ಬೆಂಗಳೂರು : ರಾಜ್ಯದ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಇಂದು ರಾಜ್ಯ ಸರ್ಕಾರ ಚಾಲನೆ ನೀಡಿದೆ. ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಆವರಣದಲ್ಲಿ ಶಕ್ತಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ನೀಡುವ ಈ ಯೋಜನೆಗೆ ಶಕ್ತಿ ಯೋಜನೆ ಎಂದು ಹೆಸರಿಟ್ಟಿದ್ದೇಕೆ..? ಎಂಬ ಕುತೂಹಲ ಮೂಡುವುದು ಸಹಜ. ಈ ಕುತೂಹಲಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಮಹಿಳಾ ಸಬಲೀಕರಣಕ್ಕೆಂದೇ ಈ ಶಕ್ತಿ ಯೋಜನೆ ಜಾರಿಯಾಗಿದೆ. ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬಬೇಕು, ಅವರ ಸಬಲೀಕರಣ ಆಗಬೇಕು ಎಂಬ ದೃಷ್ಟಿಯಿಂದ ಈ ಯೋಜನೆಗೆ ಶಕ್ತಿ ಯೋಜನೆ ಎಂದು ಹೆಸರಿಟ್ಟಿದ್ದೇವೆ. ಪುರುಷರು ಹಾಗೂ ಮಹಿಳೆಯರು ಸಮನಾಗಿ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಮಹಿಳೆಯರಿಗೆ ಇನ್ನಷ್ಟು ಚೈತನ್ಯ ನೀಡಬೇಕು ಎಂಬ ಕಾರಣದಲ್ಲಿ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಮಹಿಳಾ ಸಬಲೀಕರಣ ಮಾಡುತ್ತಿದ್ದೇವೆ ಎಂದು ಹೇಳಿದ್ರು.