತಾಸಕ್ತಿಗಳಿಂದ ಆವೃತವಾಗಿರುವ ಈ ಕೇಂದ್ರಗಳಲ್ಲಿ ವ್ಯಕ್ತಿಗತ ನಿಷ್ಠೆ/ಪ್ರಾಮಾಣಿಕತೆ ಮೊದಲ ಬಲಿಯಾಗುತ್ತದೆ. ʼ ಪಟ್ಟಭದ್ರ ಹಿತಾಸಕ್ತಿ ʼ ಎಂಬ ವಿದ್ಯಮಾನದ ಆಳ-ಅಗಲ ಸ್ಪಷ್ಟವಾಗಿ ಕಾಣುವುದು ಈ ಕೇಂದ್ರಗಳಲ್ಲೇ . ಹಾಗಾಗಿ ಲೆಕ್ಕ ಪತ್ರಗಳ ನಿರ್ವಹಣೆಯೂ ಆಂತರಿಕವಾಗಿ ಕೆಲವು ಗುಂಪುಗಳ ನಿಯಂತ್ರಣಕ್ಕೊಳಪಟ್ಟಿರುತ್ತವೆ. ಈ ಗುಂಪುಗಳನ್ನು ಸಹಿಸಲಾರದವರು ಉಚ್ಛಾಟಿಸಲ್ಪಡುತ್ತಾರೆ.

ಇದರ ಸ್ಪಷ್ಟ ಚಿತ್ರಣವನ್ನು ತಿರುಪತಿ, ಮಂತ್ರಾಲಯ, ಕುಕ್ಕೆ ಸುಬ್ರಮಣ್ಯ, ನಂಜನಗೂಡು, ಚಾಮುಂಡಿ ಹೀಗೆ ಹಲವು ಕೇಂದ್ರಗಳಲ್ಲಿ ಗಮನಿಸಬಹುದು. ದೇಗುಲಗಳ ಲೆಕ್ಕಪತ್ರ ಪರಿಶೋಧನೆಗೊಳಗಾಗಿ ಅನುಮೋದನೆ ಪಡೆದರೂ ಸಹ, ಲೆಕ್ಕ ಪರಿಶೋಧಕರ ಅಪ್ರಾಮಾಣಿಕತೆ ಮತ್ತು ಒಳವ್ಯವಹಾರಗಳು, ಆಂತರಿಕ ಸಿಬ್ಬಂದಿಗಳ ಆಸ್ತಿವೃದ್ಧಿಗೆ ನೆರವಾಗುವಂತಿರುತ್ತದೆ. ರಾಜಕೀಯ ವಲಯದಲ್ಲಿ ಸಾಮಾನ್ಯವಾಗಿ ಕೇಳಿಬರುವ “ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ” ಆರೋಪಗಳಿಗೆ ಈ ಕೇಂದ್ರಗಳು ಪ್ರಶಸ್ತಜಾಗಗಳು. ತಿರುಪತಿ ಸಿಬ್ಬಂದಿಯ ವೈಯುಕ್ತಿಕ ಆಸ್ತಿಪಾಸ್ತಿಯನ್ನು ಯಾರೂ ಸಹ ಪ್ರಶ್ನಿಸುವುದಿಲ್ಲ. ಉಡುಪಿ, ಕುಕ್ಕೆ, ಧರ್ಮಸ್ಥಳ, ಮಂತ್ರಾಲಯದಂತಹ ಶ್ರದ್ಧಾಕೇಂದ್ರಗಳಲ್ಲೂ ಸಹ ಇದೇ ವ್ಯತ್ಯಯವನ್ನು ಗುರುತಿಸಬಹುದು. ಈ ಒಳಶೋಧಕ್ಕಾಗಿ ಆಗ್ರಹಿಸಿದರೆ ನೈಜ ಧರ್ಮನಿಷ್ಠರೇನೂ ಕಂಗಾಲಾಗುವುದಿಲ್ಲ, ಆದರೆ ಧಾರ್ಮಿಕ ಆಚರಣೆ-ಆರಾಧನೆಗಳನ್ನೇ ತಮ್ಮ ವೃತ್ತಿಯನ್ನಾಗಿ ಪರಿಗಣಿಸುವ ವ್ಯಕ್ತಿಗಳ/ಗುಂಪುಗಳು ಸಿಟ್ಟಾಗುತ್ತವೆ.

ಸಂಪತ್ತು-ಸಂಪನ್ಮೂಲಗಳ ನಿಯಂತ್ರಣ

ಈ ದೃಷ್ಟಿಯಿಂದಲೇ ಖಾಸಗಿ ನಿರ್ವಹಣೆಯ ದೇವಾಲಯಗಳ ಕೋಟಿಕೋಟಿ ರೂಗಳ ವ್ಯವಹಾರ, ಸ್ಥಿರಾಸ್ತಿಗಳ ಹೆಚ್ಚಳ, ಭೂ ಆಸ್ತಿಯ ವಿಸ್ತಾರ ಮತ್ತು ವ್ಯಾಪಾರ ವಹಿವಾಟುಗಳನ್ನು ಗಮನಿಸಬೇಕಾಗುತ್ತದೆ. ದತ್ತಿ ಸಂಸ್ಥೆ (Charitable Trust), ಸಮಾಜಸೇವಾ ಸಂಸ್ಥೆ, ನಾಗರಿಕ ಸೇವಾ ಸಮಿತಿ ಹೀಗೆ ವಿಭಿನ್ನ ಹೆಸರುಗಳಲ್ಲಿ ಗುರುತಿಸಿಕೊಳ್ಳುವ ಶ್ರದ್ಧಾಕೇಂದ್ರಗಳು ಸಾರ್ವಜನಿಕ ಲೆಕ್ಕಪರಿಶೋಧನೆಯಿಂದ (Public Audit) ಮತ್ತು ಸಾಮಾಜಿಕ ಲೆಕ್ಕ ಪರಿಶೋಧನೆಯಿಂದ (Social Audit ) ವಿನಾಯಿತಿ ಪಡೆಯುತ್ತವೆ. ನ್ಯಾಯಾಲಯಗಳೂ ಜನಸಾಮಾನ್ಯರ ಶ್ರದ್ಧಾಭಕ್ತಿಯ ದೃಷ್ಟಿಯಿಂದ ಇದನ್ನು ಅನುಮೋದಿಸುತ್ತವೆ. ಧರ್ಮಸ್ಥಳ ಒಂದು ನಿದರ್ಶನ. ಆಂತರಿಕವಾಗಿ ಎಲ್ಲ ವ್ಯವಹಾರ-ವಹಿವಾಟುಗಳೂ ಪಾರದರ್ಶಕವಾಗಿ, ಪ್ರಾಮಾಣಿಕವಾಗಿದ್ದರೆ, ಸಾರ್ವಜನಿಕರ ಮುಂದೆ ಏಕೆ ತೆರೆದಿಡಬಾರದು ? ಈ ಪ್ರಶ್ನೆ ಕೇಳುವವರು ಯಾರು ?

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ 1999 )KTPP Act) ಅಕ್ಟೋಬರ್ 4, 2000 ರಂದು ಜಾರಿಗೆ ಬಂದಿತ್ತು. ಇದು ಕರ್ನಾಟಕದಾದ್ಯಂತ ಸರ್ಕಾರಿ ಸಂಗ್ರಹಣೆ, ಸಾರ್ವಜನಿಕ ಕೆಲಸ-ಕಾರ್ಯಗಳು ಮತ್ತು ಸರಕು ಮತ್ತು ಸೇವೆಗಳ ಪೂರೈಕೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಉತ್ತರದಾಯಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಜಾರಿಮಾಡಿದ ಶಾಸನ. ಈ ಕಾಯ್ದೆಯ ಪ್ರಮುಖ ಲಕ್ಷಣಗಳೆಂದರೆ ಟೆಂಡರ್ಗಳ ಗುಣಮಟ್ಟದ ನಿರ್ವಹಣೆ, ಪಾರದರ್ಶಕ ಸ್ಪರ್ಧಾತ್ಮಕ ಇ-ಟೆಂಡರಿಂಗ್ ಕಾಪಾಡುವುದು, ಟೆಂಡರ್ ಬುಲೆಟಿನ್ಗಳಲ್ಲಿ ಖರೀದಿ ಸೂಚನೆಗಳು ಮತ್ತು ಮಂಜೂರಾತಿ ವಿವರಗಳನ್ನು ಪ್ರಕಟಿಸುವುದು, ಪರಿಶೀಲನಾ ಸಮಿತಿಗಳ ಮುಖಾಂತರ ಬಿಡ್ಗಳನ್ನು ಸ್ವತಂತ್ರವಾಗಿ ಮೌಲ್ಯಮಾಪನ ಮಾಡುವ ಕ್ರಮಗಳು, ಕೆಲವು ವಿನಾಯಿತಿಗಳು ಇತ್ಯಾದಿ.

ಈ ಕಾಯ್ದೆಯು ʼ ಸಾರ್ವಜನಿಕ ಸಂಗ್ರಹಣೆ ʼಯನ್ನು ನಿರ್ದಿಷ್ಟವಾಗಿ ನಿಯಂತ್ರಿಸುವುದರಿಂದ, ಎಲ್ಲ ಪೂಜಾಸ್ಥಳಗಳೂ, ಶ್ರದ್ಧಾ ಕೇಂದ್ರಗಳೂ, ದೇಗುಲಗಳೂ ಸಹ ಇದರ ವ್ಯಾಪ್ತಿಗೆ ಒಳಪಡುತ್ತವೆ. ಏಕೆಂದರೆ ಈ ಎಲ್ಲ ಕೇಂದ್ರಗಳು ನಡೆಯುವುದೇ ಸಾರ್ವಜನಿಕರ ಹಣದಿಂದ. ಶ್ರೀಮಂತರ ದೇಣಿಕೆ, ಬಡಜನರ ಹರಕೆ ಇತ್ಯಾದಿ, ನಿತ್ಯ ದರ್ಶನ ಪಡೆಯುವ ಭಕ್ತಾದಿಗಳ ದಕ್ಷಿಣೆ, ಪೂಜಾ ವಿಧಾನ ಶುಲ್ಕಗಳು (ಹತ್ತಾರು ಮಾದರಿಯ ಅರ್ಚನೆಗಳು) ಮತ್ತು ಹುಂಡಿಯಲ್ಲಿ ಸಂಗ್ರಹವಾಗುವ ಹಣ ಇವೆಲ್ಲವೂ ಈ ಕೇಂದ್ರಗಳ ಅಭಿವೃದ್ಧಿಗೆ, ಬೆಳವಣಿಗೆಗೆ, ವಿಸ್ತೀರ್ಣಕ್ಕೆ ಹಾಗೂ ಸಂಪತ್ತಿನ ಕ್ರೋಢೀಕರಣಕ್ಕೆ ಆಕರವಾಗುತ್ತವೆ. ತಮ್ಮ ಹಣದಿಂದ ನೆಡುವ ಸಣ್ಣ ಕಲ್ಲು ಕಂಬದ ಮೇಲೂ ಹೆಸರು ನಮೂದಿಸುವ ಸಿರಿವಂತರಿಗೆ ಇವೆಲ್ಲವೂ ಭಕ್ತಿಯ ತೋರಿಕೆಯಾಗಿರುತ್ತದೆ. ಆದರೆ ದಕ್ಷಿಣೆ, ಅರ್ಚನೆಗಳಿಗೆ ಅಲ್ಪಮೊತ್ತ ಪಾವತಿಸುವ ಸಾಮಾನ್ಯ ದುಡಿಯುವ ಜನರಿಗೆ ಭಕ್ತಿಪೂರ್ವಕ ಅರ್ಪಣೆಯಾಗಿ ಕಾಣುತ್ತದೆ.

ಕಾನೂನು ವ್ಯಾಪ್ತಿಗೆ ದೈವ-ದೇಗುಲ ?
ದೇಗುಲಗಳ ಪರಿಷ್ಕೃತ ನಿರ್ವಹಣೆ ಕೈಪಿಡಿಯು ದೇವಾಲಯಗಳ ಸ್ವಚ್ಛತೆ, ಸುರಕ್ಷತೆ, ಆಡಳಿತ, ಮತ್ತು ಧಾರ್ಮಿಕ ವಿಧಿವಿಧಾನಗಳ ಅನುಸರಣೆಗಾಗಿ ರೂಪಿಸಲಾದ ಅಧಿಕೃತ ಮಾರ್ಗದರ್ಶಿಯಾಗಿದೆ. ಇದು ದೇವಸ್ಥಾನಗಳ ಜೀರ್ಣೋದ್ಧಾರ, ನಿತ್ಯಪೂಜೆ ಮತ್ತು ಆಡಳಿತಾತ್ಮಕ ಪಾರದರ್ಶಕತೆಗೆ ಅಗತ್ಯವಿರುವ ನಿಯಮಗಳನ್ನು ಒಳಗೊಂಡಿದೆ. ಈ ಕೈಪಿಡಿಯ ಮುಖ್ಯಾಂಶಗಳೆಂದರೆ, ದೇವಾಲಯದ ಆವರಣ ಮತ್ತು ಗರ್ಭಗುಡಿಯ ಶುಚುತ್ವ ಕಾಪಾಡುವುದು , ಭಕ್ತರಿಗೆ ಮೂಲಭೂತ ಸೌಲಭ್ಯ ಹಾಗೂ ಭದ್ರತೆ (ಸಿಸಿಟಿವಿ ಅಳವಡಿಕೆ) ಒದಗಿಸುವುದು , ಧಾರ್ಮಿಕ ಮತ್ತು ಆಗಮ ಶಾಸ್ತ್ರದ ಪ್ರಕಾರ ನಿತ್ಯ ಪೂಜೆ ಹಾಗೂ ಉತ್ಸವಗಳ ಆಚರಣೆ, ದೇಗುಲದ ಆಸ್ತಿಪಾಸ್ತಿ ಹಾಗೂ ಆದಾಯದ ಲೆಕ್ಕಪತ್ರ ಸರಿಯಾಗಿ ನಿರ್ವಹಿಸುವುದು ಮತ್ತು ಹಾನಿಗೊಳಗಾದ ಕಟ್ಟಡಗಳ ಜೀರ್ಣೋದ್ಧಾರ ಹಾಗೂ ದುರಸ್ತಿ.

ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಬಿಟ್ಟರೆ ಪ್ರತಿಯೊಂದು ದೇಗುಲವೂ ನಿಜಾರ್ಥದಲ್ಲಿ ʼ ಧರ್ಮಕೇಂದ್ರ ʼವಾಗಿಯೇ ಕಾಣುತ್ತವೆ. ಆದರೆ ಈ ಕೈಪಿಡಿಯನ್ನೂ ಕಚೇರಿಗಳಲ್ಲಿ ಕೈಗೆಟುಕದ ಎತ್ತರದಲ್ಲಿರಿಸಿರುತ್ತಾರೆ. ಅಧಿಕಾರಶಾಹಿ ಮತ್ತು ಅಧಿಕಾರ ರಾಜಕಾರಣದಲ್ಲಿ ಪ್ರಾಮಾಣಿಕತೆ/ಪಾರದರ್ಶಕತೆ ಇದ್ದಾಗ ಮಾತ್ರ ಇದು ಅರ್ಥಪೂರ್ಣವಾಗುತ್ತದೆ. “ಕಾನೂನುಗಳನ್ನು ರೂಪಿಸುವುದೇ ಭಂಗಗೊಳಿಸುವುದಕ್ಕಾಗಿ ” ಎಂಬ ನಾಣ್ಣುಡಿ ಈ ಸಂದರ್ಭದಲ್ಲಿ ಅನ್ವಯಿಸುತ್ತದೆ. ಹಾಗಾಗಿಯೇ ಭಾರತದ ಸಾರ್ವಜನಿಕ ಸಂಕಥನಗಳಲ್ಲಿ ದೇವಾಲಯಗಳನ್ನು, ಪೂಜಾಸ್ಥಳಗಳನ್ನು, ಶ್ರದ್ಧಾಕೇಂದ್ರಗಳನ್ನು ರಾಷ್ಟ್ರೀಕರಿಸುವುದಕ್ಕಿಂತಲೂ, ಖಾಸಗಿ ನಿರ್ವಹಣೆಗೆ ಒಪ್ಪಿಸುವ ಬೇಡಿಕೆಯೇ ಗಟ್ಟಿಯಾಗಿ ಕೇಳಿಬರುತ್ತದೆ. ವಿಶ್ವ ಹಿಂದೂ ಪರಿಷತ್ ಈ ನಿಟ್ಟಿನಲ್ಲಿ ʼ ಮಂದಿರ ಮುಕ್ತಿ ʼ ಆಂದೋಲನವನ್ನೇ ಹಮ್ಮಿಕೊಂಡಿತ್ತು. ರಾಮಮಂದಿರದ ಹಗರಣ ಈ ಆಗ್ರಹದ ಹಿಂದಿರುವ ಆಶಯವನ್ನು ಸ್ಪಷ್ಟಪಡಿಸುತ್ತದೆ.

ನಿರ್ಲಕ್ಷಿತ ದೈವ-ದೇವಾಲಯ

ಈ ಬೆಳವಣಿಗೆಗಳ ನಡುವೆಯೇ ಭಾರತದಲ್ಲಿ ಮುಜರಾಯಿ ಇಲಾಖೆಗೆ ಸೇರಿದ್ದರೂ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ದೇವಾಲಯಗಳೂ ನೂರಾರು ಸಂಖ್ಯೆಯಲ್ಲಿವೆ. ಲೇಖನದ ಆರಂಭದಲ್ಲಿ ಉಲ್ಲೇಖಿಸಿರುವ ಹಾಗೆ ಭಾರತೀಯ ಸಮಾಜ ʼ ಸಮುದಾಯ ಕೇಂದ್ರಿತ-ನಿರ್ದೇಶಿತ ʼ (Community Centric-guided) ಆಗಿರುವುದರಿಂದ , ದೇವಾಲಯಗಳ ಜೀರ್ಣೋದ್ಧಾರ ಅವುಗಳ ಒಳಗಿರುವ ದೈವವನ್ನು ಅವಲಂಬಿಸುತ್ತದೆ. ಈ ದೈವಗಳನ್ನು ಆರಾಧಿಸುವ ಸಮುದಾಯಗಳು, ಅವುಗಳ ಹಿತಾಸಕ್ತಿ, ಸಾಂಸ್ಥೀಕರಣಗೊಂಡ ಆಚರಣೆಗಳು (Institutionalised practices) ಹಾಗೂ ವಿಶೇಷವಾಗಿ ಜಾತಿ, ಪಂಗಡ, ಉಪಪಂಗಡಗಳು, ದೇವಾಲಯಗಳ ಜೀರ್ಣೋದ್ಧಾರದಲ್ಲೂ (ಜೀರ್ಣ+ಉದ್ಧಾರ) ನಿರ್ಣಾಯಕವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ʼ ನಾಗರಿಕ ಸೇವೆ –ಸಮಾಜ ಸೇವೆ ʼ ಹೆಸರಿನಲ್ಲೂ ಈ ಸಾಂಸ್ಥೀಕರಣ ವ್ಯಾಪಕವಾಗುತ್ತಿದೆ.

ದೇವಾಲಯಗಳ ಗರ್ಭಗುಡಿಯಲ್ಲಿರುವ ʼ ಮೂರ್ತಿ ರೂಪದ ದೇವರು ʼ ಹೇಗೆ ಜನಸಾಮಾನ್ಯರ ಕೈಗೆ ನಿಲುಕುವುದಿಲ್ಲವೋ ಹಾಗೆಯೇ ಆ ಮೂರ್ತಿಯ ಸುತ್ತ ನಿರ್ಮಾಣವಾಗುವ ಒಂದು ಪುಟ್ಟ ಸಾಮ್ರಾಜ್ಯವೂ ಸಹ ನಿಲುಕುವುದಿಲ್ಲ. ನಂಬಿಕೆ ಇರುವವರ ದೃಷ್ಟಿಯಲ್ಲಿ ದೇವರು ಎಲ್ಲರಿಗೂ ಸಲ್ಲುತ್ತಾನೆ ಆದರೆ ಆಧುನಿಕ ನಾಗರಿಕತೆಯಲ್ಲಿ ದೇವ-ದೇವತೆಗಳ ಮೂಲಕ ಸಂಗ್ರಹವಾಗುವ ಆದಾಯ ಮತ್ತು ಸಂಪತ್ತು ಕೆಲವರಿಗೆ ಮಾತ್ರ ಸಲ್ಲುತ್ತದೆ. ವಿಡಂಬನಾತ್ಮಕವಾಗಿ ಹೇಳುವುದಾದರೆ ʼ ಈ ಭೂಮಿ ನಮ್ಮದು ʼ ಎಂಬ ಸದ್ಭಾವನೆಯಿಂದ ವ್ಯವಸಾಯ ಮಾಡುವ ಸಾಧಾರಣ ರೈತ, ಆ ಸಂಪತ್ತಿನ ಒಡೆಯನಾಗುವುದೇ ಇಲ್ಲ. ದೇವರೂ ಸಹ ಹಾಗೆ. ಎಲ್ಲರಲ್ಲೂ ಇರುತ್ತಾನೆ ಆದರೆ ಉಳ್ಳವರಿಗೆ ಮಾತ್ರ ಸಲ್ಲುತ್ತಾನೆ. ಈ ದೇವರ ಸುತ್ತ ನಿರ್ಮಾಣವಾಗುವ ಕೋಟೆ ಸ್ಥಾವರಗಳು ಕೆಲವೇ ಜನರಿಗೆ ಸಲ್ಲುತ್ತವೆ.

ಹೀಗಿರುವಾಗ ಅನಾಥ ದೇವಾಲಯಗಳನ್ನು ಕೇಳುವವರು ಯಾರು ? ಇದೂ ಚರ್ಚಾಸ್ಪದವೇ !
(ವಿ ಸೂ : ಈ ಲೇಖನದಲ್ಲಿ ಬಳಸಿರುವ ದೈವ, ದೇವರು,ದೇವಾಲಯ, ದೇಗುಲ ಇವೆಲ್ಲ ಪದಗಳೂ ಎಲ್ಲ ಮತ-ಧರ್ಮಗಳಿಗೂ ಅನ್ವಯಿಸುತ್ತವೆ).

Tags: DharmaDivinegod
Previous Post

ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

Next Post

ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ | Mysuru Dasara

Related Posts

Koppal's Gavisiddeshwara Swamiji inaugurates the world-famous Mysuru Dasara festival today
Top Story

ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ | Mysuru Dasara

by ಪ್ರತಿಧ್ವನಿ
October 11, 2026
0

ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 416ನೇ ವರ್ಷದ ಐತಿಹಾಸಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara) ಇಂದು ವಿದ್ಯುಕ್ತ ಚಾಲನೆ ದೊರೆಯಲಿದೆ. ನಗರದ ಚಾಮುಂಡಿ...

Read moreDetails
ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

ರೂಪಾಯಿ ಕುಸಿತಕ್ಕೆ ಬ್ರೇಕ್ ಹಾಕಲು ಆರ್‌ಬಿಐ ಮಾಸ್ಟರ್ ಪ್ಲ್ಯಾನ್!  ಏನದು ?

October 10, 2026
ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

ನಿಮ್ಮ ಊಟದ ತಟ್ಟೆಯಲ್ಲಿದೆ 1.5 ಕೋಟಿ ಜೀವ ಉಳಿಸುವ ಶಕ್ತಿ! ಹೊಸ ವರದಿಯಲ್ಲಿ ಅಚ್ಚರಿಯ ಮಾಹಿತಿ

October 10, 2026
ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

ಆಸ್ಪತ್ರೆ ಬಿಲ್‌ನಲ್ಲಿ ಇನ್ಮುಂದೆ ಈ ಮಾಹಿತಿ ಕಡ್ಡಾಯ? ನವೆಂಬರ್ 1ರಿಂದ ಹೊಸ ರೂಲ್ಸ್!

October 10, 2026
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ತನಿಖೆ ನಡೆಸಿದ ಪೊಲೀಸರ ವಿರುದ್ಧವೇ ಇಲಾಖಾ ತನಿಖೆ! ಏಕೆ ?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ತನಿಖೆ ನಡೆಸಿದ ಪೊಲೀಸರ ವಿರುದ್ಧವೇ ಇಲಾಖಾ ತನಿಖೆ! ಏಕೆ ?

October 10, 2026
Next Post
Koppal's Gavisiddeshwara Swamiji inaugurates the world-famous Mysuru Dasara festival today

ಇಂದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ | Mysuru Dasara

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada