ಆಸಿಡ್ ದಾಳಿಗೊಳಗಾದ ಎಲ್ಲ ಹೆಣ್ಣು ಮಕ್ಕಳಿಗೆ ನಿವೇಶನ ಅಥವಾ ಮನೆ ನೀಡಲು ಆದೇಶವನ್ನು ಹೊರಡಿಸಲಾಗುವುದು ಹಾಗೂ ಅವರಿಗೆ ಸ್ವಯಂ ಉದ್ಯೋಗ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಕಂದಾಯ ಇಲಾಖೆಯ ಸಾಮಾಜಿಕ ಭದತ್ರೆ ಮತ್ತು ಪಿಂಚಣೆಗಳ ನಿರ್ದೇಶನಾಲಯದ ವತಿಯಿಂದ ವಿಧಾನಸೌಧದಲ್ಲಿ ಶುಕ್ರವಾರ ನಡೆದ ‘ಹಲೋ ಕಂದಾಯ ಸಚಿವರೇ – 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸಹಾಯವಾಣಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ಆಸಿಡ್ ದಾಳಿಗೆ ಒಳಗಾದವರು ಬಹಳಷ್ಟು ನೋವನ್ನು ಉಂಡಿರುತ್ತಾರೆ . ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ಅವರ ನೆರವಿಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಅವರ ಮಾಸಾಶನವನ್ನು 3000ದಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅದರ ಜೊತೆಗೆ ಈಗ ಅವರಿಗೆ ಬದುಕು ಸಾಗಿಸಲು ಮನೆ ಹಾಗೂ ಸ್ವಯಂ ಉದ್ಯೋಗಕ್ಕಾಗಿ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.