• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಾಂವಿಧಾನಿಕ ಮೀಸಲಾತಿ-ಸಮಾಜ ಸುಧಾರಣೆ

ಸಾಮಾಜಿಕ ಉನ್ನತೀಕರಣವನ್ನು ಜೀವನ ಮೌಲ್ಯಗಳ ಚೌಕಟ್ಟಿನೊಳಗಿಟ್ಟು ನೋಡಬೇಕು

ಪ್ರತಿಧ್ವನಿ by ಪ್ರತಿಧ್ವನಿ
June 24, 2026
in ಅಂಕಣ
0
ಸಾಂವಿಧಾನಿಕ ಮೀಸಲಾತಿ-ಸಮಾಜ ಸುಧಾರಣೆ
Share on WhatsAppShare on FacebookShare on Telegram

ನಾ ದಿವಾಕರ

ADVERTISEMENT

ಭಾರತೀಯ ಸಮಾಜದಲ್ಲಿ ಶತಮಾನಗಳಿಂದಲೂ ಗುರುತಿಸಬಹುದಾದ ಒಂದು ಸಮಾನ ಲಕ್ಷಣ ಎಂದರೆ ಮನುಷ್ಯ ಜೀವನದ ಪ್ರತಿಯೊಂದು ಹಂತದಲ್ಲೂ, ಪ್ರತಿ ಘಟ್ಟದಲ್ಲೂ ಆಳವಾಗಿ ಬೇರುಬಿಟ್ಟಿರುವ ವಿಭಜಕ ಅಲೋಚನೆಗಳು. ಒಡೆದು ಆಳುವ ವರ್ಗವೊಂದು ಜಾತಿ ವ್ಯವಸ್ಥೆಯ ಶ್ರೇಣಿಯನ್ನು ಅತಿಕ್ರಮಿಸಿ ತನಗಿಂತಲೂ ಕೆಳಗಿನ ಸಮಾಜಗಳ ನಡುವೆ ಶಾಶ್ವತ ಬಿರುಕುಗಳನ್ನು ಸೃಷ್ಟಿಸುತ್ತಲೇ ಇರುವುದು ಇದರ ಒಂದು ಆಯಾಮ. ಮತ್ತೊಂದು ಬದಿಯಲ್ಲಿ ತಳಸ್ತರದ ಸಮಾಜದಲ್ಲಿ ಈ ಬಿರುಕುಗಳನ್ನೇ ಮತ್ತಷ್ಟು ಹಿಗ್ಗಿಸುತ್ತಾ, ಎಂದೂ ಒಂದಾಗದ ರೀತಿಯಲ್ಲಿ ಸಾಂಸ್ಕೃತಿಕ-ಧಾರ್ಮಿಕ ಜೀವನಶೈಲಿಯನ್ನು ರೂಢಿಸಿಕೊಳ್ಳುವುದನ್ನೂ ಕಾಣಬಹುದು. ನಮ್ಮ ಸಮಾಜದ ಈ ಪ್ರಾಚೀನ ಒಳಬಿರುಕುಗಳೇ (Ancient Faultlines) ವರ್ತಮಾನದ ಪಿಡುಗುಗಳಾಗಿರುವ ಪಿತೃಪ್ರಧಾನತೆ, ಊಳಿಗಮಾನ್ಯ ಧೋರಣೆ, ಜಾತಿ-ಮತ ಶ್ರೇಷ್ಠತೆ, ಸಾಂಸ್ಕೃತಿಕ ಆಧಿಪತ್ಯ ಮತ್ತು ಆರ್ಥಿಕ ಯಜಮಾನಿಕೆಯ ಲಕ್ಷಣಗಳಿಗೆ ಮೂಲಾಧಾರವಾಗಿವೆ.

ಸಾಮಾನ್ಯ ಸಾಮಾಜಿಕ ಸಂಕಥನಗಳಲ್ಲಿ (Social Discourses) ಜಾತಿ ವ್ಯವಸ್ಥೆಯ ಜಟಿಲ ಸಿಕ್ಕುಗಳನ್ನು ಬ್ರಾಹ್ಮಣಶಾಹಿಯ ಯಜಮಾನಿಕೆಯಲ್ಲಿ ಗುರುತಿಸಬಹುದಾದರೂ, ಆಧುನಿಕ ಜಗತ್ತಿನ ಮಾನವ ಸಮಾಜವನ್ನು ನಿಯಂತ್ರಿಸುತ್ತಿರುವ ಅರ್ಥ ವ್ಯವಸ್ಥೆಗಳು, ಪ್ರಜಾಪ್ರಭುತ್ವವನ್ನೂ ಒಳಗೊಂಡಂತೆ ವಿವಿಧ ಆಳ್ವಿಕೆಯ ಸ್ವರೂಪಗಳು, 21ನೆಯ ಶತಮಾನದಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಆರ್ಥಿಕತೆ ಇವೆಲ್ಲವೂ ಸಹ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸ್ತರೀಯ ನೆಲೆಯಲ್ಲಿ ಪ್ರಭಾವಿಸುತ್ತವೆ. ರಾಜಕೀಯವಾಗಿ ಭಾರತ ಮತ್ತೊಮ್ಮೆ ಹಿಂದುತ್ವದ ಮುಖಾಂತರ ಬ್ರಾಹ್ಮಣಶಾಹಿ ಸಾಂಪ್ರದಾಯಿಕತೆಯ ಕಡೆಗೆ ಹೊರಳುತ್ತಿರುವುದು ವಾಸ್ತವವಾದರೂ, ಸಾಂಸ್ಕೃತಿಕವಾಗಿ ಎಲ್ಲ ಜಾತಿಗಳನ್ನೂ ಒಳಗೊಂಡಂತಹ ಒಂದು ಅರೆ-ಆಧುನಿಕ (Semi Modern) , ಅರೆ-ನಾಗರಿಕ (Semi Civilised) ಹಾಗೂ ಅರೆ-ಊಳಿಗಮಾನ್ಯ (Semi̲ feudal) ಸಮಾಜವೂ ಸಹ ಸಮಾನಾಂತರವಾಗಿ ಬೆಳೆಯುತ್ತಿದೆ.

ಜಾತಿ ಕೂಪದ ವಿವಿಧ ರೂಪಗಳು

ಇಂತಹ ಒಂದು ಸಮಾಜದಲ್ಲಿ ನಾವು ಜಾತಿ ವ್ಯವಸ್ಥೆಯ ವಿವಿಧ ಪದರಗಳನ್ನು ವೈವಿಧ್ಯಮಯ ರೂಪಗಳಲ್ಲಿ ಗುರುತಿಸಬೇಕಿದೆ. ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಉಚ್ಛ-ನೀಚ ಈ ವಿಭಜನೆಯ ತಂತುಗಳು ಲಂಬಗತಿಯಲ್ಲಿ (Vertically) ಸಮಾಜವನ್ನು ವಿಭಜಿಸುತ್ತಿರುವುದನ್ನು ಪ್ರಜಾಪ್ರಭುತ್ವದಲ್ಲೂ ಸರಿಪಡಿಸಲಾಗಿಲ್ಲ. ಏಕೆಂದರೆ ಈ ಎಲ್ಲ ಸಾಮಾಜಿಕ ಗುಣಲಕ್ಷಣಗಳು ನಿಷ್ಕರ್ಷೆಯಾಗುವುದು ಸಮಾಜದ ಒಳ ವಾತಾವರಣದಲ್ಲಿ (Inner Ecosystem). ವ್ಯಕ್ತಿ ಸಮುದಾಯದ ಒಂದು ಅವಿಭಾಜ್ಯ ಅಂಗವಾಗಿ, ಸಮುದಾಯವೊಂದು ವಿಶಾಲ ಸಮಾಜದ ನಿರ್ಣಾಯಕ ಭಾಗವಾದಾಗ (Decisive Part) ಅಲ್ಲಿ ಎಲ್ಲ ರೀತಿಯ ಚಟುವಟಿಕೆಗಳನ್ನೂ ಪ್ರಬಲ ವರ್ಗಗಳು, ಸಾಮಾನ್ಯವಾಗಿ ಮೇಲ್ಪದರದ (Elite) ಸುಶಿಕ್ಷಿತ ವರ್ಗಗಳು ನಿರ್ವಚಿಸುತ್ತವೆ. ಸಮಕಾಲೀನ ಅರ್ಥವ್ಯವಸ್ಥೆಯಲ್ಲಿ ಈ ವರ್ಗಗಳು ಬಹುಮಟ್ಟಿಗೆ ಪ್ರಬಲ ಹಿತವಲಯದ (Comfort zone ) ಮತ್ತು ಸಿರಿವಂತ ಸಮಾಜದ (Rich society) ಪ್ರಾತಿನಿಧ್ಯ ವಹಿಸುತ್ತದೆ.

ಸ್ವಾತಂತ್ರ್ಯ ಗಳಿಸಿದ ಮೇಲೆ ಹೊಸ ಪ್ರಜಾಪ್ರಭುತ್ವೀಯ ಗಣತಂತ್ರದಲ್ಲಿ ಸಾಮಾಜಿಕವಾಗಿ ತಾರತಮ್ಯ-ಅಪಮಾನಕ್ಕೊಳಗಾದ, ಆರ್ಥಿಕವಾಗಿ ಹಿಂದುಳಿದ ಅಥವಾ ಪೂರ್ಣ ವಂಚಿತರಾದ, ಸಾಂಸ್ಕೃತಿಕವಾಗಿ ಹೊರಗಿಡಲ್ಪಟ್ಟ ಜನಸಮುದಾಯಗಳನ್ನು ಮೇಲ್ಮಟ್ಟಕ್ಕೆ ತಂದು, ಅನ್ಯ ಸಮುದಾಯಗಳೊಡನೆ ಸಮಾನವಾಗಿ ಬದುಕುವಂತೆ ಮಾಡುವ , ಸಾಮಾಜಿಕ ಉನ್ನತೀಕರಣ-ಆರ್ಥಿಕ ಸಬಲೀಕರಣದ ಒಂದು ನೀತಿಯಾಗಿ ಮೀಸಲಾತಿಯನ್ನು ಜಾರಿಗೊಳಿಸಲಾಗಿತ್ತು. ಡಾ. ಬಿ.ಆರ್.‌ ಅಂಬೇಡ್ಕರ್‌ ತಾತ್ವಿಕವಾಗಿ ಮೀಸಲಾತಿಯ ಪರ ಇರಲಿಲ್ಲ ಎನ್ನುವುದು ಚಾರಿತ್ರಿಕ ಸತ್ಯ. ಪೂನಾ ಒಪ್ಪಂದದ ಒಂದು ಫಲಶ್ರುತಿಯಾಗಿ, ಪ್ರತ್ಯೇಕ ಮತದಾನ ವ್ಯವಸ್ಥೆಯ ಬದಲಿಗೆ ಅಳವಡಿಸಲಾದ ಮೀಸಲಾತಿ , ಶಾಶ್ವತ ನೀತಿ ಆಗಕೂಡದು ಎಂಬ ಮಹದಾಶಯವೂ ಅಂಬೇಡ್ಕರ್‌ ಅವರಿಗೆ ಇತ್ತು. ಅಂದರೆ ಸ್ವಾತಂತ್ರ್ಯಾನಂತರದ ಎರಡು ದಶಕಗಳಲ್ಲಾದರೂ ಭಾರತದ ಪ್ರಜಾತಂತ್ರ ಆಡಳಿತ ವ್ಯವಸ್ಥೆ ಸರ್ವ ಸಮಾನತೆಯನ್ನು ಎಲ್ಲ ಕ್ಷೇತ್ರಗಳಲ್ಲೂ, ಎಲ್ಲ ಸ್ತರಗಳಲ್ಲೂ, ಎಲ್ಲ ಆಯಾಮಗಳಲ್ಲೂ ಸಾಧಿಸುತ್ತದೆ ಎಂಬ ಕನಸು ಅಂಬೇಡ್ಕರ್‌ ಅವರಿಗಿತ್ತು.

ಸ್ವತಂತ್ರ ಆಳ್ವಿಕೆಯ ವಾಸ್ತವಗಳು

79 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತೀಯ ಸಮಾಜ ತನ್ನ ಆರ್ಥಿಕ ಸಂಕೋಲೆಗಳನ್ನು ತಕ್ಕಮಟ್ಟಿಗೆ ಕಳಚಿಕೊಂಡು ಮುಂದುವರೆದಿದ್ದರೂ, ಸಾಮಾಜಿಕವಾಗಿ ಇಂದಿಗೂ ಸಹ ನಿರ್ಬಂಧಗಳ ನಡುವೆಯೇ ಮುನ್ನಡೆಯುತ್ತಿದೆ. ಪ್ರಜಾಪ್ರಭುತ್ವೀಯ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಕಾನೂನು ಕಟ್ಟಳೆಗಳು ತಳಮಟ್ಟದವರೆಗೂ ಸಮಾಜಗಳನ್ನು ಸಬಲೀಕರಣಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ, ನಮ್ಮ ವೈಮಾನಿಕ ನೋಟಕ್ಕೂ (Aerial view) ನೆಲದ ವಾಸ್ತವಗಳಿಗೂ (Ground Realities) ಅಪಾರ ಅಂತರ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಕಟು ವಾಸ್ತವಗಳನ್ನು (Harsh Realities) ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮುದಾಯಿಕ ನೆಲೆಗಳಲ್ಲಿ ವಿಂಗಡಿಸಿ ನೋಡಬೇಕಿದೆ. ಅಲ್ಲಿ ನಮಗೆ ಇಂದಿಗೂ ಜೀವಂತವಾಗಿರುವ ಮತ್ತು ಹಿಗ್ಗುತ್ತಲೇ ಇರುವ ಸಾಮಾಜಿಕ ಒಳಬಿರುಕುಗಳು ಕಾಣುತ್ತವೆ.

ಭಾರತೀಯ ಸಂವಿಧಾನ ಶೋಷಿತ, ಅವಕಾಶವಂಚಿತ, ಅಂಚಿನಲ್ಲಿರುವ (Marginaliseḑ) ಹೊರಗಿಡಲ್ಪಟ್ಟ (Excluded) ಮತ್ತು ಅವಮಾನಿತ ಸಮುದಾಯಗಳ ಸಬಲೀಕರಣಕ್ಕಾಗಿ ಒದಗಿಸಿರುವ ಒಂದು ಸೌಲಭ್ಯ ಮೀಸಲಾತಿ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಾಂವಿಧಾನಿಕ ಸವಲತ್ತುಗಳ ಹಂಚಿಕೆಯಲ್ಲಿ ಈ ನಿರ್ಲಕ್ಷಿತ ಜನಸಮುದಾಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಮೀಸಲಾತಿ ನೀತಿಯನ್ನು ಜಾರಿಗೊಳಿಸಿ ಯಶಸ್ವಿಯಾಗಿ ಅಳವಡಿಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಘನತೆ, ಸಮಾನತೆ ಮತ್ತು ಸುಸ್ಥಿರ ಬದುಕು ರೂಪಿಸಿಕೊಳ್ಳಲು ನೆರವಾಗುವ ಒಂದು ಶಾಸನಬದ್ಧ ಕ್ರಮವಾಗಿ ಮೀಸಲಾತಿ ನಮ್ಮ ನಡುವೆ ಜಾರಿಯಲ್ಲಿದೆ. ಕೇವಲ ಸಾಮುದಾಯಿಕ ಮೀಸಲಾತಿಯಿಂದ ಇಡೀ ಸಮಾಜದ ಉನ್ನತೀಕರಣ ಸಾಧ್ಯವೇ ಎನ್ನುವುದು ಇಂದಿಗೂ ಚರ್ಚಾಸ್ಪದ ವಿಚಾರವೇ ಆಗಿದೆ.

ಈ ಮೀಸಲಾತಿ ಎಂಬ ಕಲ್ಪನೆ-ಆಚರಣೆಯನ್ನು ಸಾಂಸ್ಥೀಕರಿಸಿರುವುದರಿಂದ (Institutionalised) ಸಾಂಸ್ಥಿಕವಾಗಿ ಇದರ ಸ್ವರೂಪವನ್ನು ಬದಲಿಸುವುದು ಸುಲಭವಲ್ಲ. ವಾಸ್ತವವಾಗಿ ಜಂಗಮ ರೂಪದಲ್ಲಿದ್ದು, ಕಾಲದಿಂದ ಕಾಲಕ್ಕೆ ಸಮಾಜ ಅಭಿವೃದ್ಧಿ ಸಾಧಿಸಿದಂತೆಲ್ಲಾ , ಸಂಪರ್ಕಿಸಬೇಕಾದ ಸಮಾಜಗಳನ್ನು ಪುನರ್‌ ನಿರ್ವಚಿಸುತ್ತಾ ಹೊಸದಾಗಿ ಕಾಣಬಹುದಾದ ಅವಕಾಶವಂಚಿತ ಸಮುದಾಯಗಳನ್ನು ಗುರುತಿಸುವುದು ನಮ್ಮ ಆದ್ಯತೆಯಾಗಬೇಕಿತ್ತು. ದುರದೃಷ್ಟವಶಾತ್‌ ಇದು ಸಾಧ್ಯವಾಗಿಲ್ಲ. ಏಕೆಂದರೆ ಸ್ವಾತಂತ್ರ್ಯಾನಂತರದ ಫಲಾನುಭವಿ ಸಮಾಜಗಳು ಒಂದು ವರ್ಗವಾಗಿ ಮಾರ್ಪಟ್ಟು, ಈ ಸಾಂಸ್ಥಿಕ ಕಲ್ಪನೆಗೆ ಸ್ಥಾವರ ರೂಪ ನೀಡಿದೆ. ಸ್ಥಾವರಗಳು ಜಡಗಟ್ಟುವುದು ನೈಸರ್ಗಿಕ ನಿಯಮ, ಹಾಗೆಯೇ ಸ್ಥಾವರರೂಪದ ಮೀಸಲಾತಿಯೂ ಸಹ ತಾತ್ವಿಕವಾಗಿ ಜಡಗಟ್ಟಿದೆ.

ಅಭಿವೃದ್ಧಿ ಮತ್ತು ಮೀಸಲಾತಿಯ ದ್ವಂದ್ವ

ಅಂದರೆ ಜನಸಂಖ್ಯಾ ವೃದ್ಧಿಯ ಅನುಪಾತದಲ್ಲೇ ಮೀಸಲಾತಿಯ ವಿಸ್ತರಣೆ ಸಾಧ್ಯವಾಗದ ಕಾರಣ, ಶೇಕಡಾವಾರು ಮೀಸಲಾತಿ ಪ್ರಮಾಣ ಒಂದು ಹಂತದಲ್ಲಿ ಸ್ಥಿರವಾಗುತ್ತದೆ ಅಥವಾ ಮಿತಿಗೊಳಪಡುತ್ತದೆ. ಈ ಸ್ಥಾವರವನ್ನು ಮುಟ್ಟುವುದೇ ಮಾಯಾ ಪೆಟ್ಟಿಗೆಯನ್ನು (Pandoraʼs Box) ತೆರೆದಂತಾಗುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಒಳಮೀಸಲಾತಿ ಹೋರಾಟವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಮಹಾರಾಷ್ಟ್ರದಲ್ಲಿ ಮರಾಠ, ಗುಜರಾತ್‌ನ ಪಟಿದಾರ್‌, ರಾಜಸ್ಥಾನದ ಅಲೆಮಾರಿ ಸಮುದಾಯಗಳು, ಹರಿಯಾಣದ ಜಾಟ್‌ ಸಮುದಾಯ ಹೀಗೆ ಇತರ ಹಿಂದುಳಿದ ವರ್ಗಗಳೆಂದು ವರ್ಗೀಕರಿಸಲ್ಪಟ್ಟ (ಒಬಿಸಿ) ಸಮುದಾಯಗಳೂ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ಶೇಕಡಾ 10ರ ಆರ್ಥಿಕ ಹಿಂದುಳಿದ ವರ್ಗ (Economically weaker section ̲EWS) ಮೀಸಲಾತಿ ಪಡೆಯುವಲ್ಲಿ ಯಶಸ್ವಿಯೂ ಆಗಿವೆ. ಈ EWS ವ್ಯಾಪ್ತಿಯಲ್ಲಿ ಮೇಲ್ಜಾತಿ ಸಮುದಾಯಗಳೂ ಒಳಪಟ್ಟಿರುವುದರಿಂದ , ನವ ಭಾರತದಲ್ಲಿ ಬಹುಮಟ್ಟಿಗೆ ಎಲ್ಲ ಜಾತಿ ಸಮುದಾಯಗಳೂ ಸಾಂವಿಧಾನಿಕ ಮೀಸಲಾತಿಯ ಫಲಾನುಭವಿಗಳಾಗಿವೆ.

EWS ಎಂಬ ಹೊಸ ಪ್ರವರ್ಗವನ್ನು ಹುಟ್ಟುಹಾಕಿ ಸಾಮಾಜಿಕವಾಗಿ ಯಾವುದೇ ತಾರತಮ್ಯ, ಅಪಮಾನ, ದೌರ್ಜನ್ಯ ಅನುಭವಿಸದೆ ಇದ್ದರೂ ಕೇವಲ ಆರ್ಥಿಕ ಸ್ಥಿತಿಗತಿ ಅಥವಾ ನಿಗದಿತ ಆದಾಯ ಮಿತಿಯ ನೆಲೆಯಲ್ಲಿ ಮೇಲ್ಜಾತಿಗಳಿಗೂ ಮೀಸಲಾತಿ ನೀಡಿರುವುದು ಸಾಂವಿಧಾನಿಕವಾಗಿ ಎನ್ನುವುದಕ್ಕಿಂತ ನೈತಿಕವಾಗಿ ಇನ್ನೂ ಹೆಚ್ಚು ಪ್ರಶ್ನಾರ್ಹವಾಗುತ್ತದೆ. ಇದರಿಂದ ಸಮಾಜದ ಅವಕಾಶವಂಚಿತ ಜನರು ಬಹುತೇಕ ಉಳ್ಳವರೊಡನೆ ಪೈಪೋಟಿ ನಡೆಸುವುದು ಅನಿವಾರ್ಯವಾಗಿದೆ. ಇತ್ತೀಚೆಗೆ ನಡೆದ ಕೇಂದ್ರ ಲೋಕಸೇವಾ ಆಯೋಗದ (UPSC) ಪ್ರವೇಶ ಪರೀಕ್ಷೆಯಲ್ಲಿ EWS ಕೋಟಾದಡಿ 104 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರ ಪೈಕಿ ವರ್ಷಕ್ಕೆ 2.65 ಲಕ್ಷ ಶುಲ್ಕ ಭರಿಸಿ ಕೋಚಿಂಗ್‌ ಪಡೆದವರೂ, ವಾಣಿಜ್ಯೋದ್ಯಮಿಗಳ ಮಕ್ಕಳೂ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆದಿರುವವರೂ, ಐಐಟಿ ಪದವಿ ಪಡೆದವರೂ ಇದ್ದಾರೆ. ಇದು ಸಾಮಾಜಿಕ ಅನ್ಯಾಯದ ಒಂದು ಮಾದರಿ ಎನ್ನಬಹುದು.

ಏಕೆಂದರೆ ಈ ಕೋಟಾದ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳ ಪೈಕಿ ವಾರ್ಷಿಕ 8 ಲಕ್ಷ ರೂ ಆದಾಯಮಿತಿಗಿಂತಲೂ ಕಡಿಮೆ ಇರುವ ನೂರಾರು ಆಕಾಂಕ್ಷಿಗಳಿರಬಹುದು. ಈ ಅನುಕೂಲಸ್ಥ ವರ್ಗದಲ್ಲಿ ಆರ್ಥಿಕವಾಗಿ ಮೇಲ್‌ ಸ್ತರದಲ್ಲಿರುವವರು ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಗಮನಿಸಿದಾಗ, ಒಂದು ಅಥವಾ ಎರಡು ಲಕ್ಷ ಆದಾಯ ಇರುವ ಅಭ್ಯರ್ಥಿಗಳು ಈ ಉದ್ಯೋಗದ ಓಟದಲ್ಲಿ (Job Race) ಸದಾ ಹಿಂದುಳಿಯುತ್ತಾರೆ. ಒಂದರಿಂದ ಎಂಟು ಲಕ್ಷ ಎಂಬ ಆದಾಯ ಮಿತಿಯ ಜರಡಿಯಲ್ಲಿ ನಿಜವಾಗಲೂ ಆರ್ಥಿಕ ಶಕ್ತಿ ಸಾಮರ್ಥ್ಯ ಇಲ್ಲದವರು ನಡುವಿನಲ್ಲೇ ಉದುರಿ ಹೋಗುತ್ತಾರೆ. ಹಿತವಲಯದ ಮೇಲ್ಪದರ ಸಮಾಜ (Upper Elite society) ಇಲ್ಲಿ ಮುಖ್ಯ ಫಲಾನುಭವಿಯಾಗುತ್ತದೆ. ಮೀಸಲಾತಿಯ ಸಾಂವಿಧಾನಿಕ ಅರ್ಥವನ್ನೇ ಅನರ್ಥಗೊಳಿಸುವ ಈ ನೀತಿ ಸಮಕಾಲೀನ ಸಮಾಜದ ವಾಸ್ತವಗಳಿಗೆ ಕನ್ನಡಿ ಹಿಡಿದಂತಿದೆ.

ತಳಸಮಾಜದ ದೃಷ್ಟಿಯಲ್ಲಿ ಮೀಸಲಾತಿ

ಏಕೆಂದರೆ ಮೀಸಲಾತಿಯ ಮೂಲ ಗುರಿ ಇರುವುದು ತಳಸಮುದಾಯಗಳಲ್ಲಿ ಅತ್ಯಂತ ಹೀನ ಸ್ಥಿತಿಯಲ್ಲಿರುವ, ಸಾಮಾಜಿಕ ತಾರತಮ್ಯ ಅನುಭವಿಸುತ್ತಿರುವ, ಆರ್ಥಿಕ ಸ್ಥಿರತೆ ಇಲ್ಲದ ಹಾಗೂ ಸಮಾಜದ ಏಣಿಯಲ್ಲಿ ಕೆಳಹಂತದಲ್ಲೇ ಇರುವ ಜನರನ್ನು ಎಲ್ಲ ರೀತಿಯಲ್ಲೂ ಮೇಲ್ದರ್ಜೆಗೇರಿಸುವುದು. ಅಂದರೆ ದೇಶ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವಂತೆಲ್ಲಾ ಈ ಸಮಾಜಗಳ ಒಳಗೇ ಆರ್ಥಿಕ ಶ್ರೇಣಿಯಲ್ಲಿ ವ್ಯತ್ಯಯಗಳಾಗುತ್ತಿರುತ್ತವೆ. ಸಾಮಾಜಿಕ ಸ್ಥಿತಿಗತಿ, ಅಂತಸ್ತು, ಸ್ಥಾನಮಾನ ಮತ್ತು ಮಾನ್ಯತೆ ಇವುಗಳೂ ಸಹ ಬದಲಾಗುತ್ತಲೇ ಇರುತ್ತವೆ. ಕೆಳಸ್ತರದಲ್ಲಿದ್ದ ಗುಂಪು ಅಥವಾ ವರ್ಗ ಮೇಲ್ದರ್ಜೆಗೆ ತಲುಪುತ್ತಿರುವಾಗಲೇ, ನಿಕೃಷ್ಟ ಸ್ಥಿತಿಯಲ್ಲಿದ್ದವರು ಕೊಂಚ ಮೇಲ್ಮಟ್ಟ ತಲುಪಿರುತ್ತಾರೆ. ಆದರೆ ಸಾಪೇಕ್ಷವಾಗಿ ಹಿಂದುಳಿದಿರುತ್ತಾರೆ (Relatively backward). ಈ ಸಾಪೇಕ್ಷ ಹಿಂದುಳಿಯುವಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಎಂಟು ದಶಕಗಳ ಮೀಸಲಾತಿ ಸೌಲಭ್ಯಗಳ ಹೊರತಾಗಿಯೂ ಪ್ರತಿಯೊಂದು ಜಾತಿ ಸಮೂಹದಲ್ಲೂ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನದಿಂದ ವಂಚಿತರಾದ ಒಂದು ಗುಂಪು ಎದ್ದು ಕಾಣುತ್ತದೆ.

ವರ್ತಮಾನದಲ್ಲಿ ನಿಂತು ಮೀಸಲಾತಿಯನ್ನು ಮರು ವ್ಯಾಖ್ಯಾನಿಸುವಾಗ, ಚಾರಿತ್ರಿಕ ವಾಸ್ತವಗಳನ್ನು (Historical Realities) ಪ್ರಸ್ತುತ ಸನ್ನಿವೇಶಗಳಿಗೆ ಸಮೀಕರಿಸಲಾಗುವುದಿಲ್ಲ. ಈ ಪ್ರಜ್ಞೆ ಬಹಳ ಮುಖ್ಯ. ಏಕೆಂದರೆ ಸಾಂವಿಧಾನಿಕ ಸೌಲಭ್ಯ, ಸವಲತ್ತುಗಳು ತಳಸಮುದಾಯಗಳ ಒಂದು ವರ್ಗದ ಸಬಲೀಕರಣಕ್ಕೆ ಕಾರಣವಾಗಿರುವುದು ಸತ್ಯ. ಈ ಸಬಲೀಕರಣಗೊಂಡ ವರ್ಗಗಳ ನಡುವೆ ನಿಂತು ಆಂತರಿಕವಾಗಿ ಗಮನಿಸಿದಾಗ, ಅದೇ ಜಾತಿ ಸಮಾಜಗಳಲ್ಲೇ ಇಂದಿಗೂ ಯಾವುದೇ ಸಾಂವಿಧಾನಿಕ ಸೌಲಭ್ಯ ಪಡೆಯಲಾಗದ ಜನರ ಒಂದು ಗುಂಪು ಕಾಣುತ್ತದೆ. ಎರಡು ಮೂರು ದಶಕಗಳ ಮುನ್ನ ಇದ್ದಂತಹ ಉದ್ಯೋಗ-ಶಿಕ್ಷಣದ ಅವಕಾಶಗಳೂ (Job-Educational Spaces) ಈ ತಳಮಟ್ಟದ ಗುಂಪುಗಳಿಗೆ ಲಭ್ಯವಿರುವುದಿಲ್ಲ. ಏಕೆಂದರೆ ಬಂಡವಾಳಶಾಹಿ ಅರ್ಥಿಕತೆ ಅಂತಹ ಅವಕಾಶಗಳನ್ನು ಸಂಕುಚಿತಗೊಳಿಸಿರುತ್ತದೆ.

ಈ ಸಂಕುಚಿತಗೊಂಡ (Narrowed down) ಅವಕಾಶಗಳನ್ನೇ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಶೋಷಿತ ತಳಸಮುದಾಯಗಳಿಗೆ ಎದುರಾಗುತ್ತದೆ. ಸುಪ್ರೀಂಕೋರ್ಟ್‌ ವಿಧಿಸಿರುವ ಶೇಕಡಾ 50ರ ಗರಿಷ್ಠ ಮಿತಿಯನ್ನು ಈ ದೃಷ್ಟಿಯಿಂದ ನೋಡಬೇಕು. ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಶೇಕಡಾ 18ನ್ನು ಮೀರಿ ಮೀಸಲಾತಿ ಕಲ್ಪಿಸುವುದೇ ಅಸಾಧ್ಯವಾಗಿರುವಂತಹ ಸನ್ನಿವೇಶದಲ್ಲಿ ಭಾರತ ನಿಂತಿದೆ. ಮೀಸಲಾತಿ ಸೌಲಭ್ಯ ಪಡೆದು ಮೇಲ್ದರ್ಜೆಗೆ ತಲುಪಿರುವ ವರ್ಗಗಳು ಈ ಪ್ರಶ್ನೆಯನ್ನು ಗಂಭೀರವಾಗಿ ಯೋಚಿಸಬೇಕು ಪ್ರತಿಯೊಂದು ಜಾತಿ ಸಮಾಜದಲ್ಲೂ ಇರುವ ವಂಚಿತ ಸಮುದಾಯಗಳು, ಗುಂಪುಗಳು ಯಾರ ಮೊರೆ ಹೋಗಬೇಕು ? ಹಸಿವು, ಬಡತನ ಮತ್ತು ನಿರ್ವಸತಿಯ ಸಮಸ್ಯೆಗಳನ್ನು ಶ್ರೇಣೀಕರಿಸಿ ನೋಡಿದಾಗ, ಶೋಷಿತ ಸಮಾಜಗಳಲ್ಲೂ ಸಂಪ್ರದಾಯವಾದಿ ಶ್ರೇಣೀಕರಣ (Conservative Heirarchy) ಎದುರಾಗುತ್ತದೆ.

 

ನವ ಉದಾರವಾದದ ಶೋಷಕ ಮಾರ್ಗ

ಬಂಡವಾಳಶಾಹಿ ವ್ಯವಸ್ಥೆ ಇಂತಹ ಕಂದಕಗಳನ್ನು ಅಪೇಕ್ಷಿಸುತ್ತದೆ, ಊಳಿಗಮಾನ್ಯ ಸಂಬಂಧಗಳನ್ನು ಉತ್ತೇಜಿಸುವ ಮೂಲಕ ಈ ಅಂತರವನ್ನು ಮತ್ತಷ್ಟು ಹಿಗ್ಗಿಸುತ್ತಲೇ ಹೋಗುತ್ತದೆ. ಪ್ರತಿಯೊಂದು ಸಮಾಜದಲ್ಲೂ ಉಳ್ಳವರ-ಇಲ್ಲದವರ ನಡುವೆ ಅಂತರವನ್ನು ಹೆಚ್ಚಿಸುವ ಮೂಲಕ, ವರ್ಗ ವಿಭಜನೆಯನ್ನು ಸೃಷ್ಟಿಸುವುದೇ ಅಲ್ಲದೆ ಅದನ್ನು ಸ್ಥೀರೀಕರಿಸಲು, ಸಾಂಸ್ಥೀಕರಿಸಲು ಅಗತ್ಯವಾದ ತಂತ್ರಗಳನ್ನೂ ಬಳಸಲಾಗುತ್ತದೆ. ಈ ಸಾಂಸ್ಥೀಕರಣ ವ್ಯಕ್ತವಾಗುವುದು ಸಾಂಸ್ಕೃತಿಕ ಅಥವಾ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಚಟುವಟಿಕೆಗಳಲ್ಲಿ. ಪ್ರತಿಯೊಂದು ತಳಸಮಾಜದಲ್ಲೂ ತಳಪಾಯದಲ್ಲಿರುವವರನ್ನು ನಿಕೃಷ್ಟವಾಗಿ ಕಾಣುವ ಅಥವಾ ಅಲಕ್ಷಿತರಂತೆ ನೋಡುವ ಪ್ರಜ್ಞೆಯನ್ನು ರೂಢಿಸಲಾಗುತ್ತದೆ. ಸಾಮಾಜಿಕವಾಗಿ ಸಮಾನತೆ ಇದ್ದರೂ ಆರ್ಥಿಕ ಅಸಮಾನತೆ ಇಂತಹ ತಳಮಟ್ಟದ ಸಮುದಾಯಗಳನ್ನು ಪ್ರತ್ಯೇಕಿಸುತ್ತಲೇ ಹೋಗುತ್ತದೆ.

ಕರ್ನಾಟಕದ ಒಳಮೀಸಲಾತಿ ಹೋರಾಟದಲ್ಲಿ ಈ ಪ್ರಶ್ನೆಗಳು ಮುನ್ನಲೆಗೆ ಬಂದರೂ ಅಂತಿಮವಾಗಿ ನ್ಯಾಯ ಸಂದಾಯವಾದ ಕೂಡಲೇ ಎಲ್ಲ ಸಂಕಥನಗಳೂ ನಿಂತುಹೋದವು. ಏಕೆಂದರೆ ಸಾರ್ವಜನಿಕವಾಗಿ ಅಭಿಪ್ರಾಯಗಳನ್ನು ಸೃಷ್ಟಿಸುವ, ನಿರೂಪಣೆಗಳನ್ನು (Narratives) ಉತ್ಪಾದಿಸುವ ಮೇಲ್ವರ್ಗಗಳಿಗೆ ಸಂವಾದ ಅಗತ್ಯವಿರಲಿಲ್ಲ. “ ನಾವು ಇನ್ನೂ ಏನೋ ಹೇಳುವುದಿತ್ತು ,,,,” ಎಂಬ ಹಪಹಪಿ ಇರುವ ತಳಪಾಯದ ಗುಂಪುಗಳಿಗೆ ಹೀಗೆ ಹೇಳಲು ಅವಕಾಶ (Space) ಇಲ್ಲವಾಗಿತ್ತು. ಈ ಎರಡೂ ಚೌಕಟ್ಟುಗಳಿಂದ ಹೊರತಾದ ಅಲೆಮಾರಿ ಸಮುದಾಯಗಳು, ಅನ್ಯಾಯಕ್ಕೊಳಗಾದರೂ ಅವರ ದನಿಗೆ ದನಿಗೂಡಿಸುವವರು ಇಲ್ಲವಾದರು. ಸೈದ್ಧಾಂತಿಕ-ತಾತ್ವಿಕ ಚಿಂತನೆಗಳು ಸಾಂಸ್ಥೀಕರಣಕ್ಕೊಳಗಾದಾಗ ಈ ರೀತಿ ಬೌದ್ಧಿಕ ಸರಳುಗಳ (Intellectual Hurdles) ಹಿಂದೆ ಅವಿತುಕೊಳ್ಳುತ್ತವೆ.

ಮೀಸಲಾತಿಯ ಕನಸು ಮತ್ತು ವಾಸ್ತವ

ಮೀಸಲಾತಿಯ ಕಲ್ಪನೆಯ ಮೂಲ ಆಶಯ, ಸಾಮಾಜಿಕ-ಆರ್ಥಿಕ ಸಬಲೀಕರಣವೇ ಆದರೆ, ಈ ಎರಡೂ ನೆಲೆಗಳಲ್ಲಿ ಅನ್ಯಾಯಕ್ಕೊಳಗಾಗಿ ಹಿಂದುಳಿದಿರುವ ವರ್ಗಗಳ ಏಳಿಗೆಯೇ ಆದರೆ, ಸಾಮಾಜಿಕವಾಗಿ ತಾರತಮ್ಯಕ್ಕೊಳಗಾಗುವ ಸಮುದಾಯಗಳ ಮೇಲ್‌ ಚಲನೆಯೇ ಆದರೆ, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಅಸಮಾನತೆಗಳನ್ನು ಹೋಗಲಾಡಿಸುವುದೇ ಆದರೆ, ವರ್ತಮಾನದ ಡಿಜಿಟಲ್‌ ಯುಗದ ಭಾರತದಲ್ಲಿ ತಳಸಮುದಾಯಗಳ ಯಾವ ಜಾತಿ-ಉಪ ಸಮೂಹಗಳೂ ಇವುಗಳಿಂದ ಹೊರತಾಗಿಲ್ಲ ಎನ್ನುವುದು ಸ್ಪಷ್ಟ. ಹಾಗೆಯೇ ಮೀಸಲಾತಿ ಇತ್ಯಾದಿ ಸೌಲಭ್ಯಗಳು ಈ ಸಮಾಜಗಳ ಒಂದು ವರ್ಗವನ್ನು ಮೇಲ್ದರ್ಜೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದೂ ಸತ್ಯ. ಈ ಎರಡು ಧೃವಗಳ ನಡುವೆ ನಮಗೆ ಕಾಣಬೇಕಿರುವುದು, ಸಾಂವಿಧಾನಿಕ ರಕ್ಷಾ ಕವಚಗಳಿಂದ ಇಂದಿಗೂ ವಂಚಿತರಾಗಿರುವ ತಳಮಟ್ಟದ ಸಾಮಾಜಿಕ ವರ್ಗಗಳು.

ಈ ಅವಕಾಶವಂಚಿತ ಸಮೂಹಗಳು ಇನ್ನೂ ಎಷ್ಟು ವರ್ಷ ಕಾಯಬೇಕು ? ಬಂಡವಾಳಶಾಹಿ ನವ ಉದಾರವಾದದ ಮಾರುಕಟ್ಟೆಯಲ್ಲಿ ಈ ಪ್ರಶ್ನೆಗೆ ಉತ್ತರಿಸುವವರೇ ಇರುವುದಿಲ್ಲ. ಏಕೆಂದರೆ ಅಸಮಾನತೆಯೇ ಅದರ ಅಡಿಪಾಯ ಮತ್ತು ಆದರ್ಶ. ಆದರೆ ಮುಂದುವರೆದ ಸಮಾಜಗಳ ಬೌದ್ಧಿಕ ಅಂಗಳದಲ್ಲಿ ಉತ್ತರ ಇರಲೇಬೇಕಲ್ಲವೇ ? 80 ವರ್ಷಗಳ ಹಿಂದೆ ಅಸಮಾಧಾನ-ಆಕ್ರೋಶ-ಹತಾಶೆಯಿಂದ ಕುದಿಯುತ್ತಿದ್ದ ಸಮಾಜಗಳ ಒಳಗೇ ಇಂದಿಗೂ ಕುದಿಯುತ್ತಿರುವ ಜನಸಮೂಹಗಳಿವೆ. ಇದರಲ್ಲಿ ನಮ್ಮದೇನೂ ಪಾತ್ರ ಇಲ್ಲ ಎಂದು ನಿರುಮ್ಮಳವಾಗಿರುವ ಹಿತವಲಯದ ಮಧ್ಯಮ ವರ್ಗಗಳೂ ಇವೆ. ನಾವು ಅಂಬೇಡ್ಕರ್‌ ಅವರನ್ನು ಗ್ರಾಂಥಿಕವಾಗಿ ಅಲ್ಲದೆ ತಾತ್ವಿಕವಾಗಿ ಅಂತರೀಕರಣಗೊಳಿಸಿಕೊಂಡಿದ್ದರೆ (Internalised) ಈ ಎರಡೂ ಸಮಾಜಗಳ ನಡುವೆ ನಿಂತು ವಸ್ತುನಿಷ್ಠವಾಗಿ ಯೋಚಿಸಬೇಕಾಗುತ್ತದೆ.

ಇದು ಕೇವಲ ಕಾಪಾಡಿಕೊಳ್ಳುವ ಅಥವಾ ಬಿಟ್ಟುಕೊಡಬೇಕಾದ ಹಕ್ಕುಗಳ ಪ್ರಶ್ನೆ ಅಲ್ಲ. ಯುವ ಜನಾಂಗದ ಭವಿಷ್ಯದ, ಭವಿಷ್ಯದ ಯುವ ಜನಾಂಗದ ಸಮಸ್ಯೆ. ಈ ಕಂದಕಗಳನ್ನು ಹಿಗ್ಗಿಸುತ್ತಲೇ ಇರುವ ಅರ್ಥವ್ಯವಸ್ಥೆಯನ್ನು ರಾಜಕೀಯ ಅಧಿಕಾರ ಪಡೆಯುವ ಮೂಲಕ ನಿರ್ಮೂಲನೆ ಮಾಡುವ ಆಯ್ಕೆ ನಮ್ಮ ಮುಂದಿದೆ. ಆದರೆ ಅದಕ್ಕೆ ಬೇಕಾದ ರಾಜಕೀಯ ಪ್ರಜ್ಞೆ ತಳಸಮುದಾಯಗಳಲ್ಲಿಲ್ಲ. ಸಂವಿಧಾನವನ್ನು ನಂಬಿ ಈ ಶೋಷಕ ವ್ಯವಸ್ಥೆಯಲ್ಲೇ, ಮುಂದುವರೆಯುವುದಾದರೆ, ಊರಗಲದ ಕಂದಕಗಳನ್ನು ಕಿರಿದಾಗಿಸುವ ಆಲೋಚನೆಯಾದರೂ ನಮ್ಮೊಳಗೆ ಮೂಡಬೇಕು. ಇದಕ್ಕೆ ಬೇಕಾದ ಬೌದ್ಧಿಕ ಪರಿಕರಗಳು ಹೇರಳವಾಗಿವೆ ಆದರೆ ಮುಕ್ತವಾಗಿ ಸಂವಾದಿಸುವ ಮನಸ್ಸುಗಳು ಸಾಂಸ್ಥಿಕ ನೆಲೆಯಲ್ಲಿ ಕಾಣುತ್ತಿಲ್ಲ. ಇದಕ್ಕೆ ಕಾರಣ ನಾವೇ ಕಟ್ಟಿಕೊಂಡಿರುವ ಸೈದ್ಧಾಂತಿಕ ಗೋಡೆಗಳು ಮತ್ತು ಬೇಲಿಗಳು.

ಬದಲಾವಣೆಯ ದಿಕ್ಕು- ದೆಸೆ ಇತ್ಯಾದಿ

ಸಾಂವಿಧಾನಿಕ ಮೀಸಲಾತಿ ಮತ್ತು ಸಾಮಾಜಿಕ ಬದಲಾವಣೆ, ಈ ವಿಷಯವನ್ನು ಚರ್ಚಿಸುವ ಮುನ್ನ ನಾವು ಈ ಗೋಡೆಗಳನ್ನು ಕೆಡವಿ, ಬೇಲಿಗಳನ್ನು ಕಿತ್ತುಹಾಕಬೇಕಿದೆ. ಮೀಸಲಾತಿಯ ಕಲ್ಪನೆ ಎಲ್ಲರನ್ನೂ ಒಳಗೊಳ್ಳುವ, ಒಂದುಗೂಡಿಸುವ ಉದಾತ್ತ ಆಡಳಿತಾತ್ಮಕ ಚಿಂತನೆ. ಆಳುವ ವರ್ಗಗಳಿಗೆ ಇದು ತಳಮಟ್ಟದಿಂದಲೂ ದುಡಿಯುವ ವರ್ಗಗಳನ್ನು ವಿಭಜಿಸುವ ಒಂದು ಕಾರ್ಯಸೂಚಿ. ಈ ಎರಡರ ನಡುವೆ ಕಾಣುವ ಸೂಕ್ಷ್ಯ ವ್ಯತ್ಯಾಸವನ್ನು ಯುವ ಜನಾಂಗಕ್ಕೆ ಮನದಟ್ಟು ಮಾಡಬೇಕಿದೆ. ಈ ಹಾದಿಯನ್ನು ಕ್ರಮಿಸುವಾಗ, ಮೀಸಲಾತಿ ಸೌಲಭ್ಯವು ಸಾಮಾಜಿಕ ಬದಲಾವಣೆಯನ್ನು ಯಾವ ಮಗ್ಗುಲುಗಳಲ್ಲಿ ಸಾಧಿಸಿದೆ, ಇನ್ನೂ ಏನು ಸಾಧಿಸಬೇಕಿದೆ, ನಿರೀಕ್ಷಿತ ಮಟ್ಟದಲ್ಲಿ ಏಕೆ ಸಾಧಿಸಲಾಗಿಲ್ಲ ಎಂಬ ಜಟಿಲ ಪ್ರಶ್ನೆಗಳು ನಮಗೆ ಎದುರಾಗುತ್ತವೆ. ವಿಶೇಷ ಸಾಂವಿಧಾನಿಕ ಸೌಲಭ್ಯಗಳ ಫಲಾನುಭವಿ ವರ್ಗಗಳು ಈ ಸಂವಾದದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಸಾಮಾಜಿಕ ಬದಲಾವಣೆಯನ್ನು ಯಾವ ನೆಲೆಗಳಲ್ಲಿ ನಿಂತು ನೋಡಬಹುದು ?

ಮುಂದಿನ ಭಾಗದಲ್ಲಿ.

-೦-೦-೦-೦-

Tags: backward classesCommunity DevelopmentConstitutional RightsDr B R AmbedkarEconomic EmpowermentEducational ReservationequalitygovernanceHuman RightsInclusive DevelopmentIndia PoliticsIndian Constitutionkarnataka newsOBC ReservationpratidavaniPublic PolicyReservation DebateReservation PolicyScheduled Castesscheduled tribessocial changeSocial Equalitysocial Justicesocial reformWelfare Measures
Previous Post

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕರ್ನಾಟಕದ 5 ಸಾಧಕರು; ರಾಷ್ಟ್ರಪತಿ ಭವನದಲ್ಲಿ ಕನ್ನಡಿಗರ ಸಾಧನೆಗೆ ರಾಷ್ಟ್ರದ ನಮನ

Next Post

BREAKING NEWS: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್

Related Posts

A terrified woman amidst the celebration of medals
Top Story

ಪದಕಗಳ ಸಂಭ್ರಮದ ನಡುವೆ ಭಯಭೀತ ಹೆಣ್ಣು

by ನಾ ದಿವಾಕರ
October 18, 2026
0

ಇತ್ತೀಚೆಗೆ ನಡೆದ ಏಷ್ಯನ್ ಕ್ರೀಡಾಕೂಟ (Asian Games) ಭಾರತದ ಮಹಿಳೆಯರ ದೃಷ್ಟಿಯಿಂದ ಹೆಮ್ಮೆ ತರುವಂತಹ ಸಾಧನೆಗಳಿಗೆ ಸಾಕ್ಷಿಯಾಗಿದೆ. ಮಾರುಕಟ್ಟೆಗೆ ಅತ್ಯಂತ ಆಪ್ತ ಎನಿಸುವ ಕ್ರಿಕೆಟ್ನಲ್ಲಿ ಭಾರತದ ಮಹಿಳೆಯರು...

Read moreDetails
Is a web of influence preventing Darshan from being released? Behind-the-scenes political discussions are underway

Darshan Thoogudeepa : ದರ್ಶನ್ ಹೊರಬರದಂತೆ ತಡೆಯುತ್ತಿದೆಯಾ ಪ್ರಭಾವಿಗಳ ಚಕ್ರವ್ಯೂಹ? ತೆರೆಮರೆಯ ರಾಜಕೀಯ ಚರ್ಚೆ! Darshan

October 8, 2026
Kaaladiya Kannu

ʼಕಾಲಡಿಯ ಕಣ್ಣುʼ…ಮಬ್ಬುಗಣ್ಣುಗಳ ಮೂಲಕ ಕಂಡ ಹೆಜ್ಜೆ ಗುರುತುಗಳು

October 6, 2026
Kaaladiya Kannu

ʼಕಾಲಡಿಯ ಕಣ್ಣುʼ… ಮಬ್ಬುಗಣ್ಣುಗಳ ಮೂಲಕ ಕಂಡ ಹೆಜ್ಜೆ ಗುರುತುಗಳು

October 5, 2026
Gandhi and Gen Z in Today's India

ಇಂದಿನ ಭಾರತದಲ್ಲಿ ಗಾಂಧಿ ಮತ್ತು ಜೆನ್ ಝಿ

October 2, 2026
Next Post
BREAKING NEWS: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್

BREAKING NEWS: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada