ಕೋವಿಡ್-19 ಎರಡನೇ ಅಲೆಯಲ್ಲಿ ದೇಶದ ಪ್ರಜೆಗಳು ತತ್ತರಿಸುತ್ತಿರುವುದರಿಂದ, ಕರೋನಾ ಸೋಂಕು ಹರಡುವುದನ್ನು ತಡೆಯಲು ರಾಷ್ಟ್ರೀಯ ನೀತಿ ರೂಪಿಸಲು ರಾಜಕೀಯ ಒಮ್ಮತ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.
ಭಾರತದ ಎಲ್ಲಾ ಪ್ರಜೆಗಳಿಗೂ ಉಚಿತವಾಗಿ ಕರೋನಾ ಲಸಿಕೆ ಹಾಕಬೇಕು. ಲಸಿಕೆಯನ್ನು ತ್ವರಿತವಾಗಿ ಸರಬರಾಜು ಮಾಡಲು ಉತ್ಪಾದನೆಯನ್ನು ವೃದ್ಧಿಸಲು ಕಡ್ಡಾಯ ಪರವಾನಗಿಯನ್ನು ಲಸಿಕೆ ತಯಾರಕ ಕಂಪೆನಿಗಳಿಗೆ ಸರ್ಕಾರ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸಲಹೆ ನೀಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ, ಕೆಲಸಗಳನ್ನು ನಿರ್ವಹಿಸುವ ಸಮಯವಿದು. ದೇಶದಲ್ಲಿನ ಕೋವಿಡ್ -19 ಬಿಕ್ಕಟ್ಟನ್ನು ಎದುರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲು ಮತ್ತು ಅದರ ಬಗ್ಗೆ ರಾಜಕೀಯ ಒಮ್ಮತವನ್ನು ತರಲು ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದು ಸೋನಿಯಾ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಪ್ರಸ್ತುತ ಬಿಕ್ಕಟ್ಟಿನ ಸಂಧರ್ಭದಲ್ಲಿ ಎಲ್ಲಾ ಬಡ ಕುಟುಂಬಗಳಿಗೂ 6000 ರುಪಾಯಿಗಳಷ್ಟು ಧನ ಸಹಾಯ ಮಾಡಬೇಕೆಂದು ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಾಗೂ ಕಾಳ ಸಂತೆಯಲ್ಲಿ ಜೀವ ರಕ್ಷಕ ಔಷಧಿಗಳು ಬಿಕರಿಯಾಗುತ್ತಿರುವದನ್ನು ತಡೆಯಲು ಸರ್ಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕೆಂದೂ ಅವರು ಸಲಹೆ ನೀಡಿದ್ದಾರೆ.
ಕರೋನಾ ಸಾಂಕ್ರಾಮಿಕ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದೊಂದಿಗೆ ಜೊತೆ ನಿಲ್ಲಲಿದೆ ಎಂದು ಹೇಳಿದ ಸೋನಿಯಾ ಗಾಂದಿ, ಕರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ಭಾರತೀಯರೂ ಒಟ್ಟಾಗುವಂತೆ ಕರೆ ನೀಡಿದ್ದಾರೆ.
ಭಾರತದಾದ್ಯಂತ ಕರೋನಾ ವಿಪರೀತ ವೇಗದಲ್ಲಿ ಹರಡುತ್ತಿದ್ದು, ಶನಿವಾರ ಒಂದೇ ದಿನ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿದೆ. 1,91,64,969 ಕರೋನಾ ಸೋಂಕುಗಳು ಅಧಿಕೃತವಾಗಿ ವರದಿಯಾಗಿದೆ. 2,11,853 ಮಂದಿ ಕರೋನಾ ಸೋಂಕಿಗೆ ತುತ್ತಾಗಿ ಅಸು ನೀಗಿದ್ದಾರೆ.