ಬೆಂಗಳೂರು, (ಅಕ್ಟೋಬರ್ 04): ಪರಿಸರ ಪ್ರೇಮಿ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (Salumarada Timmakka) ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಉಸಿರಾಟದ ಸಮಸ್ಯೆಯಾಗಿದ್ದರಿಂದ ಅವರನ್ನು ನಿನ್ನೆ(ಅ.03)) ಹಾಸನದಿಂದ ಕರೆದುಕೊಂಡು ಬಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಬಗ್ಗೆ ತಿಮ್ಮಕ್ಕ ದತ್ತು ಪುತ್ರ ಬಳ್ಳೂರು ಉಮೇಶ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಳ್ಳೂರು ಉಮೇಶ್, ಬೆಂಗಳೂರಿನಿಂದ ತೆರಳಿ ಹಾಸನ ಜಿಲ್ಲೆಯ ಬೇಲೂರಿನಲ್ಲಿ ವಾಸವಿದ್ದರು. ಬೇಲೂರು ಮಲೆನಾಡು ಪ್ರದೇಶ ಆಗಿರುವುದರಿಂದ ಶೀತ ಜಾಸ್ತಿಯಾಗಿದೆ. ಕಳೆದ ಮೂರು ದಿನಗಳಿಂದ ಸ್ವಲ್ಪ ಉಸಿರಾಟದ ಸಮಸ್ಯೆಯಾಗಿತ್ತು. ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕವೂ ಕಡಿಮೆಯಾಗಿರಲಿಲ್ಲ ನಿನ್ನೆ(ಅ.03) ಉಸಿರಾಟದ ಸಮಸ್ಯೆ ಹೆಚ್ಚಳ ಹಿನ್ನೆಲೆ ಬೆಂಗಳೂರಿಗೆ ಕರೆತಂದಿದ್ದೇವೆ. ಡಾ.ರವೀಂದ್ರ ಮೆಹ್ತಾ ತಂಡ ಸಾಲುಮರದ ತಿಮ್ಮಕ್ಕರಿಗೆ ಚಿಕಿತ್ಸೆ ನೀಡುತ್ತಿದ್ದು, ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದರು.