ಮಂಡ್ಯದಲ್ಲಿ ಓಂ ಶಕ್ತಿಗೆ ತೆರಳಿದ್ದ 30 ಕ್ಕೂ ಅಧಿಕ ಭಕ್ತರಿಗೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ತಮಿಳುನಾಡಿನ ಓಂ ಶಕ್ತಿ ದೇಗುಲಕ್ಕೆ ತೆರಳಿದ್ದ ಭಕ್ತರು ಶಿವಮೊಗ್ಗಕ್ಕೆ ಇಂದು ವಾಪಸ್ಸಾಗಿದ್ದು, ಕೋವಿಡ್ ಭೀತಿ ಎದುರಾಗಿದೆ.
ಶಿವಮೊಗ್ಗದಿಂದ ಒಟ್ಟು 82 ಬಸ್ಸಿನಲ್ಲಿ 4 ಸಾವಿರಕ್ಕೂ ಅಧಿಕ ಭಕ್ತರು ಓಂ ಶಕ್ತಿಗೆ ತೆರಳಿದ್ದರು. ಡಿಸೆಂಬರ್ 31 ರಂದು ತೆರಳಿದ್ದ ಭಕ್ತರು ಇಂದು ವಾಪಸ್ಸಾಗಿದ್ದಾರೆ. ಓಂ ಶಕ್ತಿಯಿಂದ ವಾಪಸ್ಸಾದ ಭಕ್ತರಿಗೆ ಜಿಲ್ಲಾಡಳಿತವು ಕೋವಿಡ್ ತಪಾಸಣೆಗೆ ಒಳಪಡಿಸಿದೆ.
ನಗರದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಕೋವಿಡ್ ತಪಾಸಣೆ ನಡೆಸಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಸ್ಕ್ರೀನಿಂಗ್ ನಡೆಸಿ, ರ್ಯಾಪಿಡ್ ಟೆಸ್ಟ್ ನಡೆಸಲಾಗುತ್ತಿದೆ. ಇಲ್ಲಿ ಪಾಸಿಟಿವ್ ಪತ್ತೆಯಾದರೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಡಳಿತ ಮುಂದಾಗಿದೆ. ನೆಗೆಟಿವ್ ಬಂದವರಿಗೆ ಹೋಂ ಕ್ವಾರಂಟೈನ್ ಗೆ ಒಳಪಡಲು ಸೂಚಿಸಲಾಗಿದೆ.