ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಏರಿದ್ದರೂ, ಚುನಾವಣೆಯ ಗೊಂದಲಗಳು ಮಾತ್ರ ಇನ್ನೂ ನಿವಾರಣೆಯಾಗಿಲ್ಲ. ಬಂಗಾಳದ ಎಂಟು ಜನ ಬಿಜೆಪಿ ನಾಯಕರು ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಗಳ ವಿಚಾರಣೆ ಸೋಮವಾರ ನಡೆಯಲಿದೆ.

ಚುನಾವಣೆಯಲ್ಲಿ ಸೋಲನ್ನಪ್ಪಿದ ಎಂಟು ಜನ ಶಾಸಕರು ಈಗ ಮರು ಮತ ಎಣಿಕೆಯನ್ನು ಬಯಸಿದ್ದಾರೆ. ನಂದಿಗ್ರಾಮದಲ್ಲಿ ಮತಗಳ ಮರು ಎಣಿಕೆಯಾಗಬೇಕು ಎಂದು ಮಮತಾ ಬ್ಯಾನರ್ಜಿ ಅವರು ಹೈಕೋರ್ಟ್ ಮೆಟ್ಟಿಲೇರಿದ ನಂತರ ಈ ಬೆಳವಣಿಗೆಗಳು ನಡೆದಿವೆ.
ಬಿಜೆಪಿ ನಾಯಕರಾದ ಕಲ್ಯಾಣ್ ಚೌಬೆ ಅವರು 167 ಮಣಿಕೋಟಾ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದರು. ಈಗ ಹೈಕೋರ್ಟ್ ಮೊರೆ ಹೋಗಿರುವ ಅವರು, ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಹಿಂಸಾಚಾರ ನಡೆದಿತ್ತು. ನನ್ನ ಮೇಲೆ ದಾಳಿಯೂ ನಡೆದಿತ್ತು. ಮತ ಎಣಿಕೆ ಕೇಂದ್ರದಲ್ಲಿ ಟಿಎಂಸಿಯ ಅನಧಿಕೃತ ಪೋಲಿಂಗ್ ಏಜೆಂಟ್ ಗಳು ಹಾಜರಿದ್ದರು. ಈ ಕುರಿತಾಗಿ ರಾಜ್ಯ ಚುನಾವಣಾ ಆಯೋಗ ಮತ್ತು ಸ್ಥಳೀಯ ಚುನಾವಣಾ ಅಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದೇನೆ. ಇದರ ಆಧಾರದ ಮೇಲೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇನೆ, ಎಂದು ಹೇಳಿದ್ದಾರೆ.

ಜಲಪಾಯಿಗುರಿ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಎದುರು ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಸೌಜಿತ್ ಸಿಂಘಾ ಅವರು ಮರು ಮತ ಎಣಿಕೆ ನಡೆದಲ್ಲಿ ನೂರಕ್ಕೆ ನೂರು ಶೇಕಡಾ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಮರು ಮತ ಎಣಿಕೆ ನಡೆಯಲೇಬೇಕು ಎಂದು ಪಟ್ಟು ಹಿಡಿದ್ದಾರೆ.
“ನನಗೆ ಕೇವಲ 941 ಮತಗಳು ಲಭಿಸಿದ್ದವು. ನನಗೆ ಸೇರಿದಂತೆ ಎಲ್ಲರಿಗೂ ಆಶ್ಚರ್ಯ ಉಂಟಾಗಿತ್ತು. ಚುನಾವಣೆಯ ದಿನ ಇವಿಎಂಗಳನ್ನು ಕೊಂಡೊಯ್ಯುತ್ತಿದ್ದ ವಾಹನಕ್ಕೆ ಜನರ ಗುಂಪೊಂದು ಮುತ್ತಿಗೆ ಹಾಕಿತ್ತು. ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ 50 ಕಾರ್ಯಕರ್ತರಿಗೆ ಮಾತ್ರ ಅವಕಾಶ ಕೊಟ್ಟಿದ್ದರು. ಟಿಎಂಸಿಯ ನೂರಕ್ಕೂ ಹೆಚ್ಚು ಕಾರ್ಯಕರ್ತರು ಅಲ್ಲಿದ್ದರು. ಮತ ಎಣಿಸುವಾಗ ಮೊದಲು ನಾನು ಮುನ್ನಡೆ ಸಾಧಿಸಿದ್ದೆ. ಆದರೆ, ಏಕಾಏಕಿ ಟಿಎಂಸಿ ಅಭ್ಯರ್ಥಿಯ ಮುನ್ನಡೆ ಸಾವಿರ ದಾಟಿತು. ಇದು ಸಂಶಯಾಸ್ಪದವಾಗಿದೆ,” ಎಂದು ಚೌಬೆ ಹೇಳಿದ್ದಾರೆ.

ಇನ್ನು, ಮಹಿಷದಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಸ್ವನಾಥ್ ಬ್ಯಾನರ್ಜಿ ಅವರು ಕೂಡಾ ಮರು ಎಣಿಕೆಗೆ ಅವಕಾಶ ನೀಡಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿದೆ. ಚುನಾವಣಾ ಆಯೋಗವು ಸುವೆಂಧು ಅಧಿಕಾರಿಯನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿದೆ.

ದೀದಿ ಅರ್ಜಿ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು, 50 ಕ್ಷೇತ್ರಗಳ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟ್ ಮೊರೆಹೋಗುವುದಾಗಿ ಹೇಳಿದ್ದರು. ಯಾವ ಕ್ಷೇತ್ರಗಳಲ್ಲಿ ಸೋಲಿನ ಅಂತರ ಕಡಿಮೆ ಇದೆಯೋ, ಆ ಕ್ಷೇತ್ರಗಳಲ್ಲಿ ಮರು ಮತ ಎಣಿಕೆ ಆಗಬೇಕು ಎಂದು ಆಗ್ರಹಿಸಿದ್ದರು.