ವಕ್ಫ್ ಆಸ್ತಿ ವಿಚಾರವಾಗಿ ರೈತರಿಗೆ ನೋಟಿಸ್ ಜಾರಿ ಮಾಡಿರೋದನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗಿದೆ.. ವಿಜಯಪುರ ಜಿಲ್ಲೆಯ ಕೊಲ್ಹಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೊಲ್ಹಾರ ತಾಲೂಕಿನಲ್ಲಿ ರೈತರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ತಡೆ ಹಿಡಿಯಬೇಕು ಎಂದು ಆಗ್ರಹ ಮಾಡಲಾಗಿದೆ.
ಹಳ್ಳದ ಗೆಣ್ಣೂರ ಗ್ರಾಮದ ಸರ್ವೆ ನಂಬರ್ 299/1 ರೈತ ಮಹಿಳೆ ಮಹಾದೇವಿ ಬೆಳ್ಳುಬ್ಬಿ, 299/2 ಸುಭಾಷ್ ಉಪ್ಪಾರ, 299/3 ಪರಶುರಾಮ ಬೆಳ್ಳುಬ್ಬಿ ಎಂಬುವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೂಡಲೇ ನೋಟಿಸ್ ತಡೆ ಹಿಡಿಯಬೇಕೆಂದು ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಲ್ಹಾರ ತಾಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ.
ವಿಧಾನಸೌಧದಲ್ಲಿ ಸಚಿವರಾದ ಕೃಷ್ಣ ಭೈರೇಗೌಡ, ಎಂ ಬಿ ಪಾಟೀಲ್, ಜಮೀರ್ ಅಹ್ಮದ್ ಜಂಟಿ ಸುದ್ದಿ ಗೋಷ್ಠಿ ನಡೆಸಿ, ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ವಿವಾದದ ಬಗ್ಗೆ ಮಾತನಾಡಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಈ ಸಮಸ್ಯೆ ಬಗ್ಗೆ ನಾವು ಸುದೀರ್ಘ ಚರ್ಚೆ ಮಾಡಿದ್ದೇವೆ. 1973-74ರಲ್ಲಿ ಆಸ್ತಿಗಳ ನೋಟಿಫಿಕೇಷನ್ ಆಗಿದೆ. 16,301ಎಕರೆ ಭೂಮಿ ವಕ್ಫ್ ಆಸ್ತಿ ಎಂದು ನೋಟಿಫಕೇಷನ್ ಅಗಿದೆ. ಕೆಲವು ಆಸ್ತಿಗಳು ಮುಸ್ಲಿಂ ಸಮುದಾಯ ಹಾಗೂ ವ್ಯಕ್ತಿಗಳ ಕೈಯಲ್ಲಿ ಇದ್ದಾವೆ. 1309 ಎಕರೆ ಭೂಮಿ ಯಾರಿಗೂ ಮಂಜೂರು ಆಗಿಲ್ಲ. ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಇದ್ದಾವೆ ಎಂದಿದ್ದಾರೆ.
1835 ಎಕರೆ ಆಸ್ತಿ ಉಳುವವನೆ ಭೂಮಿ ಒಡೆಯ ಕಾಯ್ದೆಯಲ್ಲಿ ಮಂಜೂರಾಗಿವೆ. ನಾವು ನೋಟಿಸ್ ಕೊಟ್ಟಿಲ್ಲ, ಕೊಡುವ ಉದ್ದೇಶ ಕೂಡ ಇಲ್ಲ. ರೈತರಿಗೆ ಮಂಜೂರಾದ ಭೂಮಿ ವಾಪಸ್ ಪಡೆಯಲ್ಲ. ಕೆಲವು ರೈತರಿಗೆ ನೋಟಿಸ್ ಹೋಗಿದೆ. ಇಂಡಿ ತಾಲೂಕಿನಲ್ಲಿ ತಹಶೀಲ್ದಾರ್ ನೋಟಿಸ್ ಕೊಟ್ಟು ಮಾಡಬೇಕಿತ್ತು. ಇದಕ್ಕೆ ಎಸಿಯವರು ನೋಟಿಸ್ ಕೊಟ್ಟು ಕ್ಲೀಯರ್ ಮಾಡ್ತಾರೆ. ಹೊನವಾಡ ಗ್ರಾಮದಲ್ಲಿ ಎಲ್ಲಾ ಫ್ಯಾಕ್ಟ್ ಕ್ಲಿಯರ್ ಇದೆ. ಆದ್ರೆ ಉದ್ದೇಶಪೂರ್ವಕವಾಗಿ ಗೊಂದಲ ಮಾಡುತ್ತಿದ್ದಾರೆ. 1977ರಲ್ಲಿ ಹೊನವಾಡ ಗ್ರಾಮದ ಹೆಸರು ತೆಗೆದು ಹಾಕಲಾಗಿದೆ. ವಕ್ಫ್ ಆಸ್ತಿ ಕಿತ್ತುಕೊಳ್ಳಲು ಹೊರಟಿದೆ ಎಂದು ಅಂತಿದ್ದಾರೆ. ಅಲ್ಲಿ ಕೇವಲ 10 ಎಕರೆ ಭೂಮಿ ಮಾತ್ರ ವಕ್ಫ್ಗೆ ಸೇರಿದ್ದು, ಸುಮ್ಮನೆ ಗೊಂದಲ ಮೂಡಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.