• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಚಾರ್‌ಧಾಮ್‌ ಹಾದಿಗೆ ದುಡಿಮೆಗಾರರ ಹಾಸುಗಲ್ಲು : ನಾ ದಿವಾಕರ ಅವರ ಬರಹ ಭಾಗ – 2

Any Mind by Any Mind
December 2, 2023
in ಅಂಕಣ, ಅಭಿಮತ, ದೇಶ
0
ಚಾರ್‌ಧಾಮ್‌ ಹಾದಿಗೆ ದುಡಿಮೆಗಾರರ ಹಾಸುಗಲ್ಲು : ನಾ ದಿವಾಕರ ಅವರ ಬರಹ ಭಾಗ – 2
Share on WhatsAppShare on FacebookShare on Telegram


ಆಧುನಿಕ ನಾಗರಿಕ ಜಗತ್ತು ನಿಸರ್ಗ ಸಮತೋಲನದ ಪ್ರಜ್ಞೆಯನ್ನೇ ಕಳೆದುಕೊಂಡಿರುವುದು ದುರಂತ. (“ ನಿಸರ್ಗದೊಡನೆ ಒಡನಾಟವಿರಲಿ ಚೆಲ್ಲಾಟ ಬೇಕಿಲ್ಲ” ಲೇಖನದ ಮುಂದುವರೆದ ಭಾಗ)

ADVERTISEMENT

ನಾಗರಿಕ ಜಗತ್ತಿನ ವಾರಸುದಾರಿಕೆಯನ್ನು ಸ್ವತಃ ವಹಿಸಿಕೊಂಡಿರುವ ಆಧುನಿಕ ಮಾನವನ ಜೀವನಶೈಲಿಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತಿರುವಷ್ಟೇ ಪ್ರಮಾಣದಲ್ಲಿ ನೈಸರ್ಗಿಕ ಹೊಣೆಗಾರಿಕೆಯನ್ನೂ ಮರೆತಿರುವುದು ಈ ಕಾಲದ ದೊಡ್ಡ ದುರಂತ. ಆಧುನಿಕತೆಯ ಪರಿಕಲ್ಪನೆಯನ್ನೇ ಹಲವು ಆಯಾಮಗಳಲ್ಲಿ ವಿಕೃತಗೊಳಿಸಿರುವ ಬಂಡವಾಳಶಾಹಿ ಆರ್ಥಿಕತೆ ಮತ್ತು ಅದನ್ನು ಪೋಷಿಸುವ ಆಳುವ ವರ್ಗಗಳು ಮನುಷ್ಯನ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕತೆಯನ್ನು ಸಹ ಒಂದು ಮಾರುಕಟ್ಟೆ ಸರಕಿನಂತೆ ಬಳಸಲಾರಂಭಿಸಿದೆ. ಇತಿಹಾಸದುದ್ದಕ್ಕೂ ಕಾಣಬಹುದಾದ ಈ ಧೋರಣೆಗೆ ಸಾರ್ವತ್ರಿಕ ಮಾನ್ಯತೆಯನ್ನು ದೊರಕಿಸಿಕೊಡಲು ನವ ಉದಾರವಾದದ ಆರ್ಥಿಕ ನೀತಿಗಳು ಹಾಗೂ ಅಭಿವೃದ್ಧಿಯ ಪರಿಕಲ್ಪನೆಗಳು ಇಡೀ ಮಾನವ ಸಮಾಜವನ್ನು ಗ್ರಾಹಕರಂತೆ ಮಾಡಿ, ನಿಸರ್ಗದ ಪ್ರತಿಯೊಂದು ವಸ್ತುವನ್ನೂ ಬಳಕೆಯ ವಸ್ತುಗಳಂತೆ ಮಾಡಿಬಿಟ್ಟಿವೆ. ಈ ಪ್ರಕ್ರಿಯೆಯ ಒಂದು ಅಪಾಯವನ್ನು ಭೂಕುಸಿತದಂತಹ ಪ್ರಕೃತಿ ವಿಕೋಪಗಳಲ್ಲಿ ಗುರುತಿಸಬಹುದು.

ಭಾರತದ ಭೌಗೋಳಿಕ ಅಖಂಡತೆಗೆ ಶ್ರೀರಕ್ಷೆಯಂತಿರುವ ಹಿಮಾಲಯ ಪರ್ವತ ಶ್ರೇಣಿ ಈ ಆಧುನಿಕತೆಯ ಅಭಿವೃದ್ಧಿ ಮಾರ್ಗಗಳಿಗೆ ಹಾಸುಗಲ್ಲಿನಂತೆ ಪರಿವರ್ತನೆಯಾಗುತ್ತಿದ್ದು, ಧಾರ್ಮಿಕ ಶ್ರದ್ಧಾನಂಬಿಕೆಗಳೊಂದಿಗೆ ಬಂಡವಾಳಶಾಹಿಯ ಪ್ರವಾಸೋದ್ಯಮ ಹಿತಾಸಕ್ತಿಗಳೂ ಮೇಳೈಸಿರುವುದರಿಂದ ಹಿಂದೂಗಳ ಪವಿತ್ರ ತಾಣಗಳೆಂದೇ ಭಾವಿಸಲಾಗುವ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರೀನಾಥ ಕ್ಷೇತ್ರಗಳಿಗೆ ತಲುಪುವ ಹಾದಿಯು ಆಧುನಿಕ ಬಂಡವಾಳ ಮಾರುಕಟ್ಟೆಯ ಅವಾಂತರಗಳಿಗೆ ಬಲಿಯಾಗುತ್ತಿದೆ. ಚಾರ್‌ಧಾಮ್‌ ಎಂದೇ ಕರೆಯಲಾಗುವ ಈ ನಾಲ್ಕು ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ಹಾದಿ ಸಹಜವಾಗಿಯೇ ದುರ್ಗಮವಾಗಿದ್ದು, ಭಕ್ತಾದಿಗಳು ಶ್ರದ್ಧಾಪೂರ್ವಕವಾಗಿ ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಈ ವರ್ಷದಲ್ಲೇ ಚಾರ್‌ಧಾಮ್‌ ದರ್ಶನಕ್ಕೆ 56 ಲಕ್ಷ ಜನರು ಹೋಗಿರುವುದು ವರದಿಯಾಗಿದೆ.

ದುರ್ಗಮ ಹಾದಿಯ ಸವಾಲುಗಳು

ಪರ್ವತ ಶ್ರೇಣಿಯ ಒಡಲಲ್ಲಿ ಸಾಗುವ ಹಾದಿಯು ಸಹಜವಾಗಿಯೇ ದುರ್ಗಮವಾಗಿದ್ದು, ಭೂವಿಜ್ಞಾನಿಗಳ ಅಭಿಪ್ರಾಯದಲ್ಲಿ ಹಿಮಾಲಯ ಶ್ರೇಣಿಯನ್ನು ಇನ್ನೂ ತರುಣಾವಸ್ಥೆಯ ಭೂಪ್ರದೇಶ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿಗೆ ತಲುಪಲು ಕ್ರಮಿಸಬೇಕಾದ 889 ಕಿಲೋಮೀಟರ್‌ ರಸ್ತೆಯನ್ನು ಅಗಲಗೊಳಿಸಲು ಭಾರತ ಸರ್ಕಾರ ಬೃಹತ್‌ ಯೋಜನೆಯನ್ನು ಹಮ್ಮಿಕೊಂಡಿದ್ದು, 2016ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಹೆದ್ದಾರಿ ನಿರ್ಮಾಣದ ಹಂತದಲ್ಲೇ ಉತ್ತರಕಾಶಿಯ ಸಿಲ್ಕ್ಯಾರ್-ಬಾರ್ಕೋಟ್‌ ಮಾರ್ಗದಲ್ಲಿ ನಿರ್ಮಿಸಲಾಗುತ್ತಿದ್ದ ಸುರಂಗವು ಭೂಕುಸಿತಕ್ಕೊಳಗಾಗಿ, ಅಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು 17 ದಿನಗಳ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಹೊರಬಂದಿದ್ದಾರೆ. ಈ ದುರಂತ ಸಂಭವಿಸಿದ ಕ್ಷಣದಲ್ಲಿ ಯಮುನೋತ್ರಿಗೆ ಹೋಗುವ ಈ ಹಾದಿಯಲ್ಲಿ 7.6 ಲಕ್ಷ ಯಾತ್ರಾರ್ಥಿಗಳು ಪ್ರವಾಸ ಮಾಡುತ್ತಿದ್ದರೆಂದು ಹೇಳಲಾಗಿದೆ. ಇದರೊಟ್ಟಿಗೆ ಕಟ್ಟಡ-ಹೆದ್ದಾರಿ ನಿರ್ಮಾಣಕ್ಕೆ ಬಳಸುವ ವಸ್ತುಗಳೂ ಇಳೆಯ ಮೇಲೆ ಹೆಚ್ಚಿನ ಭಾರ ಹೊರಿಸಿವೆ.

ಧರಸು ಎಂಬ ಪ್ರದೇಶದಿಂದ ಯಮುನೋತ್ರಿಗೆ ಹೋಗುವ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 134ರ ಭಾಗವಾಗಿ ನಿರ್ಮಿಸುವ ಮೂಲಕ 20 ಕಿಲೋಮೀಟರ್‌ ದೂರವನ್ನು ಹಾಗೂ ಒಂದು ಗಂಟೆಯ ಪ್ರಯಾಣ ಸಮಯವನ್ನು ಕಡಿಮೆ ಮಾಡುವುದು ಈ ಸುರಂಗ ನಿರ್ಮಾಣ ಯೋಜನೆಯ ಭಾಗವಾಗಿತ್ತು. ನಾಲ್ಕೂವರೆ ಕಿಲೋಮೀಟರ್‌ ವ್ಯಾಪ್ತಿಯ ಸುರಂಗ ನಿರ್ಮಾಣದ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (NHIDCL) ಹೊತ್ತುಕೊಂಡಿದ್ದು, ನವಯುಗ ಇಂಜಿನಿಯರಿಂಗ್‌ ಕಂಪನಿ ಲಿಮಿಟೆಡ್‌ಗೆ 853.79 ಕೋಟಿ ರೂಗಳ ಗುತ್ತಿಗೆ ನೀಡಲಾಗಿದೆ. ಮುಂಬೈ ನಾಗಪುರ ಎಕ್ಸ್‌ಪ್ರೆಸ್‌ ಹೆದ್ದಾರಿಯ ಕಾಮಗಾರಿಯನ್ನೂ ಈ ಸಂಸ್ಥೆಯೇ ವಹಿಸಿಕೊಂಡಿದ್ದು, ಕಳೆದ ವರ್ಷ ಕ್ರೇನ್‌ ಕುಸಿತದಿಂದ 20 ಕಾರ್ಮಿಕರು ಮೃತಪಟ್ಟಿದ್ದರು.

ದೀಪಾವಳಿ ಹಬ್ಬದ ದಿನದಂದು ಸಂಭವಿಸಿದ ಭೂ ಕುಸಿತದಿಂದ ಈ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಸುರಂಗದ 60 ಮೀಟರ್‌ ಆಳದಲ್ಲಿ ಸಿಲುಕಬೇಕಾಯಿತು. ಒಂದೆಡೆ ಭೂಕುಸಿತದಿಂದ ರಾಶಿರಾಶಿಯಾಗಿ ಬಿದ್ದಿದ್ದ ಮಣ್ಣು-ಕಲ್ಲುಬಂಡೆ-ಅವಶೇಷಗಳು ಮತ್ತೊಂದೆಡೆ ಗಗನದೆತ್ತರದ ಪರ್ವತದ ನಡುವೆ ಈ ದುಡಿಮೆಗಾರರು 17 ದಿನಗಳ ಕಾಲ ತಮ್ಮ ಉಸಿರುಹಿಡಿದು ಬದುಕಬೇಕಾಯಿತು. ಸುರಂಗದ ಒಳಗೆ ಸಿಲುಕಿದ್ದ ಕಾರ್ಮಿಕರಿಗೆ ಕೇವಲ ಎರಡು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತಮ್ಮ ಊಟ, ನಿದ್ರೆ, ಓಡಾಟ ಮತ್ತು ನಿಸರ್ಗಕ್ರಿಯೆಗಳನ್ನೂ ಪೂರೈಸಿಕೊಂಡು ಉಸಿರುಹಿಡಿದು ಬದುಕಬೇಕಾಯಿತು. ಮೊದಲ ಒಂಬತ್ತು ದಿನಗಳು ಹುರಿದ ಅಕ್ಕಿ ಮತ್ತು ಕಾಳುಗಳನ್ನು 15 ಸೆಂಟಿಮೀಟರ್‌ ವ್ಯಾಸದ ಪೈಪ್‌ ಮೂಲಕ ಪೂರೈಸಲಾಗಿತ್ತು. ಹತ್ತನೆಯ ದಿನದಿಂದ ಕಾರ್ಮಿಕರಿಗೆ ಗಾಳಿ, ನೀರು ಮತ್ತು ಆಹಾರವನ್ನು ಪೂರೈಸಲು ಸಾಧ್ಯವಾಗಿತ್ತು. ಇದಕ್ಕೆ ಬಳಸಿದ್ದು ಮೊದಲು ವಿದ್ಯುತ್‌ ವೈರ್‌ ಮತ್ತು ನೀರು ಪೂರೈಕೆ ಮಾಡಲು ಬಳಸುತ್ತಿದ್ದ 10 ಸೆಂಟಿಮೀಟರ್‌ ವ್ಯಾಸದ ಕೊಳವೆ.

ರಕ್ಷಣಾ ಕಾರ್ಯಾಚರಣೆ

ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಹಾಗೂ NHIDCL ಸಂಸ್ಥೆಗಳ ಅವಿರತ ಪರಿಶ್ರಮ ಹಾಗೂ ಶ್ರದ್ಧಾಪೂರ್ವಕ ಜಂಟಿ ಪ್ರಯತ್ನಗಳು ಪ್ರಶಂಸನಾರ್ಹ. ಇಂದೋರ್‌ನಿಂದ ತರಿಸಲಾದ ಆಧುನಿಕ ಕೊರೆಯುವ ಯಂತ್ರವೂ ಫಲ ನೀಡದಿದ್ದಾಗ, ರಕ್ಷಣಾ ತಂಡವು ಎಲ್ಲ ವಿಧಾನಗಳನ್ನೂ ಅನುರಿಸಲು ನಿರ್ಧರಿಸಿ ಐದು ಆಯ್ಕೆಗಳನ್ನು ಅನುಸರಿಸಲಾಗಿತ್ತು. ಸಟ್ಲುಜ್‌ ಜಲ್‌ ವಿದ್ಯುತ್‌ ನಿಗಮವು ಮೇಲಿನಿಂದ ಕೊರೆಯುವುದು, NHIDCL ಸುರಂಗದ ಆರಂಭದ ತುದಿಯಿಂದ ಕೊರೆಯುವುದು, ರೈಲ್‌ ವಿಕಾಸ್‌ ನಿಗಮವು ಎಡಭಾಗದಿಂದ ಕೊರೆಯುವುದು, ONGC ಸಿಲ್ಕ್ಯಾರಾ ಕಡೆಗೆ ಲಂಬಗತಿಯಲ್ಲಿ ರಂಧ್ರ ಕೊರೆಯುವುದು ಮತ್ತು ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ನಿಗಮವು ಬೆಟ್ಟದ ಮತ್ತೊಂದು ತುದಿಯನ್ನು ಸ್ಫೋಟಿಸುವುದು ಮೂಲ ಯೋಜನೆಯಾಗಿತ್ತು.

ಆದರೆ ಭೂಕುಸಿತದಿಂದ ಸುರಂಗವನ್ನು ಆವರಿಸಿದ್ದ ಅಪಾರ ಪ್ರಮಾಣದ ಕಲ್ಲು-ಮಣ್ಣುಗಳ ಅವಶೇಷಗಳು ಇಡೀ ಕಾರ್ಯಾಚರಣೆಗೆ ಅಡ್ಡಿಯಾಗಿದ್ದವು. ಎತ್ತಲಿಂದ ರಂಧ್ರ ಕೊರೆದರೂ ಅಲ್ಲಿ ಪುನಃ ಕಲ್ಲು ಮಣ್ಣು ತುಂಬಿಕೊಳ್ಳುತ್ತಿದ್ದುದರಿಂದ, ಅವಶೇಷಗಳನ್ನು ಹೊರತೆಗೆಯುವುದೇ ದುಸ್ತರವಾಗತೊಡಗಿತ್ತು. ಉತ್ತರ ಖಾಂಡ ರಾಜ್ಯದ ಇಡೀ ಆಡಳಿತ ವ್ಯವಸ್ಥೆಯೇ ದುರಂತದ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದುದು ಸಹ ಪ್ರಶಂಸನೀಯ. ಆದರೆ 16 ದಿನಗಳ ಸತತ ಪರಿಶ್ರಮವೂ ಫಲಗೂಡದೆ ಹೋದಾಗ ಕೊನೆಗೂ ಸಾಂಪ್ರದಾಯಿಕ ವಿಧಾನಗಳಿಗೆ ಮೊರೆ ಹೋಗಬೇಕಾಯಿತು. ಅಂತಿಮವಾಗಿ ಅತ್ಯಾಧುನಿಕ ಯಂತ್ರಗಳಿಂದ ಸಾಧ್ಯವಾಗದ ಕೆಲಸವನ್ನು 12 ಜನ Rat hole miners ಯಶಸ್ವಿಯಾಗಿ ಪೂರೈಸಿ 41 ಕಾರ್ಮಿಕರ ಜೀವ ರಕ್ಷಣೆ ಮಾಡಿರುವುದು ನೈಸರ್ಗಿಕ ದುರಂತ ನಿರ್ವಹಣೆಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯವ ಒಂದು ಪ್ರಸಂಗ.

ಆದರೆ ಈ ಅವಿಸ್ಮರಣೀಯ ಸಾಧನೆ ಚಾರಿತ್ರಿಕವಾಗಿ ದಾಖಲಾಗುವುದಾದರೂ, ಈ ಅಸಾಧಾರಣ ಪರಿಶ್ರಮಕ್ಕೆ ಕಾರಣವಾದ ಅಭಿವೃದ್ಧಿಯ ಪರಿಕಲ್ಪನೆಗಳನ್ನು ಇನ್ನಾದರೂ ನಾವು ಪ್ರಶ್ನಿಸಬೇಕಿದೆ. ಈ ಭೂ ಕುಸಿತ ಅನಿರೀಕ್ಷಿತ ಎಂದು ಖಂಡಿತವಾಗಿಯೂ ಹೇಳಲಾಗದು. ಏಕೆಂದರೆ ತರುಣ ಪರ್ವತ ಶ್ರೇಣಿ ಎಂದೇ ಹೆಸರಾದ ಈ ಹಾದಿಯಲ್ಲಿ ಋಷಿಕೇಷದಿಂದ ಸಿಲ್ಕ್ಯಾರಾವರೆಗಿನ ಹೆದ್ದಾರಿ ಮಾರ್ಗದ ಭೂಮಿ ದುರ್ಬಲವಾಗಿಯೇ ಇದೆ. ಗಟ್ಟಿಯಾದ ಒಳಪದರಗಳಿಲ್ಲದ ಈ ಭೂಪ್ರದೇಶದಲ್ಲಿ ಭೂ ಕುಸಿತ ಸಾಮಾನ್ಯ ಸಂಗತಿಯೂ ಆಗಿದೆ. ಈ ಹಾದಿಯುದ್ದಕ್ಕೂ ಮಾನವ ನಿರ್ಮಿತ ಕಟ್ಟಡಗಳನ್ನಷ್ಟೇ ಅಲ್ಲದೆ, ಹೆದ್ದಾರಿ ಕಾಮಗಾರಿಯಲ್ಲಿ ಬಳಸಲಾಗುವ ಹೆಬ್ಬಂಡೆಗಳು, ಬಳಸಿ ಬಿಸಾಡಲಾದ ಇಟ್ಟಿಗೆಗಳು, ಭೂಕುಸಿತದಿಂದ ಉಂಟಾಗಿರುವ ಅವಶೇಷಗಳು ಹಾಗೂ ಇತರ ತ್ಯಾಜ್ಯಗಳನ್ನು ಕಾಣಬಹುದು. ಸಡಿಲ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಜಾರುವುದನ್ನು ತಪ್ಪಿಸಲು ಬಂಡೆಗಳ ಬದಿಯಲ್ಲಿ ಕಲ್ಲುರಾಶಿಗಳನ್ನು ಪೇರಿಸಿ ಬೇಲಿಯಂತೆ ನಿರ್ಮಿಸಿರುವುದನ್ನು ಕಾಣಬಹುದು.

ಭೂಮಿಯ ಮೇಲೆ ಪ್ರಹಾರ

ಈ ಹಾದಿಯಲ್ಲಿ ಇಂತಹ ದುರಂತ ಸಂಭವಿಸಿರುವುದು ಮೊದಲ ಸಲವೇನಲ್ಲ. ಹಾಗಾಗಿಯೇ ರಾಜ್ಯ ಸರ್ಕಾರವೂ ಸಹ ಭೂಕುಸಿತವಾದ ಕೂಡಲೇ ಕಾರ್ಯಪ್ರವೃತ್ತವಾಗಿ ಸಿಲ್ಕ್ಯಾನಾ ಸುರಂಗದ ಕುಸಿತಕ್ಕೆ ಕಾರಣವನ್ನು ಶೋಧಿಸಲು ಮುಂದಾಗಿತ್ತು. Wadia Institute of Himalayan Geology (WHIG), Geological Survey of India (GSI) ಹಾಗೂ Central Building Research Institute (CBRI) ಈ ಮೂರೂ ಸಂಸ್ಥೆಗಳ ಸಹಯೋಗದೊಂದಿಗೆ ಉತ್ತರಖಾಂಡ ಸರ್ಕಾರವು ರಕ್ಷಣಾ ಕಾರ್ಯಾಚರಣೆಯ ರೂಪುರೇಷೆಗಳನ್ನು ನಿರ್ಧರಿಸಿತ್ತು. 825 ಕಿಲೋಮೀಟರ್‌ ವ್ಯಾಪ್ತಿಯ ಎಲ್ಲ ರೀತಿಯ ಹವಾಮಾನಕ್ಕೂ ಹೊಂದಿಕೊಳ್ಳುವಂತಹ ಚಾರ್‌ ಧಾಮ್‌ ಹೆದ್ದಾರಿ ಯೋಜನೆಯ ಪರಾಮರ್ಶೆ ಮಾಡಲು ಸುಪ್ರೀಂಕೋರ್ಟ್‌ 2019ರಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿಯನ್ನೂ ನೇಮಿಸಿತ್ತು.
ಈ ಸಮಿತಿಯು ತನ್ನ ವರದಿಯಲ್ಲಿ ಹೆದ್ದಾರಿ ನಿರ್ಮಾಣದಲ್ಲಿ ಎದುರಾಗಬಹುದಾದ ನೈಸರ್ಗಿಕ ಅಪಾಯಗಳನ್ನು, ಅಡೆತಡೆಗಳನ್ನು ಸೂಚಿಸಿರುವುದೇ ಅಲ್ಲದೆ ತೀವ್ರ ಪರಿಸರ ಕಾಳಜಿಯನ್ನೂ ವ್ಯಕ್ತಪಡಿಸಿತ್ತು. ಈ ಹೆದ್ದಾರಿ ಕಾಮಗಾರಿಯನ್ನು ವಿರೋಧಿಸಿ ಸಮಿತಿಯ ಅಧ್ಯಕ್ಷ ರವಿ ಚೋಪ್ರಾ 2022ರಲ್ಲೇ ರಾಜೀನಾಮೆ ನೀಡಿದ್ದರು. ಇಂತಹ ದುರಂತಗಳಿಗೆ ಆಡಳಿತಾಧಿಕಾರಿಗಳೇ ಹೊಣೆ ಎನ್ನುತ್ತಾರೆ ಸಮಿತಿಯ ಮತ್ತೋರ್ವ ಸದಸ್ಯ ಭೂವಿಜ್ಞಾನಿ ನವೀನ್‌ ಜುಯಲ್. ಹಿಮಾಲಯ ಪರ್ವತ ಶ್ರೇಣಿಯು ಹಲವು ತಲೆಮಾರುಗಳ ಭೂ ತಳದ ಮಡಿಕೆಗಳು ಹಾಗೂ ಮುರಿತಗಳ ಪರಿಣಾಮವಾಗಿ ಹಾಗೂ ನೀರಿನ ಅಂಶ ಹೆಚ್ಚಾಗಿರುವುದರಿಂದ ದುರ್ಬಲವಾಗಿರುತ್ತದೆ ಎಂದು ನವೀನ್‌ ಹೇಳುತ್ತಾರೆ. ಈ ವೈಜ್ಞಾನಿಕ ಅಂಶಗಳ ನಡುವೆಯೇ ದೈವಶ್ರದ್ಧೆಯ ಅವೈಚಾರಿಕ ನಂಬಿಕೆಗಳೂ ಸಹ ಇಲ್ಲಿ ಪ್ರಚಲಿತವಾಗಿದೆ. ಸ್ಥಳೀಯ ಸಮುದಾಯಗಳು ಆರಾಧಿಸುವ ಬೌಖನಾಗ ಎಂಬ ದೇವತೆಯ ಗುಡಿಯನ್ನು ಹೆದ್ದಾರಿ ನಿರ್ಮಾಣದ ಹಂತದಲ್ಲಿ ಧ್ವಂಸ ಮಾಡಿದ್ದರಿಂದ ದೈವಿಕ ಶಾಪದಿಂದ ದುರಂತ ಸಂಭವಿಸಿದೆ ಎಂಬ ನಂಬಿಕೆಯೂ ಜನರಲ್ಲಿದೆ. ಈಗ ಸುರಂಗ ಕುಸಿತ ಸಂಭವಿಸಿದ ಸ್ಥಳದಲ್ಲೇ ತಾತ್ಕಾಲಿಕ ಗುಡಿಯನ್ನು ಕಟ್ಟಿ ಪೂಜೆ ಸಲ್ಲಿಸಲಾಗುತ್ತಿದೆ.

ಕಳೆದ ಐದು ವರ್ಷಗಳಲ್ಲಿ 20ಕ್ಕೂ ಹೆಚ್ಚು ಬಾರಿ ಈ ಸುರಂಗ ನಿರ್ಮಾಣದಲ್ಲಿ ಸಣ್ಣಪುಟ್ಟ ಅವಘಡಗಳು ಸಂಭವಿಸಿದೆ ಎಂದು NHIDCL ನಿರ್ದೇಶಕರಾದ ಅನ್ಷು ಮನೀಶ್‌ ಕಾಲ್ಕೋ ಹೇಳುತ್ತಾರೆ. ಯಾವುದೇ ಸುರಂಗ ನಿರ್ಮಾಣದ ಕಾಮಗಾರಿಯಲ್ಲಿ ಇದು ಸಹಜ ಪ್ರಕ್ರಿಯೆಯಾಗಿದ್ದು, ದುರದೃಷ್ಟವಶಾತ್‌ ಈ ಬಾರಿ ಕಾರ್ಮಿಕರು ಸಿಲುಕುವಂತಾಯಿತು ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಈ ಪ್ರಾಂತ್ಯದ ಭೂ ಪ್ರದೇಶದಲ್ಲಿನ ಸೂಕ್ಷ್ಮತೆಗಳ ಪರಿಣಾಮ ಇಲ್ಲಿ ಕುಳಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಬಂಡೆಗಳು ವಿರೂಪಗೊಳ್ಳುವುದು, ಕುಸಿಯುವುದು ಸಾಮಾನ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. ಟೆಂಡರ್‌ ಸಲ್ಲಿಸಿದಾಗ ಲಭ್ಯವಾದ ಮಾಹಿತಿಗಳಿಗೆ ಹೋಲಿಸಿದರೆ ಈ ಸುರಂಗ ನಿರ್ಮಾಣದ ಹಂತದ ಸವಾಲುಗಳು ಇನ್ನೂ ಹೆಚ್ಚು ಗಂಭೀರವಾಗಿಯೇ ಕಾಣುತ್ತದೆ ಎಂದು ನವಯುಗ ಕಂಪನಿಯ ಅಧಿಕಾರಿಗಳೂ ಹೇಳುತ್ತಾರೆ.

ದುಡಿಮೆಗಾರರ ಸವಾಲುಗಳು

ಈ ದುರಂತ ಸಂಭವಿಸಿದ ನಂತರ ಕಾರ್ಮಿಕರು ಹಾಗೂ ಕುಟುಂಬದವರು ಸಹ ಆತಂಕಕ್ಕೊಳಗಾಗಿದ್ದು, ಕೊಂಚ ಕಾಲ ಕಾರ್ಮಿಕರಿಗೆ ವಿಶ್ರಾಂತಿ ಪಡೆಯಲು ಅನುಮತಿ ನೀಡಲಾಗಿದೆ. AIIMS ನಲ್ಲಿ ತಪಾಸಣೆಗೊಳಗಾದ ಕಾರ್ಮಿಕರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು ತಮ್ಮ ಮನೆಗಳಿಗೆ ಮರಳುವಂತೆ ವೈದ್ಯರೂ ಸೂಚಿಸಿದ್ದಾರೆ. ಇನ್ನು ಕೆಲವು ದಿನಗಳ ನಂತರ ಕಾಮಗಾರಿಯನ್ನು ಆರಂಭಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಿಹಾರ, ಜಾರ್ಖಂಡ್‌, ಉತ್ತರಪ್ರದೇಶ, ಉತ್ತರಖಾಂಡ ದೇಶಗಳಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೌಕರಿ ಅರಸಿ ಬರುವ ಈ ದುಡಿಮೆಗಾರರ ಅನಿಶ್ಚಿತ ಬದುಕಿನಲ್ಲಿ ಇಂತಹ ದುರಂತಗಳು ದೀರ್ಘಕಾಲಿಕವಾದ ಆಘಾತಗಳನ್ನು ಉಂಟುಮಾಡುತ್ತವೆ. ಮರಳಿ ಕೆಲಸಕ್ಕೆ ಹೋಗದಿರುವಂತೆ ಕುಟುಂಬಗಳಿಂದ ಒತ್ತಡವೂ ಕೇಳಿಬರುತ್ತಿದೆ.

ಸಾಮಾನ್ಯವಾಗಿ ಮಾಸಿಕ 20 ಸಾವಿರ ಪಗಾರ, ಎರಡು ಹೊತ್ತಿನ ಊಟ ಪಡೆಯುವ ಇಲ್ಲಿನ ಕಾರ್ಮಿಕರು ದೂರದ ಊರುಗಳಲ್ಲಿರುವ ತಮ್ಮ ಪೋಷಕರು, ಕುಟುಂಬದವರಿಗೂ ಇಲ್ಲಿಂದಲೇ ಹಣ ರವಾನೆ ಮಾಡುತ್ತಾರೆ. ತಮ್ಮ ಬದುಕಿನುದ್ದಕ್ಕೂ ಹಿಮಾಲಯ ಚಾರಣವನ್ನು ಮತ್ತೊಂದು ರೀತಿಯಲ್ಲಿ ಕೈಗೊಳ್ಳುತ್ತಲೇ ಬರುವ ಈ ಕಾರ್ಮಿಕರ ಭವಿಷ್ಯ ನಿಸರ್ಗದ ಕೃಪೆಯನ್ನೂ ಅವಲಂಬಿಸಿರುತ್ತದೆ ಎನ್ನುವುದನ್ನು ಸುರಂಗ ಕುಸಿತದ ದುರಂತ ನಿರೂಪಿಸಿದೆ. ಸೂಕ್ಷ್ಮ ಭೂಪ್ರದೇಶದ ದುರ್ಬಲ ಪರ್ವತ ಶ್ರೇಣಿಯಲ್ಲಿ ನಿರ್ಮಿಸಲಾಗುವ ಹೆದ್ದಾರಿಯು ಭಕ್ತಾದಿಗಳಿಗೆ ಸುಗಮ ಪ್ರಯಾಣವನ್ನು ಕಲ್ಪಿಸುತ್ತದೆ. ಮೂಲಸೌಕರ್ಯ ಅಭಿವೃದ್ಧಿಯೇ ಪ್ರಧಾನವಾಗಿರುವ ನವ ಉದಾರವಾದದ ಡಿಜಿಟಲ್‌ ಆರ್ಥಿಕತೆಗೆ ಈ ಹೆದ್ದಾರಿಗಳು ಲಾಭದಾಯಕವೂ ಆಗುತ್ತದೆ.

ಈ ಮಾರುಕಟ್ಟೆ ಲಾಭ ಮತ್ತು ಭಕ್ತಾದಿ ಜನರ ಶ್ರದ್ಧಾನಂಬಿಕೆಗಳ ನಡುವೆ ಹೆದ್ದಾರಿ ಕಾಮಗಾರಿಯಲ್ಲಿ ತೊಡಗುವ ಸಾವಿರಾರು ಕಾರ್ಮಿಕರ ಬದುಕು ಹೀಗೆಯೇ ಸಾಗುತ್ತಿರುತ್ತದೆ. ಖಾಸಗಿ ಗುತ್ತಿಗೆದಾರರು ನೀಡುವ ಅಲ್ಪ ವೇತನದಲ್ಲೇ ತಮ್ಮ ಬದುಕು ಕಟ್ಟಿಕೊಳ್ಳುವ ಈ ದುಡಿಮೆಯ ಕೈಗಳು ಹೆದ್ದಾರಿಯ ಪೂರ್ಣ ನಿರ್ಮಾಣವಾದ ನಂತರ ಚರಿತ್ರೆಯ ವಿಸ್ಮೃತಿಗೆ ಜಾರಿಬಿಡುತ್ತವೆ. ರಸ್ತೆಗೆ ಆಕರ್ಷಕ ಹೆಸರನ್ನಿಡಲಾಗುತ್ತದೆ. ಹೆದ್ದಾರಿಯ ವಿಹಾರದಲ್ಲಿ ಆನಂದಿಸುವ ಉಳ್ಳವರು ರಸ್ತೆ ನಿರ್ಮಿಸಿದವರಿಗೆ, ಅಂದರೆ ಗುತ್ತಿಗೆ ಪಡೆದ ಕಂಪನಿ ಮತ್ತು ಸರ್ಕಾರಕ್ಕೆ ಮಾತ್ರ, ಕೃತಜ್ಞತೆ ಸಲ್ಲಿಸುತ್ತಾ ತಮ್ಮ ದೈವ ದರ್ಶನದ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳುತ್ತಾರೆ. ಈ ಸಂಭ್ರಮ-ಆತ್ಮತೃಪ್ತಿಯ ನಡುವೆ ಎಷ್ಟೋ ಜೀವಗಳು ಮರೆಯಾಗಿಬಿಟ್ಟಿರುತ್ತವೆ. ಜೋಷಿಮಠದ ದುರಂತದ ನೆನಪು ಮಸುಕಾಗುವ ಮುನ್ನವೇ ಸಿಲ್ಕ್ಯಾರಾ ಸುರಂಗ ಮತ್ತೊಮ್ಮೆ ನಮ್ಮನ್ನು ಎಚ್ಚರಿಸಿದೆ.

ನಾವು ಎಚ್ಚೆತ್ತುಕೊಳ್ಳುತ್ತೇವೆ ಆದರೆ ನಿಸರ್ಗದ ದುರ್ಬಲ ಒಡಲನ್ನು ಬಗೆಯುವ ನಮ್ಮ ಮಹತ್ವಾಕಾಂಕ್ಷಿ ನಿರ್ಮಾಣ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಮತ್ತೊಂದು ದುರಂತ ಸಂಭವಿಸುವವರೆಗೂ ಎಲ್ಲವೂ ತಣ್ಣಗೆ ನಡೆಯುತ್ತಿರುತ್ತದೆ. 41 ಶ್ರಮಜೀವಿಗಳು ಮತ್ತೊಂದು ನಿರ್ಮಾಣ ತಾಣಕ್ಕೆ ರವಾನೆಯಾಗುತ್ತಾರೆ. ಅವರ ಬದುಕು ಮತ್ತೊಂದು ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ಇವರನ್ನು ರಕ್ಷಿಸಿದ 12 Rat hole miners ನಮ್ಮ ನೆನಪುಗಳಿಂದ ನಿಧಾನವಾಗಿ ಮರೆಯಾಗುತ್ತಲೇ ಹೋಗುತ್ತಾರೆ. ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಪ್ರಗತಿಯ ಹಾದಿಯಲ್ಲಿ ಕಣ್ಮರೆಯಾಗುತ್ತಲೇ ಹೋಗುವ ಅಪಾರ ಸಂಖ್ಯೆಯ ದುಡಿಮೆಯ ಕೈಗಳು ಸದಾ ನೇಪಥ್ಯದಲ್ಲೇ ಉಳಿದುಬಿಡುತ್ತವೆ. ಸ್ವತಃ ಒಮ್ಮೆಯೂ ಚಾರ್‌ ಧಾಮ್‌ ಯಾತ್ರೆ ಮಾಡದೆಯೇ ನಾಲ್ಕು ಪುಣ್ಯಕ್ಷೇತ್ರಗಳಿಗೆ ಸುಗಮ ಹಾದಿ ಕಲ್ಪಿಸುವ ಸಾವಿರಾರು ಶ್ರಮಜೀವಿಗಳಿಗೆ ಲಾಲ್‌ ಸಲಾಂ.

( ಚಾರ್‌ ಧಾಮ್‌ ಹೆದ್ದಾರಿ ನಿರ್ಮಾಣದ ಸವಾಲುಗಳು ಸಮಸ್ಯೆಗಳು ಮುಂದಿನ ಭಾಗದಲ್ಲಿ)
-೦-೦-೦-೦

Tags: BJPCongress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Bank: 18 ಕೋಟಿ ರೂಪಾಯಿ ದರೋಡೆ

Next Post

ಶಾಲೆಗಳಿಗೆ ಬಾಂಬ್‌ ಬೆದರಿಕೆ: 48 FIR ದಾಖಲು, ತನಿಖೆಗೆ ವಿಶೇಷ ತಂಡ ರಚನೆ

Related Posts

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
0

-----ನಾ ದಿವಾಕರ---- ಕಾರ್ಪೋರೇಟ್‌ ಕೇಂದ್ರಿತ ನಗರೀಕರಣ ಪ್ರಕ್ರಿಯೆಯ ಒಂದು ಬಂಡವಾಳಶಾಹಿ ಸ್ವರೂಪ ಆಂಗ್ಲ ಭಾಷೆಯಲ್ಲಿ ಸ್ಮಾರ್ಟ್‌ (Smart) ಎಂಬ ಪದವನ್ನು ನಾಮಪದವಾಗಿಯೂ, ಲಿಂಗತಟಸ್ಥ ಪದವಾಗಿಯೂ ಬಳಸಲಾಗುತ್ತದೆ. ಕನ್ನಡದಲ್ಲಿ...

Read moreDetails
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025

Ravichandran: ಈ ವಾರ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಬಹು‌ ನಿರೀಕ್ಷಿತ ಚಿತ್ರ “ತಪಸ್ಸಿ”

July 1, 2025
Next Post
ಶಾಲೆಗಳಿಗೆ ಬಾಂಬ್‌ ಬೆದರಿಕೆ: 48 FIR ದಾಖಲು, ತನಿಖೆಗೆ ವಿಶೇಷ ತಂಡ ರಚನೆ

ಶಾಲೆಗಳಿಗೆ ಬಾಂಬ್‌ ಬೆದರಿಕೆ: 48 FIR ದಾಖಲು, ತನಿಖೆಗೆ ವಿಶೇಷ ತಂಡ ರಚನೆ

Please login to join discussion

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

July 2, 2025
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada