ಮಾಜಘಾತುಕತೆಯ ಬೀಜಗಳು ನೆಲದಿಂದಲೇ ಮೊಳಕೆಯೊಡೆಯುತ್ತವೆ, ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳನ್ನು ಬಯಸುವ ವಿಕೃತ ಮನಸುಗಳು ಸಮಾಜದ ನಡಿಗೆಗೆ ಕಾರಣವಾಗುವ ಪ್ರತಿಯೊಂದು ಹೆಜ್ಜೆಯಡಿಯೂ ದ್ವೇಷ, ಅಸೂಯೆ ಮತ್ತು ಮತ್ಸರದ ಬೀಜಗಳನ್ನು ಬಿತ್ತುವುದರ ಮೂಲಕ ಇಡೀ ಸಮಾಜವನ್ನು ಹದಗೆಡಿಸುವಂತಹ ವಿಚ್ಛಿದ್ರಕಾರಿ ಮನಸುಗಳನ್ನು ತಯಾರು ಮಾಡುತ್ತವೆ. ಸಾಮಾನ್ಯವಾಗಿ ನಮಗೆ ನಿತ್ಯ ಎದುರಾಗುವ ಮತೀಯತೆ, ಧಾರ್ಮಿಕ ಆಚರಣೆಗಳು ಮತ್ತು ಜಾತಿಗ್ರಸ್ತ ವ್ಯತ್ಯಯಗಳನ್ನು ನಿಯಂತ್ರಿಸುವಂತಹ ಸಮಾಜದ ಪ್ರಬಲ ಶಕ್ತಿಗಳು ತಮ್ಮ ಸಾಂಸ್ಥಿಕ ನೆಲೆಯಲ್ಲೇ ನಿಂತು ಈ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡುತ್ತಿರುತ್ತವೆ. ಈ ಚಲನೆಯ ಪ್ರಕ್ರಿಯೆಯಲ್ಲೇ ನಿತ್ಯ ಜೀವನದಲ್ಲಿ ನಮಗೆ ಕೋಮುವಾದ, ಕೋಮುದ್ವೇಷ, ಕೋಮು ಗಲಭೆ ಮತ್ತು ಸಾಂಸ್ಕೃತಿಕ ದಾಳಿಗಳಂತಹ ಅಪಾಯಗಳು ಎದುರಾಗುತ್ತಿರುತ್ತವೆ.
ಕರ್ನಾಟಕದ ಕರಾವಳಿ ಇಂದು ಈ ಪ್ರಕ್ರಿಯೆಗೆ ಸಾಕ್ಷಿಯಾಗುತ್ತಿದೆ. ನಮ್ಮ ನಡುವೆ ಅವ್ಯಾಹತವಾಗಿ ನಡೆಯುತ್ತಲೇ ಇರುವ ಮತೀಯ ಕಾವಲುಪಡೆಗಳ ಸಾಂಸ್ಕಂತಿಕ ದಾಳಿಗಳು ಏಕಾಏಕಿ ಶೂನ್ಯದಿಂದ ಉದ್ಭವಿಸಿದ ವಿದ್ಯಮಾನವಲ್ಲ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಿದೆ. ಯುವ ಪ್ರೇಮಿಗಳ ಮೇಲೆ, ಪ್ರೀತಿಸಿ ವಿವಾಹವಾಗುವವರ ಮೇಲೆ, ಕೌಟುಂಬಿಕ ನೆಲೆಗಳ ಮೇಲೆ, ಕ್ರೈಸ್ತರ ಚರ್ಚು, ಮುಸಲ್ಮಾನರ ಮಸೀದಿ, ಬ್ಯಾರಿ ಮುಸ್ಲಿಮರ ದರ್ಗಾ ಈ ಸ್ಥಾವರಗಳ ಮೇಲೆ ದಾಳಿ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳೇ ಅಂಬೇಡ್ಕರರ ಪ್ರತಿಮೆಯ ಮೇಲೆ, ಗಾಂಧಿಯ ಪುತ್ಥಳಿಯ ಮೇಲೆ ದಾಳಿ ನಡೆಸುತ್ತಿರುತ್ತವೆ. ಈ ದಾಳಿಗಳಿಗೆ ಇರುವ ಪರಸ್ಪರ ಸಂಬಂಧವನ್ನು ಗ್ರಹಿಸುವಲ್ಲಿ ಸಮಾಜ ವಿಫಲವಾಗುತ್ತದೆ.
ಏಕೆಂದರೆ ದಾಳಿಗೊಳಗಾಗುವ ಸ್ಥಾವರಗಳು ಅಸ್ಮಿತೆಗಳ ಚೌಕಟ್ಟಿಗೆ ಒಳಪಟ್ಟಿರುತ್ತವೆ. ದಾಳಿಕೋರ ಶಕ್ತಿಗಳು ಏಕ ಅಸ್ಮಿತೆಯೊಂದಿಗೆ ನಡೆಸುವ ದಾಳಿಗಳು ದಾಳಿಗೊಳಗಾದವರಿಗೆ ತಲುಪುವಷ್ಟರಲ್ಲಿ ವಿಘಟಿತವಾಗಿರುತ್ತವೆ. ಸಾಮಾಜಿಕ ಸ್ಥಾನಮಾನ, ಸಾಮುದಾಯಿಕ ಅಸ್ಮಿತೆ, ಆರ್ಥಿಕ ಸ್ಥಿತ್ಯಂತರಗಳು ದಾಳಿಗೊಳಗಾದವರ ವಿಘಟನೆಗೆ ಮೂಲ ಕಾರಣವಾಗಿಬಿಡುತ್ತದೆ. ಮತದ್ವೇಷವನ್ನು ಹರಡುವ ಮೂಲಕ ಸಮಾಜದಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಲು ಸಾಧ್ಯವಾಗದ ರೀತಿಯಲ್ಲಿ ಗೋಡೆಗಳನ್ನು ಕಟ್ಟಲು, ಕಂದರಗಳನ್ನು ನಿರ್ಮಿಸಲು ಈ ಅಸ್ಮಿತೆಯ ಚೌಕಟ್ಟುಗಳನ್ನೇ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಮತಾಚರಣೆಯಲ್ಲೂ ಕಂಡುಬರುವ ಮತಶ್ರೇಷ್ಠತೆಯ ಅಹಮಿಕೆ, ಧಾರ್ಮಿಕ ಆಚರಣೆಗಳ ಮೇಲರಿಮೆ ಮತ್ತು ತಾರತಮ್ಯದ ನೆಲೆಗಳು ಈ ಚೌಕಟ್ಟುಗಳಿಗೆ ಸುಭದ್ರ ತಳಪಾಯವನ್ನು ಒದಗಿಸುತ್ತವೆ.
Also Read : ಹಿಜಾಬ್ ವಿವಾದ | ರಾಜ್ಯ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಇದು ಸರಿಯಾದ ಸಮಯ : ದಿನೇಶ್ ಅಮೀನ್ ಮಟ್ಟು
ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಈ ತಳಪಾಯವನ್ನು ಮತ್ತಷ್ಟು ಸದೃಢವನ್ನಾಗಿ ಮಾಡುತ್ತಾ ಹೋಗುತ್ತದೆ. ತಳಸಮುದಾಯಗಳನ್ನು ನಿಕೃಷ್ಟವಾಗಿ ಕಾಣುವ ಮತ್ತು ತುಳಿತಕ್ಕೊಳಗಾದ ಶೋಷಿತ ಸಮುದಾಯಗಳನ್ನು ತಾರತಮ್ಯದ ಗೋಡೆಗಳಿಂದಾಚೆಗಿನ ಲೋಕಕ್ಕೆ ಸೀಮಿತಗೊಳಿಸುವ ಮನಸ್ಥಿತಿಗೆ ಇದೇ ಮತಶ್ರೇಷ್ಠತೆಯ ಅಹಮಿಕೆ ಮತ್ತು ಧಾರ್ಮಿಕ ನಂಬಿಕೆಗಳೇ ಕಾರಣವಾಗಿಬಿಡುತ್ತದೆ. ತಮ್ಮ ವಿರುದ್ಧ ನಡೆಯಬಹುದಾದ ಸಂಭಾವ್ಯ ದೌರ್ಜನ್ಯಗಳಾಗಲೀ ಅಥವಾ ನಡೆಯುತ್ತಲೇ ಇರಬಹುದಾದ ತಾರತಮ್ಯಗಳಾಗಲೀ, ಸಮುದಾಯಗಳನ್ನು ತಮಗಿಂತಲೂ ಶೋಷಣೆಗೊಳಗಾದವರೊಡನೆ ಒಂದಾಗಲು ಪ್ರಚೋದಿಸುವುದೇ ಇಲ್ಲ. ಏಕೆಂದರೆ ಪ್ರತಿಯೊಂದು ಸಾಂಸ್ಕೃತಿಕ ದಾಳಿಯೂ, ಪ್ರತಿಯೊಂದು ಮತೀಯ ಆಕ್ರಮಣವೂ “ ನಮ್ಮವರಲ್ಲದ ” ಅನ್ಯರ ಮೇಲೆ ನಡೆಯುತ್ತಿರುವಂತೆ ಭಾಸವಾಗುತ್ತಿರುತ್ತದೆ.
ಈ ಅನ್ಯತೆಯ ಭಾವನೆಯನ್ನು ಸಮಾಜದಲ್ಲಿ ಬೇರೂರುವಂತೆ ಮಾಡುವುದು ಬಹುಸಂಖ್ಯಾತ ಮತೀಯ ಶಕ್ತಿಗಳ ಪ್ರಥಮ ಆದ್ಯತೆಯಾಗಿರುತ್ತದೆ. ಸಾಮಾಜಿಕವಾಗಿ ಪ್ರತ್ಯೇಕಿಸಲ್ಪಟ್ಟವರು, ಆರ್ಥಿಕವಾಗಿ ದುರ್ಬಲರಾಗಿರುವವರು ಮತ್ತು ಸಾಂಸ್ಕೃತಿಕವಾಗಿ ನಿಕೃಷ್ಟವಾಗಿ ಕಾಣಲ್ಪಡುವವರು ಭೌತಿಕವಾಗಿ ಸಮಷ್ಟಿ ಸಮಾಜದೊಡನೆ ಕೂಡಿ ಬಾಳುವಂತೆ ಕಂಡುಬಂದರೂ ಬೌದ್ಧಿಕವಾಗಿ ಬಹಿಷ್ಕಂತರಾಗಿಯೇ ಇಂತಹ ಸಮಾಜದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಆದರೆ ಸಾಮಾಜಿಕ ಮೇಲ್ ಚಲನೆ ಮತ್ತು ಆರ್ಥಿಕ ಮುಂಚಲನೆ ಈ ಬಹಿಷ್ಕೃತರ ನಡುವಿನ ಒಂದು ವರ್ಗವನ್ನು ಬಾಹ್ಯ ಜಗತ್ತಿನ ವಿದ್ಯಮಾನಗಳಿಗೆ ವಿಮುಖರನ್ನಾಗಿ ಮಾಡುವುದೇ ಅಲ್ಲದೆ, ನಿಷ್ಕ್ರಿಯರನ್ನಾಗಿಯೂ ಮಾಡಿಬಿಡುತ್ತದೆ. ಈ ನಿಷ್ಕ್ರಿಯತೆಯ ಪರಿಣಾಮ, ತಾವೇ ನಿರ್ಮಿಸಿಕೊಂಡ ಬೌದ್ಧಿಕ ಬೇಲಿಗಳಿಂದ ಪತ್ಯೇಕತೆಯನ್ನು ಕಾಪಾಡಿಕೊಳ್ಳುತ್ತಾ ಅಸ್ಮಿತೆಗೆಳ ಸರಳುಗಳಿಂದ ಸ್ವಯಂ ಬಂಧನಕ್ಕೊಳಗಾಗುವ ಇಡೀ ಸಮುದಾಯಗಳು ನಮ್ಮ ಕಣ್ಣೆದುರು ಢಾಳಾಗಿ ನಿಲ್ಲುತ್ತವೆ.
ತಮ್ಮ ಅರಿವಿಲ್ಲದೆಯೇ ರೂಢಿಸಿಕೊಂಡು ಬಂದ ಧಾರ್ಮಿಕ ಆಚರಣೆಗಳಿಂದ ಬಂಧನಕ್ಕೊಳಗಾಗಿ, ಮತಾಚರಣೆಯ ಸಂಕೋಲೆಗಳಿಂದ ಆವರಿಸಲ್ಪಟ್ಟಿರುವ ಒಂದು ಇಡೀ ಪೀಳಿಗೆಯೇ ಇಂತಹ ಸಂದಿಗ್ಧತೆಯನ್ನು ಎದುರಿಸಲು ಸಜ್ಜಾಗಬೇಕಾಗುತ್ತದೆ. ಸಾಂಸ್ಥಿಕ ಮತಗಳು ವಿಧಿಸುವ ಧಾರ್ಮಿಕ ಆಚರಣೆಗಳನ್ನು ಅನುಕರಿಸಲೇಬೇಕಾದ ಅನಿವಾರ್ಯ ಒತ್ತಡಕ್ಕೊಳಗಾಗುವ ಯುವ ಪೀಳಿಗೆ ತನ್ನ ಸ್ವಂತಿಕೆಯನ್ನೂ ಕಳೆದುಕೊಂಡು, ಬೌದ್ಧಿಕ ಸ್ವಾಯತ್ತತೆಯನ್ನೂ ಕಳೆದುಕೊಂಡು, ಅಸ್ಮಿತೆಗಳ ಲೋಕದಲ್ಲಿ ಬಂಧಿಯಾಗಿಬಿಡುತ್ತದೆ. ಈ ಯುವ ಪೀಳಿಗೆಗೆ ಮತಾಚರಣೆಯ ವಿಚಾರದಲ್ಲಾಗಲೀ, ಧಾರ್ಮಿಕ ಸಂಹಿತೆಗಳ ವಿಚಾರದಲ್ಲಾಗಲೀ ಸ್ವತಂತ್ರ ಅಭಿವ್ಯಕ್ತಿಯ ಅವಕಾಶಗಳು ಇಲ್ಲವಾದಾಗ ಅಲ್ಲಿ ಆ ವೇಳೆಗಾಗಲೇ ಬಹಿಷ್ಕೃತರಾಗಿ ಜರ್ಝರಿತವಾಗಿರುವ ಮನಸುಗಳು ಶ್ರದ್ಧೆ, ನಂಬಿಕೆ ಮತ್ತು ಅಂಧಾನುಕರಣೆಗೆ ಬಲಿಯಾಗಿಬಿಡುತ್ತವೆ.
ಹಿಂದುತ್ವ ಪ್ರತಿಪಾದಿಸುವ ವೈದಿಕ ಶಾಹಿ ಪ್ರಣೀತ ಹಿಂದೂ ಸಮುದಾಯದಲ್ಲಿ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳಲ್ಲೂ ಸಹ ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸದೆ ಹೋದರೆ, ಬಹುಶಃ ಆಧುನಿಕ ಸಮಾಜ ಸಾಂಸ್ಕಂತಿಕವಾಗಿ ಕ್ಷೀಣಿಸುತ್ತಾ ಪ್ರಾಚೀನತೆಯೆಡೆಗೆ ಸುಲಭವಾಗಿ ಜಾರಿಬಿಡುತ್ತವೆ. ನಂಬಿಕೆ, ಶ್ರದ್ಧೆ ಮತ್ತು ವಿಶ್ವಾಸ ಇವು ಯಾವುದೇ ಒಂದು ಮತದ ಬುನಾದಿಯಾಗಿ ಜನಸಾಮಾನ್ಯರ ನಿಷ್ಠೆಯನ್ನು ಪ್ರಮಾಣೀಕರಿಸುವ ಅಸ್ತ್ರಗಳಾಗುತ್ತವೆ. ಒಂದು ನಿರ್ದಿಷ್ಟ ಮತದಲ್ಲಿ ನಿಷ್ಠೆ ಹೊಂದಿರುವವರನ್ನು ಮತಾಚರಣೆಯ ವಿಧಾನಗಳ ಮೂಲಕ ಕಟ್ಟಿ ಹಾಕುವುದರೊಂದಿಗೇ ಧಾರ್ಮಿಕ ಕಟ್ಟಳೆಗಳು ಮತ್ತು ಆಚರಣೆಗಳನ್ನು ವಿಧಿಸುವ ಮೂಲಕ ಮತಶ್ರೇಷ್ಠತೆಯನ್ನು ದೃಢೀಕರಿಸುವ ಪ್ರಯತ್ನಗಳು ಧಾರ್ಮಿಕ ನಾಯಕರಿಂದ, ಸಂಸ್ಥೆಗಳಿಂದ ಮತ್ತು ಪುರೋಹಿತಶಾಹಿ ವರ್ಗದಿಂದ ನಡೆಯುತ್ತಲೇ ಇರುತ್ತದೆ. ಮತನಿಷ್ಠೆಗೂ ಧಾರ್ಮಿಕ ಆಚರಣೆಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಬಳಸಿಕೊಂಡೇ ಸಾಂಸ್ಥಿಕ ಮತಗಳು ಜನಸಾಮಾನ್ಯರನ್ನು ಆಚರಣೆಗಳ ಚೌಕಟ್ಟಿನಲ್ಲಿ ಬಂಧಿಸುತ್ತವೆ. ಕ್ರಮೇಣ ಈ ಆಚರಣೆಗಳೇ ಅಸ್ಮಿತೆಯ ಸಂಕೇತಗಳಾಗಿಬಿಡುತ್ತವೆ.
ಹಿಂದೂ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯದಲ್ಲಿ ಇಂದು ಈ ಅಸ್ಮಿತೆಯ ಸಂಘರ್ಷದ ನೆಲೆಗಳು ವಿಸ್ತರಿಸಿಕೊಳ್ಳುತ್ತಲೇ ಇವೆ. ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸಲು ಕಟಿಬದ್ಧರಾಗಿರುವ ಹಿಂದುತ್ವದ ಕಾವಲುಪಡೆಗಳು ವೈದಿಕಶಾಹಿಯ ಧಾರ್ಮಿಕ ಆಚರಣೆಗಳನ್ನು, ಕಟ್ಟಲೆಗಳನ್ನೇ ಮತೀಯ ಅಸ್ಮಿತೆಗೆ ಆಧಾರ ಎಂದು ಪ್ರತಿಪಾದಿಸುತ್ತಾ, ಈ ಧಾರ್ಮಿಕ ಚಿಹ್ನೆಗಳನ್ನು, ಆಚರಣೆಗಳನ್ನು ಜನಸಾಮಾನ್ಯರ ಮೇಲೆ ಹೇರಲು ಸಾಂಸ್ಥಿಕವಾಗಿಯೇ ಪ್ರಯತ್ನ ಮಾಡುತ್ತಿವೆ. ಈ ಪ್ರಯತ್ನಗಳಿಗೆ ಅಡ್ಡಿಯಾಗುವ ಯಾವುದೇ ನೆಲೆಗಳನ್ನು ಇಲ್ಲವಾಗಿಸುವ ಅಥವಾ ಅಳಿಸಿಹಾಕುವ ಪ್ರಯತ್ನದಲ್ಲೇ ಸಾಂಸ್ಕೃತಿಕ ದಾಳಿಗಳನ್ನೂ ನಡೆಸಲಾಗುತ್ತಿದೆ. ಸೆಕ್ಯುಲರಿಸಂ ಅಥವಾ ಜಾತ್ಯತೀತ ನೆಲೆಗಳು ಈ ಆಕ್ರಮಣದ ಪ್ರಥಮ ಗುರಿ ಆಗಿರುತ್ತವೆ. ಹಾಗಾಗಿಯೇ ಮತನಿಷ್ಠೆ ಮೊಳಕೆಯೊಡೆಯುವ ಬಾಲ್ಯಾವಸ್ಥೆಯಲ್ಲೇ ಅಸ್ಮಿತೆಯ ಗೋಡೆಗಳನ್ನು ಕಟ್ಟಿಕೊಳ್ಳುವ ಮನಸ್ಥಿತಿಯನ್ನು ಎಳೆ ವಯಸ್ಸಿನವರಲ್ಲಿ ಸೃಷ್ಟಿಸಬೇಕಾಗುತ್ತದೆ. ಆದ್ದರಿಂದಲೇ ಹಿಂದುತ್ವದ ಕಾವಲುಪಡೆಗಳು ಶಾಲಾ ಆವರಣವನ್ನು ಪ್ರವೇಶಿಸಿವೆ.
ಇದಕ್ಕೆ ಪ್ರತಿಯಾಗಿ ಅನ್ಯ ಮತದ ಅನುಯಾಯಿಗಳು ಸಹಜವಾಗಿಯೇ ಪ್ರಕ್ಷುಬ್ಧತೆಗೊಳಗಾಗುತ್ತಾರೆ. ತಮ್ಮ ಸುತ್ತಲೂ ನಿರ್ಮಿಸಲಾಗಿರುವ ಮತೀಯ ಅಸ್ಮಿತೆಗಳನ್ನು ಕಾಪಾಡಿಕೊಳ್ಳಲು ಮುಸ್ಲಿಂ ಮತೀಯ ನೆಲೆಗಳು ಹೆಣಗಾಡುತ್ತವೆ. ಬಹುಸಂಖ್ಯಾತ ಮತೀಯರ ದಾಳಿಯನ್ನು ಎದುರಿಸಲು ಪ್ರತಿರೋಧದ ನೆಲೆಗಳನ್ನು ಸೃಷ್ಟಿಸಬೇಕಾಗುತ್ತದೆ. ಇದರೊಟ್ಟಿಗೇ ಇಸ್ಲಾಂ ಮತದ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದೂ ಅವಶ್ಯವಾಗಿಬಿಡುತ್ತದೆ. ಮತಶ್ರದ್ಧೆಯನ್ನು ಯಥಾಸ್ಥಿತಿಯಲ್ಲಿರಿಸಿಕೊಂಡೇ, ಧಾರ್ಮಿಕ ಆಚರಣೆಗಳನ್ನು ಬದಿಗೊತ್ತಿ ಜಾತ್ಯತೀತ ಮೌಲ್ಯಗಳೊಂದಿಗೆ ಗುರುತಿಸಿಕೊಳ್ಳುವುದರಲ್ಲಿ ಮುಸ್ಲಿಂ ಮತದ ಧಾರ್ಮಿಕ ನಾಯಕರು ವಿಫಲವಾಗಿರುವುದರಿಂದಲೇ ಈ ಸಂರಕ್ಷಣೆಯ ಪ್ರಕ್ರಿಯೆಯಲ್ಲಿ ಮುಸ್ಲಿಂ ಸಮುದಾಯ ಹೆಚ್ಚು ಹೆಚ್ಚು ಅಂತರ್ಮುಖಿಯಾಗುತ್ತಿದೆ. ಸಹಜವಾಗಿಯೇ ಧಾರ್ಮಿಕ ನಂಬಿಕೆ, ಆಚರಣೆ ಮತ್ತು ಅನುಸರಣೆಗಳೇ ಇಸ್ಲಾಂ ಮತದ ರಕ್ಷಣೆಯ ಅಸ್ತ್ರಗಳಾಗಿಬಿಡುತ್ತವೆ.
Also Read : ಶಾಲೆಯ ಹೊಸ್ತಿಲು ತುಳಿದ ಮತಾಂಧತೆಯ ನೆರಳು : ಈ ಪ್ರಯತ್ನಗಳಿಗೆ ಯಾವಾಗ ಕಡಿವಾಣ? ಭಾಗ- ೨
ಹಿಜಾಬ್, ಬುರ್ಖಾ ಅಥವಾ ಮತ್ತಾವುದೇ ರೀತಿಯ ಧಾರ್ಮಿಕ ಲಾಂಛನಗಳು, ಚಿಹ್ನೆಗಳು ಮತಾನುಚರಣೆಯ ಅನಿವಾರ್ಯತೆಗಳಾಗುವುದಕ್ಕಿಂತಲೂ ಹೆಚ್ಚಾಗಿ ಪ್ರತಿರೋಧಧ ಅಸ್ತ್ರಗಳಾಗಿ ಪರಿಣಮಿಸುತ್ತವೆ. ಮುಸ್ಲಿಂ ಸಮುದಾಯದಲ್ಲಿನ ಅಸಹಾಯಕತೆ ಮತ್ತು ಆತಂಕಗಳು ಈ ಚಿಹ್ನೆ ಅಥವಾ ಲಾಂಛನಗಳನ್ನು ಹೇರಲು ಸುಗಮ ಹಾದಿಯನ್ನು ನಿರ್ಮಿಸುತ್ತವೆ. ವರ್ಗದ ನೆಲೆಯಲ್ಲಿ ನೋಡಿದಾಗ ಮುಸ್ಲಿಂ ಸಮುದಾಯದಲ್ಲೂ ಸಹ ಹಿಂದೂಗಳಲ್ಲಾದಂತೆಯೇ, ಕೆಳವರ್ಗದ, ಬಡಜನತೆ ಈ ಪ್ರಕ್ರಿಯೆಗೆ ಸುಲಭ ತುತ್ತಾಗುತ್ತಾರೆ. ಧಾರ್ಮಿಕ ಕಟ್ಟಳೆಗಳನ್ನು ವಿಧಿಸುವ ಮೌಲ್ವಿಗಳು ಮತ್ತು ಮುಲ್ಲಾಗಳು ಸಮುದಾಯಗಳಲ್ಲಿನ ನಿತ್ಯ ಬದುಕಿನ ಆತಂಕಗಳನ್ನೇ ನೆಪವಾಗಿರಿಸಿಕೊಂಡು, ಸಮುದಾಯದ ಮೇಲೆ ಧಾರ್ಮಿಕ ಆಚರಣೆಗಳು, ಕಟ್ಟಳೆಗಳನ್ನು ಹೇರಲಾರಂಭಿಸುತ್ತಾರೆ. ಈ ಚಿಹ್ನೆಗಳೇ ಇಸ್ಲಾಂ ಮತದ ಅಸ್ಮಿತೆಯ ಲಾಂಛನಗಳಾಗಿಬಿಡುತ್ತವೆ.
ಆದರೆ ಈ ಚಿಹ್ನೆಗಳು ಇಲ್ಲದೆಯೂ, ಆಚರಣೆಗಳ ಅಡಂಭರ ಇಲ್ಲದೆಯೂ ಇಸ್ಲಾಂ ಮತ ತನ್ನ ಅಸ್ತಿತ್ವವನ್ನು, ಅಸ್ಮಿತೆಯನ್ನು ಉಳಿಸಿಕೊಳ್ಳಬಹುದು. ಇಸ್ಲಾಂ ಧರ್ಮದ ನಿಯಮಗಳ ಅನುಸಾರವೇ ಹಿಜಾಬ್ ಅಥವಾ ಬುರ್ಖಾ ಹೆಣ್ಣುಮಕ್ಕಳ ಆಯ್ಕೆಯ ಪ್ರಶ್ನೆಯಾಗಿರುತ್ತದೆ. ಇಸ್ಲಾಂ ಮತದ ಸಾಂಸ್ಥಿಕ ಅಸ್ತಿತ್ವಕ್ಕೆ ಅನಿವಾರ್ಯವಾಗುವ ಯಾವುದೇ ಈ ಚಿಹ್ನೆಗಳು ಅಥವಾ ಲಾಂಛನಗಳನ್ನು ಜನರ ಮೇಲೆ ಹೇರಲಾರಂಭಿಸುವುದರಿಂದ, ಮತಾನುಯಾಯಿಗಳ ಆಯ್ಕೆಯ ಹಕ್ಕುಗಳನ್ನು ಕಸಿದುಕೊಳ್ಳುವುದರಿಂದ ಮತಾಂಧತೆ, ಮತಶ್ರೇಷ್ಠತೆ ಮತ್ತು ಅಂತರ್ಮುಖಿ ಭಾವನೆಗಳು ಸಾಂಸ್ಥಿಕ ಸ್ವರೂಪ ಪಡೆದುಕೊಳ್ಳುತ್ತವೆ. ಹಿಜಾಬ್ ವಿಚಾರದಲ್ಲೂ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಇಂತಹುದೇ ಒತ್ತಡಗಳಲ್ಲಿ ಸಿಲುಕಿದ್ದಾರೆ. ಹಿಂದೂ ಮತಾಂಧರ ದಾಳಿ ಹೆಚ್ಚಾಗುತ್ತಿರುವಂತೆಲ್ಲಾ, ಮುಸಲ್ಮಾನ ಹೆಣ್ಣುಮಕ್ಕಳು ಹೆಚ್ಚುಹೆಚ್ಚಾಗಿ ವಸ್ತ್ರಸಂಹಿತೆಗೆ ಒಳಗಾಗುತ್ತಿರುವುದು ಈ ಅಂತರ್ಮುಖಿ ಮನೋಭಾವಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.
ಇಲ್ಲಿ ಪ್ರಶ್ನೆ ಉದ್ಭವಿಸುವುದು, ಹೆಣ್ಣು ಮಕ್ಕಳೇ ಏಕೆ ಸಂಕೇತಗಳ ವಾಹಕಗಳಾಗುತ್ತಾರೆ? ಸಮಾಜದಲ್ಲಿ ಸಾಮಾಜಿಕಾರ್ಥಿಕ ಮುಂಚಲನೆಯಿಂದ ವಂಚಿತರಾಗಿರುವ ಅಸಹಾಯಕ ಕೆಳ ಮಧ್ಯಮ ವರ್ಗಗಳು, ಬಡ ಜನತೆಯೇ ಏಕೆ ಈ ಆಲೊಚನಾ ಲಹರಿಯ ವಾಹಿನಿಗಳಾಗುತ್ತಾರೆ. ಕಳೆದ ಐವತ್ತು ವರ್ಷಗಳಿಂದ ಆಯ್ಕೆಯ ವ್ಯಕ್ತಿಗತ ಆಯ್ಕೆಯ ಪ್ರಶ್ನೆಯಾಗಿದ್ದ ಹಿಜಾಬ್ ಅಥವಾ ಬುರ್ಖಾ ಅಥವಾ ಯಾವುದೇ ಇತರ ಚಿಹ್ನೆಗಳು, ಲಾಂಛನಗಳು ಈಗ ಕಡ್ಡಾಯವಾಗುತ್ತಿರುವುದೇಕೆ? ಈ ಕಡ್ಡಾಯವನ್ನು ಹೇರುತ್ತಿರುವುದಾದರೂ ಯಾರ ಮೇಲೆ? ಹಿಂದೂ ಮತೀಯವಾದಿಗಳ ದಾಳಿಗೆ ಪ್ರತಿದಾಳಿಯಾಗಿ ಮುಸ್ಲಿಂ ಹೆಣ್ಣುಮಕ್ಕಳನ್ನು, ಅವರ ವಸ್ತ್ರಧಾರಣೆಯನ್ನು, ಅವರ ವ್ಯಕ್ತಿಗತ ಆಯ್ಕೆ ಮತ್ತು ಆದ್ಯತೆಗಳನ್ನು ಗುರಾಣಿಯಂತೆ ಬಳಸಿಕೊಳ್ಳಲಾಗುತ್ತಿದೆಯೇ? ಪಿತೃಪ್ರಧಾನ ವ್ಯವಸ್ಥೆಯ ಈ ಹೇರಿಕೆ ಮುಸ್ಲಿಂ ಹೆಣ್ಣುಮಕ್ಕಳನ್ನು ಇನ್ನೂ ಹೆಚ್ಚು ಅಂತರ್ಮುಖಿಗಳನ್ನಾಗಿಸಿ, ಬಾಹ್ಯ ಸಮಾಜದಿಂದ ವಿಮುಖಗೊಳಿಸುವುದಿಲ್ಲವೇ ?
ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ಹಿಂದೂ ಮತಾಂಧರ ದಾಳಿಗಳಿಗೆ ಶೂದ್ರ ಸಮುದಾಯದ ಯುವ ಪೀಳಿಗೆ ಮುಂಚೂಣಿ ಕಾವಲುಪಡೆಗಳಂತೆ ಬಳಕೆಯಾಗುತ್ತಿರುವುದನ್ನು ಬಾಬ್ರಿ ಮಸೀದಿಯಿಂದ, ಗುಜರಾತ್ ಗಲಭೆಗಳಿಂದ ಕರಾವಳಿಯವರೆಗೂ ನೋಡುತ್ತಲೇ ಇದ್ದೇವೆ. ರಾಮಮಂದಿರಕ್ಕಾಗಿ ತಮ್ಮ ಬದುಕಿನ ಆದ್ಯತೆಗಳನ್ನೂ ಬದಿಗಿಟ್ಟು ಕರಸೇವೆಗೆ ಮುಂದಾದ ಕೋಟ್ಯಂತರ ಶೂದ್ರ ಯುವಕರು ಇಂದು ತ್ರಿಶೂಲಧಾರಿಗಳಾಗಿ, ಕೇಸರಿ ಶಾಲು ಹೊದೆಯುತ್ತಾ, ಮತದ್ವೇಷದ ವಾಹಕಗಳಾಗಿ ಪರಿಣಮಿಸಿದ್ದಾರೆ. ಇಂತಹುದೇ ಪಡೆಗಳನ್ನು ಮೂರು ದಶಕಗಳ ನಂತರ ಶಾಲಾ ಕಾಲೇಜುಗಳಲ್ಲಿ ಸಿದ್ಧಪಡಿಸಲು ಹಿಂದೂ ಮತಾಂಧರು ಸಜ್ಜಾಗುತ್ತಿದ್ದಾರೆ. ಶ್ರೀಮಂತಿಕೆಯ ನೆಲೆಗಳಾದ ಅತ್ಯಾಧುನಿಕ ಷಾಪಿಂಗ್ ಮಾಲ್ಗಳಲ್ಲಿ, ಮನರಂಜನಾ ಪಾರ್ಕುಗಳಲ್ಲಿ, ಮೋಜಿನ ತಾಣಗಳಲ್ಲಿ ಮತ್ತು ಸಮಾಜದ ಗಣ್ಯ ವರ್ಗವೇ ಪ್ರಧಾನವಾಗಿ ಕಾಣುವ ಸಾಮಾಜಿಕ ವಲಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಎರಡೂ ಸಹ ನೇಪಥ್ಯಕ್ಕೆ ಸರಿದುಬಿಡುತ್ತವೆ. ಸಾಂಸ್ಥಿಕ ಮತ ಮತ್ತು ಅಲ್ಲಿಂದಲೇ ಹೇರಲ್ಪಡುವ ಧಾರ್ಮಿಕ ಕಟ್ಟಳೆಗಳು ಸಮಾಜದ ಕೆಳವರ್ಗಗಳನ್ನೇ ಗುರಿಯಾಗಿರಿಸಿಕೊಂಡಿರುತ್ತವೆ.
ಮತೀಯ ನೆಲೆಗಳನ್ನು ಸಂರಕ್ಷಿಸಲು ಧಾರ್ಮಿಕ ನಾಯಕರು ಈ ಕೆಳವರ್ಗದ ಜನತೆಯಲ್ಲಿನ ಅಸಹಾಯಕತೆ, ಅನಕ್ಷರತೆ, ಆತಂಕ ಮತ್ತು ತುಮುಲಗಳನ್ನೇ ತಮ್ಮ ಬಂಡವಾಳವಾಗಿ ಮಾಡಿಕೊಂಡು, ಸಾಂಸ್ಥಿಕ ಮತದ ಆಧಿಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ. ಹಾಗಾಗಿಯೇ ಈ ಆರ್ಥಿಕವಾಗಿ ಕೆಳವರ್ಗಕ್ಕೆ ಸೇರಿದ ಜನರೇ, ಸಾಮಾಜಿಕವಾಗಿ ಗಣ್ಯ ಸಮುದಾಯದಿಂದ ಹೊರಗಿರುವ ಜನರೇ ಧಾರ್ಮಿಕ ಚಿಹ್ನೆ ಮತ್ತು ಲಾಂಛನಗಳ ವಾಹಕರಾಗಿ, ಧರ್ಮ ರಕ್ಷಣೆಯ, ಸಂಸ್ಕೃತಿ ರಕ್ಷಣೆಯ ನೈತಿಕ ಹೊಣೆ ಹೊರಬೇಕಾಗುತ್ತದೆ. ಕರಾವಳಿಯ ಮತಾಂಧತೆಯ ರಾಜಕಾರಣದಲ್ಲಿ ಈ ಪ್ರಕ್ರಿಯೆಗೆ ಈಗ ವಿದ್ಯಾರ್ಥಿ ಸಮುದಾಯ ಬಲಿಯಾಗುತ್ತಿದೆ. ಹಿಜಾಬ್ ಇಲ್ಲದೆ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಲಾರಂಭಿಸಿದರೆ ಹಿಂದೂ ಮತಾಂಧರು ನಾಳೆ ಮತ್ತೊಂದು ಧಾರ್ಮಿಕ ಚಿಹ್ನೆಯ ಮೇಲೆ ದಾಳಿಮಾಡಲಾರಂಭಿಸುತ್ತಾರೆ ಎಂಬ ಆತಂಕ ಸಹಜವಾಗಿಯೇ ಕಾಡುತ್ತದೆ.
ಹಿಜಾಬ್ ವಿವಾದಕ್ಕೆ ಪ್ರತಿಕ್ರಯಿಸುತ್ತಾ ರಾಜ್ಯ ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್, ಕರ್ನಾಟಕವನ್ನು ತಾಲಿಬಾನ್ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಉಡುಪಿ, ಮಂಗಳೂರಿನಲ್ಲಿ ಹಿಂದೂ ಸೇನೆಯೊಂದು ಯುವಕರಿಗೆ ತ್ರಿಶೂಲಗಳನ್ನು ವಿತರಿಸುವುದು ತಾಲೀಬಾನೀಕರಣವಾಗುವುದೇ ಹೊರತು ಹೆಣ್ಣುಮಕ್ಕಳು ಧರಿಸುವ ಹಿಜಾಬ್‍ನಿಂದ ಅಲ್ಲ ಅಲ್ಲವೇ? ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ. ಹಾಗಾದರೆ ಪ್ರತಿಯೊಂದು ಶಾಲೆಯಲ್ಲೂ ಪರಂಪರಾಗತವಾಗಿ ನಡೆದುಬಂದಿರುವ ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ಪೂಜೆಗಳನ್ನು ನಿಲ್ಲಿಸಬೇಕಲ್ಲವೇ? ಮುಸಲ್ಮಾನ ಹೆಣ್ಣುಮಕ್ಕಳ ವಸ್ತ್ರಧಾರಣೆ ಅವರ ಸಾಂವಿಧಾನಿಕ ಹಕ್ಕು ಆದರೆ ಜಾತ್ಯತೀತ ಭಾರತದಲ್ಲಿ ಸಾರ್ವಜನಿಕ ಶಾಲೆಯೊಂದರಲ್ಲಿ ಧಾರ್ಮಿಕ ಆಚರಣೆ ಮಾಡುವುದು ಅಸಾಂವಿಧಾನಿಕ ಕ್ರಮ. ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡು, ಬಹುಸಂಖ್ಯಾತರ ಧಾರ್ಮಿಕ ಆಚರಣೆಗಳನ್ನು ಪ್ರಚೋದಿಸುವುದು ತಾಲೀಬಾನೀಕರಣ ಎನಿಸಿಕೊಳ್ಳುತ್ತದೆ.
ಮುಸ್ಲಿಂ ಸಮುದಾಯದ ಧಾರ್ಮಿಕ ನಾಯಕರು ಮತ್ತು ಸಂಸ್ಥೆಗಳು ತಮ್ಮ ಧಾರ್ಮಿಕ ಕಟ್ಟಳೆಗಳನ್ನು ಸಾಮಾನ್ಯರ ಮೇಲೆ ಹೇರದೆಯೇ, ಆಯ್ಕೆಯ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡುವುದರಿಂದ ಮಾತ್ರವೇ ಮುಸ್ಲಿಂ ಸಮುದಾಯದಲ್ಲಿ ಬಾಹ್ಯ ಸಮಾಜದೊಡನೆ ಗುರುತಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲು ಸಾಧ್ಯ. ಧಾರ್ಮಿಕ ಚಿಹ್ನೆ, ಲಾಂಛನ ಅಥವಾ ಸಂಕೇತಗಳನ್ನು ಉಲ್ಲಂಘಿಸಿದ ಮಾತ್ರಕ್ಕೆ ಇಸ್ಲಾಂ ಮತದ ಅಸ್ತಿತ್ವವೇ ಅಪಾಯಕ್ಕೀಡಾಗುತ್ತದೆ ಎಂಬ ಭ್ರಮೆಯನ್ನು ಯುವಪೀಳಿಗೆಯಲ್ಲಿ ಸೃಷ್ಟಿಸಿರುವುದರಿಂದಲೇ ಹೆಚ್ಚು ಹೆಚ್ಚು ಯುವಕರು, ಯುವತಿಯರು ಅಂತರ್ಮುಖಿಗಳಾಗುತ್ತಿದ್ದಾರೆ. ಹಿಂದೂ ಆಗಲಿ ಇಸ್ಲಾಂ ಮತ ಆಗಲಿ ಅಷ್ಟು ದುರ್ಬಲ ಅಲ್ಲ ಎನ್ನುವುದನ್ನು ನಾವು ಮನಗಾಣಬೇಕಿದೆ. ಮತಶ್ರದ್ಧೆಗೆ ನಂಬಿಕೆಗಳು ಆಧಾರವಾಗಿರಬಹುದು ಆದರೆ ಆಚರಣೆಗಳಲ್ಲ. ಯಾವುದೇ ಮತದ ಸಾಂಸ್ಥಿಕ ಉಳಿವಿಗೂ ಸಹ ಧಾರ್ಮಿಕ ಆಚರಣೆಗಳು ಮೂಲಾಧಾರ ಆಗಕೂಡದು. ಹೀಗಾದಾಗಲೇ ಮತಾಂಧತೆಯ ಬೀಜಗಳು ಮೊಳಕೆಯೊಡೆಯಲಾರಂಭಿಸುತ್ತವೆ.
Also Read : ಮಾನವತೆಯ ಆಕರಗಳಾಗಬೇಕಾದ ಶಾಲೆ ಅಸ್ಮಿತೆಗಳ ಸಂಘರ್ಷದ ತಾಣಗಳಾಗಬೇಕೇ? (ಭಾಗ-೨)
ಸಂಘಪರಿವಾರ ಬಯಸುತ್ತಿರುವ ಹಿಂದೂ ಪುನರುತ್ಥಾನ ಅಥವಾ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಈ ಮತಾಂಧತೆಯ ಈ ಬೀಜಗಳು ಮೊಳೆತು ಹೆಮ್ಮರಗಳಾಗಿರುವುದರಿಂದಲೇ ಒಂದು ಹಿಜಾಬ್ ಅಥವಾ ಬುರ್ಖಾ ಮೂಲ ನೆಲೆಯನ್ನೇ ಅಲುಗಾಡಿಸಿದಂತೆ ಭಾವಿಸಲಾಗುತ್ತದೆ. ಮುಸ್ಲಿಂ ಧಾರ್ಮಿಕ ನಾಯಕರೂ, ಮೌಲ್ವಿಗಳು, ಮುಲ್ಲಾಗಳು ಇದೇ ಧಾರ್ಮಿಕ ಆಚರಣೆಗಳನ್ನೇ ತಮ್ಮ ಸಾಂಸ್ಥಿಕ-ಸಾಮುದಾಯಿಕ ಅಸ್ಮಿತೆಯ ಆಕರಗಳನ್ನಾಗಿ ಪರಿಗಣಿಸುತ್ತಿರುವುದರಿಂದಲೇ ಮುಸ್ಲಿಂ ಯುವ ಜನತೆ ಅಂತರ್ಮುಖಿಯಾಗುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ಎರಡೂ ಸಮುದಾಯಗಳ ವಿದ್ಯಾರ್ಥಿ ಸಮೂಹ ಮತ್ತು ಕೆಳವರ್ಗಗಳ ಅಸಹಾಯಕ ಯುವ ಪೀಳಿಗೆಯೇ ಹೊರತು, ಮೇಲ್ವರ್ಗದ ಅಥವಾ ಮೇಲ್ಪದರದ ಗಣ್ಯ ಸಮುದಾಯವಲ್ಲ. ಪಿತೃಪ್ರಧಾನ ಧೋರಣೆ ಹೆಣ್ಣುಮಕ್ಕಳನ್ನು ನಿಗ್ರಹಿಸಲು ಸಹಾಯಕವಾದರೆ ಯಜಮಾನಿಕೆಯ ವರ್ಗ ಪ್ರಜ್ಞೆ ಅಸಹಾಯಕ ಬಡ ಜನತೆಯನ್ನು ನಿಗ್ರಹಿಸಲು ಸಹಾಯಕವಾಗುತ್ತದೆ.
ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ನಾಗರಿಕ ಸಮಾಜದ ಪ್ರಜ್ಞಾವಂತ ಜನತೆ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಎರಡೂ ಸಮುದಾಯಗಳ ಮತೀಯವಾದಿಗಳನ್ನು ಬದಿಗಿಟ್ಟು, ಧಾರ್ಮಿಕ ನಾಯಕರನ್ನು ಹೊರಗಿಟ್ಟು, ಭಾರತದ ಸಾಂವಿಧಾನಿಕ ಮೌಲ್ಯಗಳಿಗನುಸಾರವಾಗಿ, ಒಂದು ಸಮಾನತೆಯ ಸೌಹಾರ್ದಯುತ ಭ್ರಾತೃತ್ವವುಳ್ಳ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಎರಡೂ ಸಮುದಾಯಗಳ ಪ್ರಜ್ಞಾವಂತರು ಕ್ರಿಯಾಶೀಲವಾಗಬೇಕಿದೆ. ರಾಜಕೀಯ ನಾಯಕರು ಈಗಾಗಲೇ ಈ ಸಂವೇದನಾಶೀಲ ಮೌಲ್ಯಗಳನ್ನು ಮತ್ತು ಸಾಮಾಜಿಕ-ಸಾಂಸ್ಕೃತಿಕ ನೈತಿಕತೆಯನ್ನು ಕಳೆದುಕೊಂಡಿರುವುದರಿಂದ ಇವರಿಂದ ಭಾವನಾತ್ಮಕ ಘೋಷಣೆಗಳನ್ನು ಮಾತ್ರವೇ ನಿರೀಕ್ಷಿಸಲು ಸಾಧ್ಯ. ಎರಡೂ ಮತಗಳ ಸಂರಕ್ಷಕರಾಗಿ ಕಾಣುವ ಧಾರ್ಮಿಕ ನಾಯಕರಿಂದ ಇನ್ನಷ್ಟು ಆಳವಾದ ಕೂಪಗಳನ್ನು ನಿರ್ಮಿಸಲಷ್ಟೇ ಸಾಧ್ಯ.
ಶಾಲೆಯ ಗೇಟಿನಲ್ಲೇ ಬಹಿಷ್ಕೃತರಾಗಿ ಕಂಬನಿ ಮಿಡಿಯುತ್ತಾ ದಿನ ಕಳೆದ ಮೂವತ್ತು ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಈ ಸಾಂಸ್ಕೃತಿಕ ಸಂಘರ್ಷದ ಒಂದು ಮಾನವೀಯ ಸಂಜ್ಞೆಯನ್ನು ಕಾಣುವಂತಾದರೆ, ಭಾರತ ತನ್ನ ಭ್ರಾತೃತ್ವದ ನೆಲೆಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜಮುಖಿ ಜಾತ್ಯತೀತ ಶಕ್ತಿಗಳ ಹೊಣೆಗಾರಿಕೆ ಹೆಚ್ಚಾಗುತ್ತಲೇ ಇದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜಾತ್ಯತೀತ ಶಕ್ತಿಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ಮುನ್ನಡೆಯಬೇಕಿದೆ. ಪ್ರಗತಿಪರತೆಯನ್ನು, ಜಾತ್ಯತೀತತೆಯನ್ನು ವೈಚಾರಿಕತೆಯ ನೆಲೆಯಲ್ಲಿ ನೋಡಬೇಕೇ ಹೊರತು, ಪರ-ವಿರೋಧಗಳ ಪ್ರತಿಕ್ರಿಯೆಯ ನೆಲೆಯಲ್ಲಿ ನೋಡಲಾಗುವುದಿಲ್ಲ. ಭಾರತೀಯ ಸಮಾಜದಲ್ಲಿ ಬೇರೂರಿರುವ ವರ್ಗ ತಾರತಮ್ಯಗಳು, ಪುರುಷ ಪ್ರಧಾನ ಧೋರಣೆ, ಪಿತೃಪ್ರಧಾನ ಮನಸ್ಥಿತಿ ಮತ್ತು ಸಾಂಪ್ರದಾಯಿಕತೆಯನ್ನು ಹೋಗಲಾಡಿಸುವುದು ನಮ್ಮ ಪ್ರಥಮ ಆದ್ಯತೆಯಾಗಬೇಕಿದೆ.