“ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಇಬ್ಬರೂ ಅನನುಭವಿಗಳು. ಸಲಹೆಗಾರರು ಇವರ ದಾರಿ ತಪ್ಪಿಸುತ್ತಿದ್ದಾರೆ,” ಇದು ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೀಡಿರುವ ಹೇಳಿಕೆ. ಸಿಎಂ ಹುದ್ದೆಯಿಂದ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಬಹಿರಂಗ ಸುದ್ದಿಗೋಷ್ಟಿ ಕರೆದು ಮಾತನಾಡಿರುವ ಸಮರಿಂದರ್ ಸಿಂಗ್ ಪಕ್ಷದ ರಾಜ್ಯ ಘಟಕದ ನಾಯಕರು ಹಾಗೂ ಇತರರ ವಿರುದ್ದ ತೀಕ್ಷ್ಣವಾದ ವಾಗ್ದಾಳಿ ನಡೆಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ವಿರುದ್ದ ಬಲವಾದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಅವರೊಬ್ಬ ಡ್ರಾಮಾ ಗುರು, ಅಪಾಯಕಾರಿ ಮನುಷ್ಯ. ಈಗ‘ಸೂಪರ್ ಸಿಎಂ’ ನಂತೆ ವರ್ತಿಸುತ್ತಿದ್ದಾರೆ. ಹೊಸ ಸಿಎಂ ಚರಣ್ಜಿತ್ ಸಿಂಗ್ಚನ್ನಿ ಅವರು ಸಿಧು ಅವರ ನಿರ್ದೇಶನಗಳಿಗೆ ಸುಮ್ಮನೆ ತಲೆ ಆಡಿಸುತ್ತಿದ್ದಾರೆ ಅಷ್ಟೇ, ಎಂದು ಕಿಡಿಕಾರಿದ್ದಾರೆ.
ಪಕ್ಷದಲ್ಲಿ ತಮ್ಮ ವಿರುದ್ದ ಉಂಟಾಗಿದ್ದ ಭಿನ್ನಮತದಿಂದ ‘ಅಪಮಾನಿತರಾಗಿ’ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಕ್ಯಾ. ಸಿಂಗ್ ಪಂಜಾಬ್ ಕಾಂಗ್ರೆಸ್ಅನ್ನು ದೆಹಲಿಯಿಂದ ನಡೆಸಲಾಗುತ್ತಿದೆ, ಎಂದು ಇದೇ ವೇಳೆ ಆರೋಪಿಸಿದ್ದಾರೆ.
ಇನ್ನು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರ ಕುರಿತಾಗಿಯೂ ಮಾತನಾಡಿರುವ ಅಮರಿಂದರ್ ಸಿಂಗ್, ಅವರಿಬ್ಬರನ್ನು ನನ್ನ ಮಕ್ಕಳಂತೆ ನೋಡಿಕೊಂಡಿದ್ದೆ. ಇದು ಈ ರೀತಿಯಲ್ಲಿ ಕೊನೆಯಾಗಬಾರದಿತ್ತು. ನನಗೆ ತುಂಬಾ ನೋವಾಗಿದೆ, ಎಂದಿದ್ದಾರೆ.
“ನಾನು ಯಾವುದೇ ಶಾಸಕರನ್ನು ವಿಮಾನದಲ್ಲಿ ಕೂರಿಸಿ ಗೋವಾಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಅದು ನನ್ನ ಕೆಲಸದ ಶೈಲಿಯಲ್ಲ. ಯಾವುದೇ ಗಿಮಿಕ್’ಗಳನ್ನು ನಾನು ಮಾಡುವುದಿಲ್ಲ. ಇದು ಗಾಂಧಿ ಕುಟುಂಬಕ್ಕೂ ಗೊತ್ತು. ರಾಹುಲ್ ಹಾಗೂ ಪ್ರಿಯಾಂಕ ಇಬ್ಬರೂ ಅನನುಭವಿಗಳು. ಸಲಹೆಗಾರರು ಅವರ ದಾರಿ ತಪ್ಪಿಸುತ್ತಿದ್ದಾರೆ,” ಎಂದು ಹೇಳಿದ್ದಾರೆ.
ತಾವು ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸುವ ಇರಾದೆಯನ್ನು ಹೊಂದಿದ್ದ ಕುರಿತು ಪ್ರತಿಕ್ರಿಯಿಸಿದ ಸಿಂಗ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಳಿಕ ನಾನು ನಾಯಕತ್ವವನ್ನು ತ್ಯಜಿಸುವ ಇರಾದೆ ಹೊಂದಿದ್ದೆ. ಸೋತ ಮೇಲಲ್ಲ. ಈಗಲೂ ನನ್ನ ಮುಂದೆ ಹಲವು ಅವಕಾಶಗಳು ತೆರೆದುಕೊಂಡಿವೆ. ಮೂರು ವಾರಗಳ ಹಿಂದೆಯೇ ನನ್ನ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಗೆ ನೀಡಿದ್ದೆ. ಆದರೆ, ಅವರು ಅವರು ಅದನ್ನು ಪಡೆಯಲು ಒಪ್ಪಿಕೊಂಡಿರಲಿಲ್ಲ, ಎಂದರು.
“ನನ್ನನ್ನು ಕರೆದು ಮತ್ತೆ ರಾಜೀನಾಮೆ ಸಲ್ಲಿಸಲು ಹೇಳಿದ್ದರೆ ನಾನು ರಾಜೀನಾಮೆ ಕೊಡುತ್ತಿದೆ. ಒಬ್ಬ ಸೈನಿಕನಾಗಿ ನನ್ನ ಕರ್ತವ್ಯ ನಿರ್ವಹಿಸುವುದೂ ಗೊತ್ತು. ನನ್ನನ್ನು ವಾಪಸ್ ಕರೆದಾಗ ಹಿಂದಿರುಗುವುದು ಗೊತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಗೆಲುವಿನ ದಡ ಸೇರಿಸಿದ ಬಳಿಕ ನಿವೃತ್ತಿ ಪಡೆಯುವುದಾಗಿ ನಾನು ಸೋನಿಯಾ ಗಾಂಧಿಗೆ ಮೊದಲೇ ತಿಳಿಸಿದ್ದೆ,” ಎಂದು ಅವರು ಹೇಳಿದ್ದಾರೆ.
ನಾನು ಇಚ್ಛಿಸಿದಂತೆ ಆಗಲಿಲ್ಲ. ಹಾಗಾಗಿ ಈಗ ನಾನು ಹೋರಾಡುತ್ತೇನೆ. ನೀವು 40ರ ವಯಸ್ಸಿನಲ್ಲಿ ಮುದುಕರಾಗಬಹುದು. ಆದರೆ, ನಾನು 80ರ ವಯಸ್ಸಿನ ತರುಣ. ವಯಸ್ಸು ನನಗೆ ಯಾವುತ್ತೂ ಅಡ್ಡಿಯಾಗಿಲ್ಲ, ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ಸಮರ ಸಾರುವ ಸೂಚನೆ ನೀಡಿದ್ದಾರೆ.
ಪಂಜಾಬ್ ಅನ್ನು ದೆಹಲಿಯಿಂದ ನಿಯಂತ್ರಿಸುತ್ತಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅಮರಿಂದರ್ ಸಿಂಗ್, ಮುಖ್ಯಮಂತ್ರಿಯಾಗಿ ನನ್ನ ಸಚಿವ ಸಂಪುಟವನ್ನು ರಚಿಸುವ ಅಧಿಕಾರ ನನಗಿರಬೇಕು. ನನ್ನ ರಾಜ್ಯದ ನಾಯಕರ ಕ್ಷಮತೆಯ ಕುರಿತು ನನಗೆ ಚೆನ್ನಾಗಿ ತಿಳಿದಿದೆ. ಆದರೆ, ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್, ಅಜಯ್ ಮಾಕೆನ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಏಕೆ ಸಚಿವ ಸಂಪುಟ ರಚನೆಯಲ್ಲಿ ತಲೆಯಿಡಬೇಕು? ಯಾರಿಗೆ ಯಾವ ಖಾತೆ ಕೊಟ್ಟರೆ ಒಳ್ಳೆಯದು ಎಂಬುದರ ಬಗ್ಗೆ ಅವರಿಗೆ ಯಾವ ಜ್ಞಾನವಿದೆ? ಎಂದು ಪ್ರಶ್ನಿಸಿದ್ದಾರೆ.
ಹೊಸ ಸಿಎಂ ತಮ್ಮ ಕ್ಯಾಬಿನೆಟ್ ರಚನೆಗಾಗಿ ನವಜೋತ್ ಸಿಂಗ್ ಸಿಧು ಹಾಗೂ ಉಪಮುಖ್ಯಮಂತ್ರಿಗಳಾದ ಸುಖ್ಜಿಂದರ್ ಸಿಂಗ್ ರಾಂಧವ ಮತ್ತು ಒ ಪಿ ಸೋನಿಯವರೊಂದಿಗೆ ದೆಹಲಿಗೆ ತೆರಳಿರುವ ನಡುವೆಯೇ ಈ ಹೇಳಿಕೆ ನೀಡಿರುವುದು ಗಮನಾರ್ಹ.
ನವಜೋತ್ ಸಿಂಗ್ ಸಿಧು ವಾಸ್ತವದಲ್ಲಿ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರು ಹೇಳಿರುವುದಕ್ಕೆ ಹೊಸ ಸಿಎಂ ತಲೆ ಅಲ್ಲಾಡಿಸುತ್ತಿದ್ದಾರೆ. ನನ್ನ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್’ಗೆ ಉತ್ತಮ ಅಧ್ಯಕ್ಷರಿದ್ದರು. ನಾನು ಅವರಲ್ಲಿ ಸಲಹೆಗಳನ್ನು ಕೇಳುತ್ತಿದ್ದೆ. ಆದರೆ, ಅವರು ಎಂದೂ ನನ್ನ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ನಡೆಸಿಲ್ಲ, ಎಂದರು.
“ಪಂಜಾಬಿನ ಪರಿಸ್ಥಿತಿಯ ಕುರಿತು ಬೇಸರವಾಗುತ್ತಿದೆ. ಒಂದು ಖಾತೆಯನ್ನು ನಿಭಾಯಿಸಲು ಅಸಮರ್ಥನಾದ ಸಿಧು, ಈಗ ಸಚಿವ ಸಂಪುಟವನ್ನು ಹತೋಟಿಗೆ ತಂದುಕೊಳ್ಳಲು ಯತ್ನಿಸುತ್ತಿದ್ದಾರೆ. ಇಂತಹ ಡ್ರಾಮಾ ಗುರುವಿನ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆದರೆ, ಕಾಂಗ್ರೆಸ್ ಎರಡಂಕಿಯನ್ನು ತಲುಪುವುದು ಕಷ್ಟ,” ಎಂದಿದ್ದಾರೆ.
ನೂತನ ಸಿಎಂ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿರು ಸಿಂಗ್, ಚನ್ನಿ ಅವರು ವಿದ್ಯಾವಂತ ಹಾಗೂ ಬುದ್ದಿವಂತ ರಾಜಕಾರಣಿ. ಆದರೆ, ಪಾಕಿಸ್ತಾನದೊಂದಿಗೆ 600 ಕಿ.ಮೀ.ಗಳ ಗಡಿ ಹೊಂದಿರುವ ಪಂಜಾಬ್’ನ ಗೃಹ ಖಾತೆಯನ್ನು ನಿಭಾಯಿಸುವ ಅನುಭವ ಅವರಿಗೆ ಇರಲಿಲ್ಲ. ಅವರು ಏಳು ಬಾರಿಗೆ ವಿಧಾನಸಭೆಗೆ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರ ಕುರಿತ ನನ್ನ ಲೆಕ್ಕಾಚಾರ ಯಾವತ್ತೂ ತಪ್ಪಾಗಿಲ್ಲ, ಎಂದಿದ್ದಾರೆ.
“ನೀರಿನ ಬಿಲ್ ಪಾವತಿಯನ್ನು ಮನ್ನಾ ಮಾಡುವ ಕುರಿತು ನೂತನ ಸಿಎಂ ಘೋಷಿಸುವ ಮೊದಲು ಹಿಂದಿನ ವಿತ್ತ ಸಚಿವರ ಬಳಿ ಚರ್ಚೆ ನಡೆಸಿದ್ದಾರೆಂದು ಭಾವಿಸುತ್ತೇನೆ. ಈ ರಾಜ್ಯ ದಿವಾಳಿಯಾಗದಂತೆ ನೋಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ,” ಎಂದು ಕ್ಯಾ. ಸಿಂಗ್ ತಮ್ಮ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.