‘ಕೃಷ್ಣಮಣಿ’
ಭಾರತ ದೇಶದಲ್ಲಿ ಲೋಕಸಭಾ ಚುನಾವಣೆ ರಂಗು ಪಡೆದುಕೊಂಡಿದೆ. ದೇಶದಲ್ಲಿ ಯಾರ ನಾಯಕತ್ವದಲ್ಲಿ ಮುನ್ನಡೆಯಬೇಕು ಎನ್ನುವುದನ್ನು ನಿರ್ಧರಿಸಲು ಈ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನ ಮಂತ್ರಿ ಆಗುವ ಹಂಬಲದಲ್ಲಿದ್ದಾರೆ. ಅತ್ತ ಕಾಂಗ್ರೆಸ್ ನೇತೃತ್ವದ I.N.D.I.A ಒಕ್ಕೂಟ ಗೆಲುವು ಸಾಧಿಸಿದರೆ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಆಗಬಹುದು ಅನ್ನೋ ಲೆಕ್ಕಾಚಾರ ಕಾಂಗ್ರೆಸ್ ನಾಯಕರ ಮನಸ್ಸಲ್ಲಿದೆ. ಆದರೆ ಮತ್ತೆ ಮೋದಿ, ಮಗದೊಮ್ಮೆ ಮೋದಿ ಅನ್ನೋ ಘೋಷಣೆ ಜೊತೆಗೆ ಮೋದಿ ಮಾಡಿದ ಮಹಾನ್ ಕಾರ್ಯಗಳು ಏನು..? ಕಳೆದ 10 ವರ್ಷದಲ್ಲಿ ಮೋದಿ ಸಾಧಿಸಿರುವ ಅಭಿವೃದ್ಧಿ ತೋರಿಸಿ ಮತ ಕೇಳುವಂತೆ ಜನರೇ ಕೇಳುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಗುಣದ ಬಗ್ಗೆ ಹೇಳಿದ್ದಾರೆ.

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಸೋಮವಾರ ಚುನಾವಣಾ ಱಲಿ ಉದ್ದೇಶಿಸಿ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಹೀಗಳೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವಾಗಲೂ ತಮಗೆ ಅರಿವು ಇಲ್ಲದಂತೆ ಕಾಂಗ್ರೆಸ್ನ ಗುಣ ಎಂತಹದ್ದು ಎಂದು ದೇಶದ ಜನರ ಎದುರು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹಾಗಲಕಾಯಿಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ತುಪ್ಪದ ಜೊತೆಗೆ ಉರಿದರೂ ಅಥವಾ ಸಕ್ಕರೆ ಜೊತೆಗೆ ಬೆರೆಸಿದರೂ ಹಾಗಲಕಾಯಿ ರುಚಿ ಬದಲಾಗುವುದಿಲ್ಲ ಎಂದಿದ್ದಾರೆ. ಎಷ್ಟೊಂದು ಸುಂದರ ಮಾತುಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ವರ್ಣಿಸಿದ್ದಾರೆ ನರೇಂದ್ರ ಮೋದಿ..!?
ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತವನ್ನು ಮತಗಳಿಗಾಗಿ ಬದಲಾಯಿಸಿಕೊಂಡಿಲ್ಲ. ಹಿಂದುಳಿದ, ಅಲ್ಪಸಂಖ್ಯಾತ, ಬಡವರ, ಕಾರ್ಮಿಕರ, ರೈತರ ಪರವಾಗಿ ಎಂದೆಂದಿಗೂ ಇರುವ ರಾಜಕೀಯ ಪಕ್ಷ ಎನ್ನುವುದನ್ನು ಸ್ವತಃ ಪ್ರಧಾನ ಮಂತ್ರಿಯೇ ದೇಶದ ಜನರ ಮುಂದಿಟ್ಟಿದ್ದಾರೆ. ಇನ್ನು ಹಾಗಲಕಾಯಿ ಕಹಿಯೇ ಇರಬಹುದು. ಆದರೆ ಅದರ ಸತ್ವ ದೇಹಕ್ಕೆ ಹಾನಿಕರ ಅಲ್ಲ ಎನ್ನುವುದನ್ನು ದೇಶದ ಜನರು ಅಷ್ಟೇ ಅಲ್ಲ, ಇಡೀ ವಿಶ್ವದ ಜನರೇ ಒಪ್ಪಿಕೊಳ್ಳಬೇಕು. ಯಾಕಂದರೆ ಹಾಗಲಕಾಯಿಯಲ್ಲಿ ಇರುವ ಅತ್ಯುತ್ತಮ ಗುಣಗಳು ದೇಹಕ್ಕೆ ಅತ್ಯವಶ್ಯಕ. ಅದೇ ರೀತಿ ಮೋದಿಯವರ ಮಾತನ್ನು ಕೇಳಿದರೆ ದೇಹಕ್ಕೆ ಹಾಗಲಕಾಯಿ.. ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಎನ್ನಬಹುದು.
ಪ್ರಧಾನಿ ಮೋದಿ ಹಾಗಲಕಾಯಿ ಕಹಿ ಎನ್ನುವುದನ್ನು ಮಾತ್ರ ಹೇಳಲು ಹೋಗಿದ್ದಾರೆ. ಆದರೆ ಹಾಗಲಕಾಯಿ ಕಹಿ ಗುಣವನ್ನು ಹೊಂದಿದ್ದರೂ ದೇಹಕ್ಕೆ ಒಳ್ಳೆಯದು ಎನ್ನುವುದನ್ನು ಮರೆತುಬಿಟ್ಟಿದ್ದಾರೆ. ಜೊತೆಗೆ ತಾನು ಅಂದರೆ ಬಿಜೆಪಿಯನ್ನು ತುಪ್ಪ ಅಥವಾ ಸಕ್ಕರೆಗೆ ಹೋಲಿಸಿದ್ದಾರೆ. ತುಪ್ಪವನ್ನು ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳಬಹುದು. ಆದರೆ ಸಕ್ಕರೆ ಸಿಹಿಗೆ ಬಿಜೆಪಿ ಹೋಲಿಕೆ ಆದರೆ ಅದು ಆರೋಗ್ಯಕ್ಕೆ ಮಾರಕ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಒಪ್ಪಿಕೊಂಡಂತೆ ಆಗಲಿದೆ. ಇನ್ನು ಸಕ್ಕರೆ ಮಾಡುವುದರಿಂದ ಕೆಲವು ರೈತರಿಗೆ ಅನುಕೂಲಕರ, ಉಳಿದವರಿಗೆ ಅನಾನುಕೂಲ. ಅದೇ ರೀತಿ ಬಿಜೆಪಿ ಕೂಡ ಕೆಲವರಿಗೆ ಮಾತ್ರ ಅನುಕೂಲಕಾರಿ. ಉಳಿದವರಿಗೆ..?
==============






