ಸುಪ್ರಿಂಕೋರ್ಟ್ನ ಮಾಜಿ ಮುಖ್ಯನ್ಯಾಯಮೂರ್ತಿ ಹಾಗೂ ರಾಜ್ಯಸಭಾ ಸದಸ್ಯ ರಂಜನ್ ಗೊಗಾಯ್ ಅವರಿಗೆ ಕೇಂದ್ರ ಸರ್ಕಾರವು ಝಡ್ ಪ್ಲಸ್ (Z+) ಭದ್ರತೆ ನೀಡಿದೆ. ಹೆಸರು ಹೇಳಲು ಇಚ್ಚಿಸದ ಅಧಿಕಾರಿಗಳು ಪಿಟಿಐಗೆ ನೀಡಿದ ಮಾಹಿತಿಯ ಪ್ರಕಾರ, ಇನ್ನು ಮುಂದೆ ಸಿಆರ್ಪಿಎಫ್ ಕಮಾಂಡೊಗಳು ಗೊಗಾಯ್ ಅವರ ರಕ್ಷಣೆಗೆ ನಿಯೋಜಿತರಾಗಲಿದ್ದಾರೆ.
ರಂಜನ್ ಗೊಗಾಯ್ ಅವರುಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ 8-12 ಜನ ಸಿಆರ್ಪಿಎಫ್ ಕಮಾಂಡೊಗಳು ಅವರಿಗೆ ಭದ್ರತೆ ನೀಡಲಿದ್ದಾರೆ. ಇಂತಹುದೇ ಇನ್ನೊಂದು ತಂಡವು ಅವರ ಮನೆಯ ಭದ್ರತೆಗಾಗಿ ನಿಯೋಜಿಸಲ್ಪಡಲಿದೆ. ಪ್ರಸ್ತುತ ಗೊಗಾಯ್ ಅವರಿಗೆ ದೆಹಲಿ ಪೊಲೀಸರು ಭದ್ರತೆಯನ್ನು ನೀಡುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸದ್ಯಕ್ಕೆ ದೇಶದಲ್ಲಿ 62 ಜನರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗುತ್ತಿದೆ. ರಂಜನ್ ಗೊಗಾಯ್ ಅವರು 63ನೇಯ ವ್ಯಕ್ತಿಯಾಗಲಿದ್ದಾರೆ.
ನವೆಂಬರ್ 17, 2019ರಂದು ರಂಜನ್ ಗೊಗಾಯ್ ಅವರು ಸುಪ್ರಿಂಕೋರ್ಟ್ನ ಮುಖ್ಯ ನ್ಯಾಯಾಧೀಶ ಸ್ಥಾನದಿಂದ ನಿವೃತ್ತರಾಗಿದ್ದರು. ಇದಾಗಿ ಒಂದು ವರ್ಷದ ಒಳಗಾಗಿ ಅಂದರೆ, ಮಾರ್ಚ್ 2020ರಲ್ಲಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಲಾಗಿತ್ತು. ಮುಖ್ಯನ್ಯಾಯಾಧೀಶ ಸ್ಥಾನದಿಂದ ನಿವೃತ್ತರಾಗುವ ಕೆಲವೇ ದಿನಗಳಿಗೆ ಹಿಂದೆ ಅಯೋಧ್ಯೆಯ ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಧ್ವಂಸದ ತೀರ್ಪನ್ನು ಗೊಗಾಯ್ ಅವರು ನೀಡಿದ್ದರು.
ನಂತರ ಅವರು ರಾಜ್ಯ ಸಭಾ ಸ್ಥಾನವನ್ನು ಪಡೆದುಕೊಂಡಾಗ ಈ ತೀರ್ಪಿನ ಕುರಿತು ಸಾಕಷ್ಟು ಸಂದೇಹಗಳು ವ್ಯಕ್ತವಾಗಿದ್ದವು.
ಸೆಪ್ಟೆಂಬರ್ 2020ರಲ್ಲಿ ಕಂಗನಾ ರಾಣಾವತ್ ಅವರಿಗೆ Y+ಭದ್ರತೆಯನ್ನು ನೀಡಿದ ಕೇಂದ್ರ ಸರ್ಕಾರದ ಕ್ರಮ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರದಲ್ಲಿ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದವರಿಗೆ ಮಾತ್ರ ನೀಡಲ್ಪಡುವ ಭದ್ರತೆಯನ್ನು ಬಾಲಿವುಡ್ ನಟಿಗೆ ಏಕೆ ನೀಡಲಾಯಿತು ಎಂಬುದರ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆದಿದ್ದವು.