ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ನಿಗದಿತ ಸೂರ್ಯನ ಕಕ್ಷೆಗೆ ಏರಿಸುವ ಮೊದಲ ಹಂತದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
ಮೈಕ್ರೋ ಬ್ಲಾಗಿಂಗ್ ಜಾಲತಾಣ ಎಕ್ಸ್ನಲ್ಲಿ ಭಾನುವಾರ (ಸೆಪ್ಟೆಂಬರ್ 3) ಈ ಕುರಿತು ಮಾಹಿತಿ ನೀಡಿದೆ.
ಈ ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿರುವ ಟೆಲಿಮೆಟ್ರಿ, ಟ್ಯಾಂಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ಐಎಸ್ಟಿರ್ಎಸಿ) ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.
ಬಾಹ್ಯಾಕಾಶ ನೌಕೆ ಈಗ 245 ಕಿ.ಮೀ x 22459 ಕಿ.ಮೀ. ಕಕ್ಷೆ ತಲುಪಿದೆ. ಮುಂದಿನ ಹಂತದ ಕಕ್ಷೆ ಬದಲಾವಣೆ ಸೆಪ್ಟೆಂಬರ್ 05, ಮಂಗಳವಾರ 3 ಗಂಟೆಗೆ ನಿಗದಿಯಾಗಿದೆ.
ಸೂರ್ಯನ ಅಧ್ಯಯನದ ಉದ್ದೇಶದ ಭಾರತದ ಮಹತ್ವಾಕಾಂಕ್ಷೆಯ ಅದಿತ್ಯ ಎಲ್] ವೀಕ್ಷಣಾಲಯವನ್ನು ಹೊತ್ತ ಪಿಎಸ್ಎಲ್ವಿ ರಾಕೆಟ್ ಅನ್ನು ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಶನಿವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿತ್ತು.
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ ಎಲ್-1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುವುದು. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ.