ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯುವ ಪಂಜಾಬ್ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದರ ನಡುವೆಯೇ ಬಾಲಿವುಡ್ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಮಾತನಾಡಿರುವ ನಟ ಸೋನು ಸೂದ್, ತಮ್ಮ ಸಹೋದರಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬೆಳವಣಿಗೆಯನ್ನು ಗೇಮ್ ಚೇಂಜರ್ ಎಂದು ಬಣ್ಣಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಳವಿಕಾ ಸೂದ್, ʻತನ್ನನ್ನು ತಾನು ಜನಸೇವೆಗಾಗಿ ಅರ್ಪಿಸಿಕೊಳ್ಳಲು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಚನ್ನಿ ಹಾಗೂ ಸಿಧು ನೇತೃತ್ವದಲ್ಲಿ ಮಾಳವಿಕ ಪಕ್ಷಕ್ಕೆ ಸೇರ್ಪಡೆಯಾದರು.
ಪಂಜಾಬ್ನ ಮೊಗಾ ಜಿಲ್ಲೆಯ ಸೂದ್ ನಿವಾಸದಲ್ಲಿ ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಸಿಧು, ʻಪಕ್ಷದ ಅಧ್ಯಕ್ಷರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಇಬ್ಬರು ಒಬ್ಬರ ಮನೆಗೆ ಸತ್ಕರಿಸಲು ಹೋಗಿದ್ದು ತುಂಬಾ ಅಪರೂಪ. ಯಾಕೆಂದರೆ ಇದಕ್ಕೆ ಅವರು ಅರ್ಹರು ಅದಕ್ಕಾಗಿ ನಾವಿಬ್ಬರು ಅವರನ್ನು ಸತ್ಕರಿಸಲು ಬಂದಿದ್ದೇವೆ. ಕ್ರಿಕೆಟ್ನಲ್ಲಿ ಈ ತರಹದ ಬೆಳವಣಿಗೆಯನ್ನು ಗೇಮ್ ಚೇಂಜರ್ ಎಂದು ಕರೆಯುತ್ತೇವೆ ವಿದ್ಯಾವಂತ ಯುವತಿಯಾಗಿರುವ ಅವರು ಇಂಜಿನಿಯರಿಂಗ್ ಪದವಿಧರೆ ಆಗಿರುವುದರಿಂದ ಜನರಿಗೆ ಸಹಾಯ ಮಾಡಲು ಸಹಕಾರಿಯಾಗಲಿದೆ ಎಂದು ಹೇಳಿದ್ದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತನ್ನ ತಂಗಿ ಮುಂಬರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ, ಯಾವ ಪಕ್ಷದಿಂದ ಎಂದು ತಿಳಿಸಿರಲಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಪಂಜಾಬ್ ರಾಜ್ಯ ಯುವ ಕಾಂಗ್ರೆಸ್ ಘಟಕ ʻ#ದಿನದ ಚಿತ್ರ ಪಂಜಾಬ್ ತನ್ನ ಭವಿಷ್ಯದ ಅಭಿವೃದ್ಧಿಗಾಗಿ ಸಿದ್ದವಾಗುತ್ತಿದೆʼ ಎಂದು ಸಿಧು ಹಾಗೂ ಸೂದ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದೆ.
2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿತು ಮತ್ತು ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳದ ದಶಕದ ಆಡಳಿತಕ್ಕೆ ಅಂತ್ಯವನ್ನ ಹಾಡಿತ್ತು. ಆಮ್ ಆದ್ಮಿ ಪಕ್ಷವು 20 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಸತತ ಪರಿಶ್ರಮದ ಫಲವಾಗಿ ಶಿರೋಮಣಿ ಅಕಾಲಿದಳ 15, ಬಿಜೆಪಿ 3 ಸ್ಥಾನಗಳಿಗೆ ತೃಪ್ತಿಪಟ್ಟಿಕೊಂಡವು.