ಕಲಬುರಗಿ : ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಜನತೆಗಾಗಿ ಅನುಷ್ಠಾನಕ್ಕೆ ತರುತ್ತಿರುವುದು ತಿಳಿದೇ ಇದೆ. ಕೆಲವು ದಿನಗಳ ಹಿಂದಷ್ಟೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಭ್ರಷ್ಟರಿಗೆ ಶಿಕ್ಷೆ ಕೊಡಿಸುವುದಾಗಿ ಆರನೇ ಗ್ಯಾರಂಟಿ ನೀಡಿದ್ದರು. ಇದೀಗ ರಾಜ್ಯದ ಜನತೆಗೆ 7ನೇ ಗ್ಯಾರಂಟಿ ಕೊಡೋದಾಗಿ ಘೋಷಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಕೂಡಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ತನಿಖೆ ನಡೆಯುತ್ತೆ, ಇದು ನಮ್ಮ ಆರನೇ ಗ್ಯಾರಂಟಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
ತಮ್ಮ ವಿದ್ಯಾರ್ಹತೆಯನ್ನು ಪ್ರಶ್ನಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ನಿಮ್ಮ ಸುಪ್ರೀಂ ಲೀಡರ್ ಮೋದಿ ವಿದ್ಯಾರ್ಹತೆ ಏನು ಅನ್ನೋದನ್ನು ನೋಡಿಕೊಳ್ಳಿ ಎಂದು ಹೇಳಿದ್ದಾರೆ. ನನ್ನ ವಿದ್ಯಾರ್ಹತೆ ಬಗ್ಗೆ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದೇನೆ. ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಡುವ ಕೆಲಸ ನಡೆದಿದೆ. ಸುಪ್ರೀಂ ಕೋರ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಕೊಡುವ ಬಗ್ಗೆ ಒಂದು ಯೂನಿಟ್ ಮಾಡಬೇಕು ಎಂದು ಹೇಳಿದೆ. ಸ್ಪಲ್ಪ ಸಮಯ ಕೊಡಿ, ಅಮೇಲೆ 6ನೇ ಗ್ಯಾರಂಟಿ ಜೊತೆಗೆ 7ನೇ ಗ್ಯಾರಂಟಿಯನ್ನು ಸಹ ನಾವು ಕೊಡುತ್ತೇವೆ ಎಂದು ಹೇಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಸುದ್ದಿ ಹಬ್ಬಿಸುವವರಿಗೆ ಟಾಂಗ್ ನೀಡಿದ್ದಾರೆ.