ಪ್ರೇಮದ ವಿಚಾರವಾಗಿ ಯುವಕನೋರ್ವ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಪ್ರೆಸಿಡನ್ಸಿ ಕಾಲೇಜಿನಲ್ಲಿ ನಡೆದಿದೆ.
ಕೋಲಾರ ಮೂಲದ ಲಯಸ್ಮಿತಾ(19) ಕೊಲೆಯಾದ ಯುವತಿ ಕೃತ್ಯ ಎಸಗಿದ ಆರೋಪಿ ಹೆಸರು ಪವನ್ ಕಲ್ಯಾಣ್ ಎಂದು ತಿಳಿದು ಬಂದಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕ-ಯುವತಿ ಒಂದೇ ಊರಿನವರಾಗಿದ್ದು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ ಎಂದಿನಂತೆ ಕಾಲೇಜಿಗೆ ಬಂದಿದ್ದಾಳೆ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿರುವ ಆರೋಪಿ ಯುವಕ ಯುವತಿ ಜೊತೆ ಮಾತನಾಡಲು ಯುವತಿ ಕಾಲೇಜು ಬಳಿ ಬಂದಿದ್ದ.

ಯುವತಿ ಜೊತೆ ಮಾತನಾಡುವ ವೇಳೆ ಆರೋಪಿ ಗಲಾಟೆ ಮಾಡಿದ್ದು ಏಕಾಏಕಿ ಆಕೆಯ ಮೇಲೆ ಚಾಕುವಿನಿಂದ ಮನಸ್ಸೋಇಚ್ಚೆ ಹಲ್ಲೆ ನಡೆಸಿದ್ದಾನೆ ಮತ್ತು ತಾನು ಇರಿದುಕೊಂಡಿದ್ದಾನೆ. ಇದನ್ನು ಗಮನಿಸಿದ ಸಹಪಾಠಿಗಳು ಹಾಗೂ ಭದ್ರತಾ ಸಿಬ್ಬಂದಿ ಕೂಡಲ್ಲೇ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವವಾಗಿದ್ದ ಕಾರಣ ಯುವತಿ ಲಯಸ್ಮಿತಾ ಮೃತಪಟ್ಟಿದ್ದಾಳೆ.
ಆರೋಪಿ ಪವನ್ ಕಲ್ಯಾಣ್ ಸ್ಥಿತಿ ಚಿಂತಾಜನಕವಾಗಿದ್ದು ಪ್ರೇಮದ ವಿಚಾರಕ್ಕೆ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






