ನವದೆಹಲಿ: ದೇಶಾದ್ಯಂತ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಸಿಲಿಂಡರ್ ಬುಕ್ಕಿಂಗ್, ರೀಫಿಲ್ಲಿಂಗ್, ಹೊಸ ಕನೆಕ್ಷನ್ ಹಾಗೂ ಕನೆಕ್ಷನ್ ರದ್ದತಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ಸುಗಮಗೊಳಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ತೈಲ ಮಾರಾಟ ಕಂಪನಿಗಳಾದ ಇಂಡೇನ್, ಭಾರತ್ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಸಂಸ್ಥೆಗಳ ಸಹಯೋಗದಲ್ಲಿ ಈ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಗೃಹಬಳಕೆ ಹಾಗೂ ವಾಣಿಜ್ಯ ಬಳಕೆದಾರರಿಗೆ ಅನ್ವಯವಾಗಲಿದೆ.
ಸಿಲಿಂಡರ್ ಬುಕ್ಕಿಂಗ್‌ಗೆ ಹೊಸ ಸಮಯ ಮಿತಿ
ಹೊಸ ನಿಯಮದ ಪ್ರಕಾರ, ಒಂದು ಸಿಲಿಂಡರ್ ಬುಕ್ ಮಾಡಿದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ನಿಗದಿತ ಅವಧಿ ಕಡ್ಡಾಯವಾಗಿದೆ.
- ನಗರ ಪ್ರದೇಶದ ಗ್ರಾಹಕರು 25 ದಿನಗಳ ಬಳಿಕ ಮಾತ್ರ ಮತ್ತೊಂದು ಸಿಲಿಂಡರ್ ಬುಕ್ ಮಾಡಬಹುದು.
- ಗ್ರಾಮೀಣ ಪ್ರದೇಶದ ಗ್ರಾಹಕರು 45 ದಿನಗಳ ಬಳಿಕವೇ ಹೊಸ ಬುಕ್ಕಿಂಗ್ ಮಾಡಬಹುದು.
ಈ ಅವಧಿಗೂ ಮುನ್ನ ಬುಕ್ಕಿಂಗ್ ಮಾಡಲು ಪ್ರಯತ್ನಿಸಿದರೆ, ವ್ಯವಸ್ಥೆಯು ಸ್ವಯಂಚಾಲಿತವಾಗಿ ಅದನ್ನು ತಿರಸ್ಕರಿಸುತ್ತದೆ. ಈ ನಿಯಮ ಇಂಡೇನ್, ಭಾರತ್ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಸೇರಿದಂತೆ ಎಲ್ಲಾ ಪ್ರಮುಖ ಎಲ್‌ಪಿಜಿ ಕಂಪನಿಗಳ ಗ್ರಾಹಕರಿಗೆ ಅನ್ವಯಿಸುತ್ತದೆ.

PNG ಸಂಪರ್ಕ ಪಡೆದರೆ 30 ದಿನದಲ್ಲಿ LPG ಕನೆಕ್ಷನ್ ರದ್ದು
ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಲಭ್ಯವಿರುವ ಪ್ರದೇಶಗಳ ಗ್ರಾಹಕರಿಗೆ ಮತ್ತೊಂದು ಪ್ರಮುಖ ನಿಯಮ ಜಾರಿಯಾಗಿದೆ.
ಮನೆಗೆ PNG ಸಂಪರ್ಕ ಪಡೆದ 30 ದಿನಗಳೊಳಗೆ ಹಳೆಯ LPG ಕನೆಕ್ಷನ್ ಅನ್ನು ರದ್ದುಗೊಳಿಸಬೇಕು. ಒಂದು ವೇಳೆ ಭವಿಷ್ಯದಲ್ಲಿ ಮತ್ತೆ LPG ಸಂಪರ್ಕ ಬೇಕಾದರೆ, ಟ್ರಾನ್ಸ್‌ಫರ್ ವೋಚರ್ ಮೂಲಕ ಕನೆಕ್ಷನ್ ಮರುಪಡೆಯುವ ಅವಕಾಶವಿರುತ್ತದೆ.
ಹೊಸ LPG ಕನೆಕ್ಷನ್‌ಗೆ ಅಗತ್ಯ ದಾಖಲೆಗಳು
ಹೊಸದಾಗಿ ಎಲ್‌ಪಿಜಿ ಸಂಪರ್ಕ ಪಡೆಯಲು ಈ ದಾಖಲೆಗಳು ಕಡ್ಡಾಯ:
- ಭರ್ತಿ ಮಾಡಿದ KYC ಅರ್ಜಿ
- ಆಧಾರ್ ಕಾರ್ಡ್ / ಪಾಸ್‌ಪೋರ್ಟ್ / ಪಾನ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್
- ವಿಳಾಸದ ಪುರಾವೆ (ವಿದ್ಯುತ್, ನೀರು, ಟೆಲಿಫೋನ್ ಬಿಲ್, ರೇಷನ್ ಕಾರ್ಡ್, ಆಧಾರ್, ಬಾಡಿಗೆ ಒಪ್ಪಂದ ಅಥವಾ ಪಾಸ್‌ಪೋರ್ಟ್)
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಸಬ್ಸಿಡಿ ಪಡೆಯಲು ಬ್ಯಾಂಕ್ ಖಾತೆ ವಿವರ

LPG ಕನೆಕ್ಷನ್ ರದ್ದತಿ ಹೇಗೆ?
ಗ್ಯಾಸ್ ಸಂಪರ್ಕ ರದ್ದುಗೊಳಿಸಲು ಗ್ರಾಹಕರು ಸಂಬಂಧಿಸಿದ ಏಜೆನ್ಸಿಗೆ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು.
- LPG ಪಾಸ್‌ಬುಕ್ ಅಥವಾ ಸಬ್‌ಸ್ಕ್ರಿಪ್ಷನ್ ವೋಚರ್ (SV)
- ಗುರುತಿನ ಚೀಟಿ (ಆಧಾರ್, ಪಾನ್, ಮತದಾರರ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್)
- ಕನೆಕ್ಷನ್ ರದ್ದತಿ ಅರ್ಜಿ
- ಬಳಕೆಯಲ್ಲಿರುವ ಗ್ಯಾಸ್ ಸಿಲಿಂಡರ್, ರೆಗ್ಯುಲೇಟರ್ ಹಾಗೂ ಸಂಬಂಧಿತ ದಾಖಲೆಗಳನ್ನು ಏಜೆನ್ಸಿಗೆ ಹಿಂತಿರುಗಿಸಬೇಕು.
ಕೇಂದ್ರ ಸರ್ಕಾರದ ಈ ಹೊಸ ನಿಯಮಗಳು ಎಲ್‌ಪಿಜಿ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಜೊತೆಗೆ, ಸಿಲಿಂಡರ್ ದುರುಪಯೋಗ ತಡೆಯುವ ಮತ್ತು ಪಿಎನ್‌ಜಿ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿವೆ.






