ಟಿಆರ್ ಪಿ ಅಕ್ರಮ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಗೆ ಕ್ಲೀನ್ ಚಿಟ್ ನೀಡಿರುವ ಜಾರಿ ನಿರ್ದೇಶನಾಲಯ, ಆರೋಪದ ಬಗ್ಗೆ ಸಾಕ್ಷ್ಯಗಳು ಇಲ್ಲ ಎಂದು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಕ್ಲೀನ್ ಚಿಟ್ ನೀಡಿದೆ.
ರಿಪಬ್ಲಿಕ್ ಟಿವಿ ಅಥವಾ ರಿಪಬ್ಲಿಕ್ ಭಾರತ್ ಚಾನೆಲ್ ಗಳು ನಕಲಿ ಟಿಆರ್ ಪಿ ಪಡೆಯಲು ಅಡ್ಡ ಮಾರ್ಗಗಳನ್ನು ಅನುಸರಿಸಿದೆ ಎಂಬ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ನ್ಯಾಯಾಧೀಶ ಎಂಜಿ ದೇಶಪಾಂಡೆ ನೇತೃತ್ವದ ಪೀಠ, ಚಾರ್ಜ್ ಶೀಟ್ ನಲ್ಲಿ ಸಲ್ಲಿಸಿರುವ ಮಾಹಿತಿಗಳ ಬಗ್ಗೆ ವಿಚಾರಣೆ ಆರಂಭಿಸಲಿದೆ.

ಮುಂಬೈ ಪೊಲೀಸರು ನಡೆಸಿದ ನಕಲಿ ಟಿಆರ್ ಪಿ ದಂಧೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಂಡಿದ್ದು, ಕೆಲವು ಸ್ಥಳೀಯ ಟಿವಿ ಚಾನೆಲ್ ಗಳು ಈ ರೀತಿ ಅಕ್ರಮ ಟಿಆರ್ ಪಿ ಪಡೆಯಲು ಯತ್ನಿಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದೆ.
ಟಿಆರ್ ಪಿ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಟಿವಿ ಚಾನೆಲ್ ಗಳು ಅಡ್ಡ ಮಾರ್ಗ ತುಳಿದಿದ್ದು, ಮುಂಬೈನಲ್ಲಿ ೧೮೦೦ ಹಾಗೂ ದೇಶಾದ್ಯಂತ ೪೫೦೦೦ ಮನೆಗಳಿಗೆ ಮಾತ್ರ ಟಿಆರ್ ಪಿ ಯಂತ್ರಗಳನ್ನು ಅಳವಡಿಸಲಾಗುತ್ತದೆ.
ಈ ಯಂತ್ರಗಳನ್ನು ಎಲ್ಲಿ ಅಳವಡಿಸಲಾಗುತ್ತದೆ ಎಂಬ ಮಾಹಿತಿಯನ್ನು ಪಡೆದು ಅಲ್ಲಿನ ನಿವಾಸಿಗಳಿಗೆ ಮಾಸಿಕ 450ರಿಂದ 500ರೂ. ನೀಡಿ ತಮ್ಮ ಚಾನೆಲ್ ಮಾತ್ರ ವೀಕ್ಷಿಸುವಂತೆ ಆಮೀಷ ಒಡ್ಡಲಾಗುತ್ತಿತ್ತು.
ಮುಂಬೈ ಪೊಲೀಸರು ಈ ಅಕ್ರಮವನ್ನು ಬಯಲಿಗೆ ಎಳೆದು ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ ನಂತರ ಈ ಪ್ರಕರಣ ಇಡಿಗೆ ಬಂದಿತು.