ಕೃಷ್ಣಾ ನದಿ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಜೀವನಾಡಿ ನಡಿಯಾಗಿದೆ. ಈ ಭಾಗದ ರೈತರಿಗೆ ವರದಾನಗಿರುವ ನದಿಗೆ ಆಲಮಟ್ಟಿ ಬಳಿ ಬೃಹತ್ ಜಲಾಶಯ ಕಟ್ಟಲಾಗಿದೆ. ಈ ಜಲಾಶಯ ಕಟ್ಟುಲು ನೂರಾರು ಜನ ತಮ್ಮ ಮನೆ, ಜಮೀನು ಸರ್ಕಾರಕ್ಕೆ ನೀಡಿದ್ದಾರೆ. ರೈತರಿಗೆ ನೀರಾವರಿಗಾಗಿ ಸಹಾಯವಾಗಲೇಂದು ಈ ಭಾಗದ ಹತ್ತಾರು ಹಳ್ಳಿಗಳಿ ಜನ ಭೂಮಿ ನೀಡಿದಕ್ಕೆ ಪರಿಹಾರ ನೀಡಿದೆ. ಜೊತೆಗೆ ಬೇರೆ ಕಡೆ ಜೀವನ ಕಟ್ಟಿಕೊಳ್ಳಲು ಪುನರ್ವಸತಿ ಕ್ರಮಗಳನ್ನು ಸಹ ಕೈಗೊಂಡಿದೆ. ಆದರೆ ಆ ಪುನರ್ವಸತಿ ಮೂಲ ಸಂತ್ರಸ್ತರಿಗೆ ದೊರಕದೆ ಅಕ್ರಮಗಳ ಮೂಲಕ ಬೇರೆಯವರು ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಕೆಲವು ಕಡೆ ಕಾಲುವೆ ಕಾಮಗಾರಿ ಕಳಪೆ ನಡೆದಿದೆ ಎಂಬ ಬಗ್ಗೆ ಆರೋಪಗ ಕೇಳಿ ಬಂದಿದ್ದವು. ಆದರೆ ಇದೀಗ ನಿವೇಶನ ಪಡೆಯಲು ಅಕ್ರಮ ಮಾಡಿರುವ ದೂರು ದಾಖಲಾಗಿದೆ. ಅದೂ ಕೂಡ ಬರೋಬ್ಬರಿ 1117 ಜನರು ಹಾಗೂ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿರೋದು ನೋಡಿದರೆ, ಪುನರ್ವಸತಿ ಸರಿಯಾಗಿ ಆಗಿಲ್ಲ ಅನ್ನೋ ಅನುಮಾನ ಕಾಡುತ್ತಿದೆ. ಇದಕ್ಕೆ ಉದಾಹರಣೆಗೆಯಾಗಿದೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು.
ವಿಜಯಪುರ ಜಿಲ್ಲೆಯ ನೂತನ ತಾಲೂಕು ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಮುಳುಗಡೆ ಸಂತ್ರಸ್ತರಿಗೆ ನಿವೇಶನಗಳ ಹಂಚಿಕೆ ವೇಳೆ ಆಲಮಟ್ಟಿ ಪುನರ್ವಸತಿ ಅಧಿಕಾರಿಗಳ ಕಚೇರಿಯಲ್ಲಿ 05-08-2011 ರಿಂದ 16-06-2020 ರವರೆಗಿನ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ವಿಭಾದ 6 ಅಧಿಕಾರಿಗಳು, ಇಬ್ಬರು ಏಜೆಂಟರು ಹಾಗೂ ತಪ್ಪು ಮಾಹಿತಿ ನೀಡಿ ಸಂತ್ರಸ್ತರ ಹೆಸರಿನಲ್ಲಿ ಅನಧೀಕೃತ ಮಾರ್ಗಗಳ ಮೂಲಕ ಅಕ್ರಮವಾಗಿ ನಿವೇಶನ ಹಾಗೂ ಸೌಲಭ್ಯಗಳನ್ನು ಪಡೆದುಕೊಂಡ 1117 ಜನರ ಮೇಲೆ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಹಾರ ಪುನರ್ವಸತಿ ಕೇಂದ್ರದ ನಿವೇಶನಗಳ ಹಂಚಿಕೆಯಲ್ಲಾದ ಅಕ್ರಮ, ಅವ್ಯವಹಾರಗಳ ಕುರಿತು ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರರವರ ಅಧ್ಯಕ್ಷತೆಯಲ್ಲಿ 2020 ರ ಡಿಸೆಂಬರ್ 4 ರಂದು ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ಪು.ಕೇಂದ್ರದಲ್ಲಿ ಸುದೀರ್ಘ ಕಾಲ ಮನೆಮನೆ ಸರ್ವೆ ಕಾರ್ಯ ಮಾಡಿ ದಾಖಲೆಗಳನ್ನು ಸಂಗ್ರಹಿಸಿ ಪ್ರಕರಣದ ಕುರಿತು ತನಿಖೆ ಕೈಗೊಂಡು ಸರ್ಕಾರಕ್ಕೆ ಸಮಗ್ರ ತನಿಖಾ ವರದಿ ಸಲ್ಲಿಸಿತು. ಆ ವರದಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ಸ್ವೀಕೃತವಾದ ಆಕ್ಷೇಪಣೆಗಳನ್ನು ಪುನರ್ ಪರಿಶೀಲನೆ ನಡೆಸಿದ ವೇಳೆ ಒಟ್ಟು 1,117 ನಿವೇಶನಗಳಿಗೆ ಖೊಟ್ಟಿ ದಾಖಲೆಗಳ ಸೃಷ್ಟಿ, ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ, ಸುಳ್ಳು ನಕಾಶೆಗಳನ್ನು ಸಿದ್ದಪಡಿಸಿರುವುದು ಸೇರಿದಂತೆ ವಿವಿಧ ರೀತಿಯಲ್ಲಿ ಅಕ್ರಮವೆಸಗಿರುವುದು ಕಂಡು ಬಂದಿದ್ದು ಈ ಅಕ್ರಮ ಅವ್ಯವಹಾರದಲ್ಲಿ ಭಾಗಿಯಾದ 1,117 ಆರೋಪಿಗಳ ಮೇಲೆ ಕೇಸ್ ದಾಖಲಾಗಿದೆ.

ಅಲ್ಲದೇ ಅಕ್ರಮ,ಅವ್ಯವಹಾರ ಸಂದರ್ಭದಲ್ಲಿ ಆಲಮಟ್ಟಿ ಪುನರ್ವಸತಿ ಕಾರ್ಯಾಲಯದಲ್ಲಿ ಕರ್ತವ್ಯದಲ್ಲಿದ್ದ ಹಿಂದಿನ ಪುನರ್ವಸತಿ ಅಧಿಕಾರಿಗಳಾದ ಎಸ್.ಬಿ.ಕಟ್ಟಿಮನಿ ಮತ್ತು ಎ.ಇ ರಘು, ಹಿಂದಿನ ವಿಷಯ ನಿರ್ವಾಹಕ ಹಾಗೂ ಶಿರಸ್ತೆದಾರ ಎಸ್.ಆರ್.ಪಾಟೀಲ್, ವಿಷಯ ನಿರ್ವಾಹಕರಾಗಿದ್ದ ದಿವಂಗತ ಎಸ್.ಎಸ್. ಸಾವಳಗಿ ಇವರುಗಳ ಅವಧಿಯಲ್ಲಿ ಅಕ್ರಮ ನಡೆದಿದ್ದು, ಕೊಲ್ಹಾರ ಉಪ ವಿಭಾಗದ ಹಿಂದಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ವಿ.ಮುಳಗುಂದ ಹಾಗೂ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎಂ ಜುಮನಾಳ ಇವರಿಬ್ಬರು ಅನಧೀಕೃತವಾಗಿ 6 ರಿಂದ 17 ರವರೆಗಿನ ಉಪನಕ್ಷೆಗಳನ್ನು ತಯಾರಿಸಿದ್ದು ತನಿಖಾ ವರದಿಯಿಂದ ಬೆಳಕಿಗೆ ಬಂದಿದೆ. ಇನ್ನೂ ಈ ಎಲ್ಲಾ ಅವ್ಯವಹಾರಗಳಿಗೆ ಖೊಟ್ಟಿ ಹಕ್ಕುಪತ್ರಗಳನ್ನು ತಯಾರಿಸಿ ಹಂಚಿಕೆ ಮಾಡುತ್ತಿದ್ದ ಕೆಲವು ಏಜೆಂಟರುಗಳ ಪೈಕಿ ಉಸ್ಮಾನ್ ಡಿ. ಅತ್ತಾರ ಹಾಗೂ ಇಮಾಮ್ ಮುಲ್ಲಾ ಇವರುಗಳ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ.

ಸ್ವೀಕೃತಿಯಾದ ತನಿಖಾ ತಂಡದ ವರದಿಯನ್ನಾಧರಿಸಿ ಬಾಗಲಕೋಟೆ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಪುನರ್ನಿರ್ಮಾಣ ಹಾಗೂ ಭೂಸ್ವಾಧೀನ ವಿಭಾಗದ ಆಯುಕ್ತರ ಸೂಚನೆ ಮೇರೆಗೆ ಆಲಮಟ್ಟಿ ಪುರ್ನವಸತಿ ಅಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ಎಲ್ಲಾ ಆರೋಪಿಗಳ ವಿರುದ್ದ ಜನವರಿ 4 ರಂದು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸದ್ಯ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬಹಳ ಕುತೂಹಲ ಮೂಡಿಸಿದ್ದು, ಮುಂದೆ ತನಿಖೆ ಹೇಗೆ ನಡೆಯಲಿದೆ, ಪ್ರಕರಣದಲ್ಲಿ ಯಾರಿಗೆ ಶಿಕ್ಷೆಯಾಗಲಿದೆ ಅನ್ನೋದನ್ನು ಕಾದುನೋಡಬೇಕಾಗಿದೆ.