ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್, ಕೇರಳದಲ್ಲಿ ಎಡ ಪಕ್ಷಗಳು, ಅಸ್ಸಾಮಿನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ತಮಿಳುನಾಡಿನಲ್ಲಿ ಡಿಎಂಕೆ- ಕಾಂಗ್ರೆಸ್ ಮೈತ್ರಿಕೂಟ ಮತ್ತು ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿವೆ.
ಕೋವಿಡ್ ನಡುವೆಯೇ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆ ನಡೆದಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
294 ಸದಸ್ಯರಿರುವ ಪಶ್ಚಿಮ ಬಂಗಾಳ ವಿಧಾನ ಸಭೆ ಎಂಟು ಹಂತಗಳಲ್ಲಿ ಚುನಾವಣೆ ನಡೆದಿದ್ದವು. ಮಿತಿ ಮೀರಿದ ರಾಜಕೀಯ ಕೆಸರೆರಚಾಟ, ವ್ಯಕ್ತಿಗತ ನಿಂದನೆಗಳು ಮಮತಾ ಬ್ಯಾನರ್ಜಿಯವರ ಮೇಲಾದ ದಾಳಿ ಇತ್ಯಾದಿ ಕಾರಣಗಳಿಂದಾಗಿ ಈ ಬಾರಿಯ ಬಂಗಾಳದ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು.
ತಮಿಳು ನಾಡಿನಲ್ಲಿ 234 ಸ್ಥಾನಗಳ ವಿಧಾನಸಭೆಗೆ ಏಕ ಹಂತದ ಚುನಾವಣೆ ನಡೆದಿದ್ದು, ಡಿಎಂಕೆ-ಕಾಂಗ್ರೆಸ್ ಮೈತ್ರಿ ಮತ್ತು ಆಡಳಿತಾರೂಢ ಎಐಎಡಿಎಂಕೆ-ಬಿಜೆಪಿ ಮೈತ್ರಿ ನಡುವೆ ನೇರ ಹಣಾಹಣಿ ಇದೆ.
140 ಸ್ಥಾನಗಳನ್ನು ಹೊಂದಿರುವ ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತಯ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಸ್ಪರ್ಧೆ ಇದೆ. ಬಿಜೆಪಿಗೂ ಖಾತೆ ತೆರೆಯುವ ಭರವಸೆ ಇದೆ.
126 ಸದಸ್ಯ ಬಲದ ಅಸ್ಸಾಮಿನಲ್ಲಿ ಮೂರು ಹಂತಗಳ ಚುನಾವಣೆ ನಡೆದಿದ್ದು ಬಿಜೆಪಿಯು ಆಡಳಿತ ನಡೆಸುತ್ತಿದೆ.
30 ಸ್ಥಾನಗಳನ್ನು ಹೊಂದಿರುವ ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಮೈತ್ರಿಯ ನಡುವೆ ಸ್ಪರ್ಧೆ ನಡೆದಿತ್ತು. ಚುನಾವಣೆಗೆ ಎರಡು ತಿಂಗಳ ಮೊದಲು ಒಳಜಗಳದಿಂದಾಗಿ ಕಾಂಗ್ರೆಸ್ ಈ ಕೇಂದ್ರಾಡಳಿತ ಪ್ರದೇಶದಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡಿತ್ತು.
ಪಶ್ಚಿಮ ಬಂಗಾಳದಲ್ಲಿ, ರಿಪಬ್ಲಿಕ್-ಸಿಎನ್ಎಕ್ಸ್ ಸಮೀಕ್ಷೆಯು ಬಿಜೆಪಿ ಪಕ್ಷಕ್ಕೆ 138-148 ಸ್ಥಾನಗಳನ್ನು ಮತ್ತು ಟಿಎಂಸಿಗೆ 128-138 ಸ್ಥಾನಗಳನ್ನು ನೀಡುವ ಮೂಲಕ ಬಿಜೆಪಿಗೆ ಅಲ್ಪ ಮುನ್ನಡೆಯನ್ನು ನೀಡಿದೆ. ಟೈಮ್ಸ್ ನೌ-ಸಿ ವೋಟರ್ಸ್ ಟಿಎಂಸಿಗೆ 162 ಮತ್ತು ಬಿಜೆಪಿಗೆ 115 ಸ್ಥಾನಗಳನ್ನು ನೀಡುವ ಮೂಲಕ ಟಿಎಂಸಿಗೆ ಸ್ಪಷ್ಟ ಬಹುಮತವನ್ನು ಊಹಿಸಿದ್ದಾರೆ. ಜನ್ ಕಿ ಬಾತ್ ಸಮೀಕ್ಷೆಯು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬೃಹತ್ ಬಹುಮತವನ್ನು ಅಂದರೆ 162-185 ಸ್ಥಾನಗಳನ್ನು ನೀಡಿವೆ ಮತ್ತು 104-121 ಸ್ಥಾನಗಳನ್ನು ಟಿಎಂಸಿಗೆ ನೀಡಿದೆ
ಅಸ್ಸಾಂನಲ್ಲಿ ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಬಿಜೆಪಿಗೆ 75-85 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಕ್ಕೆ 40-50 ಸ್ಥಾನಗಳನ್ನು ನೀಡಿದೆ.
ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟಕ್ಕೆ 160-170 ಸ್ಥಾನಗಳನ್ನು ಮತ್ತು ಬಿಜೆಪಿ-AIADMK ಗೆ 28-68 ಸ್ಥಾನಗಳನ್ನು ನೀಡಿದೆ.
ಕೇರಳದಲ್ಲಿ ಎಬಿಪಿ- ಸಿ ವೋಟರ್ ಎಲ್‌ಡಿಎಫ್‌ಗೆ 71-77 ಮತ್ತು ಯುಡಿಎಫ್‌ಗೆ 62-68 ಸೀಟುಗಳನ್ನು ನೀಡಿದೆ. ಪುದುಚೇರಿಯಲ್ಲಿ ಎಬಿಪಿ-ಸಿ ವೋಟರ್ ಎನ್‌ಡಿಎಗೆ 19-23 ಸ್ಥಾನಗಳನ್ನು ಮತ್ತು ಎಸ್‌ಡಿಎಗೆ 6-10 ಸ್ಥಾನಗಳನ್ನು ಊಹಿಸಿದೆ.
(PTIನಿಂದ ಮಾಹಿತಿ ತೆಗೆದುಕೊಳ್ಳಲಾಗಿದೆ)