ಭಾರತೀಯ ಬಾಹ್ಯಾಕಾಶ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶವನ್ನು ನೀಡಲಾಗುತ್ತಿದೆ. ʼಸ್ಪೇಸ್ಕಾಮ್ ಪಾಲಿಸಿ – 2020ʼ (ಬಾಹ್ಯಾಕಾಶ ಸಂವಹನ ನೀತಿ – 2020) ಯು ಖಾಸಗಿ ಸಂಸ್ಥೆಗಳಿಗೂ ಕೂಡಾ ಬಾಹ್ಯಾಕಾಶ ವಲಯದಲ್ಲಿ ಪಾಲುದಾರಿಕೆಗೆ ಒತ್ತು ನೀಡುತ್ತಿದೆ.
ವಿದೇಶಿ ಕಂಪೆನಿಗಳು ಭಾರತೀಯ ಕಂಪೆನಿಗಳ ಜೊತೆಗೂಡಿ ಬಾಹ್ಯಾಕಾಶ ವಲಯದಲ್ಲಿ ಹೂಡಿಕೆಯನ್ನು ಮಾಡಬಹುದಾಗಿದೆ. ಉಪಗ್ರಹಗಳನ್ನು ತಯಾರಿಸಲು ಹಾಗೂ ಉಡ್ಡಾವಣೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಕೇಂದ್ರಗಳನ್ನು ಕೂಡಾ ಬಳಸಿಕೊಳ್ಳಲು ವಿದೇಶಿ ಕಂಪೆನಿಗಳಿಗೆ ಅವಕಾಶ ನೀಡಲಾಗುವುದು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿದೇಶಿ ಕಂಪೆನಿಗಳ ಪಾಲದಾರಿಕೆಯಲ್ಲಿ ಭಾರತೀಯ ಕಂಪೆನಿಗಳು 60 ಶೇ. ಪಾಲುದಾರಿಕೆಯನ್ನು ಹೊಂದಿದ್ದರೆ, ವಿದೇಶಿ ಕಂಪೆನಿಗಳು 40 ಶೇ. ಪಾಲುದಾರಿಕೆಯನ್ನು ಹೊಂದಬಹುದಾಗಿದೆ. ಈ ಕುರಿತಾಗಿ ಟೈಮ್ಸ್ ಆಫ್ ಇಂಡಿಯಾದ ಜೊತೆಗೆ ಮಾತನಾಡಿರುವ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿರುವ ಕೆ ಸಿವನ್ ಅವರು, “ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವವರೆಗೂ ವಿದೇಶಿ ಕಂಪೆನಿಗಳು ಇಲ್ಲಿನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆದರೆ, ದೇಶದ ಭದ್ರತೆಗೆ ಒತ್ತು ನೀಡಲಾಗುವುದು. ಬಂಡವಾಳ ಹೂಡುವ ಕಂಪೆನಿಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗುವುದು,” ಎಂದು ಹೇಳಿದ್ದಾರೆ.
ಈ ಹೊಸ ನೀತಿಯಿಂದಾಗಿ ಭಾರತೀಯ ಕಂಎಪನಿಗಳು ಕೂಡಾ ಈಗಿರುವ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ. ಅಷ್ಟು ಮಾತ್ರವಲ್ಲದೇ, ಸಂವಹನ ಸೇವೆ ಮತ್ತು ಹೊಸ ಉಪಗ್ರಹಗಳ ಉಡ್ಡಾವಣೆಗೂ ಅವಕಾಶವನ್ನು ನೀಡಲಾಗಿದೆ.
ಈ ಹಿಂದೆ, ಭಾರತೀಯ ಸಂಸ್ಥೆಗಳು, ವಿದೇಶಗಳಲ್ಲಿರುವ ಬಾಹ್ಯಾಕಾಶ ಕೇಂದ್ರಗಳನ್ನು ಬಳಸಿ ಸಂವಹನ ಸೇವೆಯನ್ನು ಭಾರತದಲ್ಲಿ ನೀಡುತ್ತಿದ್ದವು. ಈಗ ಅಂತಹ ಕಂಪೆನಿಗಳಿಗೆ ನಿಗದಿತ ಮಾರ್ಗಸೂಚಿಯೊಂದಿಗೆ ಬಾಹ್ಯಾಕಾಶ ವಲಯದಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.
“ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ವಲಯದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುವತ್ತ ಮೊದಲ ಹೆಜ್ಜೆ ಇಟ್ಟಿದ್ದೇವೆ. ಇನ್ನು ಶೀಘ್ರದಲ್ಲಿ, ಪ್ರತೀ ತಂತ್ರಜ್ಞಾನ ಬಳಕೆ ಹಾಗೂ ಅವುಗಳ ತಯಾರಿಕೆಯ ಕುರಿತು ನಿರ್ದಿಷ್ಟ ನೀತಿಗಳನ್ನು ತರಲಿದ್ದೇವೆ, ಇದರಿಂದಾಗಿ ಭಾರತದ ಬಾಹ್ಯಾಕಾಶ ವಲಯವು ಹೆಚ್ಚಿನ ಮಟ್ಟದ ಪ್ರಗತಿಯನ್ನು ಸಾಧಿಸಲಿದೆ,” ಎಂದು ಕೆ ಸಿವನ್ ಹೇಳಿದ್ದಾರೆ.