ಎರಡು ಕ್ಷೇತ್ರಗಳ ಉಪಕದನದ ಬಳಿಕ ರಾಜ್ಯ ಮತ್ತೊಂದು ಮಿನಿ ಸಮರಕ್ಕೆ ರೆಡಿಯಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ವಿಧಾನಪರಿಷತ್ ಪ್ರವೇಶಿಸಿದ್ದ ಸದಸ್ಯರ ಅವಧಿ ಮುಗಿಯೋದಕ್ಕೆ ಎರಡು ತಿಂಗಳು ಬಾಕಿ ಇರುವಂತೆಯೇ ಮುಂದಿನ ತಿಂಗಳು ಚುನಾವಣೆ ಘೋಷಿಸಲಾಗಿದೆ. ಮೇಲ್ಮನೆ ಸೀಟು ಗೆಲ್ಲಲು ಇದೀಗ ಭರ್ಜರಿ ತಯಾರಿ ನಡೀತಿದೆ.
ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ವಿಧಾನಪರಿಷತ್ ಪ್ರವೇಶಿಸಿ ಸದಸ್ಯರಾಗಿದ್ದ 25 ಮಂದಿಯ ಅಧಿಕಾರದ ಅವಧಿ ಮುಂದಿನ ವರ್ಷದ ಜನವರಿ 5ಕ್ಕೆ ಮುಕ್ತಾಯವಾಗಲಿದೆ. ಇದೇ ಕಾರಣಕ್ಕಾಗಿ ಚುನಾವಣಾ ಆಯೋಗ, ಅಧಿಕಾರದ ಅವಧಿ ಮುಕ್ತಾಯವಾಗುವ ಮುನ್ನವೇ, 25 ಸ್ಥಾನಗಳಿಗೂ ನಿನ್ನೆಯೇ ಚುನಾವಣಾ ಅಧಿಸೂಚನೆಯನ್ನು ಹೊರಡಿಸಿ ಆದೇಶಿಸಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ 25 ಮಂದಿ ನೂತನ ಸದಸ್ಯರ ಆಯ್ಕೆಯಾಗಬೇಕಿದ್ದು, ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್ 23 ಕೊನೆಯ ದಿನವಾಗಿದೆ. ನವೆಂಬರ್ 24 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿಸೆಂಬರ್ 10 ರಂದು ಮತದಾನ ಹಾಗೂ 14 ರಂದು ಫಲಿತಾಂಶ ಘೋಷಣೆಯಾಗಲಿದೆ. ಇನ್ನು ವಿಧಾನಪರಿಷತ್ನ ಒಟ್ಟು ಸ್ಥಾನಗಳು 75 ಆಗಿದ್ದು, ಈ ಪೈಕಿ ಡಿಸೆಂಬರ್ 10 ರಂದು 25 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಇನ್ನು ವಿಧಾನಪರಿಷತ್ನಲ್ಲಿ ಪಕ್ಷಗಳ ಒಟ್ಟಾರೆ ಬಲಾಬಲ ಹೀಗಿದೆ. ಸದ್ಯ ವಿಧಾನಪರಿಷತ್ ಸದಸ್ಯರ ಪೈಕಿ ಬಿಜೆಪಿಯಿಂದ 32, ಕಾಂಗ್ರೆಸ್ನಿಂದ 29, ಜೆಡಿಎಸ್ನಿಂದ 13 ಹಾಗೂ ಪಕ್ಷೇತರರಾಗಿ 1 ಸದಸ್ಯರು ಹೀಗೆ ಒಟ್ಟು 75 ಸದಸ್ಯರು ಮೇಲ್ಮನೆಯಲ್ಲಿದ್ದಾರೆ.
ಈ 75 ಸದಸ್ಯರ ಪೈಕಿ 2022ರ ಜನವರಿ 5 ಕ್ಕೆ 25 ಸದಸ್ಯರ ಅಧಿಕಾರ ಮುಕ್ತಾಯವಾಗುತ್ತಿದ್ದು, ಹೊಸ ಸದಸ್ಯರ ಆಯ್ಕೆ ಡಿಸೆಂಬರ್ 10 ರಂದೇ ಆಗಲಿದೆ. ಸದ್ಯ ವಿಧಾನಪರಿಷತ್ನಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟವಾದ ಬಹುಮತವಿಲ್ಲ. ಆದ್ರೆ ಜೊತೆಗೆ ವಿಧಾನಸಭೆಯಲ್ಲಿ ಯಾರು ಅಧಿಕಾರ ಹಿಡಿಯುತ್ತಾರೋ, ಅವರೇ ಸಹಜವಾಗಿ ಮೇಲ್ಮನೆಯಲ್ಲೂ ಅಧಿಕಾರದ ಗಾದಿಯಲ್ಲಿ ಇರುತ್ತಾರೆ.
ಇನ್ನು ಕಾಂಗ್ರೆಸ್ನ 14, ಬಿಜೆಪಿಯ 6, ಜೆಡಿಎಸ್ನ 4 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಹೀಗೆ ವಿಧಾನಪರಿಷತ್ನ 25 ಸದಸ್ಯರ ಅವಧಿ ಅಂತ್ಯವಾಗಲಿದೆ.

ಇನ್ನು ವಿಧಾನಪರಿಷತ್ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗ್ತಿದ್ದಂತೆ ತೆರೆಮರೆಯಲ್ಲೇ ಪಕ್ಷಾಂತರ ಪರ್ವ ಶುರುವಾಗಿದೆ. ಜೆಡಿಎಸ್ ಸದಸ್ಯರಾಗಿರೋ ಸಂದೇಶ್ ನಾಗರಾಜ್ ಹಾಗೂ ಸಿ.ಆರ್. ಮನೋಹರ್ ಬಿಜೆಪಿ ಕದ ತಟ್ಟಿದ್ದಾರೆ. ಇನ್ನು ಯಾರಿಗೆಲ್ಲಾ ಟಿಕೆಟ್ ಎಂಬುದು ಸದ್ಯದಲ್ಲೇ ಘೋಷಣೆಯಾಗಲಿದ್ದು, ಡಿಸೆಂಬರ್ 10 ಕ್ಕಂತೂ 25 ವಿಧಾನಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 14 ರಂದು ಫಲಿತಾಂಶ ಹೊರಬೀಳಲಿದೆ