ನಾ ದಿವಾಕರ
2024ರ ಚುನಾವಣೆಗಳಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಹೊರಟಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತದಾರರನ್ನು ಆಕರ್ಷಿಸಲು ಅಗತ್ಯವಾದ ಧನಾತ್ಮಕ ವಿಷಯಗಳು ಇಲ್ಲದಿರುವುದೇ ಸಮಸ್ಯೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಬಡತನ, ಹಸಿವೆ, ನಿರುದ್ಯೋಗ, ಮಹಿಳಾ ದೌರ್ಜನ್ಯ, ಅತ್ಯಾಚಾರಗಳು, ಬೆಲೆ ಏರಿಕೆ, ಜಾತಿ ದೌರ್ಜನ್ಯ ಈ ಯಾವುದೇ ಜಟಿಲ ಸಮಸ್ಯೆಗಳನ್ನೂ ನಿವಾರಿಸಲು ವಿಫಲವಾಗಿರುವ ಬಿಜೆಪಿ ಆಳ್ವಿಕೆಗೆ, ಮತ್ತೊಂದು ಅವಧಿಗೆ ಅಧಿಕಾರ ನೀಡಿ ಎಂದು ಕೇಳಲು ಯಾವ ಸಕಾರಾತ್ಮಕ ಭೂಮಿಕೆಗಳೂ ಉಳಿದಿಲ್ಲ. ಭಾವನಾತ್ಮಕವಾಗಿ ಕಳೆದ ಎರಡು ಚುನಾವಣೆಗಳಲ್ಲಿ ಲಾಭದಾಯಕವಾಗಿದ್ದ ರಾಮಮಂದಿರ, ಆರ್ಟಿಕಲ್ 370 ಮೊದಲಾದ ವಿಚಾರಗಳು ತಮ್ಮ ಚುನಾವಣಾ ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಹಾಗಾಗಿ ಬಿಜೆಪಿ ನಾಯಕರು, ಪ್ರಧಾನಿ ನರೇಂದ್ರ ಮೋದಿಯವರನ್ನೂ ಸೇರಿದಂತೆ, ಜನರ ನಿತ್ಯ ಬದುಕಿಗೆ ಸಂಬಂಧಿಸುವ ಸೂಕ್ಷ್ಮ ವಿಚಾರಗಳನ್ನೇ ಪ್ರಚಾರದ ಸರಕುಗಳಂತೆ ಬಳಸಲಾರಂಭಿಸಿದ್ದಾರೆ.

ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಭಾಷಣವೊಂದರಲ್ಲಿ ಪ್ರಧಾನಿ ಮೋದಿ ಮಾಂಸಾಹಾರ ಮತ್ತು ಮೀನು ಸೇವನೆಯ ಬಗ್ಗೆ ಮಾಡಿರುವ ವ್ಯಾಖ್ಯಾನಗಳು ಇದನ್ನು ಸ್ಪಷ್ಟಪಡಿಸುತ್ತವೆ. ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವ ವಿರೋಧ ಪಕ್ಷದ ನಾಯಕರನ್ನು ಮೊಘಲ್ ಮನಸ್ಥಿತಿಯವರು ಎಂದು ಕರೆದಿರುವ ಪ್ರಧಾನಿ ಮೋದಿ, ಈ ನಾಯಕರು ಮಾಂಸಾಹಾರ ಸೇವಿಸಿರುವುದನ್ನು ವಿಡಿಯೋ ಮಾಡಿರುವುದು, ಮೊಘಲರ ಆಕ್ರಮಣಕಾರಿ ಮನಸ್ಥಿತಿಯನ್ನು ಹೋಲುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. “ಕಾನೂನು ಯಾರನ್ನೂ ಏನನ್ನಾದರೂ ತಿನ್ನುವುದರಿಂದ ತಡೆಯುವುದಿಲ್ಲ ಪ್ರತಿಯೊಬ್ಬರಿಗೂ ಸಸ್ಯಾಹಾರ ಅಥವಾ ಮಾಂಸಾಹಾರವನ್ನು ತಿನ್ನುವ ಸ್ವಾತಂತ್ರ್ಯವಿದೆ” ಎಂದು ಹೇಳುತ್ತಲೇ,
“ ಆದರೆ ಈ ಜನರ ಉದ್ದೇಶಗಳು ಬೇರೆಯೇ ಆಗಿವೆ. ಮೊಘಲರು ಆಕ್ರಮಣ ಮಾಡಿದಾಗ ಅವರು ಮಂದಿರಗಳು ಹಾಗೂ ಪೂಜಾ ಸ್ಥಳಗಳನ್ನು ನಾಶಪಡಿಸುವವರೆಗೆ ತೃಪ್ತರಾಗುವುದಿಲ್ಲ, ಅಲ್ಲಿ ಮೋಜು ಮಾಡುತ್ತಾರೆ, ಹಾಗೆಯೇ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸುವ ವಿಡಿಯೋ ತೋರಿಸುವ ಮೂಲಕ ವಿರೋಧ ಪಕ್ಷದ ನಾಯಕರು ಮೊಘಲ್ ಮನಸ್ಥಿತಿ ತೋರುತ್ತಿದ್ದಾರೆ, ದೇಶದ ಜನರನ್ನು ಅಪಹಾಸ್ಯ ಮಾಡುತ್ತಿದ್ದಾರೆ,,,, ” ಎಂದು ಹೇಳಿರುವುದು ವರದಿಯಾಗಿದೆ.

ಎಲ್ಲಿಯ ಶ್ರಾವಣ, ಯಾವ ಮಾಂಸಾಹಾರ, ಯಾವ ಕಾಲದ ಮೊಘಲರು ? ಸಾಮಾನ್ಯ ಜನತೆ ಹೀಗೆಲ್ಲಾ ಯೋಚಿಸುವುದಿಲ್ಲ. ಆದರೆ ಇದು ಸಾಧಾರಣ ಮತದಾರರಲ್ಲಿ ತಾತ್ವಿಕ ಗೊಂದಲಗಳನ್ನು ಹುಟ್ಟುಹಾಕುತ್ತದೆ. ರಾಜಕೀಯ ನಾಯಕರು ತಮ್ಮ ವೈಚಿತ್ರ್ಯಗಳೆಲ್ಲವನ್ನೂ ವಿಡಿಯೋ ಮೂಲಕ ಜನತೆಗೆ, ಮತದಾರರಿಗೆ ತಲುಪಿಸುವುದು ಭಾರತದ ಪ್ರಜಾಸತ್ತೆಗೆ ಅಂಟಿರುವ ಒಂದು ವ್ಯಾಧಿ. ಇದನ್ನು ಎಲ್ಲ ನಾಯಕರೂ ಅನುಸರಿಸುತ್ತಾರೆ. ಆದರೆ ನವರಾತ್ರಿಯ ವೇಳೆ ಮೀನು ತಿನ್ನುವುದು, ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡುವುದು ಭಾರತದ ಬಹುಸಂಖ್ಯಾತರಿಗೆ ಹೇಗೆ ಅಪಚಾರ ಮಾಡಿದಂತಾಗುತ್ತದೆ ? ಅಥವಾ ಕಟ್ಟಾ ಸಸ್ಯಾಹಾರಿಗಳಿಗೇ-ಸಾತ್ವಿಕರಿಗೇ ಆದರೂ ವಿಡಿಯೋದಲ್ಲಿ ಮಾಂಸಾಹಾರ ಸೇವನೆ ನೋಡಿದರೆ ಅಪಮಾನವಾಗುವುದೇ ? ಅಂದರೆ ನಾವು ಜಾತಿ ವ್ಯವಸ್ಥೆಯೊಳಗಿನ ಮಡಿವಂತಿಕೆಯನ್ನು ತಂತ್ರಜ್ಞಾನಾಧಾರಿತ ಸಂವಹನಕ್ಕೂ ಅನ್ವಯಿಸಿ ನೋಡುತ್ತಿದ್ದೇವೆಯೇ ?

ಭಾರತದ ಬಹುಸಾಂಸ್ಕೃತಿಕ ವೈವಿಧ್ಯತೆ ಇರುವುದೇ ಆಹಾರ ಪದ್ಧತಿಯಲ್ಲಿ. ದೇಶದ ಉದ್ದಗಲಕ್ಕೂ ಸಂಚರಿಸಿದರೆ, ಪ್ರತಿ 200 ಕಿಲೋಮೀಟರ್ ದಾಟಿದರೆ ಅಲ್ಲೊಂದು ಪ್ರತ್ಯೇಕ ಆಹಾರ ಪದ್ಧತಿ ಕಾಣುತ್ತದೆ. ಇದರಲ್ಲಿ ಸಸ್ಯಾಹಾರ-ಮಾಂಸಾಹಾರಕ್ಕಿಂತಲೂ ಹೆಚ್ಚಾಗಿ ಕಾಣುವುದು ಪ್ರಾದೇಶಿಕ ಪ್ರಾಕೃತಿಕ ಸಂಪನ್ಮೂಲಗಳ ಬಳಕೆ ಮತ್ತು ಅಲ್ಲಿನ ಜನಪದೀಯ-ಆಧುನಿಕ ಸಾಂಸ್ಕೃತಿಕ ನೆಲೆಗಳು. ಬಿಹಾರದ ರಾಜಕಾರಣಿಯೊಬ್ಬರು ನವರಾತ್ರಿಯಲ್ಲಿ ಮೀನು ತಿನ್ನುವುದನ್ನು ನೋಡಿದರೆ, ದಕ್ಷಿಣ ಭಾರತದ ಯಾವ ಸಾತ್ವಿಕರೂ ಕಂಗಾಲಾಗುವುದಿಲ್ಲ. ಏಕೆಂದರೆ ಕಾಶ್ಮೀರ, ಪಶ್ಚಿಮ ಬಂಗಾಲ, ದಕ್ಷಿಣ ಭಾರತದ ಕರಾವಳಿ ಪ್ರದೇಶದಲ್ಲಿ ಮೇಲ್ಜಾತಿಗಳಲ್ಲೂ ಮೀನು ಒಂದು Staple food ಆಗಿ ಚಾಲ್ತಿಯಲ್ಲಿದೆ.
ಧಾರ್ಮಿಕ ಅಲ್ಪಸಂಖ್ಯಾತರು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ದಲಿತರು, ಅಸ್ಪೃಶ್ಯರು ಈ ಎಲ್ಲ ಜನಸಮುದಾಯಗಳನ್ನೂ ಒಟ್ಟಾಗಿ ಸೇರಿಸಿದರೆ ದೇಶದ ಕನಿಷ್ಠ ಶೇ. 70ರಷ್ಟು ಜನಸಂಖ್ಯೆ ಸಂಪೂರ್ಣ ಮಾಂಸಾಹಾರಿಗಳಾಗಿದ್ದಾರೆ. ಪ್ರಧಾನಿ ಮೋದಿ ಅವರ ಹುಟ್ಟೂರು ಗುಜರಾತ್‌ನಲ್ಲೇ ಶೇ. 40ರಷ್ಟು ಜನರು ಮಾಂಸಾಹಾರ ಸೇವಿಸುವವರಿದ್ದಾರೆ. ಒಂದು ಅಂಕಿಅಂಶಗಳ ಪ್ರಕಾರ ರಾಜಸ್ಥಾನ, ಪಂಜಾಬ್, ಹರಿಯಾಣ ರಾಜ್ಯಗಳಿಗಿಂತಲೂ ಹೆಚ್ಚಿನ ಮಾಂಸಾಹಾರಿಗಳು ಗುಜರಾತ್‌ನಲ್ಲಿದ್ದಾರೆ. ಪ್ರತಿಯೊಂದು ರಾಜ್ಯದ, ಪ್ರದೇಶದ ಅಥವಾ ಪ್ರಾಂತ್ಯದ ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ಚಾಲಕಶಕ್ತಿಗಳು ವೈವಿಧ್ಯಮಯವಾಗಿದ್ದು ಇದು ಆಹಾರ ಪದ್ಧತಿಯನ್ನೂ ಪ್ರಭಾವಿಸುತ್ತದೆ. ಇದನ್ನು ಏಕಮುಖಿಯಾಗಿ ನೋಡುವುದು ಸಾಧ್ಯವೇ ಇಲ್ಲ. ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಲ, ಅಸ್ಸಾಂ, ಒಡಿಷಾ ರಾಜ್ಯಗಳ ಹಲವು ತಳಸಂಸ್ಕೃತಿಗಳಲ್ಲಿ, ಮೀನು-ಮಾಂಸವನ್ನು ದೇವತೆಗಳಿಗೆ ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವೂ ನಮ್ಮಲ್ಲಿದೆ.
ಹಾಗಾಗಿ ನವರಾತ್ರಿ ಅಥವಾ ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನು ವರ್ಜಿಸುವುದು ಒಂದು ನಾಗರಿಕ ಪದ್ಧತಿಯಾಗಿ, ಕೆಲವು ಸಮುದಾಯಗಳ ನಂಬಿಕೆಯಾಗಿ, ಆಚರಣೆಯಲ್ಲಿ ಬಂದಿದೆ. ಇದನ್ನು ಸಾರ್ವತ್ರೀಕರಿಸಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಮುದಾಯದೊಳಗಿನ ಎಲ್ಲರೂ ಇಂತಹ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದೂ ಇಲ್ಲ. ಭಾರತೀಯ ಸಮಾಜದಲ್ಲಿ ಆಹಾರ, ಸಾಮಾಜಿಕ ಸ್ಥಾನಮಾನ ಮತ್ತು ಜಾತಿ ಇವು ಸದಾ ಕಾಲವೂ ಶ್ರೇಣೀಕರಣಕ್ಕೊಳಗಾಗುತ್ತಲೇ ಮೇಲು ಕೀಳುಗಳನ್ನು ಸೃಷ್ಟಿಸುತ್ತಾ ಬಂದಿದೆ. ಆದರೆ ಜನಸಾಮಾನ್ಯರು ತಿನ್ನುವ ಆಹಾರ ಒಂದು ರಾಜಕೀಯ ವಸ್ತು ಆಗಿರಲಿಲ್ಲ. ಸಾಮಾನ್ಯ ದಿನಗಳಲ್ಲೇ ಆಗಲೀ, ಹಬ್ಬ ಹರಿದಿನಗಳಲ್ಲೇ ಆಗಲೀ ಕೆಲವು ವ್ಯಕ್ತಿಗಳ ಅಥವಾ ಒಂದು ಸಮಾಜದ ಆಹಾರ ಸೇವನೆ ಇಡೀ ದೇಶವನ್ನು ಸಾಮಾಜಿಕವಾಗಿ ಪ್ರಕ್ಷುಬ್ಧಗೊಳಿಸುವುದಿಲ್ಲ. ಈ ಸಹಿಷ್ಣುತೆಯನ್ನು ಬೆಳೆಸಿಕೊಂಡು ಬಂದಿರುವುದರಿಂದಲೇ ಭಾರತವು ತನ್ನ ಬಹುತ್ವ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡುಬಂದಿದೆ.
ನವರಾತ್ರಿಯಲ್ಲಿ ತೇಜಸ್ವಿ ಯಾದವ್ ಮೀನು ತಿನ್ನುವುದರಿಂದಾಗಲೀ, ಮತ್ತಾರೋ ರಾಜಕೀಯ ನಾಯಕರು ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿ, ವಿಡಿಯೋ ಮಾಡಿ ಪ್ರಸಾರ ಮಾಡುವುದರಿಂದಾಗಲೀ, ಭಾರತದ ಒಂದು ದೊಡ್ಡ ಜನಸಂಖ್ಯೆಯ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎನ್ನುವುದು ಒಪ್ಪುವಂತಹುದಲ್ಲ. ಭಾರತದ ಬಹುಸಂಖ್ಯೆಯ ಜನತೆ ಮಾಂಸಾಹಾರಿಗಳಾಗಿದ್ದರೂ, ತಳಮಟ್ಟದ ಸಮಾಜದಲ್ಲಿನ ನಿತ್ಯಬದುಕಿನಲ್ಲಿ ಸಸ್ಯಾಹಾರಿಗಳೊಡನೆ ಸೌಹಾರ್ದಯುತವಾಗಿ ಬದುಕು ಸವೆಸುತ್ತಿದ್ದಾರೆ. ಈ ಸಮನ್ವಯತೆಯನ್ನು ಭಂಗಗೊಳಿಸುವ ನಿಟ್ಟಿನಲ್ಲಿ ಆಹಾರ ರಾಜಕಾರಣವನ್ನು ಪ್ರಚೋದಿಸಲಾಗುತ್ತಿದೆ. ಗೋಮಾಂಸ ನಿಷೇಧ ಮತ್ತು ಗೋಹತ್ಯೆ ನಿಷೇಧ ರಾಜಕಾರಣವು ಈಗಾಗಲೇ ಸಮಾಜದಲ್ಲಿ ಸಾಕಷ್ಟು ಬಿರುಕುಗಳನ್ನು ಸೃಷ್ಟಿಸಿದೆ. ಮನುಷ್ಯರು ತಿನ್ನುವ ಆಹಾರ ನೆಲದಲ್ಲಿ ಹೂತು, ಮಣ್ಣಲ್ಲಿ ಬೆರೆತು, ಕಳೆದುಹೋಗುತ್ತದೆ. ಅದು ಸಮಾಜದ ಆಗುಹೋಗುಗಳನ್ನು ನಿರ್ದೇಶಿಸುವಂತಾಗಬಾರದು. ಪ್ರಜಾಸತ್ತಾತ್ಮಕ ಭಾರತಕ್ಕೆ ಬುನಾದಿಯಾಗಿರುವ ಆಹಾರ ವೈವಿಧ್ಯತೆಯನ್ನು, ಸಾಂಸ್ಕೃತಿಕ ಸಮನ್ವಯತೆಯನ್ನು, ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವುದು ಮತದಾರರ ಆಯ್ಕೆಯಾಗಬೇಕಿದೆ. 2024ರ ಚುನಾವಣೆಗಳು ಈ ದೃಷ್ಟಿಯಿಂದಲೇ ನಿರ್ಣಾಯಕವೂ ಆಗಿದೆ.