ಕನ್ನಡ ಸಾಹಿತ್ಯ ವಿಮರ್ಶಾ ಲೋಕದ ವಿಶಿಷ್ಟ ವಿಮರ್ಶಕ, ಖ್ಯಾತ ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಜಿ. ಎಚ್. ನಾಯಕ್ ಇಂದು ಮೈಸೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ತಮ್ಮ ನೇರ ನುಡಿ ಮತ್ತು ನಿಷ್ಠುರ ಅಭಿವ್ಯಕ್ತಿಯಿಂದಲೇ ಸಾಹಿತ್ಯ ವಲಯದಲ್ಲಿ ಛಾಪು ಮೂಡಿಸಿದ್ದ ಜಿ. ಎಚ್. ನಾಯಕರು ಬಹುಕಾಲದಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅನಾರೋಗ್ಯದ ಕಾರಣ ಕಳೆದ ಮೂರು ನಾಲ್ಕು ವರ್ಷಗಳಿಂದ ಯಾವುದೇ ಸಾಮಾಜಿಕ-ಸಾಹಿತ್ಯಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಲೂ ಇರಲಿಲ್ಲ.
ಹೆಚ್ಚು ಓದಿದ ಸ್ಟೋರಿಗಳು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆಯಲ್ಲಿ 1935ರ ಸೆಪ್ಟಂಬರ್ 18ರಂದು ಜನಿಸಿದ ಜಿ.ಎಚ್. ನಾಯಕ್ ವಿದ್ಯಾರ್ಥಿ ದೆಸೆಯಿಂದಲೂ ಮೈಸೂರಿನಲ್ಲೇ ನೆಲೆಸಿದ್ದರು. ಮೈಸೂರಿನ ಸಾಹಿತ್ಯ ವಲಯ, ಸಾಂಸ್ಕೃತಿಕ ಜಗತ್ತು ಹಾಗೂ ಮಾನವ ಹಕ್ಕುಗಳ ಹೋರಾಟಗಳು, ಇತರ ಪ್ರಗತಿಪರ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಜಿ.ಎಚ್. ನಾಯಕ್ ಅವರು ತಮ್ಮ ನೇರ ನುಡಿಗಳಿಗೆ ಹಾಗೂ ಸಾಹಿತ್ಯ ಕೃತಿಗಳ ವಸ್ತುನಿಷ್ಠ ವಿಮರ್ಶೆಗೆ ಹೆಸರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಜಿ.ಎಚ್. ನಾಯಕರು ಕನ್ನಡ ಇದೇ ಸಂಸ್ಥೆಯಲ್ಲೇ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆಗೈದಿದ್ದರು. ಬೌದ್ಧಿಕ ಪ್ರಾಮಾಣಿಕತೆ ಮತ್ತು ನಿಷ್ಠುರತೆಗೆ ಹೆಸರಾಗಿದ್ದ ಜಿ.ಎಚ್. ನಾಯಕರು ಸಮಾಜದ ಯಾವುದೇ ಆಗುಹೋಗುಗಳ ಬಗ್ಗೆ ಅಷ್ಟೇ ನಿಷ್ಠುರವಾಗಿ ಪ್ರತಿಕ್ರಯಿಸುತ್ತಿದ್ದರು. ಕೋಮುವಾದ, ಮತಾಂಧತೆ ಮತ್ತು ಮೂಲಭೂತವಾದದ ವಿರುದ್ಧ ಮೈಸೂರಿನ ಸಾಂಸ್ಕೃತಿಕ ವಲಯದಲ್ಲಿ ಪ್ರಖರ ದನಿಯಾಗಿ ಗುರುತಿಸಿಕೊಂಡಿದ್ದರು.


ಅಡಿಗರ ಗೌರವ ಗ್ರಂಥ ಸಂವೇದನೆ , ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ, ಶತಮಾನದ ಕನ್ನಡ ಸಾಹಿತ್ಯ 1, 2ನೇ ಸಂಪುಟಗಳಿಗೆ ಸಂಪಾದಕರೂ ಆಗಿ ಜಿ.ಎಚ್.ನಾಯಕ ಸೇವೆ ಸಲ್ಲಿಸಿದ್ದಾರೆ. ಅವರ ʼ ಉತ್ತರಾರ್ಧ ʼ ಕೃತಿಗೆ 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಜಿ.ಎಚ್. ನಾಯಕರು ʼ ನಿರಪೇಕ್ಷ ʼ ಎಂಬ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದರು. ʼ ನಿಜದನಿ ʼ ವಿಮರ್ಶಾ ಕೃತಿಗೆ ವಿ.ಎಂ. ಇನಾಂದಾರ ಸ್ಮಾರಕ ಬಹುಮಾನಕ್ಕೆ ಭಾಜನರಾಗಿದ್ದರು. ಬಹು ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ಜಿ.ಎಚ್. ನಾಯಕ್ ಅವರಿಗೆ ಒಲಿದುಬಂದಿತ್ತು.
ಜಿ.ಎಚ್ ನಾಯಕ್ ಅವರ ಕೃತಿಗಳು ಇಂತಿವೆ.
ಸಮಕಾಲೀನ (೧೯೭೩)
ಅನಿವಾರ್ಯ (೧೯೮೦)
ನಿರಪೇಕ್ಷೆ (೧೯೮೪)
ನಿಜದನಿ (೧೯೮೮)
ವಿನಯ ವಿಮರ್ಶೆ (೧೯೯೧)
ಸಕಾಲಿಕ (೧೯೯೫)
ಗುಣ ಗೌರವ (೨೦೦೨)
ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (೨೦೦೨)
ಕೃತಿ ಸಾಕ್ಷಿ (೨೦೦೬)
ಸ್ಥಿತಿ ಪ್ರಜ್ಞೆ (೨೦೦೭)
ಮತ್ತೆ ಮತ್ತೆ ಪಂಪ (೨೦೦೮)
ಸಾಹಿತ್ಯ ಸಮೀಕ್ಷೆ (೨೦೦೯)
ಉತ್ತರಾರ್ಧ (೨೦೧೧)
*ಸಂಪಾದನೆ*
ಕನ್ನಡ ಸಣ್ಣಕಥೆಗಳು
ಹೊಸಗನ್ನಡ ಕವಿತೆಗಳು
ಸಂವೇದನೆ (ಅಡಿಗರ ಗೌರವ ಗ್ರಂಥ)
ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
ಶತಮಾನದ ಕನ್ನಡ ಸಾಹಿತ್ಯ (ಸಂಪುಟ – ೧.೨)
ಆತ್ಮಕಥನ-
ಬಾಳು
ಇದೇ ವರ್ಷದ ಆರಂಭದಲ್ಲಿ ಹಿರಿಯ ಸಮಾಜವಾದಿ ಪ ಮಲ್ಲೇಶ್ ಅವರನ್ನು ಕಳೆದುಕೊಂಡ ಮೈಸೂರಿನ ಸಾಂಸ್ಕೃತಿಕ ಲೋಕ ಕಳೆದ ತಿಂಗಳು ಖ್ಯಾತ ಸಂವಿಧಾನ ತಜ್ಞ ಸಿ.ಕೆ.ಎನ್ ರಾಜಾ ಅವರ ಅಗಲಿಕೆಯನ್ನು ಸಹಿಸಿಕೊಳ್ಳಬೇಕಾಯಿತು. ಈ ಆಘಾತಗಳಿಂದ ಹೊರಬರುವಷ್ಟರಲ್ಲೇ ಮತ್ತೊಂದು ಸಾಂಸ್ಕೃತಿಕ ಕೊಂಡಿ ಅಗಲಿರುವುದು ಮೈಸೂರಿನ ಸಾಂಸ್ಕೃತಿಕ-ಸಾಹಿತ್ಯಕ ಹಾಗೂ ಪ್ರಗತಿಪರ ಹೋರಾಟಗಳ ಜಗತ್ತಿಗೆ ಅಪಾರ ಆಘಾತಕಾರಿ ವಿಷಯವಾಗಿದೆ.
ಅಗಲಿದ ಹಿರಿಯ ಸಾಂಸ್ಕೃತಿಕ ಚಿಂತಕರಿಗೆ ಅಂತಿಮ ನಮನಗಳು.
ನಾ ದಿವಾಕರ