ಮೊನ್ನೆಯಷ್ಟೇ ಕರ್ನಾಟಕದ ಮಾಜಿ ಸಭಾಧ್ಯಕ್ಷರು “ರೇಪ್ ಆದಾಗ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಿಬಿಡಬೇಕು” ಎಂದು ಹೇಳಿ ದೇಶಾದ್ಯಂತ ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಸುದ್ದಿ ಇನ್ನೂ ಹಸಿ ಹಸಿಯಾಗಿರುವಾಗಲೇ ಸಮಾಜವಾದಿ ಪಕ್ಷದ ಸಂಸದರಿಬ್ಬರು ಹೆಣ್ಣು ಮಕ್ಕಳ ಮದುವೆ, ಸಂಸಾರ, ವಯಸ್ಸು, ಫಲವತ್ತತೆ ಎಂದು ಸಲ್ಲದ ಮಾತನಾಡಿದ್ದಾರೆ.
ಮಹಿಳೆಯರ ಕನಿಷ್ಠ ವಿವಾಹ ವಯಸ್ಸನ್ನು 21 ಕ್ಕೆ ಹೆಚ್ಚಿಸುವ ಕೇಂದ್ರದ ಕ್ರಮದ ಕುರಿತು ಮಾತನಾಡುತ್ತಾ ಸಮಾಜವಾದಿ ಪಕ್ಷದ ಸಂಸದ ಎಸ್‌ಟಿ ಹಸನ್ ಅವರು ನಿನ್ನೆ ಹೆಣ್ಣುಮಕ್ಕಳು ಫಲವತ್ತತೆಯ ವಯಸ್ಸನ್ನು (ಋತುಮತಿಯಾದಂತೆ) ತಲುಪಿದಾಗ ಮದುವೆಯಾಗಬೇಕು ಎಂದು ಹೇಳಿದ್ದಾರೆ. “ಹೆಣ್ಣು ಮಕ್ಕಳಿಗೆ ಮದುವೆಯ ಪ್ರಸ್ತಾಪಗಳು 16 ನೇ ವಯಸ್ಸಿನಲ್ಲಿ ಬರಲು ಪ್ರಾರಂಭಿಸುತ್ತವೆ. ಮದುವೆ ವಿಳಂಬವಾದರೆ, ಎರಡು ಅನನುಕೂಲತೆಗಳಿವೆ, ಒಂದು ಬಂಜೆತನದ ಸಾಧ್ಯತೆ. ಎರಡನೆಯದು, ವಯಸ್ಸಾದಾಗ ಮಕ್ಕಳು ಜೀವನದಲ್ಲಿ ನೆಲೆ ನಿಂತಿರುವುದಿಲ್ಲ. ನಿಮ್ಮ ಜೀವನದ ಕೊನೆಯ ದಶಕದಲ್ಲಿ ನೀವು ಇರುವಾಗ, ನಿಮ್ಮ ಮಕ್ಕಳು ಇನ್ನೂ ವಿದ್ಯಾರ್ಥಿಗಳಾಗಿರುತ್ತಾರೆ” ಎಂದು ಸುದೀರ್ಘವಾಗಿ ವಿವರಿಸಿರುವ ಅವರು “ಒಂದು ಹುಡುಗಿ ಪ್ರಬುದ್ಧಳಾಗಿ ಫಲವತ್ತತೆಯ ವಯಸ್ಸನ್ನು ತಲುಪಿದಾಗ ಅವಳು ಮದುವೆಯಾಗಬೇಕು ಎಂದು ನಾನು ನಂಬುತ್ತೇನೆ. ಹುಡುಗಿ 16 ನೇ ವಯಸ್ಸಿನಲ್ಲಿ ಋತುಮತಿಯಾದರೆ ಅವಳು 16 ನೇ ವಯಸ್ಸಿನಲ್ಲಿ ಮದುವೆಯಾಗಬಹುದು, ಅವಳು 18 ನೇ ವಯಸ್ಸಿನಲ್ಲಿ ಮತ ಹಾಕಬಹುದಾದರೆ ಏಕೆ ಮದುವೆಯಾಗಬಾರದು?” ಎಂದೂ ಅವರು ಕೇಳಿದ್ದಾರೆ.
ಈ ವಿಷಯದ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸಮಾಜವಾದಿ ಪಕ್ಷದ ಮತ್ತೋರ್ವ ಸಂಸದ ಶಫೀಕರ್ ರೆಹಮಾನ್ ಬಾರ್ಕ್ “ಭಾರತ ಬಡ ದೇಶ ಮತ್ತು ಪ್ರತಿಯೊಬ್ಬರೂ ತಮ್ಮ ಮಗಳನ್ನು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಕಳುಹಿಸಲು ಬಯಸುತ್ತಾರೆ. ನಾನು ಈ ಮಸೂದೆಯನ್ನು ಸಂಸತ್ತಿನಲ್ಲಿ ಬೆಂಬಲಿಸುವುದಿಲ್ಲ” ಎಂದು ಹೇಳಿದ್ದಾರೆ.
ಹೆಣ್ಣು ಮಕ್ಕಳನ್ನು ಬರಿಯ ಮದುವೆ, ಸಂಸಾರ ಎಂದು ಕಟ್ಟಿ ಹಾಕಿ ಆಕೆಯ ಇತರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳುವ ಈ ಪುರುಷ ಮನಸ್ಥಿತಿಯನ್ನು ಬದಲಾಯಿಸುವುದು ಹೇಗೆ? ಮದುವೆಯು ತಮ್ಮ ಹೆಣ್ಣುಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುತ್ತದೆ ಎಂಬ ಹಸಿ ಹಸಿ ಭ್ರಮೆಯಲ್ಲಿರುವ ಭಾರತೀಯ ಪೋಷಕರು ನಾಯಕರು ಅನ್ನಿಸಿಕೊಂಡಿರುವ ಇಂತಹವರ ಬೇಜವಾಬ್ದಾರಿ ಹೇಳಿಕೆಯಿಂದ ಮತ್ತಷ್ಟು ಉತ್ತೇಜಿತರಾಗುತ್ತಾರೆ ಎನ್ನುವುದು ಇವರಿಗೆಲ್ಲಾ ಯಾಕೆ ಅರ್ಥವಾಗುವುದಿಲ್ಲ? ಸರ್ಕಾರ ತಂದಿರುವ ಹೊಸ ಕಾನೂನಿನ ಹಿಂದೆ ಎಷ್ಟೇ ರಾಜಕೀಯ ಲೆಕ್ಕಾಚಾರಗಳಿದ್ದರೂ ಮನೆಯಲ್ಲಿ ಅವಿವಾಹಿತ ಹೆಣ್ಣುಮಕ್ಕಳನ್ನು ಹೊಂದಿರುವುದೇ ಸಾಮಾಜಿಕ ಕಳಂಕ ಅಂದುಕೊಂಡಿರುವ ಲಕ್ಷಾಂತರ ಪೋಷಕರಿರುವ ಈ ದೇಶದಲ್ಲಿ ಹೊಸ ಕಾನೂನು ಹೆಣ್ಣು ಮಕ್ಕಳನ್ನು ಬೇಗನೆ ಮದುವೆ ಮಾಡುವ ಪದ್ದತಿಗೆ ಸ್ವಲ್ಪವಾದರೂ ಕಡಿವಾಣ ಹಾಕುತ್ತದೆ ಎನ್ನುವದರಲ್ಲಿ ಸಂಶಯವಿಲ್ಲ.
ಪ್ರತಿ ಮದುವೆಯೂ ಹೆಣ್ಣಿಗೆ ಹೆಗಲಿಗೆ ಮಣಭಾರದ ಹೊಣೆಗಾರಿಕೆಯನ್ನು ವಹಿಸುತ್ತದೆ. ಗಂಡನ ಬೇಕು ಬೇಡಗಳು, ಮನೆಯವರ ಆರೈಕೆ ಎಲ್ಲಕ್ಕಿಂತ ಮುಖ್ಯವಾಗಿ ಹದಿನಾರು ವರ್ಷಕ್ಕೆ ಆಕೆಯ ಶಿಕ್ಷಣದ ಹಕ್ಕನ್ನು ಮದುವೆ ಕಿತ್ತುಕೊಳ್ಳುತ್ತದೆ. ಎಷ್ಟೋ ಹೆಣ್ಣುಮಕ್ಕಳ ಶಿಕ್ಷಣದ ಆಸೆ ಮದುವೆಯಿಂದಲೇ ಮೊಟಕುಗೊಂಡಿದೆ. ಶಿಕ್ಷಣವೊಂದೇ ಅಲ್ಲದೆ ಇಂತಹ ಮದುವೆಗಳು ಆರೋಗ್ಯ ಮತ್ತು ಹೆಣ್ಣು ಮಕ್ಕಳ ರಕ್ಷಣೆಯ ಹಕ್ಕುಗಳ ಮೇಲೆಯೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇವು ನೇರವಾಗಿ ಹುಡುಗಿಯ ಮೇಲೆ ಮಾತ್ರವಲ್ಲದೆ ಅವಳ ಕುಟುಂಬ ಮತ್ತು ಸಮುದಾಯದ ಮೇಲೂ ಪರಿಣಾಮ ಬೀರುತ್ತವೆ.
ಬೇಗನೇ ಮದುವೆಯ ಬಂಧಕ್ಕೆ ಸಿಲುಕುವ ಹುಡುಗಿಯರು ಬೇಗನೇ ಗರ್ಭಧರಿಸುವ ಸಾಧ್ಯತೆಯೂ ಹೆಚ್ಚು. ಇದರಿಂದಾಗಿ ಅವರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಲ್ಲಿ ಅಪಾಯಕಾರಿ ತೊಂದರೆಗಳನ್ನು ಅನುಭವಿಸುವ ಸಾಧ್ಯತೆಯೂ ಇರುತ್ತದೆ. ಇಂತಹ ಹೆರಿಗೆಯು ನವಜಾತ ಶಿಶುಗಳಿಗೆ ಮತ್ತು ಯುವ ತಾಯಂದಿರಿಗೆ ಅಪಾಯವನ್ನು ಹೆಚ್ಚಿಸುತ್ತದೆ. 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಾಯಂದಿರಿಗೆ ಜನಿಸಿದ ಶಿಶುಗಳು ಕಡಿಮೆ ಜನನ ತೂಕ, ಅವಧಿಪೂರ್ವ ಹೆರಿಗೆಯಂತಹ ಅಪಾಯಗಳನ್ನು ಎದುರಿಸುತ್ತಾರೆ. ಅಲ್ಲದೆ ಹದಿಹರೆಯದಲ್ಲೇ ತಾಯಂದಿರಾಗುವವರಲ್ಲಿ ತೀವ್ರತರವಾದ ರಕ್ತಹೀನತೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಇದು ದೇಹವನ್ನು ದುರ್ಬಲಗೊಳಿಸುತ್ತದೆ. ಇದು ನೇರವಾಗಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
ಅಷ್ಟು ಮಾತ್ರವಲ್ಲದೆ ಹದಿ ಹರೆಯದ ಹೆಣ್ಣು ಮಕ್ಕಳ ಗರ್ಭಧಾರಣೆಯು ಸಮುದಾಯಿಕ ಮತ್ತು ದೇಶದ ಅರ್ಥ ವ್ಯವಸ್ಥೆಯ ಮೇಲೂ ಪ್ರಭಾವ ಬೀರುತ್ತದೆ. ಈ ಹೆಣ್ಣುಮಕ್ಕಳ ಶಿಕ್ಷಣವು ಅರ್ಧಕ್ಕೆ ಮೊಟಕುಗೊಂಡಿರುವುದರಿಂದ ಆರ್ಥಿಕವಾಗಿ ಅವರು ಸಶಕ್ತರಾಗಿರುವುದಿಲ್ಲ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸುವ ಯಾವ ದಾರಿಯೂ ಅವರಿಗೆ ತೆರೆದಿರುವುದಿಲ್ಲ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆಯಿಂದಾಗಿ ಭಾರತವು ವರ್ಷಕ್ಕೆ $ 7.7 ಶತಕೋಟಿ ಆರ್ಥಿಕ ನಷ್ಟವನ್ನು ಭರಿಸುತ್ತದೆ.
ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 21ಕ್ಕೆ ಏರಿಸಿರುವುದು ಅತ್ಯಂತ ಪ್ರಗತಿಪರ ಹೆಜ್ಜೆ. ಆದರೆ ನಮ್ಮ ಹರಕುಬಾಯಿಯ ರಾಜಕಾರಣಿಗಳ ಬಾಯಿ ಮುಚ್ಚಿಸುವುದು ಹೇಗೆ? ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮಇಬ್ಬರೂ ಸಂಸದರ ಮಾತಿನಿಂದ ಅಂತರ ಕಾಯ್ದುಕೊಂಡಿದ್ದು ಸಮಾಜವಾದಿ ಪಕ್ಷಕ್ಕೂ ಅವರ ಹೇಳಿಕೆಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಕನಿಷ್ಠ ಬದ್ಧತೆಯನ್ನಾದರೂ ಪ್ರದರ್ಶಿಸಿದ್ದಾರೆ. ಆದರೆ ಇತ್ತ ಅಸಾಸುದ್ದೀನ್ ಒವೈಸಿ “18 ವರ್ಷ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಒಪ್ಪಂದಗಳಿಗೆ ಸಹಿ ಮಾಡಬಹುದು, ವ್ಯವಹಾರಗಳನ್ನು ಪ್ರಾರಂಭಿಸಬಹುದು, ಪ್ರಧಾನ ಮಂತ್ರಿಗಳನ್ನು ಆಯ್ಕೆ ಮಾಡಬಹುದು ಮತ್ತು ಸಂಸದರು ಮತ್ತು ಶಾಸಕರನ್ನು ಆಯ್ಕೆ ಮಾಡಬಹುದು ಆದರೆ ಮದುವೆಯಾಗಬಾರದೇ?” ಎಂದು ಪ್ರಶ್ನಿಸಿದ್ದಾರೆ. ಆದರೆ ಒಪ್ಪಂದಗಳಿಗೆ ಸಹಿಹಾಕುವವರು, ಬ್ಯುಸಿನೆಸ್ ಪ್ರಾರಂಭಿಸುವವರು ಹಾಗೂ ಮತದಾನ ಮಾಡುವವರು ಸ್ವಇಚ್ಛೆಯಿಂದ ಮಾಡುತ್ತಾರೆ ಆದರೆ ಈ ದೇಶದಲ್ಲಿ ಮದುವೆ ಮತ್ತು ಲೈಂಗಿಕ ಸಂಪರ್ಕಗಳು ಬಲವಂತವಾಗಿಯೂ ನಡೆಯುತ್ತವೆ ಎನ್ನುವುದನ್ನು ಘನತೆವೆತ್ತ ಸಂಸದರು ಮರೆತಿರುವುದು ಮಾತ್ರ ದುರಂತ.