ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ಶುಕ್ರವಾರ ದಿಢೀರ್ ಗುಂಡಿನ ಸದ್ದು ಮಾಡಿತ್ತು. ಅದು ಕೂಡ ಕೋರ್ಟ್ ಆವರಣದಲ್ಲೇ ಎನ್ನುವುದು ಮಾತ್ರ ಭಾರೀ ಆಘಾತ. ಎರಡು ಗುಂಪುಗಳ ನಡುವಿನ ವೈಷಮ್ಯವೂ ಕೋರ್ಟ್ ಆವರಣದಲ್ಲೇ ರಕ್ತ ಹರಿಸಿತ್ತು. ಇದರ ಪರಿಣಾಮ ಮೂವರು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಈ ಘಟನೆ ನಡೆದಿದ್ದು ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ, ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು ಮಾತ್ರ ಸುಳ್ಳಲ್ಲ. ಅದು ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಗುಂಡಿನ ಸದ್ದು ಕೇಳಿಸಿದ್ದು ಮಾತ್ರ ಅಚ್ಚರಿ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಎರಡು ಖತರ್ನಾಕ್ ಗ್ಯಾಂಗ್ಗಳ ನಡುವಿನ ಘರ್ಷಣೆಯೂ ಮೂವರನ್ನು ಬಲಿ ತೆಗೆದುಕೊಂಡಿದೆ. ಈ ನಟೋರಿಯಸ್ ಗ್ಯಾಂಗ್ಗಳು ದೆಹಲಿ ರೋಹಿಣಿ ಕೋರ್ಟ್ ಆವರಣದಲ್ಲೇ ಯಾವುದೇ ಆತಂಕವಿಲ್ಲದೇ ಗ್ಯಾಂಗಸ್ಟರ್ ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಕೊಂದರು.
ದೆಹಲಿ ಪೊಲೀಸರು ಜಿತೇಂದರ್ ಗೋಗಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ನಟೋರಿಯಸ್ ಗ್ಯಾಂಗ್ನಿಂದ ಡೆಡ್ಲಿ ಅಟ್ಯಾಕ್ ನಡೆದಿದೆ. ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಸುನೀಲ್ ಅಲಿಯಾಸ್ ಟಿಲ್ಲು ತಾಜಪುರಿಯಾ ನೇತೃತ್ವದ ಎದುರಾಳಿ ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಸ್ತ್ರಸಜ್ಜಿತ ದುಷ್ಕರ್ಮಿಗಳು ವಕೀಲರ ವೇಷದಲ್ಲಿ ಬಂದು ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ವೇಳೆ ಗೋಗಿ ಜೊತೆಗಿದ್ದ ವಿಶೇಷ ಸೆಲ್ ಕೌಂಟರ್ ಇಂಟೆಲಿಜೆನ್ಸ್ ತಂಡದ ಪೊಲೀಸರು ದುಷ್ಕರ್ಮಿಗಳ ಮೇಲೆ ಪ್ರತಿ ದಾಳಿ ನಡೆಸಿದ್ದು, ವಕೀಲರು ಎಂದು ತೋರುತ್ತಿದ್ದ ಇಬ್ಬರನ್ನು ಹತ್ಯೆಗೈದಿದ್ದಾರೆ. ಗುಂಡಿನ ಕಾಳಗದಲ್ಲಿ ಮೂವರು ಸಾವಿಗೀಡಾಗಿದ್ದು ಇನ್ನು ಕೆಲವರು ಗಾಯಗೊಂಡಿದ್ದಾರೆ.
ಯಾರು ಈ ಜಿತೇಂದರ್ ಗೋಗಿ?
30ರ ಹರೆಯದ ಈ ಗೋಗಿ ಆಸ್ತಿ ವ್ಯವಹಾರದಲ್ಲಿ ತೊಡಗಿಸಿಕೊಂಡು ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದ. ಸೆಪ್ಟೆಂಬರ್ 2010 ರಲ್ಲಿ ಪ್ರವೀಣ್ ಎಂಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ. ಇದಾದ ಬಳಿಕ ದೆಹಲಿ ವಿಶ್ವವಿದ್ಯಾಲಯದ ಶ್ರದ್ಧಾನಂದ ಕಾಲೇಜಿನಲ್ಲಿ ನಡೆದ ಚುನಾವಣೆ ವೇಳೆ, ಗೋಗಿ ತನ್ನ ಸ್ನೇಹಿತರೊಂದಿಗೆ ಸಂದೀಪ್ & ರವೀಂದರ್ ಎಂಬುವರ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಿದ್ದ. ಅದೇ ದಾಳಿ ಪ್ರಕರಣದಲ್ಲಿ ಗೋಗಿಯನ್ನು ಅಕ್ಟೋಬರ್ 2011 ರಲ್ಲಿ ಬಂಧಿಸಲಾಗಿತ್ತು.
ಇನ್ನು, ಇದಾದ ಬಳಿಕ ಹಣ ಗಳಿಸಲು ಗೋಗಿ ಗ್ಯಾಂಗ್ ಕಟ್ಟಿಕೊಂಡು ಅಟ್ಟಹಾಸ ಮೆರೆಯೋಕೆ ಶುರುಮಾಡಿದ್ದ. ಪೊಲೀಸರ ಪ್ರಕಾರ ಸುನಿಲ್ ಅಲಿಯಾಸ್ ಟಿಲ್ಲು ಈ ಗೋಗಿಯ ಬದ್ಧವೈರಿಯಾಗಿದ್ದ. ಇವರಿಬ್ಬರ ನಡುವೆ ಗ್ಯಾಂಗ್ ಅಲಿಪುರ ಮತ್ತು ಸೋನಿಪತ್ನಲ್ಲಿ, ಹಫ್ತಾ ವಿಚಾರಕ್ಕೆ 2 ಗುಂಪುಗಳ ನಡುವೆ ನಿರಂತರ ಘರ್ಷಣೆ ನಡೆಯುತ್ತಿತ್ತು.
ಕಳೆದ 6 ವರ್ಷಗಳಲ್ಲಿ ಎರಡು ಗ್ಯಾಂಗ್ಗಳ 10ಕ್ಕೂ ಹೆಚ್ಚು ಸದಸ್ಯರ ಹತ್ಯೆಯೂ ನಡೆದಿದೆ. ಇನ್ನು ಈ ಜಿತೇಂದರ್ ಗೋಗಿ ಕೊಲೆಗಳು, ಕೊಲೆ ಯತ್ನಗಳು, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರಗಳ ಒಡೆತನ, ಕಳ್ಳತನ, ಭೂ ಕಬಳಿಕೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಹರಿಯಾಣ, ಉತ್ತರಪ್ರದೇಶ ಮತ್ತು ದಿಲ್ಲಿ ಸೇರಿದಂತೆ ಮೂರು ರಾಜ್ಯಗಳಲ್ಲಿ ಜಿತೇಂದರ್ ಗೋಗಿ ತನ್ನ ಗ್ಯಾಂಗ್ ಆಪರೇಟ್ ಮಾಡುತ್ತಿದ್ದ. ಉದ್ಯಮಿಗಳಿಂದ ಹಫ್ತಾ ವಸೂಲಿಗೂ ಇಳಿದಿದ್ದ ಗೋಗಿ, ಹಣ ನೀಡದವರ ಹತ್ಯೆಗೂ ಮುಂದಾಗುತ್ತಿದ್ದ. ಹರಿಯಾಣಾದ ಗಾಯಕಿ ಹರ್ಷಿತಾ ದಹಿಯಾ ಹತ್ಯೆ ಕೇಸಲ್ಲೂ ಗೋಗಿ ಹೆಸರು ಕೇಳಿಬಂದಿತ್ತು. ಒಟ್ಟಾರೆಯಾಗಿ ದೆಹಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ನಟೋರಿಯಸ್ ಗ್ಯಾಂಗ್ಸ್ಟರ್ ಜಿತೇಂದರ್ ಗೋಗಿ.
ಆತನನ್ನ ಈಗ ವಿರೋಧಿ ಗ್ಯಾಂಗ್ ಶೂಟರ್ಗಳು ಹತ್ಯೆ ಗೈದಿದ್ದಾರೆ. ಆದರೆ, ಕೋರ್ಟ್ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಮಾತ್ರ ಭಾರೀ ಆತಂಕ ಸೃಷ್ಟಿಸಿದೆ. ಸಿನಿಮೀಯ ರೀತಿಯಲ್ಲಿ ಫೈರಿಂಗ್ ನಡೆದಿದೆ. ಗನ್ ಸಮೇತ ಶೂಟರ್ಗಳು ಕೋರ್ಟ್ ಒಳಗೆ ಹೇಗೆ ಬಂದರು ಎಂಬುದು ಯಕ್ಷಪ್ರಶ್ನೆ. ಇದೊಂದು ಭದ್ರತಾ ಲೋಪ ಅಲ್ಲದೇ ಮತ್ತೇನು ಅನ್ನೋ ಚರ್ಚೆ.