ಕಾಂಗ್ರೆಸ್‌ನಲ್ಲಿ ಸ್ಪೀಕರ್ ಹುದ್ದೆಯನ್ನು ಕೊಡುವುದಕ್ಕೆ ಸಾಕಷ್ಟು ಹರಸಾಹಸ ಮಾಡಲಾಯ್ತು. ಪ್ರಮುಖ ಹಿರಿಯ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಕೂಡ ಪರಿ ಪರಿಯಾಗಿ ಬೇಡಿಕೊಳ್ಳುವ ಸ್ಥಿತಿಗೆ ಬಂದಿತ್ತು. ಯಾರನ್ನೇ ಕೇಳದರೂ ಮಂತ್ರಿ ಸ್ಥಾನವೇ ಬೇಕು. ನಾನು ಸ್ಪೀಕರ್ ಆಗಲಾರೆ ಎಂದು ಪಟ್ಟು ಹಿಡಿದಿದ್ದರು. ಅದೃಷ್ಟವಶಾತ್ ಯುಟಿ ಖಾದರ್ ಸ್ಪೀಕರ್ ಸ್ಥಾನವನ್ನು ಒಪ್ಪಿಕೊಳ್ಳುವ ಮೂಲಕ ಶಾಸಕಾಂಗ ಅತ್ಯುನ್ನತ ಸ್ಥಾನವಾದ ವಿಧಾನಸಭಾಧ್ಯಕ್ಷರ ಅಲಂಕರಿಸಿದ್ದಾರೆ. ವಿಶೇಷ ಅಂದರೆ ಯಾರೆಲ್ಲಾ ಸ್ಪೀಕರ್ ಸ್ಥಾನ ಒಲಿದು ಬಂದಿದ್ದಾಗ ಬೇಡ ಎಂದಿದ್ದರು, ಅದರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.
ಶಿರಾ ಶಾಸಕ ಟಿ.ಬಿ ಜಯಚಂದ್ರಗೆ ಸಚಿವ ಸ್ಥಾನ ಮಿಸ್
ತುಮಕೂರು ಜಿಲ್ಲೆ ಶಿರಾ ಶಾಸಕ ಟಿ.ಬಿ ಜಯಚಂದ್ರ ವಿಧಾನಸಭೆಯಲ್ಲಿಯೇ ಅತ್ಯಂತ ಹಿರಿಯ (ಆಯ್ಕೆ ಆಧಾರದಲ್ಲಿ) ಶಾಸಕ. ಜಯಚಂದ್ರ ಅವರನ್ನು ಸ್ಪೀಕರ್ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿತ್ತು. ಟಿ.ಬಿ ಜಯಚಂದ್ರ ಜೊತೆಗೆ ಹಲವು ಸುತ್ತಿನ ಮಾತುಕತೆಯನ್ನೂ ಮಾಡಿತ್ತು. ಕೆ.ಸಿ ವೇಣುಗೋಪಾಲ್, ಸುರ್ಜೇವಾಲ, ಖರ್ಗೆ, ಸಿಎಂ ಸಿದ್ದರಾಮಯ್ಯ ಕೂಡ ಮನವಿ ಮಾಡಿದ್ದರು. ಯಾರ ಮನವಿಗೂ ಒಪ್ಪದ ಟಿ.ಬಿ ಜಯಚಂದ್ರ, ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಶಿರಾಗೆ ತೆರಳಿದ್ದರು. ಟಿ.ಬಿ ಜಯಚಂದ್ರ ಅವರ ಅಂತಿಮ ನಿರ್ಧಾರದ ಬಗ್ಗೆ ತಿಳಿದುಕೊಳ್ಳಲು ಎಲ್ಲಾ ಹಿರಿಯ ನಾಯಕರೂ ಸೇರಿದಂತೆ ಎಲ್ಲರೂ ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಗಿತ್ತು. ಅಂತಿಮವಾಗಿ ಸ್ಪೀಕರ್ ಸ್ಥಾನವೂ ಇಲ್ಲ, ಸಚಿವ ಸ್ಥಾನವೂ ಇಲ್ಲದಂತಾಯ್ತು.
ಆರ್.ವಿ ದೇಶಪಾಂಡೆ ಸಚಿವ ಸ್ಥಾನದ ಕನಸು ಕನಸು
ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರಾಗಿರುವ ಆರ್.ವಿ ದೇಶಪಾಂಡೆ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದರು. ಕೊನೆ ಚುನಾವಣೆಯಲ್ಲಿ ಗೆದ್ದು ಮಂತ್ರಿ ಆಗಬೇಕು ಎಂದು ಆಸೆ ಇಟ್ಟುಕೊಂಡಿದ್ದರು. ಆದರೆ ಟಿ.ಬಿ ಜಯಚಂದ್ರ ವಿಧಾನಸಭಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳದಿದ್ದಾಗ ಹೈಕಮಾಂಡ್ ಕಣ್ಣು ಆರ್.ವಿ ದೇಶಪಾಂಡೆ ಕಡೆಗೆ ಹೊರಳಿತ್ತು. ಹೈಕಮಾಂಡ್ ಹಿರಿತನದ ಆಧಾರದಲ್ಲಿ ಸ್ಪೀಕರ್ ಹುದ್ದೆ ನೀಡಲು ಬಯಸಿತ್ತು. ಆದರೆ ನಾನು ಮಂತ್ರಿಯೇ ಆಗಬೇಕೆಂದು ಎಂದು ಹಠ ಹಿಡಿದು ಸ್ಪೀಕರ್ ಹುದ್ದೆಯನ್ನು ಆರ್.ವಿ ದೇಶಪಾಂಡೆ ನಿರಾಕರಿದ್ರು. ಕೊನೆ ಘಳಿಗೆಯಲ್ಲಿ ಬ್ರಾಹ್ಮಣ ಕೋಟಾದಲ್ಲಿ ಪೈಪೋಟಿ ನಡೆಸಿದ ದಿನೇಶ್ ಗುಂಡೂರಾವ್ ಮಂತ್ರಿ ಆಗಿ ಆಯ್ಕೆ ಆದರು. ಆರ್.ವಿ ದೇಶಪಾಂಡೆ ಅವರಿಗೂ ಸ್ಪೀಕರ್ ಸ್ಥಾನವೂ ಇಲ್ಲ, ಸಚಿವ ಸ್ಥಾನವೂ ಇಲ್ಲ ಎನ್ನುವಂತಾಯ್ತು.
ಸಚಿವ ಸ್ಥಾನದ ಬದಲು ಒಲಿದ ಡೆಪ್ಯೂಟಿ ಸ್ಪೀಕರ್ ಪೋಸ್ಟ್
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಸಚಿವ ಸ್ಥಾನ ಪಡೆಯಲು ಸಾಕಷ್ಟು ಲಾಬಿ ಮಾಡಿದ್ದರು. ಸಿದ್ದರಾಮಯ್ಯ ಆಪ್ತರಾಗಿರುವ ಪುಟ್ಟರಂಗಶೆಟ್ಟಿ, ಉಪ್ಪಾರ ಸಮುದಾಯಕ್ಕೆ ಸೇರಿದ್ದು, ಬಿಜೆಪಿಯ ಬಲಾಢ್ಯ ನಾಯಕ ವಿ ಸೋಮಣ್ಣ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಆದರೆ ಸಚಿವ ಸ್ಥಾನ ಕೈತಪ್ಪಿದ್ದು, ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ಮಂತ್ರಿ ಸ್ಥಾನ ಸಿಗದೆ ಹೋದರೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಸಿಕ್ಕ ನೆಮ್ಮದಿ ಸಿಕ್ಕಂತಾಗಿದೆ. ನಾನು ಮಂತ್ರಿಯೇ ಆಗಬೇಕು ಎಂದು ಹಠ ಹಿಡಿದು ಕುಳಿತಿದ್ದ ಘಟಾನುಘಟಿ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್ ಚಳ್ಳೆಹಣ್ಣು ತಿನ್ನಿಸಿದೆ.
ಕೃಷ್ಣಮಣಿ