• Home
  • About Us
  • ಕರ್ನಾಟಕ
Wednesday, October 29, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಭವಿಷ್ಯದ ಭಾರತವೂ ಯುವಪೀಳಿಗೆಯ ಸವಾಲುಗಳೂ

ನಾ ದಿವಾಕರ by ನಾ ದಿವಾಕರ
August 24, 2022
in ಅಭಿಮತ
0
ಭವಿಷ್ಯದ ಭಾರತವೂ ಯುವಪೀಳಿಗೆಯ ಸವಾಲುಗಳೂ
Share on WhatsAppShare on FacebookShare on Telegram

“ ಶತಮಾನದ ಪೀಳಿಗೆ ” ಎಂದೇ ಹೇಳಲಾಗುವ ಒಂದು ಬೃಹತ್‌ ಯುವ ಸಮೂಹ ಭವಿಷ್ಯದ ಭಾರತವನ್ನು ನಿರ್ಮಿಸಲು ತನ್ನ ಭೌತಿಕ, ಬೌದ್ಧಿಕ ಮತ್ತು ಸಾಂಸ್ಕೃತಿಕ ಚೇತನವನ್ನು ಬಳಸಬೇಕಿದೆ. ಈ ಯುವ ಸಮೂಹ ಇಂದು ಡಿಜಿಟಲ್‌ ಯುಗದ ಬಂಡವಾಳ ವ್ಯವಸ್ಥೆಯಲ್ಲಿ ತನ್ನ ವರ್ತಮಾನದ ನೆಲೆಯನ್ನು ಸುಸ್ಥಿರಗೊಳಿಸಿಕೊಳ್ಳಲು ಸಾಕಷ್ಟು ಶ್ರಮಿಸಬೇಕಿದೆ. ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಅರ್ಥವ್ಯವಸ್ಥೆಯಲ್ಲಿ ಜನಜೀವನವನ್ನು ಬಂಡವಾಳ ಜಗತ್ತಿನ ಸಾಂಸ್ಕೃತಿಕ ಮಾಧ್ಯಮಗಳು ನಿಯಂತ್ರಿಸಿದರೆ, ಜೀವನೋಪಾಯದ ಮಾರ್ಗಗಳನ್ನು ಮಾರುಕಟ್ಟೆ ನಿಯಂತ್ರಿಸುತ್ತದೆ. ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗವನ್ನು ದಾಖಲಿಸಿರುವ ಭಾರತದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇರುವುದನ್ನು ಇತ್ತೀಚಿನ ಅಗ್ನಿಪಥ್‌ ಯೋಜನೆ ಸಾಬೀತುಪಡಿಸಿದೆ. ಭಾರತೀಯ ಸೇನೆಯ 40 ಸಾವಿರ ಹುದ್ದೆಗಳಿಗೆ 25 ಲಕ್ಷ, ನೌಕಾ ಸೇವೆಯ 3000 ಹುದ್ದೆಗಳಿಗೆ 3 ಲಕ್ಷ, ವಾಯುಸೇನೆಯ 3000 ಹುದ್ದೆಗಳಿಗೆ 7.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 82 ಅರ್ಜಿಗಳು ಮಹಿಳೆಯರಿಂದಲೇ ಸಲ್ಲಿಕೆಯಾಗಿದೆ. 46 ಸಾವಿರ ಹುದ್ದೆಗಳಿಗೆ 34 ಲಕ್ಷ ಅರ್ಜಿಗಳ ಸಲ್ಲಿಕೆಯಾಗಿರುವುದು ನಿರುದ್ಯೋಗದ ಬ್ರಹ್ಮಾಂಡ ಸ್ವರೂಪವನ್ನು ಸೂಚಿಸುತ್ತದೆ. 2015ರ ನಂತರದಲ್ಲಿ ದೇಶದ ಅತಿದೊಡ್ಡ ಸಾರ್ವಜನಿಕ ಸಂಸ್ಥೆಯಾದ ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ನೇಮಕಾತಿಯೂ ಸಾಧ್ಯವಾಗಿದೆ. 2018ರಲ್ಲಿ 26502 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾಗ 47.56 ಲಕ್ಷ ಅಭ್ಯರ್ಥಿಗಳು ದಾಖಲಿಸಿದ್ದರು. ಅದೇ ವರ್ಷದಲ್ಲಿ ಗ್ರೂಪ್‌ ಡಿ ಹುದ್ದೆಯ 62907 ಸ್ಥಾನಗಳಿಗೆ ಒಂದು ಕೋಟಿ 90 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು.

ADVERTISEMENT

ಇದು ಯುವ ಪೀಳಿಗೆಯ ಜೀವನ ಮತ್ತು ಜೀವನೋಪಾಯವನ್ನು ನಿರ್ಧರಿಸುವ ನಿಟ್ಟಿನಲ್ಲಿ ನಾವು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಉದ್ಯೋಗ ಎನ್ನುವುದು ಆ ಕ್ಷಣದ ಜೀವನ ನಿರ್ವಹಣೆಯ ಮಾರ್ಗವಾಗುತ್ತಿರುವಾಗ, ಭಾರತದ 40 ಕೋಟಿಗೂ ಹೆಚ್ಚು ಜನತೆ ತಮ್ಮ ಸುಸ್ಥಿರ ಬದುಕಿನ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಈ ಉದ್ಯೋಗಾಕಾಂಕ್ಷಿಗಳಲ್ಲಿ ದೇಶಸೇವೆ ಮಾಡುವ ಉತ್ಸುಕತೆ ಮತ್ತು ಆಸಕ್ತಿಯೊಂದಿಗೇ ತಮ್ಮ ಬದುಕು ಕಟ್ಟಿಕೊಳ್ಳುವ ಒಂದು ಸುಭದ್ರ ನೆಲೆಯನ್ನು ಕಂಡುಕೊಳ್ಳುವ ಆತಂಕವನ್ನೂ ಗುರುತಿಸದೆ ಹೋದರೆ ಅದು ಆತ್ಮವಂಚನೆಯಾದೀತು. ಜೀವನ ಮತ್ತು ಜೀವನೋಪಾಯದ ಸಂಘರ್ಷದೊಡನೆಯೇ ಭಾರತದ ಬೃಹತ್‌ ಯುವ ಸಮೂಹ ಒಂದು ಸುಸ್ಥಿರ ಮಾರುಕಟ್ಟೆ ಮತ್ತು ಸಮಾಜವನ್ನೂ ನಿರ್ಮಿಸುವ ಜವಾಬ್ದಾರಿಯನ್ನು ಹೊರಬೇಕಿದೆ. ಈ ಯುವ ಪೀಳಿಗೆಗೆ ಸರಿದಾರಿಯನ್ನು ತೋರುವ ವರ್ತಮಾನದ ಮಾರ್ಗದರ್ಶಕ ಚೇತನಗಳೇ ಇಲ್ಲದಿರುವ ನವ ಭಾರತದಲ್ಲಿ, ಇತಿಹಾಸದ ಪುಟಗಳಿಂದಲೇ ಚೈತನ್ಯದ ನೆಲೆಗಳನ್ನು ಶೋಧಿಸಿ, ಜಗತ್ತಿಗೆ ಕಣ್ತೆರೆಯುತ್ತಿರುವ ಶತಮಾನದ ಪೀಳಿಗೆಗೆ ಒಂದು ಕಾಯಕಲ್ಪ ನೀಡಬೇಕಿದೆ. ಆದರೆ ಈ ಯುವ ಸಮೂಹ ಸಾಗುತ್ತಿರುವ ಹಾದಿಯನ್ನು ಗಮನಿಸಿದಾಗ ಸಹಜವಾಗಿಯೇ ಆತಂಕ ಹೆಚ್ಚಾಗುತ್ತದೆ. ಈ ದೇಶದ ಅಧಿಕಾರ ರಾಜಕಾರಣ ತನ್ನ ಸಾಂವಿಧಾನಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ನೈತಿಕ ಮೌಲ್ಯಗಳಿಗೂ ತಿಲಾಂಜಲಿ ನೀಡಿರುವುದರಿಂದ, ಪ್ರಜ್ಞಾವಂತ ಸಮಾಜದ ಬೌದ್ಧಿಕ ವಲಯಗಳು ಭಿನ್ನ ರೀತಿಯಲ್ಲಿ ಯೋಚಿಸಬೇಕಿದೆ.

ಬೆಳೆಯುತ್ತಿರುವ ಮಾರುಕಟ್ಟೆಗೆ ಬೌದ್ಧಿಕ ಸರಕುಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರೈಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನೂ ಜಾರಿಗೊಳಿಸಲಾಗುತ್ತಿದೆ. ಅಧ್ಯಯನ, ಸಂಶೋಧನೆ ಮತ್ತು ವೈಚಾರಿಕ ಜ್ಞಾನ ವಿಸ್ತರಣೆಗಿಂತಲೂ ಹೆಚ್ಚಾಗಿ ಅಧಿಕಾರ ರಾಜಕಾರಣದ ನೆಲೆಗಳನ್ನು ಮತ್ತಷ್ಟು ಭದ್ರಪಡಿಸಲು ಪೂರಕವಾಗುವಂತಹ ಸಾಂಸ್ಕೃತಿಕ-ಸಾಮಾಜಿಕ ವಾತಾವರಣವನ್ನು ನಿರ್ಮಿಸಲು ಎಲ್ಲ ಬಂಡವಳಿಗ ರಾಜಕೀಯ ಪಕ್ಷಗಳೂ ನಿರಂತರ ಪ್ರಯತ್ನಿಸುತ್ತಿವೆ. ಬಿಜೆಪಿಯ ಸಾಂಸ್ಕೃತಿಕ ರಾಜಕಾರಣ, ಪ್ರಾದೇಶಿಕ ಪಕ್ಷಗಳ ಜಾತಿ ರಾಜಕಾರಣ ಮತ್ತು ಕಾಂಗ್ರೆಸ್‌ ಪಕ್ಷದ ಸಾಂಪ್ರದಾಯಿಕ ರಾಜಕಾರಣ, ಈ ಮೂರೂ ನೆಲೆಗಳಲ್ಲಿ ಬಳಕೆಯಾಗುತ್ತಿರುವ ಯುವ ಸಮೂಹ ಸೃಜನಶೀಲತೆಯನ್ನು ಕಳೆದುಕೊಂಡ ಕಾಲಾಳುಪಡೆಗಳಾಗಿ ಮಾತ್ರವೇ ಕಾಣುತ್ತಿವೆ.  ಒಂದು ಅಂದಾಜಿನ ಪ್ರಕಾರ 2021ರಲ್ಲಿ ಭಾರತದ ಶೇ 52ರಷ್ಟು ಜನಸಂಖ್ಯೆ 29 ವರ್ಷದ ಕೆಳಗಿನವರನ್ನೇ ಹೊಂದಿದೆ. ಅಂದರೆ  1990ರ ನಂತರ ಜನಿಸಿದ ಒಂದು ಬೃಹತ್‌ ಸಮೂಹ ಭವಿಷ್ಯ ಭಾರತಕ್ಕೆ ಸುಭದ್ರ, ಸುಸ್ಥಿರ ಬುನಾದಿಯನ್ನು ನಿರ್ಮಿಸುವ ಹೊರೆ ಹೊರಬೇಕಿದೆ.

ಈ ಯುವ ಸಮೂಹವನ್ನು ನಾವು ಎತ್ತ ಕರೆದೊಯ್ಯುತ್ತಿದ್ದೇವೆ ? ಕರ್ನಾಟಕದ ಮತ್ತು ದೇಶದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಯುವ ಪೀಳಿಗೆಯಲ್ಲಿ ಅಂತರ್ಗತವಾಗಿರುವ ಜೀವನೋತ್ಸಾಹ ಮತ್ತು ಜೀವನ ಸ್ಪೂರ್ತಿಯನ್ನು ನಮ್ಮ ರಾಜಕೀಯ ವ್ಯವಸ್ಥೆ ಹದಗೆಡಿಸುತ್ತಿರುವುದು ಸ್ಪಷ್ಟವಾಗುತ್ತದೆ. ಈ ಯುವ ಸಮೂಹಕ್ಕೆ ದೇಶದ ಪರಂಪರೆ, ಇತಿಹಾಸ ಮತ್ತು ಚಾರಿತ್ರಿಕ ಚೇತನಗಳ ಪರಿಚಯ ಮಾಡಬೇಕಾದ ನೈತಿಕ ಹೊಣೆಗಾರಿಕೆಯನ್ನು ಮರೆತಿರುವ ಸಾಂಸ್ಕೃತಿಕ-ಜಾತಿ ರಾಜಕಾರಣದ ಶಕ್ತಿಗಳು, ಯುವ ಸಮೂಹದಲ್ಲಿ ರಣೋತ್ಸಾಹ ಮತ್ತು ಉನ್ಮಾದವನ್ನು ಹೆಚ್ಚಿಸುವ ರೀತಿಯಲ್ಲಿ ವರ್ತಿಸುತ್ತಿರುವುದು ಆತಂಕ ಮೂಡಿಸುವ ಅಂಶವಾಗಿದೆ. ನಿರಂತರವಾಗಿ ಚರಿತ್ರೆಯ ಉತ್ಖನನ ಮಾಡುತ್ತಲೇ ಬಂದಿರುವ ನಾವು, ಚಾರಿತ್ರಿಕ ವ್ಯಕ್ತಿಗಳ ವೈಭವೀಕರಣ ಅಥವಾ ತೇಜೋವಧೆಯಲ್ಲೇ ಮುಳುಗಿದ್ದು, ಸ್ವಾತಂತ್ರ್ಯ ಸಂಗ್ರಾಮದ ಮೂಲ ಸಂದೇಶವನ್ನು ಯುವ ಪೀಳಿಗೆಗೆ ತಲುಪಿಸುವಲ್ಲಿ ವಿಫಲವಾಗುತ್ತಿದ್ದೇವೆ.

ಪ್ರಪಂಚಕ್ಕೆ ಕಣ್ತೆರೆಯುವ ಹರೆಯದ ವಯಸ್ಸಿನಲ್ಲೇ ಯುವ ಸಮೂಹದ ನಡುವೆ ಜಾತಿ, ಮತ, ಧರ್ಮ ಮತ್ತು ಭಾಷಿಕ ಅಸ್ಮಿತೆಗಳ ದುಷ್ಟ ಬೀಜಗಳನ್ನು ಬಿತ್ತುವ ಒಂದು ಪ್ರಕ್ರಿಯೆ ಅವ್ಯಾಹತವಾಗಿ ಸಾಗುತ್ತಲೇ ಇದೆ. ಸಾಂಸ್ಕೃತಿಕ ವಿರೋಧ ಮತ್ತು ವೈಚಾರಿಕ ವಿರೋಧವನ್ನು ಸಹಿಸಿಕೊಳ್ಳುವ ಮನಸ್ಥಿತಿಯನ್ನು ಯುವ ಸಮೂಹದಲ್ಲಿ ಬೆಳೆಸದೆ ಹೋದರೆ ರಾಜಕೀಯ ಸಹನೆಯೂ ಸೃಷ್ಟಿಯಾಗುವುದಿಲ್ಲ ಎಂಬ ಸರಳ ಸತ್ಯ ರಾಜಕೀಯ ನಾಯಕರಿಗೆ ಇರಬೇಕಾಗುತ್ತದೆ. ಸಹಿಷ್ಣುತೆಯಾಗಲೀ ಅಸಹಿಷ್ಣುತೆಯಾಗಲೀ ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲ. ನಾವೇ ನಿರ್ಮಿಸುವ ಸಾಂಸ್ಕೃತಿಕ ವಾತಾವರಣ ಮತ್ತು ಸಾಮಾಜಿಕ ನೆಲೆಗಳು ಇದನ್ನು ವ್ಯವಸ್ಥಿತವಾಗಿ ಬೆಳೆಸುತ್ತವೆ. ಈ ಸಹಿಷ್ಣುತೆಯನ್ನೇ ಕಳೆದುಕೊಂಡಿರುವ ಒಂದು ಬೃಹತ್‌ ಯುವ ಸಮುದಾಯವನ್ನು ನಮ್ಮ ದೇಶದ ಸಾಂಸ್ಕೃತಿಕ ಮತ್ತು ಅಧಿಕಾರ ರಾಜಕಾರಣದ ನೆಲೆಗಳು ನಿರ್ಮಿಸಿಬಿಟ್ಟಿವೆ. ಹಾಗಾಗಿಯೇ ಚರಿತ್ರೆ ಮತ್ತು ಪುರಾಣ ಎರಡೂ ಸಹ ವ್ಯಕ್ತಿನಿಷ್ಠೆಯ ಸಂಕಥನಗಳಲ್ಲಿ ಪರ್ಯವಸಾನಗೊಳುತ್ತವೆ. ಚಾರಿತ್ರಿಕ ವ್ಯಕ್ತಿಗಳು, ಪೌರಾಣಿಕ ಪ್ರಸಂಗ ಮತ್ತು ಪಾತ್ರಗಳು ವರ್ತಮಾನ ಸಮಾಜದ ಸಾಂಸ್ಕೃತಿಕ ನೆಲೆಗಳಲ್ಲಿ ನಿಷ್ಕರ್ಷಿಸಲ್ಪಡುತ್ತವೆ. ಪುರಾಣ ಮತ್ತು ಚರಿತ್ರೆಯನ್ನು ಸಮಕಾಲೀನ ರಾಜಕಾರಣದ ಸಾಂಸ್ಕೃತಿಕ ಭೂಮಿಕೆಯಲ್ಲಿಟ್ಟು, ಅಧಿಕಾರ ರಾಜಕಾರಣದ ವಾಹಕಗಳಾಗಿ ಪರಿವರ್ತಿಸಿರುವುದರಿಂದಲೇ ಚರಿತ್ರೆಯನ್ನೇ ವಿಕೃತಗೊಳಿಸುವ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ದೊರೆಯುತ್ತಿದೆ.

ಅಧ್ಯಯನಶೀಲತೆಯ ಪರಿಜ್ಞಾನವೇ ಇಲ್ಲದ ಬೌದ್ಧಿಕ ವಲಯವೊಂದು ಭಾರತದಲ್ಲಿ ಮಾನ್ಯತೆ ಪಡೆದಿರುವುದರಿಂದ, ವಾಟ್ಸಾಪ್‌ ವಿಶ್ವವಿದ್ಯಾಲಯದಲ್ಲಿ ಉತ್ಖನನ ಮಾಡಲಾಗುವ ಚಾರಿತ್ರಿಕ ವಿದ್ಯಮಾನಗಳು, ಪುರಾತತ್ವ ಶಾಸ್ತ್ರದ ವಾಸ್ತವಗಳನ್ನೂ ಹಿಂದಿಕ್ಕಿ, ಯುವ ಮನಸುಗಳನ್ನು ದಿಕ್ಕು ತಪ್ಪಿಸುತ್ತಿವೆ. “ ಸೌಂದರ್ಯ ನೋಡುವವರ ಕಣ್ಣೋಟದಲ್ಲಿದೆ ” ಎಂಬ ಆಂಗ್ಲ ನಾಣ್ಣುಡಿಯಂತೆ ವರ್ತಮಾನ ಭಾರತದಲ್ಲಿ ಚರಿತ್ರೆಯೂ “ ನೋಡುವವರ ಕಣ್ಣೋಟದಲ್ಲೇ ” ನಿಷ್ಕರ್ಷೆಗೊಳಗಾಗುತ್ತಿದೆ. ಚಾರಿತ್ರಿಕ ಕಥನಗಳಿಗೂ, ಚರಿತ್ರೆಯಲ್ಲಿ ಘಟಿಸಿದ ಸಾಕ್ಷೀಕರಿಸಬಹುದಾದ ಘಟನೆಗಳಿಗೂ ವ್ಯತ್ಯಾಸವನ್ನೇ ಅರಿಯದ ಒಂದು ಬೃಹತ್‌ ಸಮೂಹ ಸಮಾಜದಲ್ಲಿ ಸೃಷ್ಟಿಯಾಗಿರುವುದರಿಂದಲೇ, ಇತಿಹಾಸಕಾರರು ಮೂಲೆಗುಂಪಾಗಿ, ಚರಿತ್ರೆಯ ವರದಿಗಾರರು ಮುನ್ನೆಲೆಗೆ ಬಂದಿದ್ದಾರೆ. ಈ ವರ್ಗ ಸೃಷ್ಟಿಸಿರುವ ಬೌದ್ಧಿಕ ವಲಯವೇ ಯುವ ಸಮುದಾಯದಲ್ಲಿ ಅಸಹಿಷ್ಣುತೆ ಹೆಚ್ಚಾಗಲು ಕಾರಣವಾಗಿದೆ. ರಾಜಕೀಯ ಪಕ್ಷಗಳು ತಮ್ಮ ಅಧಿಕಾರ ರಾಜಕಾರಣದ ವಿಸ್ತರಣೆಗಾಗಿ ಸಾಂಸ್ಕೃತಿಕ ನೆಲೆಗಳನ್ನು, ಚಾರಿತ್ರಿಕ ಭೂಮಿಕೆಗಳನ್ನು ವಾಹಕಗಳಾಗಿ ಬಳಸಲಾರಂಭಿಸಿದರೆ, ಸತ್ಯಾಸತ್ಯತೆಯ ಪರಾಮರ್ಶೆಯೇ ಇಲ್ಲದ ಅವೈಚಾರಿಕ-ಅಪ್ರಬುದ್ಧ ಪ್ರತಿಪಾದನೆಗಳು ತಾಂಡವಾಡುತ್ತವೆ. ಸಮಕಾಲೀನ ಇತಿಹಾಸದ ಪರಿವೆಯೇ ಇಲ್ಲದ ಯುವ ಸಮೂಹದ ನಡುವೆ ಗತ ಇತಿಹಾಸದ ಘಟನೆಗಳನ್ನು ಸಾಪೇಕ್ಷವಾಗಿ ಬಿತ್ತುವುದರ ಮೂಲಕ, ವೈಚಾರಿಕ ಮನೋಭಾವವನ್ನೇ ಹೊಸಕಿಹಾಕಲಾಗುತ್ತಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ “ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವೈಚಾರಿಕ ದೃಷ್ಟಿಕೋನದಿಂದ ಮಾತನಾಡಬೇಕು, ಯಾವುದೇ ವಿಚಾರದ ಬಗ್ಗೆ ವೈಚಾರಿಕತೆ ಇದ್ದರೆ ಅದನ್ನು ವೈಚಾರಿಕತೆಯಿಂದಲೇ ವಿರೋಧಿಸಬೇಕು” ಎಂದು ಹೇಳಿರುವುದು ಒಪ್ಪುವಂತಹುದೇ. ಆದರೆ ಈ ವೈಚಾರಿಕ ಮನೋಭಾವ ಮತ್ತು ಭಿನ್ನ ನಿಲುವುಗಳನ್ನು ಸಹಿಸಿಕೊಳ್ಳುವ ಮನಸ್ಥಿತಿಯನ್ನು ಯುವ ಸಮುದಾಯದಲ್ಲಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರವಾಗಲೀ, ರಾಜಕೀಯ ಪಕ್ಷಗಳಾಗಲೀ ಯಾವ ಪ್ರಯತ್ನಗಳನ್ನು ಮಾಡಿವೆ ಎಂಬ ಪ್ರಶ್ನೆಗೆ ಪ್ರಚಲಿತ ರಾಜಕೀಯ ವ್ಯವಸ್ಥೆಯೇ ಉತ್ತರಿಸಬೇಕಿದೆ. ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ಎದುರಿಸಬೇಕು ಎನ್ನುವ ಬೊಮ್ಮಾಯಿ ಅವರ ಮಾತುಗಳು ಈ ಯುವಕರನ್ನು ತಲುಪಬೇಕಿದೆ. ತಲುಪಿಸುವವರು ಯಾರು ? ಶಾಲಾ ಪಠ್ಯಕ್ರಮ ಪರಿಷ್ಕರಣೆಯ ವಿಚಾರದಲ್ಲಿ ಕೆಲವು ಶಾಸಕರು, ಮಂತ್ರಿವರ್ಯರು ಆಡಿದ ಮಾತುಗಳನ್ನೇ ಗಮನಿಸಿದರೆ, ನಮ್ಮ ರಾಜಕೀಯ ವ್ಯವಸ್ಥೆ ಈ ತಾತ್ವಿಕತೆ ಮತ್ತು ಬೌದ್ಧಿಕ ಸ್ವಾಸ್ಥ್ಯವನ್ನು ಕಳೆದುಕೊಂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ದ್ವೇಷ ರಾಜಕಾರಣದಿಂದ ನಿಷೇಧ ರಾಜಕಾರಣದತ್ತ ಸಾಗುತ್ತಿರುವ ಸಮಾಜದಲ್ಲಿ ಯುವ ಸಮೂಹವು ಕಾಲಾಳುಗಳಂತೆ ಬಳಕೆಯಾಗುತ್ತಿದ್ದು, ಅಕ್ಷರ, ಅರಿವು, ಜ್ಞಾನ ಮತ್ತು ಗ್ರಹಿಕೆಯ ಕಣಜಗಳಾಗಬೇಕಾದ ಒಂದು ಪೀಳಿಗೆ ಅಸಹನೆ, ಕ್ಷೋಭೆ, ದ್ವೇಷ ಮತ್ತು ಅಸೂಯೆಗಳ ಕೂಪವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರತ್ತ ಮೊಟ್ಟೆ ಎಸೆದ ಪ್ರಕರಣ ಮಾಧ್ಯಮಗಳಲ್ಲಿ ಅಹೋರಾತ್ರಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ನಾವು ಈ ಯುವ ರಾಜಕೀಯ ಕಾಲಾಳುಗಳ ಕೈಗೆ ನಾವು ಏನನ್ನು ಕೊಡುತ್ತಿದ್ದೇವೆ ಎನ್ನುವುದನ್ನೂ ಯೋಚಿಸಬೇಕಲ್ಲವೇ ? ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಚರಿತ್ರೆಯನ್ನು ನೋಡುವ ವಿಧಾನವನ್ನೇ ಬದಲಿಸಿರುವ ರಾಜಕೀಯ ವ್ಯವಸ್ಥೆಯೊಂದು ಯುವ ಪೀಳಿಗೆಗೆ ತೊಡಿಸಿರುವ ಮಸೂರಗಳು ವಕ್ರದೃಷ್ಟಿಯ ಸೂಕ್ಷ್ಮದರ್ಶಕಗಳಂತೆ ಕೆಲಸ ಮಾಡುತ್ತಿವೆ. ಒಂದೆಡೆ ದೇಶದ ಅಖಂಡತೆ ಮತ್ತು ಭಾವೈಕ್ಯತೆಯನ್ನು ರಕ್ಷಿಸಲು ರಾಷ್ಟ್ರಧ್ವಜ ಹಿಡಿಯುವ ಕೈಗಳಿಗೇ ಮತ್ತೊಂದು ಬದಿಯಿಂದ ಕಲ್ಲು, ಮೊಟ್ಟೆ, ಬಡಿಗೆ, ಲಾಂಗು, ತಲವಾರುಗಳನ್ನು ನೀಡುತ್ತಿದ್ದೇವೆ. ಈ ಯುವ ಸಮೂಹ ಯಾರನ್ನು, ಯಾರಿಂದ ಯಾವುದನ್ನು, ಯಾರಿಗಾಗಿ ರಕ್ಷಿಸಬೇಕು ?

ಚರ್ಚೆ, ಸಮಾಲೋಚನೆ, ಸಂವಾದ ಮತ್ತು ಸಂಕಥನಗಳ ಮೂಲ ಅರ್ಥವನ್ನೇ ಅರಿಯದ ಒಂದು ಬೃಹತ್‌ ಯುವ ಸಮುದಾಯವನ್ನು ವಾಟ್ಸಾಪ್‌ ವಿಶ್ವವಿದ್ಯಾಲಯಗಳು, ಗೂಗಲ್‌ ಶೋಧದ ಅಧ್ಯಯನ ಕೇಂದ್ರಗಳು ರೂಪಿಸುತ್ತಿವೆ. ಮಾರುಕಟ್ಟೆ ಆರ್ಥಿಕತೆ ಮತ್ತು ನವ ಉದಾರವಾದದ ಹಾದಿಯಲ್ಲಿ ತಮ್ಮ ಬದುಕು ಬಂಗಾರವಾಗುತ್ತದೆ ಎಂಬ ಭ್ರಮೆಗೊಳಗಾಗಿರುವ ಈ ಸಮೂಹವೇ, ಸಾಮಾಜಿಕ ತಾಣಗಳಲ್ಲಿ, ವಾಟ್ಸಾಪ್‌ ಮತ್ತು ಗೂಗಲ್‌ಗಳಲ್ಲಿ ಸೃಷ್ಟಿಯಾಗುವ ಅಭಿಪ್ರಾಯಗಳನ್ನೇ ಅಂತಿಮ ಸತ್ಯ ಎಂಬ ಭ್ರಮೆಗೊಳಗಾಗಿವೆ. ಈ ಭ್ರಮೆಯನ್ನು ಹೋಗಲಾಡಿಸಬೇಕಾದ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ರಣೋನ್ಮಾದದ ನಿರೂಪಣಾ ಶೈಲಿಯಲ್ಲಿ ಯುವ ಸಮೂಹವನ್ನು ಮತ್ತಷ್ಟು ಭ್ರಮಾಧೀನರನ್ನಾಗಿ ಮಾಡುತ್ತಿವೆ.  ಹಾಗಾಗಿಯೇ ಒಂದು ಫ್ಲೆಕ್ಸ್‌, ಒಂದು ಭಾವಚಿತ್ರ , ಒಂದು ಬ್ಯಾನರ್‌ ನಮ್ಮ ಸಮಾಜವನ್ನು ಪ್ರಕ್ಷುಬ್ಧಗೊಳಿಸಲು ಸಾಧ್ಯವಾಗುತ್ತಿದೆ. ಸಹಿಷ್ಣುತೆಯ ಕರ್ಮಭೂಮಿ ಎಂದೇ ಹೇಳಲಾಗುವ ಭಾರತ ಒಂದು ಭಾವಚಿತ್ರವನ್ನು ಸಹಿಸಿಕೊಳ್ಳಲಾರದ ಮಟ್ಟಿಗೆ ಅಸಹಿಷ್ಣುತೆಯತ್ತ ಸಾಗುತ್ತಿದೆ. ಇಲ್ಲಿ ಬಲಿಯಾಗುತ್ತಿರುವುದು ಭವಿಷ್ಯ ಭಾರತದ ಕಾಲಾಳುಗಳಲ್ಲವೇ ?

ನ್ಯೂಯಾರ್ಕ್‌ನಲ್ಲಿ ಹಲ್ಲೆಗೊಳಗಾಗಿರುವ ಲೇಖಕ ಸಲ್ಮಾನ್‌ ರಷ್ದಿ, ರಾಜಸ್ಥಾನದಲ್ಲಿ ನೀರು ಕುಡಿದ ತಪ್ಪಿಗಾಗಿ ಹತ್ಯೆಗೀಡಾದ ಒಂದು ಅಸ್ಪೃಶ್ಯ ಮಗು, ಪಡೆದ ನ್ಯಾಯವನ್ನೂ ಕಳೆದುಕೊಂಡ ಬಿಲ್ಕಿಸ್‌ ಬಾನು, ಸಾರ್ವಜನಿಕ ಸನ್ಮಾನಕ್ಕೆ ಪಾತ್ರರಾದ ಅತ್ಯಾಚಾರಿಗಳು ಮತ್ತು ನಿರಂತರವಾಗಿ ಜಾತಿ-ಧರ್ಮ ದ್ವೇಷಕ್ಕೆ ಬಲಿಯಾಗುತ್ತಿರುವ ಯುವಕರು ನಮ್ಮ ಕಣ್ಣೋಟಕ್ಕೆ ನಿಲುಕುವುದೇ ಆದರೆ ನಮಗೆ ಚರಿತ್ರೆಯ ಉತ್ಖನನದ ಅವಶ್ಯಕತೆಯೇ ಇರುವುದಿಲ್ಲ. ಚರಿತ್ರೆಯ ಗರ್ಭದಿಂದ ಹೆಕ್ಕಿ ತೆಗೆದ ಸತ್ಯಾಸತ್ಯತೆಗಳನ್ನು ವರ್ತಮಾನದ ಸಂದರ್ಭಕ್ಕಗನುಗುಣವಾಗಿ ನಿಷ್ಕರ್ಷೆ ಮಾಡುವ ಮೂಲಕ, ಯುವ ಸಮೂಹವನ್ನು ವರ್ತಮಾನದ ಕರಾಳ ವಾಸ್ತವಗಳಿಂದ ವಿಮುಖರನ್ನಾಗಿ ಮಾಡುತ್ತಿದ್ದೇವೆ, ಅಲ್ಲವೇ ? ಇಲ್ಲಿ ನಮ್ಮ ರಾಜಕೀಯ ವ್ಯವಸ್ಥೆ, ಸಾಂಸ್ಕೃತಿಕ ವಾತಾವರಣ ಮತ್ತು ಬೌದ್ಧಿಕ ಚಿಂತನಾ ವಲಯ ಗಂಭೀರ ಪರಾಮರ್ಶೆಗೊಳಪಡಬೇಕಾಗುತ್ತದೆ.

ಅಧಿಕಾರವನ್ನು ಭೋಗಿಸುವುದೊಂದೇ ತಮ್ಮ ಜೀವನದ ಪರಮೋದ್ದೇಶ ಎಂದು ಭಾವಿಸಿರುವ ಜನಪ್ರತಿನಿಧಿಗಳ ನಡುವೆ ಭಾರತದ ಪ್ರಜಾಪ್ರಭುತ್ವ ಉಸಿರಾಡುತ್ತಿದೆ. ಹಾಗಾಗಿಯೇ ಆರ್ಥಿಕ ಭ್ರಷ್ಟತೆಯಂತೆಯೇ ಬೌದ್ಧಿಕ ಭ್ರಷ್ಟತೆಗೂ ಭೂಮಿಕೆಯನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಸಾಂವಿಧಾನಿಕ ನೈತಿಕತೆಯ ಸ್ಪರ್ಶವನ್ನೇ ಕಳೆದುಕೊಂಡಿರುವ ಈ ರಾಜಕೀಯ ವ್ಯವಸ್ಥೆಯ ಮುಂದೆ ಒಂದು ಬೃಹತ್ತಾದ ಯುವ ಸಮೂಹ ನಿಂತಿದೆ. ಈ ಯುವ ಸಮೂಹವೇ ಭವಿಷ್ಯದ ನಿರ್ಮಾತೃ ಶಕ್ತಿಯಾಗಿದೆ ಎನ್ನುವ ಸಾಮಾನ್ಯ ಪರಿಜ್ಞಾನವಾದರೂ ನಮ್ಮಲ್ಲಿ ಇರಬೇಕಲ್ಲವೇ ? ಕಲ್ಲೆಸೆಯುವ, ಮೊಟ್ಟೆಯೆಸೆಯುವ, ಫ್ಲೆಕ್ಸ್‌ ಹರಿದುಹಾಕುವ, ಬಡಿಗೆ ಹೊತ್ತ ಯುವ ಸಮೂಹ ಎಂತಹ ಭವಿಷ್ಯವನ್ನು ನಿರ್ಮಿಸಲು ಸಾಧ್ಯ ? ಇದೇ ಯುವ ಪೀಳಿಗೆಯನ್ನು ಜ್ಞಾನ ವಿಸ್ತರಣೆಯ ವಾಹಕ ಶಕ್ತಿಯನ್ನಾಗಿ ಪರಿವರ್ತಿಸಿ, ಚರಿತ್ರೆಯಲ್ಲಿ ಆಗಿಹೋದ ಮಹಾನ್‌ ಚೇತನಗಳನ್ನು ಪರಿಚಯಿಸುವುದು ನಮ್ಮ ಆದ್ಯತೆಯಾಗಬೇಕಲ್ಲವೇ ?

ಮುಖ್ಯಮಂತ್ರಿಯವರು ಹೇಳಿದಂತೆ ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ಎದುರಿಸುವ ಒಂದು ಮನಸ್ಥಿತಿ ನಿರ್ಮಾಣವಾಗಬೇಕಾದರೆ ಮೊದಲು ಸಮಾಜದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಮೂಡಬೇಕು. ಇದು ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲ. ನಾವೇ ರೂಪಿಸಬೇಕು. ಈ ಜವಾಬ್ದಾರಿಯನ್ನು ಹೊರುವವರು ಯಾರು ? ಪ್ರಾಚೀನತೆಯಿಂದ ಆಧುನಿಕತೆಗೆ ಸಾಗುವ ಹಾದಿಯಲ್ಲಿ ಎದುರಾಗುವ ಎಲ್ಲ ಮನುಷ್ಯವಿರೋಧಿ ಆಲೋಚನೆಗಳನ್ನೂ ಚರಿತ್ರೆಯ ಕಂದಕದೊಳಗೆ ಹುದುಗಿಸಿ ನಾಗರಿಕತೆಯತ್ತ ಸಾಗುವ ನಿಟ್ಟಿನಲ್ಲಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳು ಮೂಡಬೇಕಿದೆ. ಇದಕ್ಕಾಗಿಯೇ ಬುದ್ಧನಿಂದ ಅಂಬೇಡ್ಕರ್‌ವರೆಗಿನ ಮಹಾನ್‌ ಚೇತನಗಳು ನಮ್ಮ ನಡುವೆ ತಾತ್ವಿಕ ಭಂಡಾರಗಳನ್ನು ಬಿಟ್ಟುಹೋಗಿದ್ದಾರೆ. ನಾವು ಈ ಭಂಡಾರಗಳನ್ನು ಅಧಿಕಾರ ರಾಜಕಾರಣದ ವಾಹಕಗಳಾಗಿ ಬಳಸಿಕೊಳ್ಳುತ್ತಾ ಯುವ ಪೀಳಿಗೆಯನ್ನು ಮತ್ತೊಮ್ಮೆ ಪ್ರಾಚೀನತೆಯ ಕರಾಳ ಕೂಪಕ್ಕೆ ತಳ್ಳುತ್ತಿದ್ದೇವೆ.

ಇದಕ್ಕೆ ಯಾರು ಹೊಣೆ ? ಯುವ ಸಮೂಹ ಈ ಪ್ರಶ್ನೆಯನ್ನು ಒಕ್ಕೊರಲಿನಿಂದ ಕೇಳುತ್ತಿದೆ. ಪ್ರಾಮಾಣಿಕವಾಗಿ ಉತ್ತರಿಸಲು ನಾವು ಸಜ್ಜಾಗಿದ್ದೇವೆಯೇ ? ಯೋಚಿಸೋಣ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಉತ್ತರ ಕಾಂಡದ ನಾಯಕನಾದ ಡಾಲಿ ಧನಂಜಯ

Next Post

ಕಾಶ್ಮೀರದಲ್ಲಿ ಮತ್ತೆ ಪಂಡಿತರ ಮೇಲೆ ಉಗ್ರರ ದಾಳಿ: ಪಲಾಯನಕ್ಕೆ ಕರೆಕೊಟ್ಟ ಕೆಪಿಎಸ್‌ಎಸ್

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಕಾಶ್ಮೀರದಲ್ಲಿ ಮತ್ತೆ ಪಂಡಿತರ ಮೇಲೆ ಉಗ್ರರ ದಾಳಿ: ಪಲಾಯನಕ್ಕೆ ಕರೆಕೊಟ್ಟ ಕೆಪಿಎಸ್‌ಎಸ್

ಕಾಶ್ಮೀರದಲ್ಲಿ ಮತ್ತೆ ಪಂಡಿತರ ಮೇಲೆ ಉಗ್ರರ ದಾಳಿ: ಪಲಾಯನಕ್ಕೆ ಕರೆಕೊಟ್ಟ ಕೆಪಿಎಸ್‌ಎಸ್

Please login to join discussion

Recent News

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ
Top Story

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

by ಪ್ರತಿಧ್ವನಿ
October 29, 2025
Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ
Top Story

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

by ಪ್ರತಿಧ್ವನಿ
October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ
Top Story

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

by ಪ್ರತಿಧ್ವನಿ
October 28, 2025
Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

ಮಕ್ಕಳು ದೇವರ ಸಮಾನ, ಅವರ ಸೇವೆಯೇ ನಿಜವಾದ ತೃಪ್ತಿ: ಸಚಿವ ಮಧು ಬಂಗಾರಪ್ಪ

October 29, 2025

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada