ಮಲೆನಾಡಿನಲ್ಲಿ ಆತಂಕಕ್ಕೆ ಕಾರಣವಾಗಿರುವ ಮಂಗನಕಾಯಿಲೆ(ಕೆಎಫ್ ಡಿ) ಲಸಿಕೆ ಕೊರತೆಯ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಒಂದು ಕಡೆ ರೋಗ ಉಲ್ಬಣಗೊಳ್ಳುತ್ತಿರುವಾಗ ಲಸಿಕೆಯ ಬೇಡಿಕೆ ಹೆಚ್ಚುತ್ತಿದ್ದರೆ, ಜಿಲ್ಲಾ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸದ್ಯಕ್ಕೆ ಲಸಿಕೆ ಸಿಗುವ ಸಾಧ್ಯತೆಗಳು ವಿರಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕೆಎಫ್ ಡಿ ಲಸಿಕೆ ವಾಯಿದೆ ಮೀರಿರುವ ಹಿನ್ನೆಲೆಯಲ್ಲಿ ದಾಸ್ತಾನಿದ್ದರೂ ಬಳಕೆ ಮಾಡಲಾಗದ ಸ್ಥಿತಿ ಇದ್ದು, ಕಳೆದ ಐದು ದಿನಗಳಿಂದ ಲಸಿಕೆ ನೀಡಿಕೆಯನ್ನು ಶಿವಮೊಗ್ಗವೂ ಸೇರಿದಂತೆ ಉತ್ತರಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಬೆಳಗಾವಿ ಸೇರಿದಂತೆ ಕೆಎಫ್ ಡಿ ಪೀಡಿತ ಎಲ್ಲಾ ಆರು ಜಿಲ್ಲೆಗಳಲ್ಲೂ ಸ್ಥಗಿತಗೊಳಿಸಲಾಗಿದೆ ಎಂಬ ಬಗ್ಗೆ ‘ಪ್ರತಿಧ್ವನಿ’ ಶುಕ್ರವಾರ ವರದಿ ಮಾಡಿತ್ತು.
ಲಸಿಕೆ ಬಿಕ್ಕಟ್ಟಿನ ಕುರಿತಾಗಿಯೇ ಶಿವಮೊಗ್ಗ ಪರಿಮಾಣು ಕ್ರಿಮಿ ಸಂಶೋಧನಾ ಪ್ರಯೋಗಾಲಯ(ವಿಡಿಎಲ್ ಲ್ಯಾಬ್) ಕ್ಕೆ ಶನಿವಾರ ಭೇಟಿ ನೀಡಿದ್ದ ರಾಜ್ಯ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ(ಕಮ್ಯುನಿಕೇಬಲ್ ಡಿಸೀಸಸ್ ವಿಭಾಗ) ಡಾ ಮುರುಳಿಕೃಷ್ಣ ಅವರು ಸ್ವತಃ ಲಸಿಕೆ ಅಲಭ್ಯತೆಯನ್ನು ಖಚಿತಪಡಿಸಿದ್ದಾರೆ.
“ಸದ್ಯ ಪ್ರಸ್ತುತ ಸೀಜನ್ ನಲ್ಲಿ(ಕಳೆದ ಸೆಪ್ಟೆಂಬರಿನಿಂದ) ಜಿಲ್ಲೆಯಲ್ಲಿ 1.5 ಲಕ್ಷ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆ ಪೈಕಿ ಈವರೆಗೆ 70 ಸಾವಿರ ಲಸಿಕೆ ಮಾತ್ರ ನೀಡಲಾಗಿದೆ. ಸೋಂಕು ತೀವ್ರವಾಗಿರುವ ಮಾಳೂರು ಮತ್ತು ಅರಳಗೋಡು ಪಂಚಾಯ್ತಿ ವ್ಯಾಪ್ತಿಯಲ್ಲಿ ಶೇ.70ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನುಳಿದವರಿಗೆ ಲಸಿಕೆ ಬಂದ ಬಳಿಕ ನೀಡಲಾಗುವುದು. ಮುಂದಿನ ಒಂದು ತಿಂಗಳ ಒಳಗೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
Also read : ಮಂಗನಕಾಯಿಲೆ ಉಲ್ಬಣ ಆತಂಕದ ನಡುವೆ ವ್ಯಾಕ್ಸಿನ್ ಮರೆತು ಕುಳಿತ ಸರ್ಕಾರ!
ಬೆಂಗಳೂರಿನ ಐಎಎಚ್&ವಿಬಿ ನಲ್ಲಿ ತಯಾರಿಸಲಾಗುವ ಲಸಿಕೆಯನ್ನು ಸದ್ಯ ಶಿವಮೊಗ್ಗದ ವಿಡಿಎಲ್ ಲ್ಯಾಬ್ ನಲ್ಲಿಯೇ ಪರೀಕ್ಷೆಗೊಳಪಡಿಸಿ ಲಸಿಕೆ ನೀಡಿಕೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಸಿದ್ಧವಾಗಿರುವ ಲಸಿಕೆ ಇದ್ದರೂ ತಾಂತ್ರಿಕ ಸಮಸ್ಯೆಯ ಕಾರಣದಿಂದ ಪರೀಕ್ಷೆ ಮಾಡಲಾಗಿಲ್ಲ. ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ಕೂಡಲೇ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು. ಅಲ್ಲಿಯವರೆಗೆ ಜನರು ಸಹಕರಿಸಬೇಕು ಎಂದೂ ಅವರು ಹೇಳಿದ್ದಾರೆ.

ಆದರೆ, ಕಳೆದ ಸೆಪ್ಟೆಂಬರ್ ವೇಳೆಗೆ ವಾರ್ಷಿಕ ಕೆಎಫ್ ಡಿ ಲಸಿಕೆ ನೀಡಿಕೆ ಆರಂಭಕ್ಕೆ ಮುನ್ನವೇ ವರ್ಷದ ಬೇಡಿಕೆ ಎಷ್ಟು ಎಂಬ ಅಂದಾಜು ಇರುವಾಗ ಮತ್ತು ಆ ಕುರಿತು ಬೇಡಿಕೆ ಸಲ್ಲಿಸಿರುವಾಗ ದಿಢೀರನೇ ಲಸಿಕೆ ಅಭಿಯಾನದ ಮಧ್ಯದಲ್ಲಿಯೇ ಏಕೆ ಜನವರಿ 31ರಂದು ಇರುವ ಲಸಿಕೆ ವಾಯಿದೆ ಮೀರುತ್ತಲೇ ಲಸಿಕೆ ಅಲಭ್ಯವಾಯಿತು? ಯಾಕೆ ಲಸಿಕೆ ಪರೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂಬ ವಿವರವನ್ನು ಅವರು ನೀಡಲಿಲ್ಲ. ಸಮಸ್ಯೆಯಾಗಿದೆ, ಸರಿಪಡಿಸುತ್ತೇವೆ. ಜನತೆ ಆತಂಕಗೊಳ್ಳುವುದು ಬೇಡ ಎಂಬುದು ಅವರ ಮಾತಷ್ಟೇ.
ಆದರೆ, ವಾಸ್ತವವಾಗಿ ಲಸಿಕೆಯ ಪ್ರಾಮಾಣಿಕರಿಸುವ ವಿಧಾನದ ಬಗ್ಗೆಯೇ ಈ ಹಿಂದೆ ಪುಣೆಯ ಎನ್ ಐವಿ(ನ್ಯಾಷನಲ್ ವೈರಾಲಜಿ ಇನ್ ಸ್ಡಿಟ್ಯೂಟ್) ಎಚ್ಚರಿಕೆ ನೀಡಿತ್ತು. ಲಸಿಕೆಯ ಉತ್ಪಾದನೆ ಮತ್ತು ಪರೀಕ್ಷೆ ವಿಧಾನಗಳಲ್ಲಿ ಲೋಪವಿರುವ ಬಗ್ಗೆ ಮತ್ತು ಲಸಿಕೆ ತಯಾರಿಕೆಗೆ ಬಳಸಲಾಗುತ್ತಿರುವ ವೈರಾಣು ಸ್ಟ್ರೈನ್ ಹಳೆಯದಾಗಿರುವ ಬಗ್ಗೆಯೂ ಎಚ್ಚರಿಕೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿಯೇ ಪ್ರತ್ಯೇಕ ಬಿಎಸ್ ಎಲ್ -3 ಲ್ಯಾಬ್ನಲ್ಲಿ ಮಾನದಂಡಗಳ ಪ್ರಕಾರ(ಪ್ರೋಟೋಕಾಲ್)ವೇ ಲಸಿಕೆ ಉತ್ಪಾದನೆಯಾಗಬೇಕು ಎಂದು ಸೂಚಿಸಲಾಗಿತ್ತು. ಆ ಹಿನ್ನೆಲೆಯಲ್ಲಿಯೇ ಮೂರು ವರ್ಷಗಳ ಹಿಂದೆಯೇ ಮಾನವ ಬಳಕೆಯ ಲಸಿಕೆ ತಯಾರಿಕೆಗೆ ಬೇಕಾದ ಅತ್ಯಾಧುನಿಕ ಲ್ಯಾಬ್ ಮಂಜೂರಾತಿ ನೀಡಲಾಗಿತ್ತು. ಆದರೆ ಮೂರು ವರ್ಷ ಕಳೆದರೂ ಆ ಲ್ಯಾಬ್ ನಿರ್ಮಾಣ ಇನ್ನೂ ಯೋಜನಾ ಹಂತದಿಂದ ಮುಂದೆ ಬಂದೇ ಇಲ್ಲ!
ಆದರೆ, ಈಗಲೂ ಪಶುಗಳ ರೋಗ ಪರೀಕ್ಷೆ ಮತ್ತು ಔಷಧಿ ಉತ್ಪಾದನೆ ಉದ್ದೇಶದ ಬೆಂಗಳೂರಿನ ಐಎಎಚ್&ವಿಬಿ(ಇನ್ ಸ್ಟಿಟ್ಯೂಟ್ ಆಫ್ ಅನಿಮಲ್ ಹಸ್ಬೆಂಡ್ರಿ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್)ನಲ್ಲಿ ಲಸಿಕೆ ತಯಾರಿಸಲಾಗುತ್ತಿದೆ ಮತ್ತು ಪ್ರೋಟೋಕಾಲ್ ಪ್ರಕಾರ ಸೌಲಭ್ಯ ಮತ್ತು ಸಿಬ್ಬಂದಿ ವ್ಯವಸ್ಥೆಯೇ ಇಲ್ಲದ ಶಿವಮೊಗ್ಗದ ವಿಡಿಎಲ್ ಲ್ಯಾಬ್ ನಲ್ಲಿ ಲಸಿಕೆಯ ಪರೀಕ್ಷೆ ನಡೆಸಲಾಗುತ್ತಿದೆ. ಲಸಿಕೆ ತಯಾರಿಕೆ ಮತ್ತು ಪರೀಕ್ಷೆಯ ಹಂತದಲ್ಲಿಯೇ ನಿಯಮಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಎನ್ ಐವಿ ಎಚ್ಚರಿಕೆಯ ಹಿನ್ನೆಲೆಯಲ್ಲಿಯೇ ಇದೀಗ ಲಸಿಕೆಯ ಬಿಕ್ಕಟ್ಟು ತಲೆದೋರಿದೆ ಎನ್ನಲಾಗುತ್ತಿದೆ.
ಅಂದರೆ, ಲಸಿಕೆ ತಯಾರಿಕೆ ಮತ್ತು ಪರೀಕ್ಷೆ ಹಂತದಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳುವ ವಿಷಯದಲ್ಲಾಗಲೀ, ಮಂಜೂರಾಗಿರುವ ಬಿಎಸ್ ಎಲ್ -3 ಹಂತದ ಅತ್ಯಾಧುನಿಕ ಲ್ಯಾಬ್ ನಿರ್ಮಾಣದ ವಿಷಯದಲ್ಲಾಗಲೀ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆ ತೋರಬೇಕಾದ ಕಾಳಜಿ ತೋರದೆ ನಿರ್ಲಕ್ಷ್ಯ ವಹಿಸಿದ್ದೇ ಈಗಿನ ಬಿಕ್ಕಟ್ಟಿಗೆ ಕಾರಣ. ಅಷ್ಟೇ ಅಲ್ಲ, ಮುಂದೆಯೂ ಕೂಡ ಅಧಿಕಾರಶಾಹಿಯ ಇಂತಹ ನಿರ್ಲಕ್ಷ್ಯಕ್ಕೆ ಮಲೆನಾಡಿಗರು ಬೆಲೆ ತೆರಬೇಕಾಗಲಿದೆ.
ಆದರೆ, ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಕೆಎಫ್ ಡಿ ಜನಜಾಗೃತಿ ಒಕ್ಕೂಟದ ಕೆ ಪಿ ಶ್ರೀಪಾಲ್, ‘”ಆರೋಗ್ಯ ಇಲಾಖೆಯ ಅಧಿಕಾರಿಗಳ ಇಂತಹ ಹೊಣೆಗೇಡಿತನಕ್ಕಾಗಿ ಮಲೆನಾಡಿನ ಅಮಾಯಕ ಜನರ ಜೀವ ತೆರಬೇಕೆ’ ಎಂದು ಪ್ರಶ್ನಿಸುತ್ತಾರೆ. “ಲಸಿಕೆ ಸಮಸ್ಯೆಯ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು. ಯಾವ ಲೋಪದಿಂದಾಗಿ ಈ ಸಮಸ್ಯೆ ನಿರ್ಮಾಣವಾಗಿದೆ. ಒಂದು ಕಡೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಆಸ್ಪತ್ರೆಗಳಲ್ಲಿ ಎಲ್ಲಿಯೂ ಒಂದೇ ಒಂದು ಡೋಸ್ ಕೂಡ ಇಲ್ಲ. ಇದು ಅನಾಹುತಕಾರಿ ಸಂಗತಿ. ಆದ್ದರಿಂದ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಈ ನಡುವೆ ಶುಕ್ರವಾರ ಸಂಜೆ ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಂದು ಕೆಎಫ್ ಡಿ ಪ್ರಕರಣ ದೃಢಪಟ್ಟಿದ್ದು, ಮಲೆನಾಡಿನಲ್ಲಿ ಆತಂಕ ಹೆಚ್ಚಾಗಿದೆ. ಆದರೆ, ಆರೋಗ್ಯ ಇಲಾಖೆಯ ಮುಖ್ಯಸ್ಥರು ಮಾತ್ರ ಮಾಧ್ಯಮಗಳಿಂದ ಪಲಾಯನವಾದದ ಮೊರೆಹೋಗಿದ್ದಾರೆ.