ಚಿತ್ರದುರ್ಗ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ಇಂದು ಬಂಡಿಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಭೇಟಿ ನೀಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಎರಡು ಗಂಟೆಗಳ ಕಾಲ ಬಂಡಿಪುರದಲ್ಲಿ ಸಫಾರಿ ಮಾಡಿ ಅಭಯಾರಣ್ಯದ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಪ್ರಧಾನಿ ಮೋದಿಯ ಬಂಡಿಪುರ ಭೇಟಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್ ನೀಡಿದ್ದಾರೆ.
ಚಿತ್ರದುರ್ಗದ ಚಳ್ಳೆಕೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ, ಕನ್ನಡ ಹಾಕಿಕೊಂಡು , ತಲೆಗೊಂದು ಟೋಪಿ ಹಾಕಿಕೊಂಡು ಸಫಾರಿನೋ ಸುಪಾರಿನೋ ಮಾಡೋಕೆ ಹೋಗಿದ್ದಾರೆ. ಅವರು ಹುಲಿ ಬೇಟೆಯಾಡೋಕೋ , ಹುಲಿ ನೋಡಲೋ ಹೋಗಿದ್ದಾರೆ. ಪ್ರಧಾನಿ ಮೊದಲು ಹುಲಿ, ಚಿರತೆ ದಾಳಿಯಾದವರ ಕುಟುಂಬಕ್ಕೆ ಭೇಟಿ ನೀಡಲಿ ಎಂದು ಕಿಡಿಕಾರಿದ್ದಾರೆ.
ವನ್ಯ ಜೀವಿಗಳನ್ನು ಕಾಪಾಡಬೇಕು. ಅದು ತಪ್ಪಲ್ಲ. ಆದರೆ ವನ್ಯ ಜೀವಿಗಳ ಮೇಲೆ ಇದ್ದಷ್ಟೇ ಕಾಳಜಿ ವನ್ಯ ಜೀವಿಗಳ ದಾಳಿಗೆ ಬಲಿಯಾದವರ ಕುಟುಂಬದ ಮೇಲೂ ಇರಬೇಕು. ವನ್ಯ ಜೀವಿ ದಾಳಿಗೆ ಒಳಗಾದವರ ಕುಟುಂಬಕ್ಕೆ ಪ್ರಧಾನಿ, ಮುಖ್ಯಮಂತ್ರಿಗಳು ಏಕೆ ಭೇಟಿ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.