ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (ಫೆಮಾ) ಮತ್ತು ಮನಿ ಲಾಂಡ್ರಿಂಗ್ ಕಾಯ್ದೆ, 2002 (ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಕಳೆದ ಮೂರು ವರ್ಷಗಳಲ್ಲಿ ದಾಖಲಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ ಎನ್.ಡಿ.ಎ. ನೇತೃತ್ವದ ಕೇಂದ್ರ ಸರಕಾರದ ಮೊದಲ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗಿಂತ ಮೂರು ಪಟ್ಟು ಅಧಿಕವಾಗಿದೆ ಎಂಬ ಕುತೂಹಲಕಾರಿ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ.
ಪ್ರಸ್ತುತ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಈ ಕುತೂಹಲಕಾರಿ ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ. 2019-20 ಮತ್ತು 2021-22ರ ನಡುವೆ ಫೆಮಾ ಮತ್ತು ಪಿ.ಎಂ.ಎಲ್.ಎ. ಅಡಿಯಲ್ಲಿ ಒಟ್ಟು 14,143 ಪ್ರಕರಣಗಳು ದಾಖಲಾಗಿದ್ದು ಇದು 2014-15 ಮತ್ತು 2016-17ರಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಹೋಲಿಸಿದಲ್ಲಿ ಸರಿಸುಮಾರು 187% ಏರಿಕೆಯಾದಂತಾಗಿದೆ.
ಈ ಕೇಂದ್ರ ಸರಕಾರದ ಎರಡನೇ ಅವಧಿಯಲ್ಲಿ ಮೊದಲ ಮೂರು ವರ್ಷಗಳಲ್ಲಿ 11,420 ಫೆಮಾ ಪ್ರಕರಣಗಳನ್ನು ತನಿಖೆಗೆ ಎತ್ತಿಕೊಳ್ಳಲಾಗಿದ್ದರೆ ಈ ಸಂಖ್ಯೆ ಇದೇ ಸರ್ಕಾರದ ಪ್ರಥಮ ಅವಧಿಯಲ್ಲಿ 4,424 ಆಗಿತ್ತು, ಮತ್ತಿದರಲ್ಲಿ ಈ ಅವಧಿಯಲ್ಲಿ 158 ಪ್ರತಿಶತ ಏರಿಕೆಯಾದಂತಾಗಿದೆ.
ಅದರಲ್ಲೂ ಮನಿ ಲಾಂಡ್ರಿಂಗ್ ಕಾಯ್ದೆಯಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 2014-15 ಮತ್ತು 2016-17ಕ್ಕೆ ಹೋಲಿಸಿದರೆ 2019-20 ಮತ್ತು 2021-22ರ ಅವಧಿಯಲ್ಲಿ ಸುಮಾರು ಐದು ಪಟ್ಟು ಹೆಚ್ಚಳವಾದಂತಾಗಿದೆ. ಮೊದಲ ಅವಧಿಯ 2 ವರ್ಷಗಳಲ್ಲಿ ಒಟ್ಟು 489 ಪ್ರಕರಣಗಳಷ್ಟೇ ದಾಖಲಾಗಿದ್ದರೆ, ಈ ಅವಧಿಯ ಕಳೆದೆರಡು ವರ್ಷಗಳಲ್ಲಿ 2,723 ಪ್ರಕರಣಗಳು ದಾಖಲಾಗಿವೆ.
ಇನ್ನು ನಿರ್ಧಿಷ್ಟ ವರ್ಷವೊಂದರಲ್ಲಿ ದಾಖಲುಗೊಂಡಿರುವ ಪ್ರಕರಣಗಳ ಸಂಖ್ಯೆ ಮೇಲೆ ಕಣ್ಣಾಡಿಸಿದರೆ, 2021-22ರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮನಿ ಲಾಂಡ್ರಿAಗ್ ಮತ್ತು ವಿದೇಶಿ ವಿನಿಮಯ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಇದು ಪ್ರದಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಪ್ರಕರಣ ದಾಖಲುಗೊಂಡಿರುವ ವರ್ಷವಾಗಿದೆ. ಈ ವರ್ಷದಲ್ಲಿ (2020-21), ಇ.ಡಿ.ಯು ಫೆಮಾ ಅಡಿಯಲ್ಲಿ 5,313 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರೆ, ಪಿ.ಎಂ.ಎಲ್.ಎ. ಅಡಿಯಲ್ಲಿ 1,180 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಇವೆರಡೂ ಕಾಯ್ದೆಗಳಡಿಯಲ್ಲಿ ಈ ಹಿಂದೆ ಒಂದೇ ವರ್ಷದಲ್ಲಿ ಅತೀ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದ ಮಾಹಿತಿಯನ್ನು ನೋಡೋದಾದ್ರೆ ಫೆಮಾ ಅಡಿಯಲ್ಲಿ 2017-18 ಮತ್ತು 3,627 ಪ್ರಕರಣಗಳು ಮತ್ತು ಪಿಎಂಎಲ್ಎ ಅಡಿಯಲ್ಲಿ 2020-21ರಲ್ಲಿ 981 ಪ್ರಕರಣಗಳು ದಾಖಲುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯವು ಅಂದಾಜು 24,893 ಪ್ರಕರಣಗಳನ್ನು ಫೆಮಾ ಕಾಯ್ದೆಯಡಿಯಲ್ಲಿ ವಿಚಾರಣೆಗೆತ್ತಿಕೊಂಡಿದ್ದರೆ, ಪಿ.ಎಂ.ಎಲ್.ಎ. ಅಡಿಯಲ್ಲಿ 3,985 ಪ್ರಕರಣಗಳನ್ನು ವಿಚಾರಣೆತ್ತಿಕೊಂಡಿದೆ ಎಂದು ಸಚಿವರು ಜೆಡಿಯು ಸಂಸದ ರಾಜೀವ್ ರಂಜನ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.
ಆದರೆ, ಒಂದು ವಿಶ್ಲೇಷಣಾ ಮಾಹಿತಿಯ ಪ್ರಕಾರ ಬರೋಬ್ಬರಿ 23,130 ಫೆಮಾ ಪ್ರಕರಣಗಳು ಕಳೆದ ಎಂಟು ವರ್ಷಗಳಲ್ಲಿ ದಾಖಲಾಗಿವೆ, ಅಂದರೆ, ಇಲ್ಲಿಯವರೆಗೆ ದಾಖಲುಗೊಂಡಿರುವ ಫೆಮಾ ಪ್ರಕರಣಗಳಲ್ಲಿ 80%ದಷ್ಟು ಪ್ರಕರಣಗಳು ಈ ಎಂಟು ವರ್ಷಗಳಲ್ಲಿ ದಾಖಲುಗೊಂಡಿರುವುದು ಗಮನಾರ್ಹ ವಿಚಾರವಾಗಿದೆ. ಅದೇ ರೀತಿ 3,555 ಪಿಎಂಎಲ್ಎ ಪ್ರಕರಣಗಳು ಕಳೆದ ಎಂಟುವರ್ಷಗಳಲ್ಲಿ ದಾಖಲುಗೊಂಡಿದ್ದು ಇದೂ ಒಂದು ದಾಖಲೆಯಾಗಿದೆ.