ಭಾರತದಲ್ಲಿ PUBG ಇನ್ನೂ ಏಕೆ ಲಭ್ಯವಿದೆ ಎಂಬುದನ್ನು ವಿವರಿಸಿ: ಕೇಂದ್ರಕ್ಕೆ ಪ್ರಶ್ನೆ ಹಾಕಿದ ಮಕ್ಕಳ ಹಕ್ಕುಗಳ ಆಯೋಗ
PUBG ಆನ್‌ಲೈನ್ ವಿಡಿಯೋ ಗೇಮ್ ಭಾರತದಲ್ಲಿ ಇನ್ನೂ ಏಕೆ ಲಭ್ಯವಿದೆ ಎಂಬುದನ್ನು ವಿವರಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯನ್ನು ಕೇಳಿದೆ ಎಂದು ANI ಮಂಗಳವಾರ ವರದಿ ಮಾಡಿದೆ.
ಕೇಂದ್ರ ಸರ್ಕಾರವು PUBG ಮೊಬೈಲ್ ಮತ್ತು ಅದರ ಆವೃತ್ತಿ PUBG ಲೈಟ್ ಸೇರಿದಂತೆ 118 ಚೀನೀ ಅಪ್ಲಿಕೇಶನ್‌ಗಳನ್ನು ಸೆಪ್ಟೆಂಬರ್ 2, 2020 ರಂದು ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸುರಕ್ಷತೆಗೆ ಪೂರ್ವಾಗ್ರಹ ಪೀಡಿತವಾಗಿವೆ ಎಂದು ಸರ್ಕಾರ ಹೇಳಿತ್ತು.
ಅಕ್ಟೋಬರ್ 30, 2020 ರಂದು, PUBG ತನ್ನ ಮೊಬೈಲ್ ಆವೃತ್ತಿಯನ್ನು ಇನ್ನು ಮುಂದೆ ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗುವುದಿಲ್ಲ ಎಂದು ಹೇಳಿತ್ತು. ಅದಾಗ್ಯೂ, ಪಬ್ ಜಿ ಮೊಬೈಲ್ ಗೇಮ್ ಭಾರತದಲ್ಲಿ ಲಭ್ಯವಾಗುತ್ತಿದೆ.
ಮಕ್ಕಳ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ ಅವರು ತಮ್ಮ ಪತ್ರದಲ್ಲಿ, ಲಕ್ನೋದಲ್ಲಿ 16 ವರ್ಷದ ಬಾಲಕ ತನ್ನ ತಾಯಿಯನ್ನು ಆಟವಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಗುಂಡಿಕ್ಕಿ ಕೊಂದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಬ್ ಜಿ ಯನ್ನು ದೇಶದಲ್ಲಿ ಕಾನೂನುಬದ್ಧವಾಗಿ ನಿರ್ಬಂಧಿಸಿದ್ದರೂ ಆಟ ಏಕೆ ಲಭ್ಯವಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿ ಅವರನ್ನು ಪ್ರಿಯಾಂಕ್ ಕಾನೂಂಗೊ ಕೇಳಿದ್ದಾರೆ.
“ಅಂತಹ ಘಟನೆಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಆಯೋಗಕ್ಕೆ ತಿಳಿಸಬೇಕು. ಮತ್ತು ಈ ಪತ್ರವನ್ನು ಸ್ವೀಕರಿಸಿದ 10 ದಿನಗಳ ಒಳಗಾಗಿ ಅಪ್ರಾಪ್ತ ವಯಸ್ಕರು ಬಳಸುತ್ತಿರುವ ಅಂತಹ ಆಟಗಳ ಪಟ್ಟಿಯನ್ನು ಅವರ ನಿಯಂತ್ರಣ ಸಂಸ್ಥೆಗಳು ಮತ್ತು ನಿಯಂತ್ರಣ ಕಾರ್ಯವಿಧಾನಗಳೊಂದಿಗೆ ಒದಗಿಸುವಂತೆ ವಿನಂತಿಸಲಾಗಿದೆ, ” ಕಾನೂಂಗೊ ಹೇಳಿದ್ದಾರೆ.
ಜೂನ್ 4 ರಂದು 16 ವರ್ಷದ ಹುಡುಗ ತನ್ನ ತಂದೆಯ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗೇಮ್ ಆಡಲು ಬಿಡದ ತಾಯಿಯ ತಲೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮಹಿಳೆ ಸಾವನ್ನಪ್ಪಿದರು ಮತ್ತು ಹುಡುಗ ಆಕೆಯ ಶವವನ್ನು ಅವರ ಮನೆಯಲ್ಲಿ ಎರಡು ದಿನಗಳ ಕಾಲ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಳೆತ ದೇಹದ ದುರ್ವಾಸನೆ ಮುಚ್ಚಿಕೊಳ್ಳಲು ರೂಮ್ ಫ್ರೆಶ್ನರ್ ಬಳಸಿದ್ದ ಎನ್ನಲಾಗಿದೆ.
ಹತ್ಯೆಯ ಸಮಯದಲ್ಲಿ ಬಾಲಕನ ಒಂಬತ್ತು ವರ್ಷದ ಸಹೋದರಿ ಮನೆಯಲ್ಲಿದ್ದಳು. ಗುಂಡಿನ ದಾಳಿಯ ಬಗ್ಗೆ ಯಾರಿಗಾದರೂ ಹೇಳಿದರೆ ಆಕೆಯ ಸಹೋದರಿಯನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ ಬಾಲಕನ ಅಜ್ಜಿ ಆತನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಆತನ ಮೇಲೆ ಕೊಲೆ ಪ್ರಕರಣ ದಾಖಲಾಗಿದ್ದು, ಜೂನ್ 10 ರಂದು ವೀಕ್ಷಣಾಲಯಕ್ಕೆ ಕಳುಹಿಸಲಾಗಿತ್ತು.