ನವದೆಹಲಿ: ಪಾನ್ ಮಸಾಲಾ ಉತ್ಪನ್ನಗಳ ಪ್ಯಾಕೇಜಿಂಗ್‌ಗೆ ಸಂಬಂಧಿಸಿದಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಹೊಸ ತಿದ್ದುಪಡಿ ನಿಯಮಗಳ ಪ್ರಕಾರ, ಪಾನ್ ಮಸಾಲಾ ಪ್ಯಾಕೇಜಿಂಗ್‌ನಲ್ಲಿ ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ಲ್ಯಾಮಿನೇಟ್‌ಗಳನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ FSSAI, Food Safety and Standards (Packaging) Amendment Regulations, 2026 ಅನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಜಾರಿಗೊಂಡಿರುವ ಈ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನದಿಂದಲೇ ಅನ್ವಯವಾಗಲಿವೆ ಎಂದು ತಿಳಿಸಲಾಗಿದೆ.
ಯಾವ ಪ್ಯಾಕೇಜಿಂಗ್‌ಗೆ ಅವಕಾಶ?
ಹೊಸ ನಿಯಮಗಳ ಪ್ರಕಾರ ಪಾನ್ ಮಸಾಲಾ ಪ್ಯಾಕೇಜಿಂಗ್‌ಗೆ ನಿರ್ದಿಷ್ಟ ವಸ್ತುಗಳನ್ನು ಮಾತ್ರ ಬಳಸಲು ಅವಕಾಶವಿದೆ. ಅವುಗಳೆಂದರೆ:
- ಸೆಲ್ಯುಲೋಸ್ ಅಥವಾ ಇತರ ನೈಸರ್ಗಿಕ ಮೂಲದ ವಸ್ತುಗಳು
- ಟಿನ್ ಕಂಟೇನರ್‌ಗಳು
- ಗಾಜಿನ ಕಂಟೇನರ್‌ಗಳು

ಪೇಪರ್, ಪೇಪರ್‌ಬೋರ್ಡ್ ಅಥವಾ ನೈಸರ್ಗಿಕ ಮೂಲದ ವಸ್ತುಗಳನ್ನು ಬಳಸಿದರೂ ಅವುಗಳಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ಅಂಶ ಇರಬಾರದು ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

Polyethylene (PE), Polypropylene (PP), Polyester, PVC ಸೇರಿದಂತೆ ಯಾವುದೇ ಸಿಂಥೆಟಿಕ್ ಪಾಲಿಮರ್, ಕೋಪಾಲಿಮರ್ ಅಥವಾ ಪ್ಲಾಸ್ಟಿಕ್ ಲ್ಯಾಮಿನೇಟ್‌ಗಳನ್ನು ಪಾನ್ ಮಸಾಲಾ ಪ್ಯಾಕೇಜಿಂಗ್‌ನಲ್ಲಿ ಬಳಸುವಂತಿಲ್ಲ.ಇದರ ಜತೆಗೆ ಅಲ್ಯೂಮಿನಿಯಂ ಫಾಯಿಲ್ ಮತ್ತು ಮೆಟಲೈಸ್ಡ್ ಲೇಯರ್‌ಗಳ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ.ಪಾನ್ ಮಸಾಲಾ ಪ್ಯಾಕೇಜಿಂಗ್‌ಗೆ ಸಂಬಂಧಿಸಿದಂತೆ Plastic Waste Management Rules, 2016ರ ಸಂಬಂಧಿತ ನಿಬಂಧನೆಗಳನ್ನೂ ಪಾಲಿಸಬೇಕಾಗುತ್ತದೆ ಎಂದು FSSAI ತಿಳಿಸಿದೆ.
ಆಹಾರ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. ಇದರಿಂದ ಪಾನ್ ಮಸಾಲಾ ತಯಾರಕರು ಮತ್ತು ಪ್ಯಾಕೇಜಿಂಗ್ ಉದ್ಯಮಗಳು ತಮ್ಮ ಪ್ಯಾಕೇಜಿಂಗ್ ವಿಧಾನದಲ್ಲಿ ಬದಲಾವಣೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಪಾನ್ ಮಸಾಲಾ ಪ್ಯಾಕೇಜಿಂಗ್‌ನಲ್ಲಿ ಪ್ಲಾಸ್ಟಿಕ್ ಆಧಾರಿತ ವಸ್ತುಗಳ ಬಳಕೆಗೆ FSSAI ಕಡಿವಾಣ ಹಾಕಿದ್ದು, ಪರ್ಯಾಯ ಪ್ಯಾಕೇಜಿಂಗ್ ವಸ್ತುಗಳ ಬಳಕೆಗೆ ಒತ್ತು ನೀಡಿದೆ.






