ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಮೇಲೆ ಇಂದು ಬೆಳ್ಳಂಬೆಳಗ್ಗೆ ACB (Anti Corruption Beauro) ದಾಳಿ ಮಾಡಿದೆ. ಅಕ್ರಮ ಹಣ ಗಳಿಕೆ ಆರೋಪದ ಅಡಿಯಲ್ಲಿ ACB ದಾಳಿ ಮಾಡಿದೆ. ಶಾಸಕ ಜಮೀರ್ ಖಾನ್ ಗೆ ಸೇರಿದ ಒಟ್ಟು ಐದು ಕಡೆಗಳಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ವಸಂತ ನಗರದ ಬಾಂಬೂ ಬಜಾರ್ ನಲ್ಲಿರುವ ಬಂಗಲೆ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಬ್ಯುಸಿನೆಸ್ ಆಫೀಸ್, ಸಿಲ್ವರ್ ಓಕ್ ಅಪಾರ್ಟ್ಮೆಂಟ್ ಸೇರಿದಂತೆ ಐದು ಕಡೆ ದಾಳಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ACB ಶಾಸಕರೊಬ್ಬರ ಮೇಲೆ ದಾಳಿ ಮಾಡುತ್ತಿದೆ.
ಈ ಹಿಂದೆ ಹಲವು ಪ್ರಕರಣಗಳಲ್ಲಿ ಶಾಸಕರು ಕರೆಸಿ ಮಾಹಿತಿ ಪಡೆದುಕೊಳ್ಳಲಾಗಿದೆಯಾದರೂ, ಈ ವರೆಗೆ ನೇರವಾಗಿ ಶಾಸಕಾಂಗ ಸದಸ್ಯರ ಮೇಲೆ ACB ದಾಳಿ ಮಾಡಿರಲಿಲ್ಲ. ಇದೀಗ ACB ಅಸ್ತಿತ್ವಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಶಾಸಕರ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಸದ್ಯ ರಾಜಕೀಯ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ACB ದಾಳಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ACB ಕೆಲಸವೇನು..? ACB ಅಸ್ತಿತ್ವಕ್ಕೆ ಬಂದಿದ್ದು ಯಾವಾಗ..?
ಭ್ರಷ್ಟಾಚಾರ ನಿಗ್ರಹ ದಳ ಒಂದು ವಿಶೇಷ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹಿಸುವುದು, ಇತರ ಇಲಾಖೆಗಳ ವಿಜಿಲೆನ್ಸ್ ಅಧಿಕಾರಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆಯನ್ನು ಕೈಗೊಂಡು ಅಭಿಯೋಜನೆಗೆ ಒಳಪಡಿಸುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಮುಖ ಕೆಲಸವಾಗಿದೆ. ಎ.ಸಿ.ಬಿಯು ಭ್ರಷ್ಟಾಚಾರ ನಿಗ್ರಹ ಅಧಿನಿಯಮ 1988ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತದೆ. ಸಾರ್ವಜನಿಕರು, ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗಳಿಂದ ಸಾರ್ವಜನಿಕ ಸೇವಕರ ವಿರುದ್ಧ ಬಂದ ದೂರು ಅರ್ಜಿಗಳ ನಿಖರ ಮಾಹಿತಿ ಬಗ್ಗೆ ವಿಚಾರಣೆಯನ್ನೂ ಸಹ ನಿಗ್ರಹ ದಳವು ಮಾಡುತ್ತದೆ. 14.03.2016 ರಲ್ಲಿ ಕೆಲಸ ಶುರುಮಾಡಿದ್ದು, ಹಲವು ಪ್ರಕರಣಗಳನ್ನು ತನಿಖೆ ಮಾಡಿದೆ.