ದೇಶದ ಜ್ವಲಂತ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಗೋಜಿಗೆ ಹೋಗದ ಆರ್ಥಿಕ ಸಮೀಕ್ಷೆಯು ದೇಶದಲ್ಲಿ ಎಲ್ಲವೂ ಸುಭಿಕ್ಷವಾಗಿದೆ ಎಂಬುದನ್ನು ಪ್ರಸ್ತುತ ಪಡಿಸಲು ವಿಫಲ ಯತ್ನ ಮಾಡಿದೆ. ತನ್ನ ಯತ್ನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್, ನೀತಿ ಆಯೋಗಗಳ ವರದಿಗಳು ಸೂಚ್ಯಂಕಗಳೆಲ್ಲವನ್ನು ಧಾರಾಳವಾಗಿ ಬಳಸಿಕೊಂಡಿದೆ. ಒಟ್ಟಾರೆ, ದೇಶವು ಅಭಿವೃದ್ಧಿಯತ್ತ ದಾಪುಗಾಲು ಹಾಕಿಬಿಡುತ್ತದೆ ಎಂಬಂತಹ ಚಿತ್ರಣವನ್ನು ನೀಡಿದೆ. ಬಡತನ, ನಿರುದ್ಯೋಗ, ವಿತ್ತೀಯ ಕೊರತೆ, ಬೆಲೆ ಏರಿಕೆಗಳ ಮತ್ತಿತರ ಕಪ್ಪು ದೊಡ್ಡದೊಡ್ಡ ಕಪ್ಪುಚುಕ್ಕೆಗಳನ್ನುು ಮರೆಮಾಡಲು ಭಾರಿ ಪ್ರಮಾಣದ ತಿರುಚಿದ ಅಂಕಿಅಂಶಗಳ ಬಿಳಿಲೇಪನ ಬಳಿದಿದೆ. ಪ್ರಸಕ್ತ ವಿತ್ತೀಯ ವರ್ಷದ ಆರ್ಥಿಕ ಅಭಿವೃದ್ಧಿಯು ಶೇ.9.2ರಷ್ಟು ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಿರುವ 2022ನೇ ಸಾಲಿನ ಆರ್ಥಿಕ ಸಮೀಕ್ಷೆಯು 2022-23ನೇ ವಿತ್ತೀಯ ವರ್ಷದ ಅಭಿವೃದ್ಧಿಯು ಶೇ.8.0-8.5ರ ಆಜುಬಾಜಿನಲ್ಲಿರುತ್ತದೆ ಎಂದು ಮನ್ನಂದಾಜಿಸಿದೆ.
2021-22ನೇ ಸಾಲಿನ ದ್ವಿತೀಯಾರ್ಧದಲ್ಲಿ ಆರ್ಥಿಕತೆಯು ನಿರಂತರ ಚೇತರಿಕೆಯ ಹಾದಿಯಲ್ಲಿದೆ, ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರತೆಗೆ ಸಿಕ್ಕಿದ್ದರೂ, ಹಿಂದಿನ ವರ್ಷದ ಲಾಕ್ಡೌನ್ ಅವಧಿಯಲ್ಲಾದಷ್ಟು ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ವ್ಯಾಪಕವಾಗಿ ಸಾಗಿರುವ ಲಸಿಕೆ ಕಾರ್ಯಕ್ರಮ, ಸರಕು ಸೇವೆಗಳ ಪೂರೈಕೆಯಲ್ಲಾಗಿರುವ ಸುಧಾರಣೆ, ನಿಯಮಗಳನ್ನು ಸಡಿಲಿಸಿದ್ದರಿಂದಾಗಿರುವ ಲಾಭಗಳು, ದೃಢವಾದ ರಫ್ತು ಬೆಳವಣಿಗೆ ಹಾಗೂ ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಹಣಕಾಸು ಲಭ್ಯತೆ- ಈ ಎಲ್ಲಾ ಅಂಶಗಳಿಂದಾಗಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ 2022-23ರಲ್ಲಿ ಶೇ. 8.0-8.5 ರಷ್ಟಾಗುತ್ತದೆ ಎಂದು ಸಮೀಕ್ಷೆ ಪ್ರತಿ ಪಾದಿಸಿದೆ.
423 ಪುಟಗಳ ಆರ್ಥಿಕ ಸಮೀಕ್ಷೆಯ ಪ್ರಕಾರ ದೇಶದ ಆರ್ಥಿಕ ಪರಿಸ್ಥಿತಿ ಎಲ್ಲವೂ ಸರಿಯಾಗಿದೆ! ಆರ್ಥಿಕ ಸಮೀಕ್ಷೆಗಳು ವಾಸ್ತವಿಕ ಒಳನೋಟ ಮತ್ತು ಭವಿಷ್ಯದ ದಿಕ್ಸೂಚಿ ನೀಡಬೇಕು. ಆದರೆ, ಮುಖ್ಯ ಪ್ರಧಾನ ಆರ್ಥಿಕ ಸಲಹೆಗಾರರು ಸಿದ್ದಪಡಿಸಿರುವ ಆರ್ಥಿಕ ಸಮೀಕ್ಷೆಯು ವಾಸ್ತವಿಕ ಸ್ಥಿತಿಗತಿ ನೀಡುವ ಪ್ರಯತ್ನ ಮಾಡಿಲ್ಲ. ನಿರುದ್ಯೋಗ, ಹಣದುಬ್ಬರ ಸಮಸ್ಯೆ, ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ನಗದು ಹರಿವು ಹಿಂಪಡೆಯುವುದರಿಂದಾಗುವ ವ್ಯತಿರಿಕ್ತ ಪರಿಣಾಮಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಹಾದಿಯಲ್ಲಿ ಸಾಗಿರುವ ಕಚ್ಚಾ ತೈಲ ಬೆಲೆಗಳಿಂದ ವಿದೇಶಿ ವಿನಿಮಯ ನಿಧಿಯ ಮೇಲಾಗುವ ಒತ್ತಡ- ಈ ಯಾವುದರ ಚಿಂತೆಯೂ ಇದ್ದಂತಿಲ್ಲ.
Alsor Read : ಆರ್ಥಿಕ ಸಮೀಕ್ಷೆ: ಅಂಕಿಅಂಶ ಹೇಳುವುದೊಂದು, ವಿಶ್ಲೇಷಣೆಯ ಚಿತ್ರಣ ಮತ್ತೊಂದು!
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಅಂಕಿಅಂಶಗಳನ್ನು ಉಲ್ಲೇಖಿಸಿ, 2021ರಲ್ಲಿ ಹೊಸದಾಗಿ ಕೆಲಸಕ್ಕೆ ಸೇರ್ಪಡೆಯಾಗುವರ ಸಂಖ್ಯೆಯು ಕೋವಿಡ್ ಪೂರ್ವದಲ್ಲಿದ್ದ ಮಟ್ಟಕ್ಕೆ ಮರಳಿದೆ ಎಂದು ಪ್ರತಿಪಾದಿಸಿದೆ. ಆದರೆ, ಅಸಂಘಟಿತ ವಲಯದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯಗಳನ್ನು ಸೂಚಿಸಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಖಾತ್ರಿ ಯೋಜನೆಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದರೆ ಅದು ನಿರುದ್ಯೋಗದ ನೇರ ಪರಿಣಾಮವೇ ಹೌದು. ಆರ್ಥಿಕ ಸಮೀಕ್ಷೆಯು ಮತ್ತೊಂದು ಅಚ್ಚರಿ ಅಂಕಿ ಅಂಶಗಳನ್ನು ಪ್ರಸ್ತಾಪಿಸಿದೆ. ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕಗಳ (ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಶುದ್ಧ ನೀರು ಮತ್ತು ನೈರ್ಮಲ್ಯ, ಗೈಗೆಟುಕುವ ಶುದ್ಧ ಇಂಧನ, ಕಡಿಮೆಯಾದ ಅಸಮಾನತೆಗಳು, ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಜವಾಬ್ಧಾರಿಯುತ ಬಳಕೆ ಮತ್ತು ಉತ್ಪಾದನೆ ಹಾಗೂ ಶಾಂತಿ ಸಮೃದ್ಧ ಜೀವನ) ಒಟ್ಟಾರೆ ಗುಣಕಗಳು ಕೋವಿಡ್ ಸಂಕಷ್ಟದಲ್ಲೂ ಸುಧಾರಣೆಯತ್ತಲೇ ಸಾಗಿವೆಯಂತೆ!
ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರ ಮುಖ್ಯ ಕಳವಳ ಎಂದರೆ ಕೋವಿಡ್ ಸೋಂಕಿನಿಂದಾಗಿ ಜನರ ಆದಾಯವು ಗಣನೀಯವಾಗಿ ತಗ್ಗಿರುವುದು ಮತ್ತು ಅವರ ಕೊಳ್ಳುವ ಶಕ್ತಿಯೂ ಕುಗ್ಗಿರುವುದು. ಈ ಬಗ್ಗೆ ಆರ್ಥಿಕ ಸಮೀಕ್ಷೆಗೆ ಯಾವುದೇ ಆತಂಕ ಇದ್ದಂತಿಲ್ಲ. ವಿವಿಧ ವಲಯಗಳಲ್ಲಿ ಹೂಡಿಕೆಯ ತುರ್ತು ಅಗತ್ಯವಿದೆ. ಆದರೆ, ಹೂಡಿಕೆಯ ಮಾರ್ಗೋಪಾಯಗಳನ್ನು ಆರ್ಥಿಕ ಸಮೀಕ್ಷೆ ಪ್ರಸ್ತಾಪಿಸಿಲ್ಲ. ಸಮೀಕ್ಷೆ ಹೇಳುವ ಪ್ರಕಾರ, ಖಾಸಗಿ ಹೂಡಿಕೆ ಚೇತರಿಕೆಯು ಇನ್ನೂ ಆರಂಭಿಕ ಹಂತದಲ್ಲಿದೆ, ಭಾರತವು ಗರಿಷ್ಠ ಹೂಡಿಕೆಗೆ ಸಿದ್ದವಾಗಿರುವುದನ್ನು ಸೂಚಿಸುವ ಹಲವು ಸಂಕೇತಗಳಿವೆ, ಉತ್ಪಾದನಾ ವಲಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಖಾಸಗಿ ಹೂಡಿಕೆ ಯೋಜನೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇತ್ತೀಚಿನ ತ್ರೈಮಾಸಿಕಗಳಲ್ಲಿ ಖಾಸಗಿ ಕಂಪೆನಿಗಳು ದಾಖಲೆ ಪ್ರಮಾಣದಲ್ಲಿ ಲಾಭ ಗಳಿಸುತ್ತಿವೆ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಶುದ್ಧೀಕರಿಸಲಾಗಿದ್ದು ಅದೀಗ ಗಟ್ಟಿಮುಟ್ಟಾಗಿದ್ದು, ಖಾಸಗಿ ವಲಯದಲ್ಲಿನ ಹೂಡಿಕೆಯನ್ನು ಸಮರ್ಪಕವಾಗಿ ಬೆಂಬಲಿಸಲಿದೆ, ಖಾಸಗಿ ಉಪಭೋಗದ ನಿರೀಕ್ಷಿತ ಹೆಚ್ಚಳವು ಸಾಮರ್ಥ್ಯ ಬಳಕೆಯನ್ನು ಉತ್ತೇಜಿಸುತ್ತದೆ, ಆ ಮೂಲಕ ಖಾಸಗಿ ಹೂಡಿಕೆ ಚಟುವಟಿಕೆಗಳನ್ನು ಉದ್ದೀಪಿಸುತ್ತದೆ ಎಂದೂ ಸಮೀಕ್ಷೆ ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ಕೈಗಾರಿಕಾ ಮುನ್ನೋಟ ಸಮೀಕ್ಷೆಯ ಫಲಿತಾಂಶಗಳು ಹೂಡಿಕೆದಾರರಲ್ಲಿ ಆಶಾವಾದ ಹೆಚ್ಚುತ್ತಿರುವುದನ್ನು, ಮುಂಬರುವ ತ್ರೈಮಾಸಿಕಗಳಲ್ಲಿ ಉತ್ಪಾದನೆಯು ವಿಸ್ತೃತಗೊಳ್ಳುವುದನ್ನು ಸೂಚಿಸುತ್ತದೆ ಎಂಬ ಅಂಶವನ್ನು ಸಮೀಕ್ಷೆ ಉಲ್ಲೇಖಿಸಿದೆ. ‘ಹೆಚ್ಚಿನ ವಿದೇಶಿ ವಿನಿಮಯ ಮೀಸಲು, ನಿರಂತರ ವಿದೇಶಿ ನೇರ ಹೂಡಿಕೆ ಮತ್ತು ಹೆಚ್ಚುತ್ತಿರುವ ರಫ್ತು ಗಳಿಕೆಗಳ ಸಂಯೋಜನೆಯು 2022-23 ರಲ್ಲಿ ಸಂಭವನೀಯ ಜಾಗತಿಕ ನಗದು ಕುಗ್ಗುವಿಕೆಯ ವಿರುದ್ಧ ರಕ್ಷಣೆ ಒದಗಿಸುತ್ತದೆ. ಭಾರತದ ಆರ್ಥಿಕತೆಯು 2022-23ರ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿದೆ’ ಎಂದೂ ಸಮೀಕ್ಷೆ ಹೇಳಿದೆ. ಹಾಗಿದ್ದರೆ 2022-23ನೇ ಸಾಲಿನ ಬಜೆಟ್ಟಿನಲ್ಲಿ ಮತ್ತೊಂದು ಹಣಕಾಸು ಉತ್ತೇಜನದ ಅಗತ್ಯವೇನಿದೆ, ಅದರ ಬದಲಿಗೆ ವಿತ್ತೀಯ ಬಲವರ್ಧನೆಗೆ ಒತ್ತುಕೊಡಬಹುದಲ್ಲವೇ? ಇಡೀ ಜಗತ್ತಿಗೆ ದೇಶ ಸುಭಿಕ್ಷವಾಗಿದೆ ಎಂಬ ಸಂದೇಶ ಸಾರುವ ವಿಫಲ ಯತ್ನ ಎದ್ದು ಕಾಣುತ್ತಿದೆ. ಆದರೆ, ಸರ್ಕಾರದ ತಿರುಚಿದ ಅಂಕಿ ಅಂಶಗಳನ್ನು ಮೀರಿ ವಾಸ್ತವಿಕ ಅಂಕಿಅಂಶಗಳು ಬೇರೆಯದೇ ಸತ್ಯವನ್ನು ಬಿಚ್ಚಿಡಲಿವೆ!