ಕಾರ್ಮಿಕರ ಆತಂಕ ನಿಜವಾಗಿದೆ. ತಮ್ಮ ಭವಿಷ್ಯ ನಿಧಿಯ ಬಡ್ಡಿ ಮೇಲೂ ಮೋದಿ ಸರ್ಕಾರ ಕಣ್ಣು ಹಾಕಿದೆ ಎಂಬ ವಿಷಯ ಹಲವು ತಿಂಗಳ ಹಿಂದೆಯೇ ಕಾರ್ಮಿಕರಿಗೆ ತಿಳಿದಿತ್ತು. ಆದರೆ ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಆದರೀಗ ಅಧಿಕೃತವಾಗಿ ದೃಢಪಟ್ಟಿದೆ. 2021-22 ನೇ ಸಾಲಿಗೆ ಕಾರ್ಮಿಕರ ಭವಿಷ್ಯ ನಿಧಿಯ ಮೇಲಿನ ಬಡ್ಡಿಯನ್ನು ಶೇ.8.5ರಿಂದ 8.1ಕ್ಕೆ ತಗ್ಗಿಸಲಾಗಿದೆ. ಅಂದರೆ, ಬಡ್ಡಿ ರೂಪದ ಆದಾಯದಲ್ಲಿ ಶೇ.5ರಷ್ಟು ನಷ್ಟವಾಗಲಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರ ಭವಿಷ್ಯ ನಿಧಿಯ ಬಡ್ಡಿದರವನ್ನು ಸತತವಾಗಿ ಕಡಿತ ಮಾಡುತ್ತಲೇ ಬರಲಾಗಿದೆ. ಈಗ ನಿಗಧಿ ಮಾಡಿರುವ ಬಡ್ಡಿದರವು ಒಂದು ದಶಕದಲ್ಲೇ ಅತಿ ಕನಿಷ್ಠ ಮೊತ್ತದ ಬಡ್ಡಿಯಾಗಿದೆ.
ಮೇಲ್ನೋಟಕ್ಕೆ ಶೇ.0.4ರಷ್ಟು ಬಡ್ಡಿಯನ್ನು ಕಡಿತ ಮಾಡಲಾಗಿದೆ ಎಂದು ಅನಿಸಿದರೂ, ದೀರ್ಘಕಾಲದಲ್ಲಿ ಈ ಕಡಿತದಿಂದಾಗಿ ಕಾರ್ಮಿಕರಿಗೆ ಭಾರಿ ನಷ್ಟವಾಗಲಿದೆ. ಅಲ್ಲದೇ, ಕೇಂದ್ರ ಸರ್ಕಾರಕ್ಕೆ ಇದರಿಂದ ಭಾರೀ ಲಾಭವೂ ಆಗಲಿದೆ.
ಕಾರ್ಮಿಕರ ಭವಿಷ್ಯ ನಿಧಿಯ ಬಡ್ಡಿಯನ್ನು ಕೇಂದ್ರ ಹಣಕಾಸು ಸಚಿವಾಲಯವೇ ನಿಯಂತ್ರಿಸುತ್ತದೆ. ಕಾರ್ಮಿಕರ ಭವಿಷ ನಿಧಿ ಸಂಘಟನೆ (ಇಪಿಎಫ್ಒ) ಆಡಳಿತ ಮಂಡಳಿಯು ಹಣಕಾಸು ಸಚಿವಾಲಯದ ಸೂಚನೆಯಂತೆ ನಿರ್ಧಾರಗಳನ್ನು ಕೈಗೊಳ್ಳುತ್ತದೆ.
2021-22ನೇ ಸಾಲಿನ ಭವಿಷ್ಯ ನಿಧಿ ಬಡ್ಡಿ ನಿರ್ಧರಿಸುವ ಸಲುವಾಗಿ ಮಾರ್ಚ್ 12ರಂದು ಸಭೆ ಸೇರಿದ್ದ ಇಪಿಎಫ್ಒ ಆಡಳಿತ ಮಂಡಳಿ ಶೇ.8.1ರಷ್ಟಕ್ಕೆ ನಿಗದಿ ಮಾಡಿದೆ. 2020-21ನೇ ಸಾಲಿನಲ್ಲಿ ಕೂಡ ಬಡ್ಡಿದರವು ಶೇ.8.5ರಷ್ಟಿತ್ತು.
ಕಡಿತವಾಗಿರುವ ಬಡ್ಡಿ ದರವು ಶೇ.0.4ರಷ್ಟಾದರೂ, ಕಾರ್ಮಿಕರಿಗೆ ದಕ್ಕುವ ಬಡ್ಡಿ ರೂಪದ ಆದಾಯದಲ್ಲಿ ಶೇ.5ರಷ್ಟು ನಷ್ಟವಾಗುತ್ತದೆ. ಮತ್ತು ಈ ನಷ್ಟವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತದೆ.
ಇಪಿಎಫ್ಒ ಸುಮಾರು 6 ಕೋಟಿ ಕಾರ್ಮಿಕರ ಭವಿಷ್ಯ ನಿಧಿಯ 15 ಲಕ್ಷ ಕೋಟಿ ರೂಪಾಯಿಗಳನ್ನು ನಿರ್ವಹಿಸುತ್ತದೆ.
ಬಡ್ಡಿಕಡಿತದಿಂದ ಕೇಂದ್ರ ಸರ್ಕಾರಕ್ಕೆ 6,000 ಕೋಟಿ ಲಾಭ
15 ಲಕ್ಷ ಕೋಟಿ ರೂಪಾಯಿಗಳಿಗೆ ವಾರ್ಷಿಕ ಬಡ್ಡಿ ಶೇ.8.5ರಂತೆ 1,27,500 ಕೋಟಿ ರುಪಾಯಿಗಳಾಗುತ್ತದೆ. ಬಡ್ಡಿದರ ಶೇ.8.1ರಷ್ಟಕ್ಕೆ ತಗ್ಗಿಸಿದಾಗ ಬಡ್ಡಿ ಮೊತ್ತವು 121,500 ಕೋಟಿ ರುಪಾಯಿಗಳಿಗೆ ತಗ್ಗುತ್ತದೆ. ಬಡ್ಡಿದರ ತಗ್ಗಿಸಿರುವುದರಿಂದ ಕೇಂದ್ರ ಸರ್ಕಾರಕ್ಕೆ 6,000 ಕೋಟಿ ಲಾಭವಾದಂತಾಗುತ್ತದೆ.
6 ಕೋಟಿ ಕಾರ್ಮಿಕರಿಗೆ ದಕ್ಕಬೇಕಿದ್ದ ಈ 6000 ಕೋಟಿ ರೂಪಾಯಿಗಳು ಕೇಂದ್ರ ಸರ್ಕಾರದ ಪಾಲಾಗುತ್ತಿದೆ.