ಕರ್ನಾಟಕ ಸಿಎಂ ಯಡಿಯೂರಪ್ಪ ಅವರಿಗೆ ಕರೋನಾ ಇರುವುದು ಧೃಡಪಟ್ಟಿದೆ. ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಸಿಎಂ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಸಿಎಂ ಚೇತರಿಕೆಗಾಗಿ ಜನ ಆಶಿಸುತ್ತಿರುವಂತೆಯೇ, ಸಿಎಂ ಬೇಜವಾಬ್ದಾರಿ ನಡೆವಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರೂ ಸಿಎಂ, ಚುನಾವಣಾ ಪ್ರಚಾರ, ಮಠಗಳಿಗೆ ಭೇಟಿ ಎಂದು ಬಿಡುವಿಲ್ಲದೆ ಸಾರ್ವಜನಿಕವಾಗಿ ತೊಡಗಿಕೊಂಡಿರುವ ಬಗ್ಗೆ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸಮಿತಿ ಕೂಡಾ ಸಿಎಂ ಬೇಜವಾಬ್ದಾರಿತನವನ್ನು ಖಂಡಿಸಿದ್ದು, ಇವರ ನೇತೃತ್ವದ ಸರ್ಕಾರ ಕರೋನಾ ನಿಯಂತ್ರಿಸುವುದು ಹೌದೇ ಎಂದು ಪ್ರಶ್ನಿಸಿದೆ.
Admin
ಮೂಲಗಳ ಪ್ರಕಾರ ಸಿಎಂ ಅವರಲ್ಲಿ ಕಳೆದ ಕೆಲವು ದಿನಗಳಿಂದ ಜ್ವರದ ಲಕ್ಷಣ ಕಂಡುಬಂದಿತ್ತು. ಅದಾಗ್ಯೂ, ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಕೊನೆಗೆ, ತೀರಾ ಸುಸ್ತು ಕಾಣಿಸಿಕೊಂಡಾಗ ಪ್ರಚಾರವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬೆಳಗಾವಿಯಿಂದ ಬೆಂಗಳೂರಿಗೆ ಮರಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ನಡುವೆ ಹೋಮ, ಯಜ್ಞವೆಂದು ಮಠಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಎಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಸಾಮಾಜಿಕ ಅಂತರವೂ ಕಾಪಾಡದೇ, ಮಾಸ್ಕೂ ಧರಿಸದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ, ತಾವೇ ಹೊರಡಿಸಿದ ಆದೇಶವನ್ನು ಯಡಿಯೂರಪ್ಪ ಧಿಕ್ಕರಿಸಿದ್ದಾರೆ. ಮಾರ್ಗಸೂಚಿಯನ್ನು ಪಾಲನೆ ಮಾಡದೆ ಬೇಜವಾಬ್ದಾರಿ ತೋರಿದ್ದಾರೆ.
ಅಂಬೇಡ್ಕರ್ ಜಯಂತಿ ವೇಳೆ ಕೋವಿಡ್ ಮಾರ್ಗಸೂಚಿ ಪಾಲಿಸಲು ವಿಫಲರಾದ ಸಿಎಂ ಯಡಿಯೂರಪ್ಪ, ಸಚಿವ ಶ್ರೀರಾಮುಲು
ಸರ್ಕಾರದ ನೇತೃತ್ವ ವಹಿಸಿರುವ ತಾವೇ ಇಷ್ಟು ಬೇಜವಾಬ್ದಾರಿಯಿಂದ ಸಾರ್ವಜನಿಕವಾಗಿ ತೊಡಗಿಕೊಂಡರೆ, ಪ್ರಜೆಗಳು ತನ್ನ ಆದೇಶವನ್ನು ಪಾಲಿಸಿಯಾರೇ? ಎಂಬ ಸಾಮಾನ್ಯ ಪ್ರಶ್ನೆಯನ್ನೂ ತನಗೆ ತಾನೇ ಹಾಕಿಕೊಳ್ಳದೆ ಸಿಎಂ ಯಡಿಯೂರಪ್ಪ ನಡೆದುಕೊಂಡಿರುವುದು ಅಕ್ಷಮ್ಯ!
ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಪಾಲನೆ ಇಲ್ಲ.. ಬೇಜವಾಬ್ದಾರಿಗೆ ಮತ್ತೊಂದು ಪುರಾವೆ!!
ಈಗ ಇರುವ ಮುಖ್ಯಪ್ರಶ್ನೆ, ಕರ್ನಾಟಕ ರಾಜ್ಯ ಹೈಕೋರ್ಟ್ ಗುರುವಾರ ನೀಡಿರುವ ಆದೇಶವನ್ನು ರಾಜ್ಯ ಪೊಲೀಸರು ಪಾಲಿಸಿಯಾರೇ ಎನ್ನುವುದು.
ಕೋವಿಡ್ ಪಾಲನೆಯಲ್ಲಿರುವ ಕೊರತೆಯನ್ನು ನೀಗಿಸುವಲ್ಲಿ ಕರ್ನಾಟಕ ಹೈಕೋರ್ಟ್ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶಿಸಿದ್ದು, ರಾಜಕೀಯ ವ್ಯಕ್ತಿಗಳಾಗಲಿ, ಧಾರ್ಮಿಕ ಮುಖಂಡರೇ ಆಗಲಿ, ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸದವರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಹೈಕೋರ್ಟ್ ಆದೇಶದಂತೆ, ಪೊಲೀಸರು ಮಾರ್ಗಸೂಚಿಗಳನ್ನು ಪಾಲಿಸದ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಬೇಕಿದೆ. ಆ ಮೂಲಕ, ಕಾನೂನು ರಾಜಕಾರಣಿಗಳಿಗೂ, ಅಧಿಕಾರ ವರ್ಗಕ್ಕೂ, ಜನ ಸಾಮನ್ಯರಿಗೂ ಒಂದೇ ಎನ್ನುವದನ್ನು ಸಾಮಾನ್ಯ ಜನತೆಗೆ ಮನದಟ್ಟು ಮಾಡಬೇಕಾಗುತ್ತದೆ.
ಕೋವಿಡ್ ನಿಯಮ ಪಾಲಿಸದ ನಾರ್ವೆಯ ಪ್ರಧಾನಮಂತ್ರಿಯ ಮೇಲೆಯೇ ದಂಡ ವಿಧಿಸಿರುವುದು ಕಳೆದ ವಾರ ಸುದ್ದಿಯಾಗಿತ್ತು. ಪ್ರಧಾನಿಯ ಮೇಲೆ ದಂಡ ವಿಧಿಸುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಜನರಿಗೆ ಮನದಟ್ಟು ಮಾಡಬೇಕಿತ್ತು, ಹೊರತು ದಂಡ ವಿಧಿಸುವುದೇ ಮುಖ್ಯವಾಗಿರಲಿಲ್ಲ ಎಂದು ದಂಡ ವಿಧಿಸಿದ್ದ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದರು.
ಅದೇ ರೀತಿ, ಸಿಎಂ ಮೇಲೆ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ಜನರಿಗೆ ಮನದಟ್ಟು ಮಾಡಬೇಕು. ಸಿಎಂ ಯಡಿಯೂರಪ್ಪ ಅವರ ಮೇಲೆ ಎಫ್‌ಐಆರ್ ದಾಖಲಿಸುವುದರಿಂದ ಜನಸಾಮಾನ್ಯರಿಗೂ ಕೋವಿಡ್ ನ ಗಂಭೀರತೆ ಅರಿವಾಗಲಿದೆ. ಕೋವಿಡ್ ಮಾರ್ಗಸೂಚಿಗೂ ಒಂದು ಘನತೆ ಬರಲಿದೆ. ಆ ಮೂಲಕವಾದರೂ, ಕೋವಿಡ್ ಎರಡನೇ ಅಲೆಗೆ ಜನರ ಬೇಜವಾಬ್ದಾರಿಯೇ ಕಾರಣವೆಂಬ ಆರೋಪದಿಂದ ಸಾಮಾನ್ಯ ಜನರೂ ಮುಕ್ತವಾಗಲಿದ್ದಾರೆ.