ಕನ್ನಡ ಸಾಹಿತ್ಯ ಲೋಕದ ತಮ್ಮದೇ ಆದ ಹೆಗ್ಗುರುತನ್ನ ಮೂಡಿಸಿದ್ದ ಹಿರಿಯ ವಿಮರ್ಶಕ ಹಾಗೂ ನೇರ ನಿಷ್ಠುರ ಮಾತುಗಳಿಂದ ಹೆಸರಾದ ಜಿ.ಎಚ್ ನಾಯಕ ಎಂದೇ ಖ್ಯಾತರಾಗಿದ್ದ ಪ್ರೊ. ಗೋವಿಂದರಾಯ ಹಮ್ಮಣ್ಣ ನಾಯಕ ಮೈಸೂರಿನಲ್ಲಿ ನಿಧನ ಹೊಂದಿದ್ದಾರೆ .
ಹೆಚ್ಚು ಓದಿದ ಸ್ಟೋರಿಗಳು
ಹಲವು ತಿಂಗಳುಗಳಿಂದ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದ ಜಿ.ಎಚ್.ನಾಯಕ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮೈಸೂರಿನಲ್ಲಿ ನಡೆಯಲಿದೆ ಅಂತ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

1935, ಸೆಪ್ಟೆಂಬರ್ 18ರಂದು ಉತ್ತರ ಕನ್ನಡದ ಅಂಕೋಲ ತಾಲ್ಲೂಕಿನ ಸೂರ್ವೆಯಲ್ಲಿ ಜನಿಸಿದ್ದ ಜಿ.ಎಚ್.ನಾಯಕ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿ ಜೀವನದಿಂದಲೂ ಮೈಸೂರಿನಲ್ಲಿ ನೆಲೆಸಿದ್ದ ಜಿ.ಎಚ್ ನಾಯಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ರು. ಜೊತೆಗೆ ಇವರ ಸಾಹಿತ್ಯ ಸೇವೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿಗಳು ಕೂಡ ಇವರನ್ನ ಹುಡುಕಿಕೊಂಡು ಬಂದಿದ್ವು, ಇನ್ನು ಇವರ ಪತ್ನಿ ಮೀರಾನಾಯಕ ಕೂಡ ಸಾಮಾಜಿಕ ಹೋರಾಟಗಾರ್ತಿ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಜಿ.ಎಚ್ ನಾಯಕ ಅವರು ವಿಮರ್ಶೆ ಜೊತೆಗೆ ಸಂಪಾದನೆ, ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳನ್ನೂ ರಚಿಸಿದ್ದರು. ಇದರ ಜೊತೆಗೆ ‘ಬಾಳು’ ಎಂಬ ಹೆಸರಿನಲ್ಲಿ ತಮ್ಮ ಆತ್ಮಕಥೆಯನ್ನು ಸಹ ಬರೆದಿದ್ದಾರೆ. 1973ರಲ್ಲಿ ಸಮಕಾಲೀನ, 1980 ರಲ್ಲಿ ಅನಿವಾರ್ಯ, 1984 ರಲ್ಲಿ ನಿರಪೇಕ್ಷೆ, 1988 ರಲ್ಲಿ ನಿಜದನಿ, 1991 ರಲ್ಲಿ ವಿನಯ ವಿಮರ್ಶೆ, 1995 ರಲ್ಲಿ ಸಕಾಲಿಕ, 2002ರಲ್ಲಿ ಗುಣ ಗೌರವ, ಮತ್ತೊಮ್ಮೆ 2002ರಲ್ಲಿ ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ, 2006 ರಲ್ಲಿ ಕೃತಿ ಸಾಕ್ಷಿ, 2007ರಲ್ಲು ಸ್ಥಿತಿ ಪ್ರಜ್ಞೆ, 2008ರಲ್ಲಿ ಮತ್ತೆ ಮತ್ತೆ ಪಂಪ, 2009 ರಲ್ಲಿ ಸಾಹಿತ್ಯ ಸಮೀಕ್ಷೆ, 2011ರಲ್ಲಿ ಉತ್ತರಾರ್ಧ ಅವರ ಬಹುಮುಖ್ಯ ಕೃತಿಗಳು ಅಂತ ಕರೆಯಿಸಿಕೊಂಡಿವೆ.
ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ಸೇವೆಗೆ ತಮ್ಮನ್ನ ತೊಡಗಿಸಿಕೊಂಡಿದ್ದ ಜಿ.ಎಚ್ ನಾಯಕ ಅವರು ಎಂದು ಇಹಲೋಕ ತ್ಯಜಿಸಿದ್ದಾರೆ. ಜಿ.ಎಚ್ ನಾಯಕ ಅವರ ಅಗಲಿಕೆಗೆ ನಾಡಿನ ಪ್ರಮುಖ ಗಣ್ಯರು ಸಂತಾಪ ಸೂಚಿಸಿದ್ದಾರೆ