
ರಾಮನಗರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಛೇರಿ ಮುಂದೆ 50 ವರ್ಷದ ವ್ಯಕ್ತಿ ನಾಗೇಶ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಾಗಡಿ ಮೂಲದ ಮೃತ ನಾಗೇಶ್, ಇಂದು ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ನಾಗೇಶ್ ಲಾರಿ ಮಾಲೀಕನಾಗಿದ್ದು, ನಾಗೇಶ್ ಲಾರಿ ಮೇಲೆ 10 ಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿತ್ತು. ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ ಮಾಡಿ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರ್ಮಿಟ್ ಇಲ್ಲದೇ ಕ್ರಶರ್ನಲ್ಲಿ ಲಾರಿ ಚಾಲನೆ ಆರೋಪ ಮಾಡಿದ್ದಾರೆ ಅನ್ನೋ ಕಾರಣಕ್ಕೆ ನಾಗೇಶ್ ಲಾರಿಗಳ ಮೇಲೆ 8 ಲಕ್ಷ ದಂಡ ವಿಧಿಸಲಾಗಿತ್ತು.

ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಗೆ ಬಂದಿದ್ದ ನಾಗೇಶ್, ದಂಡದ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದರು. ದಂಡದ ಮೊತ್ತ ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಮನವಿಗೆ ಸೊಪ್ಪು ಹಾಕದ ಅಧಿಕಾರಿಗಳು ದಂಡ ಕಟ್ಟುವಂತೆ ತಿಳಿಸುತ್ತಿದ್ದಂತೆ ಹೊರಗಡೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಣಿ ಇಲಾಖೆ ಕಚೇರಿ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತನ್ನ ಪತಿ ಸಾವಿಗೆ ಅಧಿಕಾರಿಗಳೇ ಕಾರಣ ಎಂದು ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
