-ಕೃಷ್ಣಮಣಿ
ಲೋಕಸಭಾ ಚುನಾವಣೆ (Loksabha Election) ಸಮೀಪಿಸುತ್ತಿದೆ. ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಣೆ ಆಗಲಿದೆ. ಟಿಕೆಟ್ ಹಂಚಿಕೆ ಮಾಡುವುದಕ್ಕೆ ಎಲ್ಲಾ ಪಕ್ಷಗಳು ಸಭೆಯ ಮೇಲೆ ಸಭೆಗಳನ್ನು ಮಾಡುತ್ತಿದ್ದು, ಇಂದೂ ಕೂಡ ದೆಹಲಿಯಲ್ಲಿ ಬಿಜೆಪಿ(bjp) ಹಾಗೂ ಕಾಂಗ್ರೆಸ್ (congress) ಪಕ್ಷಗಳು ಮಹತ್ವದ ಸಭೆ ನಡೆಸುತ್ತಿವೆ. ಈ ಸಭೆ ಬೆನ್ನಲ್ಲೇ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S.Eshwarappa), ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕೆ ಇಳಿಯುವ ಗಟ್ಟಿ ಸಂದೇಶ ರವಾನೆ ಮಾಡಿದ್ದಾರೆ.

ಹಾವೇರಿ (Haveri) ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್ಗೆ ಟಿಕೆಟ್ ಕೊಡುವಂತೆ ಬೇಡಿಕೆ ಇಡಲಾಗಿದೆ. ಆದರೆ ಟಿಕೆಟ್ ಕೈತಪ್ಪುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಈಶ್ವರಪ್ಪ ಮೌನಕ್ಕೆ ಶರಣಾಗಿದ್ದಾರೆ. ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದಿದ್ದಾರೆ. ಆದರೆ ಕಾಂತೇಶ್ ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು. ಇಲ್ಲವಾದರೆ ಹಾವೇರಿಯಿಂದ ಕಾಂತೇಶ್ ಹಾಗೂ ಶಿವಮೊಗ್ಗದಿಂದ ಪಕ್ಷೇತರರಾಗಿ ಈಶ್ವರಪ್ಪ ಸ್ಪರ್ಧೆ ಖಚಿತ ಎಂದು ಈಶ್ವರಪ್ಪ ಹಾಗೂ ಕಾಂತೇಶ್ ಬೆಂಬಲಿಗ ಕಾರ್ಯಕರ್ತರು ಬಹಿರಂಗವಾಗಿಯೇ ಹೇಳಿದ್ದಾರೆ.

ಹಾವೇರಿ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂತೇಶ್ ಅಭಿಮಾನಿಗಳು ಬಹಿರಂಗ ಒತ್ತಾಯ ಮಾಡಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ (Prahlad joshi) ಮುತ್ತಿಗೆಯನ್ನೂ ಹಾಕಿದ್ದಾರೆ. ಶಿವಮೊಗ್ಗದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಮುತ್ತಿಗೆ ಹಾಕಿದ ಹಾವೇರಿ ಬಿಜೆಪಿ ಕಾರ್ಯಕರ್ತರು, ಈ ಕಾಂತೇಶ್ಗೆ ಟಿಕೆಟ್ ನೀಡುವತೆ ಆಗ್ರಹಿಸಿದ್ದಾರೆ. ಕಾಂತೇಶ್ಗೆ ಟಿಕೆಟ್ ಸಿಗದೇ ಇದ್ದರೆ ಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧೆ ಖಚಿತ ಎಂದಿದ್ದಾರೆ ಅಭಿಮಾನಿಗಳು.

ಕಾರ್ಯಕರ್ತರು ಅಥವಾ ಈಶ್ವರಪ್ಪ ಅಭಿಮಾನಿಗಳ ಹೆಸರಿನಲ್ಲಿ ಮುತ್ತಿಗೆ ಹಾಕಿ ಟಿಕೆಟ್ಗಾಗಿ ಆಗ್ರಹ ಮಾಡಿದವರು ಈಶ್ವರಪ್ಪ ಅಭಿಮಾನಿಗಳೇ ಇರಬಹುದು. ಆದರೆ ಅವರು ಹೇಳಿರುವ ಹೇಳಿಕೆ ಮಾತ್ರ ಸ್ವತಃ ಕೆ.ಎಸ್ ಈಶ್ವರಪ್ಪ ಅವರದ್ದೇ ಆಗಿದೆ. ಒಂದು ವೇಳೆ ಹಾವೇರಿಯಲ್ಲಿ ಕಾಂತೇಶ್ಗೆ ಟಿಕೆಟ್ ಸಿಗದೆ ಹೋದರೆ ಈಶ್ವರಪ್ಪ ಶಿವಮೊಗ್ಗದಲ್ಲಿ ಸ್ಪರ್ಧೆ ಎಂದರೆ ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲುವಿಗೆ ಅಡ್ಡಗಾಲು ಎಂದೇ ವ್ಯಾಖ್ಯಾನಿಸಬೇಕಿದೆ. ಒಂದು ವೇಳೆ ಈಶ್ವರಪ್ಪ ಸ್ಪರ್ಧೆ ಮಾಡಿ ಕೆಲವೊಂದಷ್ಟು ಸಾವಿರ ಮತಗಳನ್ನು ಸೆಳೆದುಕೊಂಡರೆ ರಾಘವೇಂದ್ರನನ್ನು ಸೋಲಿಸ್ತೇನೆ ಎನ್ನುವುದು ಯಡಿಯೂರಪ್ಪಗೆ ಕಳುಹಿಸಿದ ಸಂದೇಶ ಎಂದೇ ಹೇಳಲಾಗ್ತಿದೆ.

ಅತ್ತ ಹಾವೇರಿಯನ್ನೂ ಕಾಂತೇಶ್ನನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಮಾಡಿ ಅಲ್ಲೂ ಬಿಜೆಪಿ ಪಕ್ಷದ ಅಭ್ಯರ್ಥಿ ಸೋಲುವಂತೆ ಮಾಡುತ್ತೇವೆ ಎಂದು ಬೆಂಬಲಿಗರ ಮೂಲಕ ಗುಡುಗಿದ್ದಾರೆ. ಆದರೆ ಕಳೆದ ಬಾರಿಯೇ ಈಶ್ವರಪ್ಪಗೆ ಟಿಕೆಟ್ ನಿರಾಕರಣೆ ಮಾಡಿದ್ದ ಬಿಜೆಪಿ ಹೈಕಮಾಂಡ್ ನಾಯಕರು, ಸ್ವಯಂ ನಿವೃತ್ತಿ ಬಗ್ಗೆ ಘೋಷಣೆ ಮಾಡುವಂತೆ ನೋಡಿಕೊಂಡಿದ್ದರು. ಆ ಬಳಿಕ ಪಕ್ಷದ ಪರವಾಗಿಯೇ ಮಾತನಾಡಿದ್ದ ಈಶ್ವರಪ್ಪ, ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಹಾವೇರಿ, ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಸುತ್ತಾಡಿ ಪಕ್ಷವನ್ನೂ ಸಂಘಟಿಸಿದ್ರು. ಇದೀಗ ಟಿಕೆಟ್ ಸಿಗುವುದು ಡೌಟ್ ಎನ್ನಲಾಗ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಮಲಕ್ಕೆ ತಿರುಗೇಟು ಕೊಡ್ತಾರಾ ಅನ್ನೋ ಕೌತುಕ ಮನೆ ಮಾಡಿದೆ.