ಬೆಳಗಾವಿ/ಬೆಂಗಳೂರು : ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ಸಹೋದರಿ ಪತಿಯೂ ಆಗಿರುವ ಅಬಕಾರಿ ಇಲಾಖೆಯ(Excise Department) ಉನ್ನತ ಅಧಿಕಾರಿಯ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭಾರಿ ದಾಳಿ ನಡೆಸಿದ್ದಾರೆ.

ಬೆಳಗಾವಿಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ ಮಂಜುನಾಥ ಮನೆ ಮೇಲೆ ಇಡಿ ದಾಳಿ ನಡೆದಿದ್ದು, ಬೆಳಗಾವಿ, ಮೈಸೂರು, ಬೆಂಗಳೂರು, ಅರಿಸಿಕೇರೆ ಸೇರಿ ಆರು ಕಡೆ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.
ಮೈಸೂರಲ್ಲಿರುವ ವೈ ಮಂಜುನಾಥ ಸ್ನೇಹಿತೆ ಮನೆ, ಬೆಂಗಳೂರಲ್ಲಿರುವ ಮಂಜುನಾಥಗೆ ಸೇರಿದ ಅಪಾರ್ಟ್ಮೆಂಟ್ ಮೇಲೆ ದಾಳಿಯಾಗಿದೆ. ಹರಪ್ಪನಹಳ್ಳಿಯ ಅರಸಿಕೇರೆಯಲ್ಲಿರುವ ಮಂಜುನಾಥ ಆಪ್ತನಿಗೂ ಇಡಿ ಶಾಕ್ ತಗುಲಿದೆ.

ಇನ್ನುಳಿದಂತೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಮಂಜುನಾಥ ಸ್ನೇಹಿತನ ಮನೆ ಮೇಲೂ ರೇಡ್ ಆಗಿದೆ. ಪ್ರಮುಖವಾಗಿ ಸತೀಶ್ ಜಾರಕಿಹೊಳಿ ಬಾಮೈದ ಅಷ್ಟೇ ಅಲ್ಲದೆ ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಪುತ್ರನೂ ಆಗಿರುವ ಮಂಜುನಾಥ ಬೇನಾಮಿ ಹೆಸರಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಲಾಗಿದೆ.

ಸದ್ಯ ಬೆಂಗಳೂರಿನ ಅಪಾರ್ಟ್ಮೆಂಟ್‌ನಲ್ಲಿರುವ ಮಂಜುನಾಥ, ಅಲ್ಲಿಯೂ ಬೆಂಗಳೂರು ಇಡಿ ಅಧಿಕಾರಿಗಳ ದಾಳಿಗಳು ನಡೆಸಿದ್ದಾರೆ. ಇನ್ನೂ ಪ್ರಮುಖವಾಗಿ ದಾಳಿಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೇಚ್ಚರಿಕೆ ವಹಿಸಿರುವ ಇಡಿ ಅಧಿಕಾರಿಗಳು ಅರೆಸೇನಾ ಪಡೆಯ ಭದ್ರತೆಯ ನಡುವೆ ದಾಳಿಯನ್ನು ನಡೆಸಿದೆ. ಗೋವಾ ಹಾಗೂ ಕರ್ನಾಟಕ ವಿಭಾಗದ ಅಧಿಕಾರಿಗಳು ಜಂಟಿ ದಾಳಿಯನ್ನು ನಡೆಸಿರುವುದು ಸದ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಚರ್ಚೆಗೆ ಗ್ರಾಸವಾಗಿದೆ.






