ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಗಳ ದುರ್ಬಳಕೆ ಹಾಗೂ ಹಣಕಾಸು ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ಬಂಧನವಾಗಿದ್ದ ಎಂಟು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಹಿಂದೆ ನೀಡಲಾಗಿದ್ದ 3 ದಿನಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡಿದ್ದರಿಂದ ಭ್ರಷ್ಟಾಚಾರ ತಡೆ ಕಾಯ್ದೆಯ ವಿಶೇಷ ನ್ಯಾಯಾಧೀಶ ರಜತ್ ವರ್ಮಾ ಅವರ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯ ಜುಲೈ ಮಧ್ಯಭಾಗದವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ರಾಮ ಮಂದಿರದ ದೇಣಿಗೆ ಹಣ ವಂಚಿಸಿರುವ ಆರೋಪದ ಮೇಲೆ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ, ತಿನ್ನು ಯಾದವ್, ಮನೀಶ್ ಯಾದವ್ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ. ತನಿಖೆ ವೇಳೆ ಪೊಲೀಸರು ಆರೋಪಿಗಳಿಂದ ಸುಮಾರು 79.85 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಕೌಶಲ್ಪುರಿಯಲ್ಲಿರುವ ಸೂತ್ರಧಾರಿ ಅನುಕಲ್ಪ್ ಮಿಶ್ರಾ ನಿವಾಸದಿಂದಲೇ 20 ಲಕ್ಷ ರೂ. ಪತ್ತೆಯಾಗಿದೆ.

ವಿಶೇಷ ತನಿಖಾ ತಂಡ ಮಂದಿರದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, 39 ದಿನಗಳಲ್ಲಿ ಸುಮಾರು 70 ಬಾರಿ ದೇಣಿಗೆ ಹಣ ಕದ್ದು, ಮಂದಿರದ ಶೌಚಾಲಯಗಳಲ್ಲಿ ಅಡಗಿಸಿಟ್ಟು ನಂತರ ರಾತ್ರಿ ವೇಳೆ ಸಾಗಿಸುತ್ತಿದ್ದ ದೊಡ್ಡ ಜಾಲ ಪತ್ತೆಯಾಗಿದೆ.







