ಸೈನಿಕರಿಗೆ ಸರ್ಕಾರ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದರಲ್ಲೊಂದು ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ (CSD) ಮೂಲಕ ಕಡಿಮೆ ದರದಲ್ಲಿ ವಸ್ತುಗಳನ್ನು ನೀಡುವುದು. ಈ ಕ್ಯಾಂಟೀನ್‌ಗಳಲ್ಲಿ ಮದ್ಯವೂ ಸಾಮಾನ್ಯ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ. ಇದರ ಹಿಂದೆ ಸರ್ಕಾರ ನೀಡುವ ತೆರಿಗೆ ರಿಯಾಯಿತಿಗಳೇ ಪ್ರಮುಖ ಕಾರಣ.

ಇತ್ತೀಚೆಗೆ ತೆಲಂಗಾಣದ ಹೈದರಾಬಾದ್‌ನಲ್ಲಿ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ 361 ಪ್ರೀಮಿಯಂ ಮದ್ಯದ ಬಾಟಲಿಗಳು ವಶಪಡಿಸಿಕೊಳ್ಳಲಾಗಿದೆ. ಈ ಮದ್ಯವನ್ನು ಬೆಂಗಳೂರು ಹಾಗೂ ಹರಿಯಾಣದ ರಕ್ಷಣಾ ಕ್ಯಾಂಟೀನ್‌ಗಳಿಂದ ತಂದು ನಗರದಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ನಿವೃತ್ತ ಸೇನಾ ಸಿಬ್ಬಂದಿಯೊಬ್ಬರ ಪಾತ್ರವಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರ್ಮಿ ಕ್ಯಾಂಟೀನ್‌ಗಳಲ್ಲಿ ಮದ್ಯದ ಬೆಲೆ 30%ರಿಂದ 50%ರವರೆಗೆ ಕಡಿಮೆ ಇರುವುದು ಸರ್ಕಾರದ ಸಬ್ಸಿಡಿ ಮತ್ತು ತೆರಿಗೆ ವಿನಾಯಿತಿಗಳ ಪರಿಣಾಮ. ಅಬಕಾರಿ ಸುಂಕ ಮತ್ತು ಜಿಎಸ್‌ಟಿ ಕಡಿತದಿಂದಾಗಿ ಹೊರಗೆ 1500 ರೂ. ಬೆಲೆ ಇರುವ ಮದ್ಯ, ಕ್ಯಾಂಟೀನ್‌ನಲ್ಲಿ 500–800 ರೂ.ಗಳ ನಡುವೆ ಸಿಗುತ್ತದೆ.

ಸೈನಿಕರ ಹುದ್ದೆ ಆಧರಿಸಿ ಮದ್ಯ ಖರೀದಿಗೆ ಕೋಟಾ ನಿಗದಿಯಾಗಿದೆ. ಹಿರಿಯ ಅಧಿಕಾರಿಗಳಿಗೆ ತಿಂಗಳಿಗೆ ಸುಮಾರು 10 ಬಾಟಲಿಗಳು, ಜೂನಿಯರ್ ಕಮಿಷನ್ ಅಧಿಕಾರಿಗಳಿಗೆ 6–7, ಇತರ ಸಿಬ್ಬಂದಿಗೆ 4–5 ಬಾಟಲಿಗಳ ಮಿತಿ ಇದೆ. ಈ ನಿಯಮಗಳು ಸೇವೆಯಲ್ಲಿರುವ ಹಾಗೂ ನಿವೃತ್ತ ಸೈನಿಕರಿಗೂ ಅನ್ವಯಿಸುತ್ತವೆ.ಖರೀದಿಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿ ಸೈನಿಕರ ವಿವರಗಳು ಡಿಜಿಟಲ್ ದಾಖಲೆಗಳಲ್ಲಿ ಸಂಗ್ರಹವಾಗಿರುತ್ತವೆ. ನಿಗದಿತ ಕೋಟಾದೊಳಗೆ ಮಾತ್ರ ಖರೀದಿ ಸಾಧ್ಯ. ಜೊತೆಗೆ, ಒಂದು ಮದ್ಯದ ಬಾಟಲಿ ಬದಲಾಗಿ ಬಿಯರ್‌ಗಳನ್ನು ಪಡೆಯುವ ಆಯ್ಕೆಯೂ ನೀಡಲಾಗಿದೆ.
2023ರಿಂದ ಪ್ರೀಮಿಯಂ ಬ್ರ್ಯಾಂಡ್‌ಗಳನ್ನು ಖರೀದಿಸಲು ಭಾಗಶಃ ಅವಕಾಶ ನೀಡಿದ ಬಳಿಕ, ಕೆಲವು ಮಂದಿ ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಮಾರಾಟಕ್ಕೆ ಮುಂದಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆ ಕ್ಯಾಂಟೀನ್ ವ್ಯವಸ್ಥೆಯ ಮೇಲೆ ಕಠಿಣ ನಿಗಾವಹಿಸುವ ಅಗತ್ಯತೆ ಹೆಚ್ಚಾಗಿದೆ.






