ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಲಿದ್ದಾರೆ.
ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಈ ಭೇಟಿ ನಡೆಯಲಿದ್ದು, ಈ ಬಗ್ಗೆ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ಅಮಿತ್ ಶಾ ಅವರ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್ ಇದೆ. ಲೋಕಸಭೆ ಚುನಾವಣೆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲಾಗುವುದು. ನಮ್ಮಲ್ಲಿರುವ ಮಾಹಿತಿಯನ್ನು ಅಮಿತ್ ಶಾ ಅವರೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಒಟ್ಟಾರೆಯಾಗಿ ರಾಜ್ಯದ 28 ಕ್ಷೇತ್ರಗಳನ್ನು ನಮ್ಮ ಮೈತ್ರಿಕೂಟ ಗೆಲ್ಲಬೇಕು. ಯಾವುದೇ ಕ್ಷೇತ್ರದಲ್ಲಿಯೂ ಸಮಸ್ಯೆ ಆಗಬಾರದು. ಹೊಂದಾಣಿಕೆಗೆ ಧಕ್ಕೆ ಆಗಬಾರದು, ಗುರಿ ತಲುಪಲು ಯಾವ ಲೋಪ ಆಗಬಾರದು ಎಂಬ ಉದ್ದೇಶ ನಮ್ಮದು. ಅದಕ್ಕೆ ಪೂರಕವಾಗಿ ಎಲ್ಲ ರೀತಿಯಲ್ಲಿ ಚರ್ಚೆ ಮಾಡ್ತೇವೆ. ನಂತರ ಸಂಜೆ ಚನ್ನಪಟ್ಟಣದಲ್ಲಿ ರೋಡ್ ಶೋದಲ್ಲಿ ಇಬ್ಬರೂ ಭಾಗವಹಿಸುತ್ತೇವೆ. ಇಡಿ ರಾಜ್ಯಕ್ಕೆ ಚನ್ನಪಟ್ಟಣದಿಂದಲೇ ಒಂದು ಸ್ಪಷ್ಟ ಸಂದೇಶ ಕೊಡುತ್ತೇವೆ ಎಂದು ಹೆಚ್.ಡಿಕೆ ತಿಳಿಸಿದರು.
ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಕನಕಪುರ, ರಾಮನಗರ, ಚನ್ನಪಟ್ಟಣ, ಕುಣಿಗಲ್ ನಲ್ಲಿ ಪ್ರವಾಸ ಮಾಡುವೆ. ತುಮಕೂರು, ಚಾಮರಾಜನಗರ, ಮೈಸೂರು ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 14 ಕಡೆ ಪ್ರಚಾರ ನಡೆಸುತ್ತೇನೆ. ಕರಾವಳಿ ಬಿಟ್ಟು ಎಲ್ಲ ಕಡೆ ಪ್ರಚಾರ ಮಾಡುತ್ತೇನೆ ಎಂದು ಅವರು ಹೇಳಿದರು.
ಸುಮಲತಾ ಬೆಂಬಲ ನೀಡುವ ಬಗ್ಗೆ ವಿಶ್ವಾಸ ಇದೀಯಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಸುಮಲತಾ ಅವರು ಒಂದು ಪದ ಹೇಳಿದ್ದಾರೆ. ಆರೋಗ್ಯಕರ ಚರ್ಚೆ ಆಗಿದೆ ಎಂದು ಅವರು ಹೇಳಿದ್ದಾರೆ. ಸೂಕ್ಷ್ಮವಾಗಿ ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ ನವರು ಭಯ ಬಿದ್ದು ಮಾತಾಡ್ತಾ ಇದ್ದಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು