ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ, ರೈತರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಾದ್ಯಂತ ಆಂದೋಲನಗಳನ್ನು ಯೋಜಿಸಲು ತೀರ್ಮಾನಿಸಿದ್ದಾರೆ. ರೈತ ಸಂಘಟನೆಗಳ ಒಕ್ಕೂಟ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮಾರ್ಚ್ (ಎಸ್‌ಕೆಎಂ) ದೇಶವನ್ನು ಕಾಡುತ್ತಿರುವ ಕೃಷಿ ಬಿಕ್ಕಟ್ಟಿಗೆ ಭಾರತೀಯ ಜನತಾ ಪಕ್ಷವೇ (ಬಿಜೆಪಿ) ಕಾರಣ ಎಂದು ವಾಗ್ದಾಳಿ ನಡೆಸಿದೆ.
ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆ ಎಂಟು ತಿಂಗಳು ಪೂರ್ಣಗೊಳಿಸುತ್ತಿದ್ದಂತೆ ಲಕ್ನೋಗೆ ಭೇಟಿ ನೀಡಿದ ಮುಖಂಡರು ಎರಡು ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ವಿಸ್ತರಿಸುವ ಕಾರ್ಯತಂತ್ರವನ್ನು ಘೋಷಿಸಿದ್ದಾರೆ. ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ರಾಕೇಶ್ ಟಿಕಾಯತ್, ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಮುಖಂಡರನ್ನು ಬಹಿಷ್ಕರಿಸುವಂತೆ ರಾಜ್ಯದ ರೈತರನ್ನು ಒತ್ತಾಯಿಸಿದ್ದಾರೆ.
ಕಾರ್ಪೊರೇಟ್ ದೈತ್ಯ ಸಂಸ್ಥೆಗಳಾದ ಅದಾನಿ ಮತ್ತು ಅಂಬಾನಿಯ ವ್ಯಾಪಾರ ಸಂಸ್ಥೆಗಳ ಹೊರಗೆ ಪ್ರತಿಭಟನೆ ನಡೆಸುವಂತೆ ಟಿಕಾಯತ್ ರೈತರನ್ನು ಕೇಳಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ತನ್ನ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ತಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಭಟನೆಯು “ವಿದೇಶಿ ಧನಸಹಾಯ” ಪಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಟಿಕಾಯತ್ ಯಾವುದೇ ರೈತನ ಮಗನು ತನ್ನ ಹೆತ್ತವರಿಗೆ ಹಣವನ್ನು ಕಳುಹಿಸಿದರೆ, ಈ ರವಾನೆಯನ್ನು ವಿದೇಶಿ ಧನಸಹಾಯ ಎಂದು ತಪ್ಪಾಗಿ ಕರೆಯಲಾಗುತ್ತದೆ ಎಂದಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುವ ಯಾವುದೇ ಯೋಜನೆ ರೈತರಿಗೆ ಈವರೆಗೆ ಇಲ್ಲ ಎಂದು ಅವರು ಹೇಳಿದರು.
“ಕೃಷಿ ಮತ್ತು ರೈತರನ್ನು ಕಾರ್ಪೊರೇಟ್ ಶಕ್ತಿಗಳು ಮತ್ತು ಅದರ ರಾಜಕೀಯ ಏಜೆಂಟರಿಂದ ರಕ್ಷಿಸುವುದು ಚೌಧರಿ ಚರಣ್ ಸಿಂಗ್, ಮಹೇಂದ್ರ ಸಿಂಗ್ ಟಿಕಾಯತ್ ಅವರಂತಹ ನಾಯಕರ ಬದುಕಿದ್ದ ಭೂಮಿಯಲ್ಲಿ ವಾಸಿಸುತ್ತಿರುವ ನಮ್ಮ ಮೇಲಿನ ಜವಾಬ್ದಾರಿಯಾಗಿದೆ ” ಎಂದು ಅವರು ಹೇಳಿದ್ದಾರೆ.
ರಾಜಕೀಯ ವಿಶ್ಲೇಷಕ ಮತ್ತು ರಾಜಕಾರಣಿ ಯೋಗೇಂದ್ರ ಯಾದವ್ ಪ್ರತಿಭಟನೆಯ ಸಂದರ್ಭದಲ್ಲಿ ಮಾತಾಡುತ್ತಾ ಎಸ್‌ಕೆಎಂ ಉತ್ತರ ಪ್ರದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಮತ್ತು ಬೀದಿ ಪ್ರಾಣಿಗಳಂತಹ ರೈತರ ಸ್ಥಳೀಯ ಸಮಸ್ಯೆಗಳನ್ನು ಎತ್ತುತ್ತದೆ ಎಂದು ಹೇಳಿದ್ದಾರೆ.
ಯುಪಿಯಲ್ಲಿ ರೈತರು ಉತ್ಪಾದಿಸುವ ಗೋಧಿಯನ್ನು ಖರೀದಿಸದ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಗುರಿಯಾಗಿಸಿಕೊಂಡ ಯಾದವ್ ಅವರು ಯುಪಿ ಸರ್ಕಾರವು ರೈತರ ಎಲ್ಲಾ ಉತ್ಪಾದನೆಯನ್ನು ಸಂಗ್ರಹಿಸುವುದಾಗಿ ಸುಳ್ಳು ಭರವಸೆ ನೀಡಿತ್ತು ಎಂದಿದ್ದಾರೆ.

“ಯುಪಿಯಲ್ಲಿ, ರೈತರು ಸುಮಾರು 308 ಲಕ್ಷ ಟನ್ ಗೋಧಿಯನ್ನು ಉತ್ಪಾದಿಸಿದರು, ಆದರೆ ಸರ್ಕಾರವು 56 ಲಕ್ಷ ಟನ್ಗಳನ್ನು ಸಂಗ್ರಹಿಸಿದೆ, ಇದು ಒಟ್ಟು ಉತ್ಪಾದನೆಯ 18% ಮಾತ್ರ” ಎಂದು ಯಾದವ್ ಹೇಳಿದ್ದಾರೆ. ಸರ್ಕಾರದ ನಿರಾಸಕ್ತಿಯ ಪರಿಣಾಮವಾಗಿ, ರೈತರು ತಮ್ಮ ಬೆಳೆಗಳನ್ನು ಎಂಎಸ್‌ಪಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿದರು” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕಬ್ಬಿಗೆ ರಾಜ್ಯ ಸರ್ಕಾರ ಸೂಚಿಸಿದ ಬೆಲೆಯ ಬಗ್ಗೆ ಮಾತನಾಡಿದ ಇಬ್ಬರೂ ನಾಯಕರು ಕಳೆದ ಮೂರು ವರ್ಷಗಳಿಂದ ಕಬ್ಬಿನ ಬೆಲೆ ಬದಲಾಗದೆ ಇರುವುದರಿಂದ ರಾಜ್ಯದಲ್ಲಿ ಕಬ್ಬು ರೈತರು ಭೀಕರ ಸ್ಥಿತಿಯಲ್ಲಿದ್ದಾರೆ ಎಂದರು. ನ್ಯಾಯಾಲಯದ ಆದೇಶದ ಹೊರತಾಗಿಯೂ 5,000 ಕೋಟಿ ರೂಪಾಯಿಗಳ ಬಡ್ಡಿಯನ್ನು ರೈತರಿಗೆ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.
“ಗೋ ಸೆಸ್ (ಹಸು ಸೆಸ್)” ಅನ್ನು ಸಂಗ್ರಹಿಸಿದರೂ, ಬೀದಿ ದನಕರುಗಳಿಗೆ ಸರಿಯಾದ ಆಶ್ರಯವನ್ನು ಸರ್ಕಾರ ಸ್ಥಾಪಿಸಿಲ್ಲ ಎಂದು ಉಭಯ ನಾಯಕರು ತಿಳಿಸಿದ್ದಾರೆ. ಈ ಬೀದಿ ಜಾನುವಾರುಗಳು ರೈತರ ಬೆಳೆಗಳನ್ನು ತಿನ್ನುತ್ತವೆ ಮತ್ತು ನಾಶಪಡಿಸುತ್ತಿವೆ, ಇದರಿಂದಾಗಿ ಅಪಾರ ನಷ್ಟವಾಗಿದೆ. ಅಲ್ಲದೆ ವಿದ್ಯುತ್ ದರದಲ್ಲಿನ ಹೆಚ್ವಳದ ಬಗ್ಗೆಯೂ ಪ್ರಸ್ತಾಪ ಮಾಡಿದ ಅವರು ಕೃಷಿಗೆ ಉಚಿತ ಮತ್ತು ತಡೆರಹಿತ ವಿದ್ಯುತ್ ಸರಬರಾಜ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ರೈತ ಮುಖಂಡರು ಮಾಧ್ಯಮಗಳೊಂದಿಗೆ ಸಂವಹನ ನಡೆಸಿದ ಉತ್ತರ ಪ್ರದೇಶ ಪ್ರೆಸ್ ಕ್ಲಬ್ ಸುತ್ತಲೂ ಯು.ಪಿ ಸರ್ಕಾರವು ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಿತ್ತು. ಇದೇ ವೇಳೆ, ಬಿಜೆಪಿ ಸರ್ಕಾರದ ಅಡಿಯಲ್ಲಿ ಉತ್ತರ ಪ್ರದೇಶವು ಪೊಲೀಸ್ ರಾಜ್ಯವಾಗಿ ಮಾರ್ಪಟ್ಟಿದೆ ಎಂದು ಯಾದವ್ ಹೇಳಿದ್ದಾರೆ. ಪೊಲೀಸರ ಸಹಾಯದಿಂದ ಸರ್ಕಾರವು ರೈತರು ಮತ್ತು ಮಾಧ್ಯಮಗಳ ದನಿ ಅಡಗಿಸುತ್ತಿದೆ ಎಂದೂ ಅವರು ಹೇಳಿದರು. ಪಶ್ಚಿಮ ಯುಪಿಯ ಮುಜಫರ್ ನಗರರ ಜಿಲ್ಲೆಯಿಂದ ಸೆಪ್ಟೆಂಬರ್ 5 ರಿಂದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ರೈತ ಮುಖಂಡರು ಇದೇ ಸಂದರ್ಭದಲ್ಲಿ ಘೋಷಿಸಿದರು.