ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಭಾರತ ಟೆಸ್ಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರೊಂದಿಗೆ ಫೋಟೋ ತೆಗೆಯಲು ಮೈದಾನಕ್ಕೆ ಪ್ರವೇಶಿಸಿದ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರ ವಿರುದ್ಧ ಬೆಂಗಳೂರು ನಗರ ಪೊಲೀಸರು ಕ್ರಿಮಿನಲ್ ಅತಿಕ್ರಮಣ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವೆ ಭಾನುವಾರ ಸಂಜೆ ಪಿಂಕ್ ಬಾಲ್ ಕ್ರಿಕೆಟ್ ಟೆಸ್ಟ್ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಹಗಲು-ರಾತ್ರಿ ಟೆಸ್ಟ್ನಿಂದಾಗಿ ಭಾನುವಾರ ರಾತ್ರಿ 7. 30 ರ ಸುಮಾರಿನಲ್ಲಿ ಕ್ರಿಕೆಟರ್ ಗಳಿಗೆ ವಿಶ್ರಾಂತಿ ನೀಡಲಾಗಿತ್ತು. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತಿದ್ದ ವೇಳೆ ನಾಲ್ವರು ಯುವಕರು ಆಟದ ಮೈದಾನಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದಿದ್ದಾರೆ. ಈ ವೇಳೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಕೋವಿಡ್ -19 ನಿಮಯಮಾನುಸಾರು ಆಟವಾಡುತ್ತಿರುವ ಆಟಗಾರರು, ಯುವಕರು ಅವರ ಕಡೆ ಧಾವಿಸಿದಾಗ ದಿಗ್ಭ್ರಮೆಗೊಂಡರು. ನಾಲ್ವರನ್ನು ಬಂಧಿಸಿ ಸ್ಟೇಡಿಯಂನಿಂದ ಹೊರ ಹಾಕಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ), 269 (ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಸಾಧ್ಯತೆ) ಮತ್ತು 271 (ಕ್ವಾರಂಟೈನ್ ನಿಯಮಕ್ಕೆ ಉಲ್ಲಂಘನೆ) ಮತ್ತು ಸೆಕ್ಷನ್ 5(1) ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.