
ಉತ್ತರದಾಯಿತ್ವದ ಕಲ್ಪನೆಯೇ ಇಲ್ಲದ ಸಮಾಜವನ್ನು ʼ ಸಾವು ʼ ವಿಚಲಿತಗೊಳಿಸುವುದಿಲ್ಲ
ನಾ ದಿವಾಕರ
ಭಕ್ತಿ ಮತ್ತು ಆರಾಧನಾ ಮನೋಭಾವ ಮಾನವ ಸಹಜ ಗುಣಲಕ್ಷಣಗಳು. ಎಲ್ಲ ರೀತಿಯ ಸಮಾಜಗಳಲ್ಲೂ , ಎಲ್ಲ ಸ್ತರಗಳಲ್ಲೂ ಭಕ್ತಿ ಎಂಬ ಭಾವನಾತ್ಮಕ ಗುಣ ಜನಸಾಮಾನ್ಯರನ್ನು ಒಂದು ಕೇಂದ್ರದೆಡೆಗೆ ಆಯಸ್ಕಾಂತದ ಹಾಗೆ ಸೆಳೆಯುತ್ತದೆ. ಅತೀತ ಶಕ್ತಿಗಳು, ದೈವೀಕ ಕಲ್ಪನೆಗಳು, ಧಾರ್ಮಿಕ ನಂಬಿಕೆಗಳು, ಜಾತಿ-ಮತಗಳ ಅಸ್ಮಿತೆಗಳು ಹಾಗೂ ವಿವಿಧ ಧರ್ಮಗಳ ಚೌಕಟ್ಟಿನಲ್ಲಿ ನಿರ್ಮಿಸಲಾಗುವ ವ್ಯಕ್ತಿಗತ ದೈವೀಕ ಶಕ್ತಿಗಳು, ಈ ಭಕ್ತಿಯ ಕೇಂದ್ರಗಳಾಗುತ್ತವೆ. ಮತ್ತೊಂದು ಮಗ್ಗುಲಿನಲ್ಲಿ ಅಧ್ಯಾತ್ಮ ಮತ್ತು ಆಧ್ಯಾತ್ಮಿಕ ವ್ಯಕ್ತಿ-ಸಂಸ್ಥೆಗಳು, ಭಾರತದಂತಹ ಶ್ರೇಣೀಕತ ಸಮಾಜದಲ್ಲಿ ಜಾತಿ ಭೇದಗಳನ್ನು ದಾಟಿ ಜನಾಕರ್ಷಣೆಯ ಕೇಂದ್ರಗಳಾಗಿ, ಎಲ್ಲ ವರ್ಗಗಳ ಜನರನ್ನೂ ಆಕರ್ಷಿಸುತ್ತವೆ. ನಿರ್ದಿಷ್ಟ ಕಲ್ಪಿತ ದೈವಗಳಲ್ಲಿನ ಅಪಾರ ಶ್ರದ್ಧೆ ಮತ್ತು ಅದರಿಂದಲೇ ಸೃಷ್ಟಿಯಾಗುವ ಅಗಾಧ ನಂಬಿಕೆ ಸಾಮಾನ್ಯ ಜನರಿಗೆ ಸಾಂತ್ವನದ ನೆಲೆ ಒದಗಿಸುವುದು ಸ್ವಾಭಾವಿಕ ಲಕ್ಷಣ.
ಭಾರತದ ಜಾತಿ ಶ್ರೇಣಿಯ ಸಾಂಪ್ರದಾಯಿಕ ಸಮಾಜವು ಶತಮಾನಗಳಿಂದಲೂ ಈ ದೈವೀಕ ಕಲ್ಪನೆಗಳಿಗೆ ವ್ಯಕ್ತಿ ರೂಪವನ್ನು ನೀಡುವ ಮೂಲಕವೇ ಆರಾಧಿಸುತ್ತಿರುವುದು ಒಂದು ವಿಶಿಷ್ಟ ಲಕ್ಷಣ. ನೂರಾರು ದೇವ ದೇವತೆಗಳ ಸುತ್ತ ಹರಡಿಕೊಳ್ಳುವ ಶ್ರದ್ಧಾಭಕ್ತಿಗಳ ಕೋಟೆ ಸಹಜವಾಗಿಯೇ ಜಾತಿ ವಿಂಗಡನೆಗೆ ಅನುಗುಣವಾಗಿ, ಭಿನ್ನ ರೂಪಗಳನ್ನು ಪಡೆದುಕೊಳ್ಳುತ್ತದೆ. ಲೌಕಿಕ ಬದುಕಿನಲ್ಲಿ ಕಾಣುವ ವ್ಯಕ್ತಿ ಲಕ್ಷಣ ಮತ್ತು ಗುಣಾವಗುಣಗಳನ್ನೇ ಈ ಅತೀತ ಶಕ್ತಿಗಳಿಗೂ ಅನ್ವಯಿಸಿ, ಆರಾಧಿಸುವುದರಿಂದ, ಜನರ ನಿತ್ಯ ಜೀವನದ ಸಂಕಟ, ಸಂಕಷ್ಟಗಳಿಗೆ ಈ ದೇವ-ದೇವತೆಗಳ ಮೊರೆ ಹೋಗುವ ಒಂದು ಪ್ರವೃತ್ತಿಯನ್ನು ನಮ್ಮ ಸಮಾಜದಲ್ಲಿ ಗುರುತಿಸಬಹುದು. ಈ ಸಾಮಾಜಿಕ ಲಕ್ಷಣವನ್ನು ಜನಪದೀಯ ಸಮುದಾಯಗಳಿಂದ ಅತ್ಯಾಧುನಿಕ ಸಮಾಜಗಳವರೆಗೂ ಸಮಾನವಾಗಿ ಕಾಣಬಹುದು.
ಹಾಗಾಗಿಯೇ ವೈದ್ಯಕೀಯ ವಿಜ್ಞಾನದ ಉತ್ತುಂಗ ಸಾಧನೆಯ ಹೊರತಾಗಿಯೂ, ಕಲಿತ ಸಮಾಜದಲ್ಲೂ ಸಹ ರೋಗರುಜಿನಗಳು ವಾಸಿಯಾಗಲು, ದೈಹಿಕ ಊನಗಳನ್ನು, ಬಾಧೆಗಳನ್ನು ಸರಿಪಡಿಸಲು ದೈವೀಕ ಶಕ್ತಿಗಳ ಮೊರೆ ಹೋಗುವುದನ್ನು ಭಾರತದಲ್ಲಿ ಕಾಣಬಹುದು. ಬಾಹ್ಯಾಕಾಶ ನೌಕೆಯ ಉಡಾವಣೆಗಳಿಗೂ ಸಹ ದೈವಕೃಪೆಯನ್ನು ಕೋರುವ ವೈಜ್ಞಾನಿಕ ಯುಗದಲ್ಲಿ ನಾವಿದ್ದೇವೆ. ಅತ್ಯಾಧುನಿಕ, ರೊಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿರುವ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ, ಮೇಧಾವಿ ವೈದ್ಯರು-ಶಸ್ತ್ರ ಚಿಕಿತ್ಸಾ ತಜ್ಞರೂ (Surgeons) ಸಹ ವ್ಯಕ್ತಿಗತ ನೆಲೆಯಲ್ಲಿ , ರೋಗಿಯ ಸಲುವಾಗಿ ದೈವದ ಕೃಪೆ ಬಯಸುವುದನ್ನು ಸಾಮಾನ್ಯವಾಗಿ ಕಾಣಬಹುದು.
ನಂಬಿಕೆಯ ಸಾಮಾಜಿಕ ನೆಲೆಗಳು
ಇದನ್ನು ವೈಯುಕ್ತಿಕ ನಂಬಿಕೆಗಳ ನೆಲೆಯಲ್ಲಿ ನೋಡುವಂತೆಯೇ ನಮ್ಮ ಸಾಮಾಜಿಕ ಚೌಕಟ್ಟುಗಳಲ್ಲಿ ನಿರ್ಮಾಣವಾಗುವ ಶ್ರದ್ಧಾ ನಂಬಿಕೆಗಳ ನೆಲೆಯಲ್ಲೂ ನೋಡಿದಾಗ, ಇಡೀ ಸಮಾಜವೇ ಇಂತಹ ಪ್ರವೃತ್ತಿಗಳಿಗೆ ಪೂರಕವಾದ ಪರಿಸರ ಸೃಷ್ಟಿಸುವುದನ್ನು , ಹಲವು ರೂಪಗಳಲ್ಲಿ ಕಾಣಬಹುದು. ದೇವಸ್ಥಾನಗಳಲ್ಲಿ, ಪೂಜಾ ಕೇಂದ್ರಗಳಲ್ಲಿ, ಅಧ್ಯಾತ್ಮ ಮಠಗಳಲ್ಲಿ ಈ ಸಾಂತ್ವನ-ಶಮನದ ವಿಭಿನ್ನ ರೂಪಾಂತರಗಳನ್ನು ಸೃಷ್ಟಿಸಲಾಗುತ್ತದೆ. ವಿಶೇಷ ಪೂಜೆಗಳು, ಹೋಮಗಳು, ಆಧ್ಯಾತ್ಮಿಕ ಆಚರಣೆಗಳು ಮತ್ತು ವೈಜ್ಞಾನಿಕ ತಳಹದಿಯೇ ಇಲ್ಲದಂತಹ ಚಿಕಿತ್ಸಾ ವಿಧಾನಗಳು ಜನಸಾಮಾನ್ಯರನ್ನು ಆಕರ್ಷಿಸುವುದಕ್ಕೆ ಮೂಲ ಕಾರಣವನ್ನು ವೈಯುಕ್ತಿಕ ನಂಬಿಕೆ ಮತ್ತು ಸಾಮಾಜಿಕ ಪರಿಸರಗಳಲ್ಲಿ ಗುರುತಿಸಬಹುದು. ಇದು ಎಲ್ಲ ಧಾರ್ಮಿಕ ಸಂಪ್ರದಾಯಗಳಲ್ಲೂ ಕಾಣಬಹುದಾದ ಸಾಮಾನ್ಯ ವಿದ್ಯಮಾನ. ರೂಪಗಳಲ್ಲಿ ವೈವಿಧ್ಯತೆ ಇರಬಹುದಷ್ಟೇ.

ಭಾರತೀಯ ಸಮಾಜದಲ್ಲಿ ಗುರುತಿಸಬಹುದಾದ ವೈಶಿಷ್ಟ್ಯ , ಕೆಲವೊಮ್ಮೆ ಬೌದ್ಧಿಕ ವಿಕೃತಿ ಎಂದರೆ, ಇದೇ ಶ್ರದ್ಧೆ, ಭಕ್ತಿ ಮತ್ತು ನಂಬಿಕೆಗಳನ್ನು ಲೌಕಿಕ ಜಗತ್ತಿನ ವ್ಯಕ್ತಿಗಳಿಗೂ ಅನ್ವಯಿಸುವುದು. ಆಧುನಿಕತೆ ಮತ್ತು ತಂತ್ರಜ್ಞಾನ ಕ್ರಾಂತಿಗೆ ತೆರೆದುಕೊಂಡಿರುವ ಭಾರತೀಯ ಸಮಾಜ ಇದನ್ನು ದಾಟಿ ಹೋಗಬೇಕಿತ್ತು. ಆದರೆ ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯಗಳಲ್ಲಿ ಇಂದಿಗೂ ಸಾಂಪ್ರದಾಯಿಕ ಶಕ್ತಿಗಳ ಪಾರಮ್ಯವೇ ಪ್ರಧಾನವಾಗಿರುವುದರಿಂದ, ಈ ವ್ಯಕ್ತಿ ಕೇಂದ್ರಿತ ನಂಬಿಕೆಗಳು ಇನ್ನೂ ಗಟ್ಟಿಯಾಗುತ್ತಿದ್ದು, ಆರಾಧನೆಯ ಮಟ್ಟ ತಲುಪಿದೆ. ವಿಶಾಲ ಸಮಾಜದಿಂದಾಚೆಗೆ ರಾಜಕೀಯ ಜಗತ್ತನ್ನೂ ಆವರಿಸಿರುವ ಈ ಮನಸ್ಥಿತಿಯನ್ನು ಮನಗಂಡೇ ಡಾ. ಬಿ.ಆರ್. ಅಂಬೇಡ್ಕರ್ ವ್ಯಕ್ತಿ ಆರಾಧನೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರು. ವಿಪರ್ಯಾಸವೆಂದರೆ ಸ್ವತಃ ಅಂಬೇಡ್ಕರ್ ಈಗ ಆರಾಧನೆಗೆ ಒಳಗಾಗುತ್ತಿದ್ದಾರೆ.
ವ್ಯಕ್ತಿ ವೈಭವೀಕರಣದ ಆಯಾಮಗಳು
ಹೀಗೆ ವ್ಯಕ್ತಿಗಳಿಗೆ ವಿಸ್ತರಿಸಲಾಗುವ ಅಗಾಧ ಶ್ರದ್ಧೆ ಮತ್ತು ನಂಬಿಕೆಗಳು, ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಹರಡಿದ್ದು, ಆಳವಾಗಿ ಬೇರೂರಿರುವುದು ಸಮಕಾಲೀನ ಸಮಾಜದ ವೈಚಿತ್ರ್ಯ. ತಾವು ನಂಬುವ ದೈವೀಕ ಶಕ್ತಿಗಳ ಹಾಗೆಯೇ ಈ ವ್ಯಕ್ತಿಗಳೂ ಸಹ ತಮ್ಮ ತಲ್ಲಣಗಳಿಗೆ ಸ್ಪಂದಿಸುತ್ತಾರೆ, ಸಂಕಟಗಳಿಗೆ ಪರಿಹಾರೋಪಾಯಗಳನ್ನು ತೋರುತ್ತಾರೆ, ತಮ್ಮನ್ನು ಕಷ್ಟದ ಕೂಪಗಳಿಂದ ಮೇಲೆತ್ತುತ್ತಾರೆ ಎಂಬ ವಿಶ್ವಾಸ ಜನರಲ್ಲಿ ಬೇರೂರುತ್ತದೆ. ಇದನ್ನು ಉದ್ಧೀಪನಗೊಳಿಸುವ ಸಲುವಾಗಿಯೇ, ಈ ರೀತಿಯ ನಂಬಿಕೆಯನ್ನು ಸಂಪಾದಿಸಿದ ವ್ಯಕ್ತಿಗಳು, ಇದನ್ನು ಸಾಂಸ್ಥೀಕರಿಸಲು ಅಧಿಕಾರ ಕೇಂದ್ರಗಳನ್ನು, ಮನರಂಜನಾ ಕ್ಷೇತ್ರವನ್ನು,ಸಾಂಸ್ಕೃತಿಕ ಆವರಣವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಾರೆ. ರಾಜಕೀಯವಾಗಿ ಇದು ಚುನಾವಣೆಗಳ ಬಂಡವಾಳವಾದರೆ, ಸಾಮಾಜಿಕವಾಗಿ ಸಿನೆಮಾ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಅಸ್ತಿತ್ವವನ್ನು ಸಂರಕ್ಷಿಸುವ ಕವಚಗಳಾಗುತ್ತವೆ.

ಈ ವಾತಾವರಣದಲ್ಲೇ ವ್ಯಕ್ತಿಯ ಮೇಲಿನ ಅಭಿಮಾನ ಕ್ರಮೇಣ ಭಕ್ತಿಯಾಗಿ ಪರಿಣಮಿಸುವುದನ್ನು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಬಹುದು. ವಿಶೇಷವಾಗಿ ಭಾರತೀಯ ಚಲನಚಿತ್ರ ರಂಗ, ಅದರಲ್ಲೂ ದಕ್ಷಿಣ ಭಾರತದ ಸಿನೆಮಾ ಲೋಕ ಇಲ್ಲಿ ಎದ್ದು ಕಾಣುತ್ತದೆ. ಸಿನಿಮಾ ನಾಯಕ ನಟರು ಸಂಪಾದಿಸುವ ಪ್ರೇಕ್ಷಕರ ಅಭಿಮಾನ, ಆರಾಧನೆಯ ಹಂತ ತಲುಪುವುದರಿಂದಲೇ ಸಿನೆಮಾಗಳ ಬಿಡುಗೆಯ ಸಮಯದಲ್ಲಿ ಅವರ ಕಟೌಟ್‌ಗಳಿಗೆ ಕ್ಷೀರಾಭಿಷೇಕ ಮಾಡುವ ಅತಿರೇಕಗಳಿಗೂ ಆಧುನಿಕ ಸಮಾಜ ಸಾಕ್ಷಿಯಾಗಿದೆ. ಡಾ. ರಾಜ್‌ಕುಮಾರ್ ತಮ್ಮ ಅಭಿಮಾನಿಗಳನ್ನು ʼ ಅಭಿಮಾನಿ ದೇವರು ʼ ಎಂದು ಕರೆಯುವ ಮೂಲಕ ಅವರನ್ನು ಗೌರವಿಸುವ ಒಂದು ಪರಂಪರೆಯನ್ನು ಹುಟ್ಟುಹಾಕಿದ್ದರು. ಆದರೆ ಇದು ಅನ್ಯ ನಾಯಕ ನಟರಿಗೆ ಅನುಕರಣೀಯ ಎನಿಸಲಿಲ್ಲ. ಕೊಂಚ ಔದಾರ್ಯ, ಸಮಾಜಸೇವೆಯ ಚಟುವಟಿಕೆಗಳು, ರಕ್ತದಾನ ಶಿಬಿರಗಳು, ವಿದ್ಯಾದಾನ ಮುಂತಾದ ಔದಾತ್ಯಗಳೇ ನಾಯಕ ನಟರನ್ನು ಜನಾನುರಾಗಿಯ ಹುದ್ದೆಯಿಂದ ಆರಾಧನೆಗೊಳಪಡುವ ಶಕ್ತಿಯಾಗಿ ಪರಿವರ್ತಿಸುತ್ತದೆ.
ಪುರುಷಾಧಿಪತ್ಯದ ಪರಿಣಾಮಗಳು
ಪಿತೃಪ್ರಧಾನ ಸಮಾಜದಲ್ಲಿ ಸಾಹಿತ್ಯ, ಕಲೆ, ಮನರಂಜನೆ ಎಲ್ಲವೂ ಸಹ ಪುರುಷಾಧಿಪತ್ಯದ ಚಿಂತನೆಗಳಿಂದಲೇ ಆವೃತವಾಗಿರುವುದರಿಂದ, ದಕ್ಷಿಣ ಭಾರತದ ಸಿನೆಮಾ ಚರಿತ್ರೆಯಲ್ಲಿ ನಾಯಕರಿಗೆ ಮಾತ್ರ ಅಭಿಮಾನಿ ಸಂಘಗಳು, ಆರಾಧನೆಯ ಮಾದರಿಗಳು ಕಂಡುಬರುತ್ತವೆ. ಯಾವುದೇ ಸಿನೆಮಾ ನಾಯಕಿಯರಿಗೆ ಅಥವಾ ಖಳನಾಯಕ ಪಾತ್ರ ವಹಿಸುವ ಅತ್ಯುತ್ತಮ ನಟರಿಗೂ ಸಹ ಈ ʼ ಸೌಭಾಗ್ಯ ? ʼ ದೊರೆಯುವುದಿಲ್ಲ. ನಟನೆ ಅಥವಾ ಅಭಿನಯದ ದೃಷ್ಟಿಯಿಂದ ನಾಯಕ ನಟರನ್ನೂ ಮೀರಿ ಉತ್ತುಂಗಕ್ಕೇರಿದ, ಕಲಾಕೌಶಲ್ಯವನ್ನು ಮೆರೆದ ಹಲವಾರು ನಟಿಯರು, ಖಳ ಪಾತ್ರಧಾರಿಗಳು, ಹಾಸ್ಯ ನಟ-ನಟಿಯರು ನಮ್ಮ ನಡುವೆ ಇದ್ದರು, ಇದ್ದಾರೆ. ಆದರೆ ʼ ಅಭಿಮಾನಿಗಳ ಲೋಕ ʼದಲ್ಲಿ ಇವರಿಗೆ ಯಾವುದೇ ಅವಕಾಶ ಲಭ್ಯವಾಗುವುದಿಲ್ಲ. ಮಹಿಳಾ ಪ್ರಧಾನ ಸಿನೆಮಾಗಳಲ್ಲೂ ಸಹ ಅಭಿಮಾನಿಗಳಿಂದ ಆರಾಧಿಸಲ್ಪಡುವುದು , ಅನುಷಂಗಿಕ ಪಾತ್ರ ವಹಿಸುವ ನಾಯಕ ನಟರೇ ಆಗಿರುತ್ತಾರೆ.

ಸಾಮಾಜಿಕ ಸ್ಥಾನಮಾನವನ್ನು ನಿರ್ಧರಿಸುವುದರಲ್ಲೂ ಆರ್ಥಿಕ ಪ್ರಾಬಲ್ಯ, ವ್ಯಕ್ತಿಗತ ವರ್ಚಸ್ಸು ಮತ್ತು ಈಗಿನ ಕಾರ್ಪೋರೇಟ್ ಮಾರುಕಟ್ಟೆ ಪರಿಸರದಲ್ಲಿ ಅಂತಸ್ತಿನ ಪ್ರಭಾವ ಇವೆಲ್ಲವೂ ಮಾನದಂಡಗಳಾಗುತ್ತವೆ. ಇದು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಸಹಜವಾಗಿ ಗುರುತಿಸಬಹುದಾದ ವಿದ್ಯಮಾನ. ದಕ್ಷಿಣ ಭಾರತದ ಸಿನೆಮಾ ರಂಗವನ್ನು ಗಮನಿಸಿದಾಗ ನಮಗೆ ಸುಸ್ಪಷ್ಟವಾಗಿ ಕಾಣುವ ವ್ಯಕ್ತಿಗಳು ಎಂ.ಜಿ.ರಾಮಚಂದ್ರನ್ (ಎಮ್‌ಜಿಆರ್), ಎನ್.ಟಿ. ರಾಮರಾವ್ (ಎನ್‌ಟಿಆರ್), ಡಾ. ರಾಜ್‌ಕುಮಾರ್. ಇವರ ಸಹನಟರಾಗಿದ್ದ ಶಿವಾಜಿಗಣೇಶನ್, ನಾಗೇಶ್ವರರಾವ್ ಮತ್ತು ಉದಯಕುಮಾರ್ ಅವರುಗಳಿಗೆ ಸಾರ್ವಜನಿಕವಾಗಿ ಅಭಿಮಾನಿ ವೃಂದ ಹೆಚ್ಚು ವಿಸ್ತರಿಸಲೇ ಇಲ್ಲ. ಆದರೆ ಅವರ ನಟನಾ ಕೌಶಲ್ಯವನ್ನು ಆನಂದಿಸುವ ಅಭಿಮಾನಿಗಳಿಗೇನೂ ಕೊರತೆ ಇರಲಿಲ್ಲ.
ನವ ಉದಾರವಾದಿ ಆರ್ಥಿಕತೆ ಹೆಚ್ಚು ಪ್ರಬಲವಾಗುತ್ತಿದ್ದಂತೆ ಸಿನೆಮಾ ಕ್ಷೇತ್ರವೂ ಕಾರ್ಪೋರೇಟ್ ಮಾರುಕಟ್ಟೆಯ ಪ್ರಭಾವಕ್ಕೊಳಗಾದ ಕಾರಣ, ಸಿನೆಮಾ ನಾಯಕ ನಟರನ್ನು ಸಾರ್ವಜನಿಕವಾಗಿ ಹೆಚ್ಚು ಜನಪ್ರಿಯರನ್ನಾಗಿ ಮಾಡುವ, ಜನಾನುರಾಗಿ ಮಾಡುವ ನಿಟ್ಟಿನಲ್ಲಿ ಸಿನೆಮಾಗಳೂ ತಯಾರಾಗತೊಡಗಿದ್ದನ್ನು 2000ದ ನಂತರದ ಚಲನಚಿತ್ರಗಳಲ್ಲಿ ಗುರುತಿಸಲು ಸಾಧ್ಯ. ಇಲ್ಲಿ ಹೀರೋ ಸರ್ವವ್ಯಾಪಿಯಾಗಿ, ಸರ್ವಶಕ್ತನಾಗಿ, ಸರ್ವಾಂತರ್ಯಾಮಿಯಾಗಿ, ಏಕಾಂಗಿಯಾಗಿ ದುಷ್ಟ ಶಕ್ತಿಗಳನ್ನು ಸದೆಬಡಿಯುವ, ಸಮಾಜದ ದುರ್ಬಲರನ್ನು ರಕ್ಷಿಸುವ ವ್ಯಕ್ತಿಯಾಗಿ ಕಾಣುತ್ತಾನೆ. ಇಲ್ಲಿ ಕಲೆ ಹಿಂಬದಿಗೆ ಸರಿದು, ವ್ಯಕ್ತಿ ವೈಭವ ಮುನ್ನಲೆಗೆ ಬರುತ್ತದೆ. ನಾಯಕಿಯರು, ಹಾಸ್ಯ ನಟ ನಟಿಯರು , ಬಂದು ಹೋಗುವ ನಿಮಿತ್ತ ಮಾತ್ರ ಪಾತ್ರಧಾರಿಗಳಾಗುತ್ತಾರೆ.

ಹಾಗಾಗಿಯೇ ಕಳೆದ 25 ವರ್ಷಗಳಲ್ಲಿ ಮಹಿಳಾ ಪ್ರಧಾನ ಅಥವಾ ಮಹಿಳಾ ಸಂವೇದನೆಯ ಚಲನ ಚಿತ್ರಗಳನ್ನು ಬೆರಳೆಣಿಕೆಯಷ್ಟು ಮಾತ್ರ ಕಾಣಲು ಸಾಧ್ಯ. ಈ ವಾತಾವರಣದಲ್ಲಿ ತಮ್ಮ ನಟನಾ ಕೌಶಲ್ಯಕ್ಕಿಂತಲೂ, ಪರದೆಯ ಮೇಲೆ ಮೂಡಿಸುವ ವ್ಯಕ್ತಿತ್ವ ಮತ್ತು ವರ್ಚಸ್ಸುಗಳನ್ನೇ ಅವಲಂಬಿಸುವ ಈಗಿನ ನಾಯಕ ನಟರು ಅಭಿಮಾನಿಗಳನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತಾರೆ. ಸಮಾಜದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ವಿಶೇಷವಾಗಿ ನಗರಗಳಲ್ಲಿ ಉಲ್ಬಣಿಸುತ್ತಿರುವ ಜೀವನೋಪಾಯದ ಜಟಿಲ ಸಮಸ್ಯೆಗಳು, ಯುವ ಸಮೂಹವನ್ನು ಈ ಅಭಿಮಾನಿ ಗುಂಪುಗಳ ಕಡೆಗೆ ಸುಲಭವಾಗಿ ಆಕರ್ಷಿಸುತ್ತವೆ. ಪರದೆಯ ಮೇಲಿನ ಹೀರೋ ಹಾಗೆಯೇ ನಿಜ ಜೀವನದಲ್ಲೂ ತಮ್ಮ ನೆಚ್ಚಿನ ನಾಯಕ ನಟ ʼ ವಿಮೋಚಕ ʼ ನಾಗುತ್ತಾನೆ ಎಂಬ ನಂಬಿಕೆ ಆಳವಾಗಿ ಬೇರೂರುತ್ತದೆ.
ಅಭಿಮಾನದಿಂದ ಆರಾಧನೆಯೆಡೆಗೆ
ಈ ಅಭಿಮಾನಿ ವೃಂದದ ನಾಡಿಮಿಡಿತವನ್ನು ಗಮನಿಸಿ ಸಿನೆಮಾ ನಾಯಕ ನಟರು ಅಧಿಕಾರ ರಾಜಕಾರಣವನ್ನು ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಇದನ್ನು ಪ್ರಧಾನವಾಗಿ ಕಾಣಲಾಗುವುದಿಲ್ಲ ಆದರೆ ತೆಲುಗು, ತಮಿಳು ಚಿತ್ರರಂಗದಲ್ಲಿ , ಒಂದು ಪರಂಪರೆಯನ್ನೇ ಹುಟ್ಟುಹಾಕಿದೆ. ತಮಿಳು ನಾಯಕ ನಟರಾದ ವಿಜಯ್ ಕಾಂತ್, ರಜನೀಕಾಂತ್, ಕಮಲಹಾಸನ್ ಮತ್ತು ಈಗ ವಿಜಯ್ ಈ ಸಾಲಿನಲ್ಲಿ ಪ್ರಮುಖರಾಗಿ ಕಾಣುತ್ತಾರೆ. ತೆಲುಗು ಚಿತ್ರರಂಗದ ಪವನ್ ಕಲ್ಯಾಣ್ ರಾಜಕೀಯದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಚಿತ್ರನಟರಿಗೆ ತಳಸಮಾಜದ ಸಾಮಾನ್ಯ ಜನರನ್ನು ತಲುಪುವ ಮತ್ತು ಅವರ ಸಂಕಟಗಳಿಗೆ ಸ್ಪಂದಿಸುವ ಉದ್ದೇಶ ಪ್ರಧಾನವಾಗಿರುತ್ತದೆಯೇ ಹೊರತು, ರಾಜಕೀಯವಾಗಿ ಗುರುತಿಸಬಹುದಾದ ಸೈದ್ಧಾಂತಿಕ ಅಥವಾ ತಾತ್ವಿಕ ತಳಹದಿ ಇರುವುದಿಲ್ಲ.

ಹಾಗಾಗಿಯೇ ಬಹಳಷ್ಟು ನಟರು ನಿರೀಕ್ಷಿತ ಹಂತವನ್ನು ತಲುಪಲು ಸಾಧ್ಯವಾಗದೆ, ಮುಖ್ಯವಾಹಿನಿ ರಾಜಕಾರಣದ ಅಂಚಿನಲ್ಲಿ ಉಳಿಯುತ್ತಾರೆ ಅಥವಾ ಪ್ರಧಾನ ಪಕ್ಷಗಳ ಬಾಲಂಗೋಚಿಗಳಾಗಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತಾರೆ. ಎಂಜಿಆರ್ ಮತ್ತು ಎನ್‌ಟಿಆರ್ ಹೊರತುಪಡಿಸಿ ಯಾವುದೇ ಇತರ ನಾಯಕ ನಟರು ಅಧಿಕಾರ ರಾಜಕಾರಣದ ಫಲಾನುಭವಿಗಳಾಗಲು ವಿಫಲವಾಗಿದ್ದನ್ನು ಗಮನಿಸಬೇಕಿದೆ. ಈ ವೈಫಲ್ಯದ ಹೊರತಾಗಿಯೂ ಸಿನೆಮಾ ನಟರು ರಾಜಕೀಯವಾಗಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುವ ಹಂಬಲದಿಂದ ಮುಕ್ತರಾಗಿಲ್ಲ. ಇದಕ್ಕಾಗಿಯೇ ಸಾವಿರಾರು ಅಭಿಮಾನಿಗಳನ್ನು ಒಂದೆಡೆ ಸೇರಿಸುವ ಬೃಹತ್ ಸಮಾವೇಶಗಳನ್ನು ಆಯೋಜಿಸುತ್ತಾರೆ. ಇಲ್ಲಿ ಉಪಯೋಗವಾಗುವುದು ಅವರ ನಟನಾ ಕೌಶಲ್ಯ ಅಲ್ಲ ಬದಲಾಗಿ ಆರ್ಥಿಕ ಬಲ, ಕೆಲವೊಮ್ಮೆ ಜಾತಿ ಪ್ರಾಬಲ್ಯ, ಸಾಮಾಜಿಕ ಅಂತಸ್ತು ಮತ್ತು ಸಿನೆಮಾ ಮೂಲಕ ಕ್ರೋಢೀಕರಿಸಿರುವ ಅಪಾರ ಸಂಪತ್ತು.
ಈ ನಾಯಕ ನಟರು ಪರದೆಯ ಮೇಲಿನ ಉಡುಪು, ಹಾವಭಾವ ಮತ್ತು ಈಗಿನ ಚಿತ್ರಗಳಲ್ಲಿ ಪ್ರಧಾನವಾಗಿರುವ ಸಂಭಾಷಣೆ (Dialog), ಹವ್ಯಾಸ ಮತ್ತು ಭೌತಿಕ ಅಲಂಕಾರ ಶೈಲಿಗಳನ್ನೇ ಅನುಕರಿಸುವ ಯುವ ಸಮೂಹ , ಈ ವರ್ತನೆಯ ಮೂಲಕ ತಮ್ಮನ್ನು ತಾವು ಮೆಚ್ಚುವ ಹೀರೋಗಳೊಡನೆ ಸಮೀಕರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಈ ದೌರ್ಬಲ್ಯವೇ ಸಿನೆಮಾ ನಟರಿಗೆ ರಾಜಕೀಯ ಬಂಡವಾಳವಾಗುತ್ತದೆ. ನಗರಗಳಲ್ಲಿ ತಮ್ಮ ಜೀವನ ನಿರ್ವಹಣೆಗಾಗಿ ಹಲವು ರೀತಿಯ ನೌಕರಿಗಳನ್ನು ಅವಲಂಬಿಸುವ ಕೆಳಮಧ್ಯಮ ವರ್ಗದ ಯುವ ಸಮೂಹಕ್ಕೆ ಈ ಹೀರೋಗಳಲ್ಲಿ, ವಿಮೋಚಕ, ಉದ್ಧಾರಕ, ಸುಧಾರಕ ಇತ್ಯಾದಿಗಳು ಕಾಣತೊಡಗುತ್ತವೆ. ಹಾಗಾಗಿಯೇ ಈ ನಟರು ಆಯೋಜಿಸುವ ಸಮಾವೇಶಗಳಲ್ಲಿ ತಾವು ಆರಾಧಿಸುವ ನಟನನ್ನು ಹೇಗಾದರೂ ಮಾಡಿ, ಒಮ್ಮೆಯಾದರೂ ನೋಡುವ (ಮಾಧ್ಯಮ ಪರಿಭಾಷೆಯಲ್ಲಿ ದರ್ಶನ ಪಡೆಯುವ) ತವಕ, ಹಂಬಲ ಮತ್ತು ಕಾತರಗಳು ಕಾಡತೊಡಗುತ್ತವೆ. ಇಂತಹ ಸಮಾವೇಶಗಳನ್ನು ಆಯೋಜಿಸುವ ಕಾರ್ಪೋರೇಟ್ ಹಿತಾಸಕ್ತಿಗಳು ಇಂತಹ ಯುವ ಸಮಾಜವನ್ನೇ ಗುರುತಿಸಿ, ಹಲವು ರೀತಿಯ ಆಮಿಷಗಳನ್ನೊಡ್ಡಿ ಆಕರ್ಷಿಸಲು ಪ್ರಯತ್ನಿಸುತ್ತವೆ.

ಕಾಲ್ತುಳಿತ ಸಾವು ಮತ್ತು ಉತ್ತರದಾಯಿತ್ವ
ಇದರ ಒಂದು ಆಯಾಮವನ್ನು ಕರೂರಿನಲ್ಲಿ ನಡೆದ ತಮಿಳು ನಟ ವಿಜಯ್ ಆಯೋಜಿಸಿದ, ʼ ತಮಿಳ ವೆಟ್ರಿ ಕಳ್ಗಂ ʼ (ವಿಟಿಕೆ) ರಾಜಕೀಯ ಪಕ್ಷದ ಸಮಾವೇಶದಲ್ಲಿ ಗುರುತಿಸಬಹುದು. ಅಲ್ಲಿ ಸಂಭವಿಸಿದ ನೂಕು ನುಗ್ಗಲು, ಕಾಲ್ತುಳಿತ, ಅದರಿಂದ ಉಂಟಾದ ಕ್ಷೋಭೆ ಮತ್ತು ಬಲಿಯಾದ 40ಕ್ಕೂ ಹೆಚ್ಚು ಜನರು ಇವೆಲ್ಲದರ ಮೂಲ ಕಾರಣವನ್ನು ಅತಿರೇಕದ ಅಭಿಮಾನ, ಅತಿಯಾದ ಆರಾಧನಾ ಮನೋಭಾವ, ಉನ್ಮಾದ ಮತ್ತು ಭಾವಾತಿರೇಕದ ವರ್ತನೆಯ ಚೌಕಟ್ಟಿನಲ್ಲಿ ಗುರುತಿಸಬೇಕಿದೆ. ಕಾಲ್ತುಳಿತಕ್ಕೆ ಕಾರಣ ಯಾರು ? ಈ ಪ್ರಶ್ನೆಗೆ ಉತ್ತರಿಸುವ ನೈತಿಕ ಸ್ಥೈರ್ಯ ಇಲ್ಲವಾದಾಗ, ಆಳುವ ಪಕ್ಷದ ಪಿತೂರಿ, ವಿರೋಧಿಗಳ ಹುನ್ನಾರ ಎಂಬ ಆರೋಪಗಳು, ಸತ್ಯಾಸತ್ಯತೆಗಳನ್ನು ಮರೆಮಾಚುವ ಕಬ್ಬಿಣದ ಪರದೆಗಳಾಗಿ ಪರಿಣಮಿಸುತ್ತವೆ.
ಆದರೆ ಸಾಮಾಜಿಕ ನೈತಿಕತೆ, ಮಾನವೀಯತೆ ಮತ್ತು ವ್ಯಕ್ತಿಗತ ಪ್ರಾಮಾಣಿಕತೆಯ ನೆಲೆಯಲ್ಲಿ ನೋಡಿದಾಗ ಇಲ್ಲಿ ನಿಷ್ಕರ್ಷೆಯಾಗಬೇಕಿರುವುದು ದುರ್ಘಟನೆಯ ಉತ್ತರದಾಯಿತ್ವ ಯಾರದು ಎಂಬ ನೈತಿಕ ಪ್ರಶ್ನೆ. ಈ ಉತ್ತರದಾಯಿತ್ವದ ಜವಾಬ್ದಾರಿಯನ್ನು ಆಯೋಜಕರಾಗಲೀ, ಸಮಾವೇಶದ ರೂವಾರಿ ಸಿನೆಮಾ ನಾಯಕ ನಟನಾಗಲೀ ಅಥವಾ ಸಾಂಸ್ಥಿಕವಾಗಿ ಅವರ ಪಕ್ಷವಾಗಲೀ ಹೊರುವುದೇ ಇಲ್ಲ. ತನಿಖೆ, ವಿಚಾರಣೆ, ನ್ಯಾಯಾಲಯ, ಕಾನೂನು ವ್ಯವಸ್ಥೆಯ ಅಂಗಳದಲ್ಲಿ ಕುಂಟುತ್ತಾ ಸಾಗಿ, ಅಂತಿಮವಾಗಿ ಇಡೀ ಘಟನೆಯೇ ವಿಸ್ಮೃತಿಗೆ ಜಾರಿಬಿಡುತ್ತದೆ. ಮಡಿದವರ ಕುಟುಂಬಗಳಿಗೆ, ಗಾಯಗೊಂಡವರಿಗೆ ಸರ್ಕಾರ ಮತ್ತು ಪಕ್ಷವು ಘೋಷಿಸುವ ನಗದು ಪರಿಹಾರಗಳು ಅಂತಿಮ ನ್ಯಾಯವಾಗಿ ಪರ್ಯವಸಾನ ಹೊಂದುತ್ತವೆ. ಸಾರ್ವಜನಿಕ ದುರ್ಘಟನೆಗಳಲ್ಲಿ ಇಂತಹ ಅವಘಡಗಳಿಗೆ ತುತ್ತಾಗಿ ಇಲ್ಲವಾಗುವ ಮನುಷ್ಯ ಜೀವಗಳನ್ನು ನಗದು ಪರಿಹಾರದ ತಕ್ಕಡಿಯಲ್ಲಿ ತೂಗುವ ಒಂದು ವಿಕೃತ ಪರಂಪರೆಯನ್ನು ಭಾರತೀಯ ಸಮಾಜ ಒಪ್ಪಿಕೊಂಡುಬಿಟ್ಟಿದೆ.
ಆದರೆ ಕೊನೆಯಲ್ಲಿ ಉಳಿಯುವ ಪ್ರಶ್ನೆಗಳು ಹಲವು.
ಅಂಚಿನಲ್ಲಿರುವ, ಅವಕಾಶವಂಚಿತ ಸಮಾಜದಲ್ಲಿ ತಮ್ಮ ಬದುಕಿನ ಸಂಕಟಗಳಿಗೆ ಕಾರಣ ಯಾರು ಎಂದು ಗ್ರಹಿಸಲಾಗದೆ, ಅವುಗಳ ಪರಿಹಾರವನ್ನು ಭಾವನಾತ್ಮಕ ನೆಲೆಯಲ್ಲಿ ಕೆಲವೇ ವ್ಯಕ್ತಿಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ ಕಾಣುವ ಕೆಳಸ್ತರ ಸಮಾಜದ ಅಮಾಯಕ ಜನತೆಯನ್ನು ಈ ರೀತಿಯ ಅಭಿಮಾನ-ಆರಾಧನೆ-ಉನ್ಮಾದದ ವಿಷವರ್ತುಲದಲ್ಲಿ ಸಿಲುಕಿಸುವ ವಿಶಾಲ ಸಮಾಜದ ನೈತಿಕ ಜವಾಬ್ದಾರಿ ಹೊರುವವರು ಯಾರು ? ಚುನಾಯಿತ ಸರ್ಕಾರವೋ, ಶೈಕ್ಷಣಿಕ ವ್ಯವಸ್ಥೆಯೋ, ರಾಜಕೀಯ ಪಕ್ಷಗಳೋ ಅಥವಾ ವೈಭವೀಕರಣದ ಹಂಬಲಕ್ಕೊಳಗಾಗಿ ಸಂವೇದನೆಯನ್ನೇ ಕಳೆದುಕೊಂಡಿರುವ ಸಿನೆಮಾ-ರಾಜಕೀಯ ನಾಯಕರೋ ? ಪ್ರಯಾಗದಿಂದ ಕರೂರಿನವರೆಗೆ ಭಾರತದಲ್ಲಿ ಸಂಭವಿಸಿರುವ/ಸಂಭವಿಸುತ್ತಿರುವ ಕಾಲ್ತುಳಿದ ಪ್ರಕರಣಗಳು ಮತ್ತು ಅಲ್ಲಿ ಸಂಭವಿಸುವ ಅಮಾಯಕರ ಸಾವು ನೋವುಗಳಿಗೆ ಯಾರು ಕಾರಣರು ? ಇಂತಹ ಹೃದಯವಿದ್ರಾವಕ ಘಟನೆಗಳನ್ನು ತಪ್ಪಿಸುವ ಸೂಕ್ತ ಕಾನೂನುಗಳನ್ನು ಸರ್ಕಾರಗಳು ಏಕೆ ರೂಪಿಸಲಾಗುವುದಿಲ್ಲ ? ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ನಿಷ್ಠೆ ಮತ್ತು ನೈತಿಕತೆಯನ್ನಾದರೂ ನಮ್ಮ ಸಮಾಜ ಉಳಿಸಿಕೊಂಡಿದೆಯೇ ?
ಯೋಚಿಸಬೇಕಲ್ಲವೇ ? ಯೋಚಿಸೋಣ.
-೦-೦-೦-೦